ಎನ್ ಪಿಎಸ್ ನಿಯಮಗಳಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ; ಮಾಧ್ಯಮ ವರದಿಗಳಿಗೆ ಹಣಕಾಸು ಸಚಿವಾಲಯದ ಸ್ಪಷ್ಟನೆ

Published : Jun 23, 2023, 06:33 PM ISTUpdated : Jun 23, 2023, 06:35 PM IST
ಎನ್ ಪಿಎಸ್ ನಿಯಮಗಳಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ; ಮಾಧ್ಯಮ ವರದಿಗಳಿಗೆ ಹಣಕಾಸು ಸಚಿವಾಲಯದ ಸ್ಪಷ್ಟನೆ

ಸಾರಾಂಶ

ಎನ್ ಪಿಎಸ್ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಉದ್ಯೋಗಿಗಳಿಗೆ ಸರ್ಕಾರ ಅತ್ಯುತ್ತಮ ಪಿಂಚಣಿ ನೀಡಲು ಯೋಚಿಸಿದೆ ಎಂಬ ಮಾಧ್ಯಮ ವರದಿಗೆ ಪ್ರತಿಕ್ರಿಯಿಸಿ ಟ್ವೀಟ್ ಮಾಡಿರುವ ಹಣಕಾಸು ಸಚಿವಾಲಯ, 'ಈ ಮಾಧ್ಯಮ ವರದಿ ಸುಳ್ಳು' ಎಂದು ಸ್ಪಷ್ಟನೆ ನೀಡಿದೆ. 

Business Desk:ಎನ್ ಪಿಎಸ್  ಅಡಿಯಲ್ಲಿ ಕೇಂದ್ರ ಸರ್ಕಾರಿ ಉದ್ಯೋಗಿಗಳಿಗೆ ಅವರ ಕೊನೆಯ ವೇತನದ ಶೇ.40–45ರಷ್ಟನ್ನು ಕನಿಷ್ಠ ಪಿಂಚಣಿಯಾಗಿ ನೀಡಲು ಸರ್ಕಾರ ಯೋಜನೆ ರೂಪಿಸಿದೆ ಎಂಬ ಇತ್ತೀಚಿನ ಮಾಧ್ಯಮ ವರದಿಗಳಿಗೆ ಹಣಕಾಸು ಸಚಿವಾಲಯ ಗುರುವಾರ ಸ್ಪಷ್ಟನೆ ನೀಡಿದೆ. ಈ ಸಂಬಂಧ ರೂಪುಗೊಡಿರುವ ಸಮಿತಿ ಪ್ರಸ್ತುತ ಚರ್ಚೆ ನಡೆಸುತ್ತಿದ್ದು, ಯಾವುದೇ ಅಂತಿಮ ನಿರ್ಧಾರವನ್ನು ಇನ್ನೂ ಕೈಗೊಂಡಿಲ್ಲ ಎಂದು ಸ್ಪಷ್ಟಪಡಿಸಿದೆ. ಎನ್ ಪಿಎಸ್ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಉದ್ಯೋಗಿಗಳಿಗೆ ಸರ್ಕಾರ ಅತ್ಯುತ್ತಮ ಪಿಂಚಣಿ ನೀಡಲು ಯೋಚಿಸಿದೆ ಎಂಬ ಮಾಧ್ಯಮ ವರದಿಗೆ ಪ್ರತಿಕ್ರಿಯಿಸಿ ಟ್ವೀಟ್ ಮಾಡಿರುವ ಹಣಕಾಸು ಸಚಿವಾಲಯ, 'ಈ ಮಾಧ್ಯಮ ವರದಿ ಸುಳ್ಳು' ಎಂದು ತಿಳಿಸಿದೆ. ಕಳೆದ ಬಜೆಟ್ ಅಧಿವೇಶನದಲ್ಲಿ ಲೋಕಸಭೆಯಲ್ಲಿ ಹಣಕಾಸು ಸಚಿವೆ ಮಾಡಿರುವ ಘೋಷಣೆಯ ಹಿನ್ನೆಲೆಯಲ್ಲಿ ಹಣಕಾಸು ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಸಮಿತಿಯೊಂದನ್ನು ಸ್ಥಾಪಿಸಲಾಗಿದೆ. ಈ ಸಮಿತಿ ಪ್ರಸ್ತುತ ಈ ಸಂಬಂಧ ಚರ್ಚೆ ನಡೆಸುತ್ತಿದ್ದು, ಸಂಬಂಧಪಟ್ಟವರ ಅಭಿಪ್ರಾಯ ಸಂಗ್ರಹಿಸುತ್ತಿದ್ದು, ಯಾವುದೇ ಅಂತಿಮ ನಿರ್ಣಯ ಕೈಗೊಂಡಿಲ್ಲ ಎಂದು ಹಣಕಾಸು ಸಚಿವಾಲಯ ಟ್ವಿಟ್ ಮಾಡಿದೆ.

ಕೇಂದ್ರ ಸರ್ಕಾರ ಎನ್ ಪಿಎಸ್ ನಿಯಮದಲ್ಲಿ ಬದಲಾವಣೆ ಮಾಡುವ ಮೂಲಕ ಉದ್ಯೋಗಿಗಳಿಗೆ ಅವರ ಕೊನೆಯ ವೇತನದ ಶೇ.40-45ರಷ್ಟನ್ನು ಪಿಂಚಣಿಯಾಗಿ ನೀಡಲು ಯೋಜಿಸಿದೆ. ಇನ್ನು ಉದ್ಯೋಗಿ ಹಾಗೂ ಸರ್ಕಾರ ಇದಕ್ಕೆ ನಿರಂತರವಾಗಿ ಕೊಡುಗೆ ನೀಡಲಿವೆ ಎಂದು ರಾಯ್ಟರ್ಸ್ ವರದಿ ಮಾಡಿತ್ತು. 

ಹಣಕಾಸು ಕಾರ್ಯದರ್ಶಿ ಸೋಮನಾಥನ್ ಅವರ ಅಧ್ಯಕ್ಷತೆಯ ಈ ಸಮಿತಿಯಲ್ಲಿ ವೈಯಕ್ತಿಕ ಹಾಗೂ ತರಬೇತಿ ಇಲಾಖೆ (ಡಿಒಪಿಟಿ) ಕಾರ್ಯದರ್ಶಿ, ವೆಚ್ಚ ಇಲಾಖೆ ವಿಶೇಷ ಕಾರ್ಯದರ್ಶಿ ಹಾಗೂ ಪಿಂಚಣಿ ನಿಧಿ ನಿಯಂತ್ರಣ ಹಾಗೂ ಅಭಿವೃದ್ಧಿ ಪ್ರಾಧಿಕಾರ (PFRDA) ಮುಖ್ಯಸ್ಥರು ಸದಸ್ಯರಾಗಿದ್ದಾರೆ. 

ಬಿಜೆಪಿ ಅಧಿಕಾರದಲ್ಲಿರದ ಅನೇಕ ರಾಜ್ಯ ಸರ್ಕಾರಗಳು ಎನ್ ಪಿಎಸ್ ಬದಲು  ಡಿಎ ಜೋಡಿತ ಹಳೆಯ ಪಿಂಚಣಿ ವ್ಯವಸ್ಥೆ (ಒಪಿಎಸ್) ಜಾರಿಗೊಳಿಸಿವೆ. ಇನ್ನು ಕೆಲವು ರಾಜ್ಯಗಳಲ್ಲಿ ನೌಕರರ ಸಂಘಟನೆಗಳು ಒಪಿಎಸ್ ಜಾರಿಗೆ ಆಗ್ರಹಿಸುತ್ತಿವೆ ಕೂಡ. ರಾಜಸ್ಥಾನ, ಛತ್ತೀಸ್ ಗಢ, ಜಾರ್ಖಂಡ್, ಪಂಜಾಬ್ ಹಾಗೂ ಹಿಮಾಚಲ ಪ್ರದೇಶ ಈಗಾಗಲೇ ಹಳೆಯ ಪಿಂಚಣಿ ಯೋಜನೆಯನ್ನು ಮರುಸ್ಥಾಪಿಸುವ ತಮ್ಮ ನಿರ್ಧಾರವನ್ನು ಕೇಂದ್ರ ಸರ್ಕಾರಕ್ಕೆ ತಿಳಿಸಿವೆ. ಹಾಗೆಯೇ ಎನ್ ಪಿಎಸ್ ಅಡಿಯಲ್ಲಿ ಸಂಗ್ರಹಗೊಂಡಿರುವ ನಿಧಿಯನ್ನು ಹಿಂತಿರುಗಿಸುವಂತೆ ಮನವಿ ಮಾಡಿವೆ. 2004ರ ಜನವರಿ 1ರ ಬಳಿಕ ನೇಮಕಗೊಂಡ ಕೇಂದ್ರ ಸರ್ಕಾರಿ ನೌಕರರಿಗೆ ಒಪಿಎಸ್ ಮರುಸ್ಥಾಪನೆ ಮಾಡುವ ಯಾವುದೇ ಪ್ರಸ್ತಾವನೆಯನ್ನು ಪರಿಗಣಿಸೋದಿಲ್ಲ ಎಂದು ಹಣಕಾಸು ಸಚಿವಾಲಯ ಸಂಸತ್ತಿಗೆ ಮಾಹಿತಿ ನೀಡಿದೆ. 

ಒಪಿಎಸ್ ಅಡಿಯಲ್ಲಿ ನಿವೃತ್ತರಾದ ಸರ್ಕಾರಿ ಉದ್ಯೋಗಿಗಳು ತಮ್ಮ ಕೊನೆಯ ವೇತನ ಮೊತ್ತದ ಶೇ.50ರಷ್ಟನ್ನು ಮಾಸಿಕ ಪಿಂಚಣಿಯಾಗಿ ಪಡೆಯುತ್ತಾರೆ. ಡಿಎ ಏರಿಕೆಯಾದಂತೆ ಈ ಪಿಂಚಣಿ ಮೊತ್ತದಲ್ಲಿ ಕೂಡ ಹೆಚ್ಚಳವಾಗುತ್ತದೆ. ಆದರೆ, ಒಪಿಎಸ್ ಆರ್ಥಿಕವಾಗಿ ಸುಸ್ಥಿರ ಯೋಜನೆಯಲ್ಲ. ಯಾವುದೇ ಕೊಡುಗೆ ಇರದ ಕಾರಣ ಸರ್ಕಾರದ ಮೇಲಿನ ಹೊರೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಹೋಗುತ್ತದೆ.

ಏ.1ರಿಂದ NPS ನಿಯಮದಲ್ಲಿ ಬದಲಾವಣೆ; ವಿತ್ ಡ್ರಾ ಮಾಡಲು ದಾಖಲೆಗಳನ್ನುಅಪ್ಲೋಡ್ ಮಾಡೋದು ಅಗತ್ಯ

ರಕ್ಷಣಾ ಪಡೆಗಳಿಗೆ ಸೇರ್ಪಡೆಗೊಳ್ಳುವವರನ್ನು ಹೊರತುಪಡಿಸಿ 2004ರ ಜನವರಿ 1 ಹಾಗೂ ಆಬಳಿಕ ಕೇಂದ್ರ ಸರ್ಕಾರಿ ಉದ್ಯೋಗಕ್ಕೆ ಸೇರ್ಪಡೆಗೊಳ್ಳುವ ಎಲ್ಲ ಸರ್ಕಾರಿ ಉದ್ಯೋಗಿಗಳಿಗೂ ಎನ್ ಪಿಎಸ್ ಅನುಷ್ಠಾನಗೊಳಿಸಲಾಗಿದೆ. ಬಹುತೇಕ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಗಳು ಕೂಡ ತಮ್ಮ ಹೊಸ ಉದ್ಯೋಗಿಗಳಿಗೆ ಎನ್ ಪಿಎಸ್ ಜಾರಿಗೊಳಿಸಿವೆ. ಪಿಂಚಣಿ ನಿಧಿ ನಿಯಂತ್ರಣ ಹಾಗೂ ಅಭಿವೃದ್ಧಿ ಪ್ರಾಧಿಕಾರ (ಪಿಎಫ್ ಆರ್ ಡಿಎ) ಪ್ರಕಾರ ತಮಿಳುನಾಡು ಹಾಗೂ ಪಶ್ಚಿಮ ಬಂಗಾಳ ಹೊರತುಪಡಿಸಿ 26 ರಾಜ್ಯ ಸರ್ಕಾರಗಳು ತಮ್ಮ ಉದ್ಯೋಗಿಗಳಿಗೆ ಎನ್ ಪಿಎಸ್ ಜಾರಿಗೊಳಿಸಿವೆ. 
 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

click me!

Recommended Stories

One8 ಸ್ಪೋರ್ಟ್ಸ್ ಬ್ರ್ಯಾಂಡ್ ಮಾರಾಟಕ್ಕೆ ಮುಂದಾದ ಕೊಹ್ಲಿ, 40 ಕೋಟಿ ಹೂಡಿಕೆ ಪ್ಲಾನ್
ಮೋದಿ-ಪುಟಿನ್‌ ಒಪ್ಪಂದ: 40 ದಿನಗಳಲ್ಲ, ಕೇವಲ 24 ದಿನಗಳಲ್ಲೇ ರಷ್ಯಾಗೆ ತಲುಪಲಿದೆ ಭಾರತದ ಸರಕುಗಳು!