ದೇಶದ ಮನೆಮನೆಯ ಬ್ರ್ಯಾಂಡ್‌ ಆಗಿದ್ದ Videocon ದಿವಾಳಿ, ಕಂಪನಿ ಮಾಲೀಕ ವೇಣುಗೋಪಾಲ್‌ ಧೂತ್ ಆಸ್ತಿಗಳೆಲ್ಲಾ ಮುಟ್ಟುಗೋಲು!

Published : Nov 06, 2026, 04:13 PM IST
videocon venugopal dhoot

ಸಾರಾಂಶ

ಎಸ್‌ಬಿಐಗೆ 12,668 ಕೋಟಿ ರೂ. ಸಾಲ ಮರುಪಾವತಿಸದ ಹಿನ್ನೆಲೆಯಲ್ಲಿ ವೀಡಿಯೋಕಾನ್ ಸಂಸ್ಥೆಯ ಮಾಜಿ ಪ್ರವರ್ತಕ ವೇಣುಗೋಪಾಲ್ ಧೂತ್ ಅವರನ್ನು ಎನ್‌ಸಿಎಲ್‌ಟಿ ದಿವಾಳಿ ಎಂದು ಘೋಷಿಸಿದೆ. ಅವರ ವೈಯಕ್ತಿಕ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ದಿವಾಳಿ ಟ್ರಸ್ಟಿಯನ್ನು ನೇಮಿಸಲಾಗಿದೆ.

ಮುಂಬೈ (ನ.6): ವೀಡಿಯೋಕಾನ್ ಇಂಡಸ್ಟ್ರೀಸ್ (Videocon Industries) ಸಂಸ್ಥೆಯ ಮಾಜಿ ಪ್ರವರ್ತಕ ಹಾಗೂ ನಿರ್ದೇಶಕ ವೇಣುಗೋಪಾಲ್ ನಂದಲಾಲ್ ಧೂತ್ (Venugopal Nandlal Dhoot) ಅವರನ್ನು ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಾಧಿಕರಣದ (NCLT) ಮುಂಬೈ ಪೀಠವು ಅಧಿಕೃತವಾಗಿ 'ದಿವಾಳಿ' (Bankrupt) ಎಂದು ಘೋಷಿಸಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಪೀಠವು, ಬರೋಬ್ಬರಿ ₹12,668 ಕೋಟಿ ಸಾಲದ ಸುಸ್ತಿದಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಮಹತ್ವದ ಆದೇಶ ಹೊರಡಿಸಿದೆ.

ವೇಣುಗೋಪಾಲ್ ಧೂತ್ ಅವರು ಸಲ್ಲಿಸಿದ್ದ ವೈಯಕ್ತಿಕ ದಿವಾಳಿತನ ಪರಿಹಾರ ಪ್ರಕ್ರಿಯೆ ಹಾಗೂ ಮರುಪಾವತಿ ಯೋಜನೆ ಸಂಪೂರ್ಣವಾಗಿ ವಿಫಲಗೊಂಡ ಹಿನ್ನೆಲೆಯಲ್ಲಿ ಎನ್‌ಸಿಎಲ್‌ಟಿ ಈ ಕಠಿಣ ಕ್ರಮ ಕೈಗೊಂಡಿದೆ. ವಿನಯ್ ಗೋಯಲ್ ಹಾಗೂ ಚರಂಜಿತ್ ಸಿಂಗ್ ಗುಲಾಟಿ ಅವರನ್ನೊಳಗೊಂಡ ಪೀಠವು ನವೆಂಬರ್ 5 ರಂದು ಭಾರತೀಯ ದಿವಾಳಿತನ ಮತ್ತು ದಿವಾಳಿತನ ಸಂಹಿತೆಯ (IBC) ಅಡಿಯಲ್ಲಿ ಈ ಆದೇಶವನ್ನು ಹೊರಡಿಸಿದೆ.

ವೈಯಕ್ತಿಕ ಗ್ಯಾರಂಟಿ ಹಾಗೂ ಸಾಲದ ಸುಸ್ತಿಯ ವಿವರ

ವೀಡಿಯೋಕಾನ್ ಇಂಡಸ್ಟ್ರೀಸ್ ಲಿಮಿಟೆಡ್ (VIL) ಬ್ಯಾಂಕ್‌ನಿಂದ ಪಡೆದುಕೊಂಡಿದ್ದ ಟರ್ಮ್ ಲೋನ್, ವೀಡಿಯೋಕಾನ್ ಟೆಲಿಕಮ್ಯೂನಿಕೇಷನ್ಸ್ ಲಿಮಿಟೆಡ್‌ಗೆ ಸಂಬಂಧಿಸಿದ ಸೌಲಭ್ಯಗಳು ಹಾಗೂ ದುಡಿಯುವ ಬಂಡವಾಳ (Working Capital) ಸಾಲ ಸೇರಿದಂತೆ ಹಲವು ಕ್ರೆಡಿಟ್ ಸೌಲಭ್ಯಗಳಿಗೆ ವೇಣುಗೋಪಾಲ್ ಧೂತ್ ಅವರು ಸ್ವತಃ 'ವೈಯಕ್ತಿಕ ಶೂರಿಟಿ' (Personal Guarantor) ನೀಡಿದ್ದರು. ವೀಡಿಯೋಕಾನ್ ಸಂಸ್ಥೆಯು ಸಾಲ ಮರುಪಾವತಿಸಲು ವಿಫಲವಾದಾಗ, ಎಸ್‌ಬಿಐ ಫೆಬ್ರವರಿ 2018 ರಲ್ಲೇ ಧೂತ್ ಅವರ ವೈಯಕ್ತಿಕ ಗ್ಯಾರಂಟಿಯನ್ನು ಮುಟ್ಟುಗೋಲು ಹಾಕಿಕೊಳ್ಳುವ (Invocate) ಪ್ರಕ್ರಿಯೆ ನಡೆಸಿ ಬೇಡಿಕೆ ನೋಟಿಸ್ ಜಾರಿಗೊಳಿಸಿತ್ತು.

ವೀಡಿಯೋಕಾನ್ ದಿವಾಳಿತನದ ಹಿನ್ನೆಲೆ

ವೀಡಿಯೋಕಾನ್ ಇಂಡಸ್ಟ್ರೀಸ್ ಅನ್ನು ಜೂನ್ 2018 ರಲ್ಲಿ ಕಾರ್ಪೊರೇಟ್ ದಿವಾಳಿತನ ಪರಿಹಾರ ಪ್ರಕ್ರಿಯೆಗೆ ಒಳಪಡಿಸಲಾಗಿತ್ತು. ಬಳಿಕ ಈ ಪ್ರಕ್ರಿಯೆಯನ್ನು ವೀಡಿಯೋಕಾನ್ ಸಮೂಹದ ಇತರ ಕಂಪನಿಗಳ ಜೊತೆ ವಿಲೀನಗೊಳಿಸಲಾಯಿತು. ತದನಂತರ, ಜೂನ್ 2021 ರಲ್ಲಿ ಟ್ವಿನ್ ಸ್ಟಾರ್ ಟೆಕ್ನಾಲಜೀಸ್ ಲಿಮಿಟೆಡ್ (Twin Star Technologies Limited) ಸಲ್ಲಿಸಿದ್ದ ಪರಿಹಾರ ಯೋಜನೆಯನ್ನು ಎನ್‌ಸಿಎಲ್‌ಟಿ ಅನುಮೋದಿಸಿತ್ತು.

ಮರುಪಾವತಿ ಯೋಜನೆ ವಜಾಗೊಂಡಿದ್ದೇಕೆ?

ಏಪ್ರಿಲ್ 2026 ರಲ್ಲಿ ವೇಣುಗೋಪಾಲ್ ಧೂತ್ ಅವರ ವೈಯಕ್ತಿಕ ದಿವಾಳಿತನ ಪರಿಹಾರ ಪ್ರಕ್ರಿಯೆ ಆರಂಭವಾಗಿತ್ತು. ಧೂತ್ ಅವರು ಸಿಲಿಗುರಿಯಲ್ಲಿ ತಾವು ನಡೆಸಲು ಉದ್ದೇಶಿಸಿದ್ದ ರಿಯಲ್ ಎಸ್ಟೇಟ್ ಡೆವಲಪ್‌ಮೆಂಟ್ ಪ್ರಾಜೆಕ್ಟ್ ಮೂಲಕ ಮುಂದಿನ 36 ತಿಂಗಳುಗಳಲ್ಲಿ ₹600 ಕೋಟಿ ಮರುಪಾವತಿ ಮಾಡುವುದಾಗಿ ಪ್ರಸ್ತಾವನೆ ಸಲ್ಲಿಸಿದ್ದರು. ಆದರೆ ಈ ಪ್ರಸ್ತಾವನೆಯು ಭವಿಷ್ಯದ ಯೋಜನೆಗಳು, ಅನುಮೋದನೆಗಳು ಹಾಗೂ ನಗದು ಹರಿವಿನ (Cash flow) ಮೇಲೆ ಆಧಾರಿತವಾಗಿತ್ತೇ ಹೊರತು ಯಾವುದೇ ಆರಂಭಿಕ ಮುಂಗಡ ಪಾವತಿಯನ್ನು ಒಳಗೊಂಡಿರಲಿಲ್ಲ. ಜೊತೆಗೆ ಐಬಿಸಿ ನಿಯಮಾವಳಿಗಳಂತೆ ರೆಸಲ್ಯೂಶನ್ ಪ್ರೊಫೆಷನಲ್ ಅವರೊಂದಿಗೆ ಸಮಾಲೋಚಿಸಿ ಈ ಯೋಜನೆಯನ್ನು ಸಿದ್ಧಪಡಿಸಿರಲಿಲ್ಲ.

ಹೀಗಾಗಿ ಸಾಲದಾತರ (ಬ್ಯಾಂಕ್‌ಗಳ) ಸಮಿತಿಯು ಈ ಪ್ರಸ್ತಾವನೆಯನ್ನು ತಿರಸ್ಕರಿಸಿ ದಿವಾಳಿ ಪ್ರಕ್ರಿಯೆಗೆ ಒತ್ತಾಯಿಸಿತು. ಜುಲೈ 17 ರಂದು ಎನ್‌ಸಿಎಲ್‌ಟಿ ಧೂತ್ ಅವರ ಪ್ರಸ್ತಾವನೆಯನ್ನು ವಜಾಗೊಳಿಸಿ, ಸಾಲದಾತರಿಗೆ ದಿವಾಳಿತನ ಅರ್ಜಿಸಲ್ಲಿಸಲು ಅವಕಾಶ ನೀಡಿತ್ತು.

ಸುಸ್ತಿದಾರ ಮೊತ್ತ ₹12,668 ಕೋಟಿಗೆ ಏರಿಕೆ

ಇದಾದ ಬಳಿಕ ಎಸ್‌ಬಿಐ ಎನ್‌ಸಿಎಲ್‌ಟಿಗೆ ಬ್ಯಾಂಕ್‌ಗೆ ಅರ್ಜಿ ಸಲ್ಲಿಸಿತು. ಸೆಪ್ಟೆಂಬರ್ 30ರ ವೇಳೆಗೆ ಬಡ್ಡಿ ಹಾಗೂ ದಂಡ ಸೇರಿದಂತೆ ಒಟ್ಟು ಬಾಕಿ ಸುಸ್ತಿದಾರ ಮೊತ್ತ ₹12,668 ಕೋಟಿ ರೂಪಾಯಿ ತಲುಪಿದೆ ಎಂದು ಎಸ್‌ಬಿಐ ನ್ಯಾಯಾಧಿಕರಣಕ್ಕೆ ತಿಳಿಸಿತು. ದಾಖಲೆಗಳನ್ನು ಪರಿಶೀಲಿಸಿದ ಪೀಠವು, ಅರ್ಜಿಯು ಐಬಿಸಿ ಕಾಯ್ದೆಯ ಸೆಕ್ಷನ್ 123 ರ ಎಲ್ಲಾ ಅಗತ್ಯ ಮಾನದಂಡಗಳನ್ನು ಪೂರೈಸಿದೆ ಎಂದು ತೃಪ್ತಿಪಟ್ಟು ಧೂತ್ ಅವರನ್ನು ದಿವಾಳಿ ಎಂದು ಘೋಷಿಸಿತು.

ಟ್ರಸ್ಟಿ ನೇಮಕ ಹಾಗೂ ಮುಂದಿನ ಪ್ರಕ್ರಿಯೆ

ಎನ್‌ಸಿಎಲ್‌ಟಿ ಧೂತ್ ಅವರನ್ನು ದಿವಾಳಿ ಎಂದು ಘೋಷಿಸಿ, ಆಶಿಶ್ ನಾರಾಯಣ್ ಅವರನ್ನು 'ದಿವಾಳಿತನದ ಟ್ರಸ್ಟಿ' (Bankruptcy Trustee) ಆಗಿ ನೇಮಕ ಮಾಡಿದೆ. ಧೂತ್ ಅವರ ಎಲ್ಲಾ ವೈಯಕ್ತಿಕ ಆಸ್ತಿಗಳು ತಕ್ಷಣದಿಂದಲೇ ಟ್ರಸ್ಟಿಯ ವಶಕ್ಕೆ ಬರಲಿದ್ದು, ಐಬಿಸಿ ಕಾಯ್ದೆಯಡಿ ಇವುಗಳನ್ನು ಮಾರಾಟ ಮಾಡಿ ಸಾಲದಾತ ಬ್ಯಾಂಕ್‌ಗಳಿಗೆ ಹಂಚಲಾಗುವುದು. ಧೂತ್ ಅವರು ತಮ್ಮ ಸಂಪೂರ್ಣ ಹಣಕಾಸು ಮತ್ತು ಆಸ್ತಿ ವಿವರಗಳನ್ನು 7 ದಿನಗಳ ಒಳಗೆ ಟ್ರಸ್ಟಿಗೆ ಸಲ್ಲಿಸುವಂತೆ ಸೂಚಿಸಲಾಗಿದೆ.

90 ದಿನಗಳಲ್ಲಿ ವರದಿ ಸಲ್ಲಿಕೆಗೆ ಆದೇಶ:

ಬ್ಯಾಂಕ್‌ರಪ್ಸಿ ಟ್ರಸ್ಟಿಯು ಸಾಲದಾತರಿಗೆ ನೋಟಿಸ್ ನೀಡಿ, ಹಕ್ಕುಸಲ್ಲಿಕೆಗೆ (Claims) ಸಾರ್ವಜನಿಕ ಪ್ರಕಟಣೆ ಹೊರಡಿಸಿ, 90 ದಿನಗಳ ಒಳಗೆ ಎನ್‌ಸಿಎಲ್‌ಟಿ ಹಾಗೂ ಸಾಲದಾತರ ಸಮಿತಿಗೆ (CoC) ಪ್ರಾಥಮಿಕ ವರದಿ ಸಲ್ಲಿಸಬೇಕು ಎಂದು ಕೋರ್ಟ್ ಆದೇಶಿಸಿದೆ. ಐಬಿಸಿ ಸೆಕ್ಷನ್ 138 ರ ಅಡಿಯಲ್ಲಿ ಧೂತ್ ಸಂಪೂರ್ಣ ಸಾಲಮುಕ್ತರಾಗುವವರೆಗೆ ಈ ಆದೇಶ ಜಾರಿಯಲ್ಲಿರುತ್ತದೆ.

ವೈಯಕ್ತಿಕ ಗ್ಯಾರಂಟಿ ಹಾಗೂ ದಿವಾಳಿತನ ಅಂದರೇನು?

ವೈಯಕ್ತಿಕ ಗ್ಯಾರಂಟಿ (Personal Guarantee): ಕಂಪನಿಯು ಬ್ಯಾಂಕ್‌ನಿಂದ ಪಡೆದ ಸಾಲಕ್ಕೆ ವ್ಯಕ್ತಿಯೊಬ್ಬ ತನ್ನ ವೈಯಕ್ತಿಕ ಆಸ್ತಿಯನ್ನು ಜಾಮೀನಾಗಿ ನೀಡಿದರೆ, ಕಂಪನಿಯು ಸಾಲ ತೀರಿಸಲು ವಿಫಲವಾದಾಗ ಬ್ಯಾಂಕ್ ಆ ವ್ಯಕ್ತಿಯ ವೈಯಕ್ತಿಕ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡು ಸಾಲ ವಸೂಲಿ ಮಾಡಬಹುದು. ದಿವಾಳಿತನ (Bankruptcy): ಐಬಿಸಿ ಕಾಯ್ದೆಯಡಿ ಸಾಲಗಾರನು ತನ್ನ ಸಾಲವನ್ನು ಮರುಪಾವತಿಸಲು ಸಾಧ್ಯವೇ ಇಲ್ಲ ಎಂಬ ಸ್ಥಿತಿ ತಲುಪಿದಾಗ ಕೋರ್ಟ್ ಆತನನ್ನು 'ದಿವಾಳಿ' ಎಂದು ಘೋಷಿಸುತ್ತದೆ. ಆತನ ಎಲ್ಲಾ ಆಸ್ತಿಗಳನ್ನು ಕೋರ್ಟ್‌ನಿಂದ ನೇಮಕಗೊಂಡ ಟ್ರಸ್ಟಿಗೆ ವಹಿಸಿ, ಅವುಗಳನ್ನು ಹರಾಜು ಹಾಕಿ ಬಂದ ಹಣದಿಂದ ಬ್ಯಾಂಕ್ ಸಾಲ ತೀರಿಸಲಾಗುತ್ತದೆ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ಬ್ಯಾಂಕ್ ಆಫ್ ಇಂಡಿಯಾಗೆ ₹19.30 ಕೋಟಿ ವಂಚನೆ: 'ನಟರಾಜ್ ರೈಸ್ ಮಿಲ್ಸ್' ವಿರುದ್ಧ ಸಿಬಿಐ ಎಫ್‌ಐಆರ್ ದಾಖಲು
ಪಾನಿಪುರಿ ಮಾರಿ ಸ್ವಂತ ಮನೆ, ಸ್ಕಾರ್ಪಿಯೋ SUV ಖರೀದಿ! ತಿಂಗಳಿಗೆ ₹1.2 ಲಕ್ಷ ಲಾಭ ಗಳಿಸುವ ವ್ಯಾಪಾರಿಯ ರೋಚಕ ಕಥೆ!