27 ಸಾವಿರ ಕೋಟಿ ರೂಪಾಯಿಗೆ ನೆದರ್ಲೆಂಡ್ಸ್‌ನ ಇವೋಸ್ ಬಿವಿ ಕಂಪನಿ ಖರೀದಿ ಮಾಡಿದ ಅದಾನಿ ಪೋರ್ಟ್ಸ್‌

Published : Nov 05, 2026, 05:22 PM IST
Adani Ports

ಸಾರಾಂಶ

ಭಾರತದ ಅತಿದೊಡ್ಡ ಬಂದರು ನಿರ್ವಹಣಾ ಸಂಸ್ಥೆ ಅದಾನಿ ಪೋರ್ಟ್ಸ್, ಯುರೋಪ್‌ನ ಇವೋಸ್ ಬಿ.ವಿ. ಸಂಸ್ಥೆಯನ್ನು ₹27,145 ಕೋಟಿಗೆ ಖರೀದಿಸುತ್ತಿದೆ. ಈ ಒಪ್ಪಂದದಿಂದ ಅದಾನಿ ಸಂಸ್ಥೆಯು 5 ಯುರೋಪಿಯನ್ ದೇಶಗಳಲ್ಲಿ 8 ಪ್ರಮುಖ ಬಂದರು ಟರ್ಮಿನಲ್‌ಗಳನ್ನು ತನ್ನ ವಶಕ್ಕೆ ಪಡೆಯಲಿದೆ.

ಬೆಂಗಳೂರು (ನ.5): ಭಾರತದ ಅತಿದೊಡ್ಡ ಬಂದರು ನಿರ್ವಹಣಾ ಸಂಸ್ಥೆಯಾಗಿರುವ 'ಅದಾನಿ ಪೋರ್ಟ್ಸ್ ಆಂಡ್ ಸ್ಪೆಷಲ್ ಇಕನಾಮಿಕ್ ಝೋನ್ ಲಿಮಿಟೆಡ್' (APSEZ), ಯುರೋಪ್‌ನ ಎರಡನೇ ಅತಿದೊಡ್ಡ ಸ್ವತಂತ್ರ ದ್ರವ ಶೇಖರಣಾ (Independent Liquid Storage) ಸಂಸ್ಥೆಯಾದ ನೆದರ್‌ಲ್ಯಾಂಡ್ಸ್ ಮೂಲದ 'ಇವೋಸ್ ಬಿ.ವಿ.' (Evos B.V.) ಸಂಸ್ಥೆಯ ಶೇಕಡಾ 100 ರಷ್ಟು ಷೇರುಗಳನ್ನು ಬರೋಬ್ಬರಿ ₹27,145 ಕೋಟಿಗೆ (2.56 ಬಿಲಿಯನ್ ಯುರೋ) ಸಂಪೂರ್ಣವಾಗಿ ಖರೀದಿಸುವುದಾಗಿ ಗುರುವಾರ ಪ್ರಕಟಿಸಿದೆ.

ಇಗ್ನಿಯೋ ಇನ್‌ಫ್ರಾಸ್ಟ್ರಕ್ಚರ್ ಪಾರ್ಟ್‌ನೆರ್ಸ್ ಸಂಸ್ಥೆಯಿಂದ 2.56 ಬಿಲಿಯನ್ ಯುರೋಗಳ (ಸುಮಾರು ₹27,145 ಕೋಟಿ) ಉದ್ಯಮ ಮೌಲ್ಯದಲ್ಲಿ (Enterprise Value) ಇವೋಸ್ ಸಂಸ್ಥೆಯನ್ನು ಸ್ವಾಧೀನಪಡಿಸಿಕೊಳ್ಳಲಾಗುತ್ತಿದೆ. ಈ ಪ್ರಸ್ತಾವಿತ ವಹಿವಾಟು ಸಂಪೂರ್ಣ ನಗದು ಪಾವತಿಯ (All-cash deal) ಒಪ್ಪಂದವಾಗಿದ್ದು, ಇದರ ಈಕ್ವಿಟಿ ಮೌಲ್ಯ 1.18 ಬಿಲಿಯನ್ ಯುರೋಗಳಾಗಿದೆ (ಸುಮಾರು ₹12,513 ಕೋಟಿ). ಇದು ಸಿವೈ25 ಇವಿ/ಇಬಿಐಟಿಡಿಎ (EV/EBITDA) ಲೆಕ್ಕಾಚಾರದಲ್ಲಿ 11.7x ರಷ್ಟು ಸ್ವಾಧೀನದ ಮಲ್ಟಿಪಲ್ ಮೌಲ್ಯವನ್ನು ಸೂಚಿಸುತ್ತದೆ.

ಲಾಭದಾಯಕ ವಹಿವಾಟು ಹಾಗೂ ಆರ್ಥಿಕ ಲೆಕ್ಕಾಚಾರ

ಕ್ಯಾಲೆಂಡರ್ ವರ್ಷ 2025 ರ ಅವಧಿಯಲ್ಲಿ 'ಇವೋಸ್' ಸಂಸ್ಥೆಯು ಭಾರಿ ಆದಾಯ ಗಳಿಸಿದೆ. ಕಂಪನಿಯ ಒಟ್ಟು ಆದಾಯ 392 ಮಿಲಿಯನ್ ಯುರೋಗಳು (ಸುಮಾರು ₹4,156 ಕೋಟಿ). ಇಬಿಐಟಿಡಿಎ (EBITDA) 219 ಮಿಲಿಯನ್ ಯುರೋಗಳು (ಸುಮಾರು ₹2,322 ಕೋಟಿ) ಅಂದರೆ ಶೇಕಡಾ 56 ರಷ್ಟು ಭಾರಿ ಕಾರ್ಯನಿರ್ವಹಣಾ ಲಾಭದ ಮಾರ್ಜಿನ್ ಗಳಿಸಿದೆ. ಈ ಇಡೀ ಸ್ವಾಧೀನ ಪ್ರಕ್ರಿಯೆಯನ್ನು ಸಾಲದ ಮೂಲಗಳಿಂದ (Debt) ಹಣಕಾಸು ಒದಗಿಸಲಾಗುತ್ತಿದ್ದು, ನಿಯಂತ್ರಕ ಸಂಸ್ಥೆಗಳ ಅನುಮೋದನೆ ಹಾಗೂ ಕೌನ್ಸಿಲ್ ಮಾತುಕತೆಗಳಿಗೆ ಒಳಪಟ್ಟಿರುತ್ತದೆ ಎಂದು ಎಪಿಎಸ್‌ಇಝಡ್ ತಿಳಿಸಿದೆ.

ಯುರೋಪ್ ಜಾಗತಿಕ ಇಂಧನ ಕೇಂದ್ರದಲ್ಲಿ ಪ್ರಮುಖ ಹೆಜ್ಜೆ: ಕರಣ್ ಅದಾನಿ

ಈ ಪ್ರಮುಖ ವಹಿವಾಟಿನ ಕುರಿತು ಸಂತಸ ವ್ಯಕ್ತಪಡಿಸಿರುವ ಅದಾನಿ ಪೋರ್ಟ್ಸ್ ಮ್ಯಾನೇಜಿಂಗ್ ಡೈರೆಕ್ಟರ್ ಕರಣ್ ಅದಾನಿ, 'ನಮ್ಮ ಪೋರ್ಟ್‌ಫೋಲಿಯೋಗೆ 'ಇವೋಸ್' ಸಂಸ್ಥೆಯನ್ನು ಸ್ವಾಗತಿಸಲು ನಾವು ಅತ್ಯಂತ ಹರ್ಷಿಸುತ್ತೇವೆ. ಈ ಒಪ್ಪಂದವು ಜಾಗತಿಕ ದ್ರವ ಶೇಖರಣೆ ಮತ್ತು ಇಂಧನ ಕೇಂದ್ರಗಳಲ್ಲಿ ನಮಗೆ ಗಮನಾರ್ಹ ಉಪಸ್ಥಿತಿಯನ್ನು ಒದಗಿಸುತ್ತದೆ. ಯುರೋಪ್‌ನ ಜೊತೆ ಪಾಲುದಾರಿಕೆ ವಹಿಸುತ್ತಾ, ಅದರ ಸುಸ್ಥಿರ ಇಂಧನ ಪರಿವರ್ತನೆಗೆ ಸಂಪೂರ್ಣ ಬೆಂಬಲ ನೀಡಲು ಹಾಗೂ ನಮ್ಮ ಹಣಕಾಸಿನ ಶಿಸ್ತನ್ನು ಕಾಯ್ದುಕೊಂಡು ಸುಸ್ಥಿರ ಮೌಲ್ಯವನ್ನು ಸೃಷ್ಟಿಸಲು ನಾವು ಎದುರು ನೋಡುತ್ತಿದ್ದೇವೆ' ಎಂದು ತಿಳಿಸಿದರು.

5 ದೇಶಗಳಲ್ಲಿ 8 ಬಂದರುಗಳು: ಅದಾನಿಯ ಜಾಗತಿಕ ವಿಸ್ತರಣೆ

ಈ ಸ್ವಾಧೀನ ಪ್ರಕ್ರಿಯೆಯೊಂದಿಗೆ ಅದಾನಿ ಸಂಸ್ಥೆಯು ಯುರೋಪ್ ಮಾರುಕಟ್ಟೆಯಲ್ಲಿ ಬೃಹತ್ ಲಿಕ್ವಿಡ್ ಪ್ಲಾಟ್‌ಫಾರ್ಮ್ ಅನ್ನು ಸ್ಥಾಪಿಸಿದಂತಾಗಿದೆ: 5 ದೇಶಗಳಲ್ಲಿ ಹರಡಿರುವ 8 ಪ್ರಮುಖ ಬಂದರು ಟರ್ಮಿನಲ್‌ಗಳು (Port Terminals) ಅದಾನಿ ವಶವಾಗಲಿವೆ. ನೆದರ್‌ಲ್ಯಾಂಡ್ಸ್, ಜರ್ಮನಿ, ಸ್ಪೇನ್, ಬೆಲ್ಜಿಯಂ ಹಾಗೂ ಮಾಲ್ಟಾ ದೇಶಗಳ ಅತ್ಯಂತ ಪ್ರಮುಖ ಕೈಗಾರಿಕಾ ಕೇಂದ್ರಗಳಲ್ಲಿ ಈ ಟರ್ಮಿನಲ್‌ಗಳಿವೆ. (ಆಮ್‌ಸ್ಟರ್‌ಡ್ಯಾಮ್-ರಾಟರ್‌ಡ್ಯಾಮ್-ಆಂಟ್‌ವರ್ಪ್ (ARA) ಪ್ರದೇಶ, ಹ್ಯಾಂಬರ್ಗ್ ಹಾಗೂ ಮೆಡಿಟರೇನಿಯನ್ ಪ್ರದೇಶಗಳು). ಇವೋಸ್ ಸಂಸ್ಥೆಯು 6.3 ಮಿಲಿಯನ್ ಕ್ಯೂಬಿಕ್ ಮೀಟರ್ ಶೇಖರಣಾ ಸಾಮರ್ಥ್ಯ ಹೊಂದಿದ್ದು, 2025 ರಲ್ಲಿ 37 ಎಂಎಂಟಿ (MMT) ಸರಕುಗಳನ್ನು ನಿರ್ವಹಿಸಿದೆ. ಈ ಒಪ್ಪಂದದ ಮೂಲಕ ಅದಾನಿ ಪೋರ್ಟ್ಸ್‌ನ ಜಾಗತಿಕ ಹೆಜ್ಜೆಯು ಇದೀಗ 10 ದೇಶಗಳಲ್ಲಿ 28 ಬಂದರುಗಳು ಮತ್ತು ಟರ್ಮಿನಲ್‌ಗಳಿಗೆ ವಿಸ್ತರಿಸಿದೆ.

ಅದ್ಭುತ ಮೂಲಸೌಕರ್ಯ ಹಾಗೂ ಇಂಧನ ವಿನ್ಯಾಸ

ಇವೋಸ್ ಪ್ಲಾಟ್‌ಫಾರ್ಮ್ 452 ಬೃಹತ್ ಶೇಖರಣಾ ಟ್ಯಾಂಕ್‌ಗಳು, 63 ನೌಕೆಗಳು ಹಾಗೂ ಬಾರ್ಜ್ ಬರ್ತ್‌ಗಳನ್ನು ಹೊಂದಿದೆ. ಜೊತೆಗೆ ಸ್ಕಿಪೋಲ್ ವಿಮಾನ ನಿಲ್ದಾಣ (Schiphol Airport) ಹಾಗೂ ಸೆಂಟ್ರಲ್ ಯುರೋಪ್ ಪೈಪ್‌ಲೈನ್ ವ್ಯವಸ್ಥೆಯೊಂದಿಗೆ ನೇರ ಸಂಪರ್ಕ ಹೊಂದಿದೆ. ಈ ಸಂಸ್ಥೆಯು ಸರಾಸರಿ ಶೇಕಡಾ 99 ರಷ್ಟು ವಾಣಿಜ್ಯ ಬಳಕೆಯ ಆಕ್ಯುಪೆನ್ಸಿ (Commercial Occupancy) ಹೊಂದಿದ್ದು, ಹೆಚ್ಚಿನ ಆದಾಯವು ಟೇಕ್-ಆರ್-ಪೇ (Take-or-pay) ಒಪ್ಪಂದಗಳ ಅಡಿಯಲ್ಲಿದೆ. ಸಾಂಪ್ರದಾಯಿಕ ಇಂಧನಗಳಾದ ಗ್ಯಾಸೋಲಿನ್, ಗ್ಯಾಸ್ ಆಯಿಲ್, ಸಾಗರ ಇಂಧನ ಹಾಗೂ ಜೆಟ್ ಇಂಧನಗಳ ಜೊತೆಗೆ, ಇವೋಸ್ ಸಂಸ್ಥೆಯು ಸುಸ್ಥಿರ ವಿಮಾನಯಾನ ಇಂಧನ (SAF), ಜೈವಿಕ ಇಂಧನಗಳು (Biofuels), ಮೆಥನಾಲ್ ಹಾಗೂ ಬಯೋಎಥನಾಲ್‌ನಂತಹ ಭವಿಷ್ಯದ ಪರಿವರ್ತನೆಯ ಇಂಧನಗಳನ್ನೂ ಕಾಯ್ದಿರಿಸುವ ವ್ಯವಸ್ಥೆ ಹೊಂದಿದೆ. ಯುರೋಪ್‌ನ ಹೂಡಿಕೆ-ದರ್ಜೆಯ (Investment-grade) ಮಾನ್ಯತೆ ಹೊಂದಿರುವ ಇವೋಸ್ ಸೇರ್ಪಡೆಯು ಅದಾನಿ ಪೋರ್ಟ್ಸ್‌ನ ಬಿಸಿನೆಸ್ ರಿಸ್ಕ್ ಪ್ರೊಫೈಲ್ ಅನ್ನು ಮತ್ತಷ್ಟು ಬಲಪಡಿಸಲಿದೆ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ಹಾಲಿನಿಂದ ಬಸ್‌ವರೆಗೆ ಎಲ್ಲದರ ದರ ಏರಿಕೆ ಮಾಡಿ ಸರ್ಕಾರಿ ನೌಕರರಿಗೆ DA ಹೆಚ್ಚಳ ಮಾಡಿದ ರಾಜ್ಯ ಸರ್ಕಾರ
ಇದೇ ನೋಡಿ ಭಾರತದ 'ಈರುಳ್ಳಿ ರಾಜಧಾನಿ'.. ಇಲ್ಲಿಂದಲೇ ನಿರ್ಧಾರವಾಗುತ್ತೆ ದೇಶಾದ್ಯಂತ ಇದರ ರೇಟ್