
ಬೆಂಗಳೂರು (ನ.6): ಜಾಗತಿಕ ಶೇರು ಮಾರುಕಟ್ಟೆಯಲ್ಲಿ ತಂತ್ರಜ್ಞಾನ ವಲಯದ ಶೇರುಗಳು ತೀವ್ರ ಕುಸಿತ ಕಂಡ ಪರಿಣಾಮವಾಗಿ (Tech Rout), ವಿಶ್ವದ ಶ್ರೀಮಂತ ವ್ಯಕ್ತಿ ಎಲಾನ್ ಮಸ್ಕ್ (Elon Musk) ಅವರ ಆಸ್ತಿಯಲ್ಲಿ ಕೇವಲ ಎರಡೇ ದಿನಗಳಲ್ಲಿ ಬರೋಬ್ಬರಿ 113 ಬಿಲಿಯನ್ ಡಾಲರ್‌ಗಳಷ್ಟು (ಸುಮಾರು ₹10 ಲಕ್ಷ ಕೋಟಿಗೂ ಹೆಚ್ಚು) ಭಾರಿ ಪ್ರಮಾಣದ ಮೌಲ್ಯ ಧೂಳಿಪಟವಾಗಿದೆ!
ನವೆಂಬರ್ 5 ರಂದು ಜಾಗತಿಕ ಮಾರುಕಟ್ಟೆಯಲ್ಲಿ ಉಂಟಾದ ಭಾರಿ ಕುಸಿತದಿಂದಾಗಿ ಎಲಾನ್ ಮಸ್ಕ್ ಒಂದೇ ದಿನದಲ್ಲಿ ಬರೋಬ್ಬರಿ $80 ಬಿಲಿಯನ್ (ಸುಮಾರು ₹7.1 ಲಕ್ಷ ಕೋಟಿ) ನಷ್ಟ ಅನುಭವಿಸಿದ್ದಾರೆ. ಇದಕ್ಕೂ ಮುನ್ನ ನವೆಂಬರ್ 4 ರಂದು ಅವರು $33 ಬಿಲಿಯನ್ ಕಳೆದುಕೊಂಡಿದ್ದರು. ಇದರೊಂದಿಗೆ ಕೇವಲ 48 ಗಂಟೆಗಳ ಅವಧಿಯಲ್ಲಿ ಅವರ ಅಂದಾಜು ಸಂಪತ್ತಿನಿಂದ 113 ಬಿಲಿಯನ್ ಡಾಲರ್‌ಗಳಷ್ಟು ಬೃಹತ್ ಆಸ್ತಿಯು ಭಸ್ಮವಾಗಿದೆ.
ಅಮೆರಿಕದ ಮಧ್ಯಂತರ ಚುನಾವಣೆಯ (US Midterm Elections) ಬೆನ್ನಲ್ಲೇ ಆರಂಭಿಕ ಚೇತರಿಕೆ ಕಂಡಿದ್ದ ನ್ಯಾಸ್‌ಡಾಕ್ (Nasdaq) ಸೂಚ್ಯಂಕವು, ನ್ಯೂಯಾರ್ಕ್‌ನಲ್ಲಿ ಗುರುವಾರ ಬೆಳಗಿನ ವಹಿವಾಟಿನಲ್ಲಿ ಶೇಕಡಾ 6.4 ರಷ್ಟು ಭಾರಿ ಕುಸಿತ ಕಂಡಿತು. ನ್ಯಾಸ್‌ಡಾಕ್ 100 ರಲ್ಲಿದ್ದ ತಂತ್ರಜ್ಞಾನ ದೈತ್ಯ ಸಂಸ್ಥೆಗಳ ಮೌಲ್ಯದಲ್ಲಿ ಒಂದೇ ದಿನದಲ್ಲಿ 280 ಲಕ್ಷ ಕೋಟಿಗಳಷ್ಟು ಭಾರಿ ನಷ್ಟವಾಯಿತು. ಅಕ್ಟೋಬರ್ 6 ರ ಸಾರ್ವಕಾಲಿಕ ಗರಿಷ್ಠಕ್ಕೆ ಹೋಲಿಸಿದರೆ ಈ ವಲಯವು ಒಟ್ಟಾರೆಯಾಗಿ 585 ಲಕ್ಷ ಕೋಟಿಗಳಷ್ಟು ನಷ್ಟ ಅನುಭವಿಸಿದೆ. ತನ್ನ ಸಾರ್ವಕಾಲಿಕ ಗರಿಷ್ಠ ಮಟ್ಟದಿಂದ ಶೇ. 15 ರಷ್ಟು ಕುಸಿದಿರುವ ನ್ಯಾಸ್‌ಡಾಕ್ ಸೂಚ್ಯಂಕವು ಇದೀಗ ಅಧಿಕೃತವಾಗಿ 'ಕರೇಕ್ಷನ್' (Correction - ಕನಿಷ್ಠ ಶೇ. 10 ರಷ್ಟು ಇಳಿಕೆ) ವಲಯವನ್ನು ಪ್ರವೇಶಿಸಿದೆ.
ಉಳಿದಂತೆ ಅಮೆರಿಕ ಮಾರುಕಟ್ಟೆಯ ಇತರ ಸೂಚ್ಯಂಕಗಳಾದ ಡೌ ಜೋನ್ಸ್ (Dow Jones) ಸುಮಾರು ಶೇ. 3 ರಷ್ಟು ಹಾಗೂ ಎಸ್ ಆಂಡ್ ಪಿ 500 (S&P 500) ಶೇ. 4 ರಷ್ಟು ಕುಸಿತ ಕಂಡವು. ಲಂಡನ್‌ನ ಎಫ್‌ಟಿಎಸ್‌ಇ 100 (FTSE 100) ಕೂಡ ಶೇ. 0.4 ರಷ್ಟು (46.55 ಅಂಕಗಳು) ಇಳಿಕೆಯಾಗಿ 10,782.66 ಅಂಕಗಳಿಗೆ ಕೊನೆಗೊಂಡಿತು.
ಅಮೆರಿಕದ ಚುನಾವಣೆಯಲ್ಲಿ ಡೆಮಾಕ್ರಟ್‌ಗಳು ಭಾರಿ ಜಯಗಳಿಸಿರುವುದು ಡಾಟಾ ಸೆಂಟರ್‌ಗಳ ನಿರ್ಮಾಣಕ್ಕೆ (Data Centres Construction) ಭಾರಿ ನೀತಿ ನಿಯಮಗಳು ಎದುರಾಗಬಹುದು. ಇದರಿಂದ ಕೃತಕ ಬುದ್ಧಿಮತ್ತೆ (AI) ಮೂಲಸೌಕರ್ಯ ಬೆಳವಣಿಗೆಗೆ ತಡೆ ಬೀಳಬಹುದು ಎಂಬ ಕಳವಳ ಹೂಡಿಕೆದಾರರಲ್ಲಿ ವ್ಯಕ್ತವಾಗಿದೆ. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ತಂತ್ರಜ್ಞಾನಕ್ಕೆ ಸುರಿಯಲಾಗುತ್ತಿರುವ ಕೋಟ್ಯಂತರ ಡಾಲರ್ ಹೂಡಿಕೆಯು ಸೂಕ್ತವಾದ ಆದಾಯ (Returns) ತಂದುಕೊಡಲಿದೆಯೇ ಎಂಬ ಸಂಶಯ ಮಾರುಕಟ್ಟೆಯನ್ನು ಕಾಡುತ್ತಿದೆ. ಇನ್‌ಕ್ಲೈನ್ ಇನ್ವೆಸ್ಟ್‌ಮೆಂಟ್ ಮ್ಯಾನೇಜ್‌ಮೆಂಟ್‌ನ ಸಂಸ್ಥಾಪಕ ಟೆಡ್ ಪಾರ್ಕ್‌ಹಿಲ್ ಮಾತನಾಡಿ, "ಮಾರುಕಟ್ಟೆಯು ಇದೀಗ ಎಐ ನೀಡಿದ್ದ ಭರವಸೆಯ ಹಂತದಿಂದ ಎಐ ತಗುಲಿಸುತ್ತಿರುವ ವೆಚ್ಚ ಮತ್ತು ಬೆಲೆಯ ಹಂತಕ್ಕೆ ಬದಲಾಗುತ್ತಿದೆ" ಎಂದು ವಿಶ್ಲೇಷಿಸಿದ್ದಾರೆ.
ಇಡೀ ಮಾರುಕಟ್ಟೆ ಕುಸಿತದಲ್ಲಿ ಅತ್ಯಂತ ಹೆಚ್ಚಿನ ನಷ್ಟ ಅನುಭವಿಸಿದ್ದು ಇಲಾನ್ ಮಸ್ಕ್ ಒಡೆತನದ ಸಂಸ್ಥೆಗಳು.
ವಾಲ್ ಸ್ಟ್ರೀಟ್‌ನ ಅಪಾಯದ ಮಟ್ಟವನ್ನು ಅಳೆಯುವ ವೋಲಟಾಲಿಟಿ ಸೂಚ್ಯಂಕ ಅಥವಾ 'ಫಿಯರ್ ಗೇಜ್' (VIX Index) ಆರಂಭಿಕ ವಹಿವಾಟಿನಲ್ಲಿ ಶೇಕಡಾ 70 ರಷ್ಟು ಭಾರಿ ಜಿಗಿತ ಕಂಡು 28 ಅಂಕಗಳನ್ನು ಮುಟ್ಟಿತು. 2025 ರ ಏಪ್ರಿಲ್‌ನಲ್ಲಿ ಡೊನಾಲ್ಡ್ ಟ್ರಂಪ್ ಅವರು ಬಿಡುಗಡೆ ಮಾಡಿದ್ದ ‘ಲಿಬರೇಶನ್ ಡೇ’ ಸುಂಕಗಳ ಅವಧಿಗೆ ಹೋಲಿಸಿದರೆ ಇದು ಕಡಿಮೆಯಿದ್ದರೂ, ಪ್ರಸ್ತುತ ಹೂಡಿಕೆದಾರರಲ್ಲಿ ಭಾರಿ ಆತಂಕ ಮೂಡಿಸಿದೆ. ವೆಲ್ತ್ ಕ್ಲಬ್‌ನ ಮುಖ್ಯ ಹೂಡಿಕೆ ತಂತ್ರಜ್ಞ ಸುಸನ್ನಾ ಸ್ಟ್ರೀಟರ್ ಪ್ರತಿಕ್ರಿಯಿಸಿ, "ಎಐ ಮೂಲಸೌಕರ್ಯಗಳಿಗೆ ಸುರಿದ ಭಾರಿ ಹಣವು ನಿರೀಕ್ಷಿತ ಆದಾಯ ನೀಡದಿರುವ ಭೀತಿಯು ಡಾಟಾ ಸೆಂಟರ್ ನಿರ್ಮಾಣದ ಕುಸಿತದ ಜೊತೆ ಸೇರಿಕೊಂಡಿದ್ದು, ಇಡೀ ಜಾಗತಿಕ ಮಾರುಕಟ್ಟೆಯಲ್ಲಿ ತಲ್ಲಣ ಸೃಷ್ಟಿಸಿದೆ" ಎಂದು ತಿಳಿಸಿದ್ದಾರೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.