ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರದಲ್ಲಿ ಹೂಡಿಕೆ ಮಾಡಿರೋರು ಬಡ್ಡಿದರ ಏರಿಕೆಯ ನಿರೀಕ್ಷೆಯಲ್ಲಿದ್ದಾರೆ. ಈ ತಿಂಗಳ ಅಂತ್ಯದೊಳಗೆ ಎನ್ ಎಸ್ ಸಿ ಬಡ್ಡಿದರ ಹೆಚ್ಚಳ ಮಾಡುವ ನಿರೀಕ್ಷೆಯಿದ್ದು, 2023ರ ಮೊದಲ ತ್ರೈಮಾಸಿಕದಲ್ಲಿ ಹೂಡಿಕೆದಾರರಿಗೆ ಹೆಚ್ಚಿನ ಬಡ್ಡಿ ಸಿಗುವ ಸಾಧ್ಯತೆಯಿದೆ.
ನವದೆಹಲಿ (ಡಿ.23): ಹೂಡಿಕೆ ಮಾಡೋರಿಗೆ ಅನೇಕ ಅವಕಾಶಗಳಿದ್ರೂ ಸರ್ಕಾರದ ಬೆಂಬಲಿತ ಯೋಜನೆಗಳನ್ನು ಹೆಚ್ಚಾಗಿ ಆಯ್ಕೆ ಮಾಡುತ್ತಾರೆ. ಇದಕ್ಕೆ ಮುಖ್ಯಕಾರಣ ಸರ್ಕಾರದ ಬೆಂಬಲಿತ ಯೋಜನೆಗಳಲ್ಲಿ ಹೂಡಿಕೆ ಮಾಡಿದ್ರೆ ಹಣ ಸುರಕ್ಷಿತವಾಗಿರುತ್ತದೆ ಎಂಬ ಭಾವನೆ. ರಾಷ್ಟ್ರೀಯ ಉಳಿತಾಯ ಪ್ರಮಾಣ ಪತ್ರ (ಎನ್ ಎಸ್ ಸಿ) ಕೂಡ ಕೇಂದ್ರ ಸರ್ಕಾರದ ಬೆಂಬಲಿ ಯೋಜನೆಯಾಗಿದೆ. ಅಂಚೆ ಕಚೇರಿಯಲ್ಲಿ ಲಭ್ಯವಿರುವ ಈ ಉಳಿತಾಯ ಯೋಜನೆ 5 ವರ್ಷಗಳ ಅವಧಿಯದ್ದಾಗಿದ್ದು, ಇದರಲ್ಲಿ ಹೂಡಿಕೆ ಮಾಡಿದ್ರೆ ತೆರಿಗೆ ಪ್ರಯೋಜನ ಕೂಡ ಸಿಗುತ್ತದೆ. ಅಪಾಯವಿಲ್ಲದ ಉಳಿತಾಯಕ್ಕೆ ಇದು ಅತ್ಯುತ್ತಮ ಆಯ್ಕೆಯಾಗಿದೆ. 5 ವರ್ಷಗಳ ಕಿರು ಅವಧಿಗೆ ಹೂಡಿಕೆ ಮಾಡಲು ಬಯಸೋರಿಗೆ ಇದು ಉತ್ತಮ ಆಯ್ಕೆಯಾಗಿದ್ದು, ತೆರಿಗೆ ಪ್ರಯೋಜನಗಳು ಕೂಡ ಸಿಗುತ್ತವೆ. ಪ್ರಸ್ತುತ ಎನ್ ಎಸ್ ಸಿಗೆ ಶೇ.6.8 ಬಡ್ಡಿ ಸಿಗುತ್ತಿದೆ. ಈ ತಿಂಗಳ ಅಂತ್ಯದೊಳಗೆ ಎನ್ ಎಸ್ ಸಿ ಬಡ್ಡಿದರ ಹೆಚ್ಚಳ ಮಾಡದಿದ್ರೆ 2023ರ ಮೊದಲ ತ್ರೈಮಾಸಿಕದಲ್ಲಿ ಕೂಡ ಇದೇ ಬಡ್ಡಿದರ ಇರಲಿದೆ. 2022ರಲ್ಲಿ ಹಣದುಬ್ಬರ ಹೆಚ್ಚಳವಾದ ಕಾರಣ ಆರ್ ಬಿಐ ಐದು ಬಾರಿ ರೆಪೋ ದರ ಹೆಚ್ಚಳ ಮಾಡಿತ್ತು. ಹೀಗಾಗಿ ಬ್ಯಾಂಕ್ ಗಳ ಸ್ಥಿರ ಠೇವಣಿ ಬಡ್ಡಿದರ ಕೂಡ ಹೆಚ್ಚಳವಾಗಿದ್ದು, ಎನ್ ಎಸ್ ಸಿಗಿಂತ ಹೆಚ್ಚಿದೆ. ಈ ಹಿಂದೆ ಬ್ಯಾಂಕ್ ಎಫ್ ಡಿಗಳಿಗಿಂತ ಎನ್ ಎಸ್ ಸಿ ಬಡ್ಡಿದರ ಹೆಚ್ಚಿತ್ತು. ಹೀಗಾಗಿ ಸಹಜವಾಗಿ ಎನ್ ಎಸ್ ಸಿಯಲ್ಲಿ ಹೂಡಿಕೆ ಮಾಡಿರೋರು ಹೆಚ್ಚಿನ ಬಡ್ಡಿದರದ ನಿರೀಕ್ಷೆಯಲ್ಲಿದ್ದಾರೆ.
2023ರಲ್ಲಿ ಎನ್ ಎಸ್ ಸಿ ಬಡ್ಡಿದರ
ಕೇಂದ್ರ ಸರ್ಕಾರ ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರದ (ಎನ್ ಎಸ್ ಸಿ) ಮೇಲಿನ ಬಡ್ಡಿದರವನ್ನು ಪ್ರತಿ ತ್ರೈಮಾಸಿಕಕ್ಕೊಮ್ಮೆ ಪರಿಷ್ಕರಿಸುತ್ತದೆ. ಎನ್ ಎಸ್ ಸಿ ಬಡ್ಡಿದರದ ಮುಂದಿನ ಪರಿಷ್ಕರಣೆ ಈ ತಿಂಗಳ (2022ರ ಡಿಸೆಂಬರ್ ) ಕೊನೆಯಲ್ಲಿ ನಡೆಯಲಿದೆ. ಹೀಗಾಗಿ 2023ರ ಮೊದಲ ತ್ರೈಮಾಸಿಕದಲ್ಲಿ (ಜನವರಿ-ಮಾರ್ಚ್) ಎನ್ ಎಸ್ ಸಿಗೆ ಎಷ್ಟು ಬಡ್ಡಿದರ ನೀಡಲಾಗುತ್ತದೆ ಎಂಬ ಮಾಹಿತಿ ಈ ತಿಂಗಳ ಅಂತ್ಯದೊಳಗೆ (ಡಿ.31) ತಿಳಿಯಲಿದೆ.
ಬ್ಯಾಂಕ್ ಲಾಕರ್ ಹೊಂದಿರೋರು ಗಮನಿಸಿ, ಜ.1ರಿಂದ ಹೊಸ ನಿಯಮ ಜಾರಿ
ಈ ಯೋಜನೆ ವಿಶೇಷತೆಗಳೇನು?
ರಾಷ್ಟ್ರೀಯ ಉಳಿತಾಯ ಯೋಜನೆ ಅಂಚೆ ಕಚೇರಿಯ ಉಳಿತಾಯ ಯೋಜನೆಗಳಲ್ಲಿ ಒಂದಾಗಿದೆ. ಇದಕ್ಕೆ ಪ್ರತಿ ತಿಂಗಳು ಹಣ ತುಂಬಬೇಕಾದ ಅಗತ್ಯವಿಲ್ಲ. ಬದಲಿಗೆ ಇದಕ್ಕೆ ಒಮ್ಮೆಗೆ ದೊಡ್ಡ ಮೊತ್ತವನ್ನು ಪಾವತಿಸಿದರೆ ಸಾಕು. ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ (NSC) ಯೋಜನೆಯಡಿಯಲ್ಲಿ ಖಾತೆ ತೆರೆಯಲು ಕನಿಷ್ಠ 1,000ರೂ. ಹೂಡಿಕೆ (Invest) ಮಾಡಬೇಕು. ಆ ಬಳಿಕ ಇನ್ನಷ್ಟು ಹೂಡಿಕೆ ಮಾಡುತ್ತ ಬರಬಹುದು. ಆದ್ರೆ ಈ ಯೋಜನೆಯಡಿಯಲ್ಲಿ ಗರಿಷ್ಠ ಠೇವಣಿಗೆ ಮಿತಿಯಿಲ್ಲ. ಇನ್ನು ಈ ಯೋಜನೆ ಆಧಾರವಾಗಿರಿಸಿ ಬ್ಯಾಂಕಿನಿಂದ ಸಾಲ ಸೌಲಭ್ಯ ಪಡೆಯಲು ಅವಕಾಶವಿದೆ.
ತೆರಿಗೆ ಕಡಿತದ ಸೌಲಭ್ಯ
ಎನ್ ಎಸ್ ಸಿ ಯೋಜನೆಯಲ್ಲಿ ಮಾಡಿದ ಠೇವಣಿಗೆ ಆದಾಯ ತೆರಿಗೆ ಕಾಯ್ದೆ (Income Tax Act) ಸೆಕ್ಷನ್ 80ಸಿ ( section 80C) ಅಡಿಯಲ್ಲಿ ತೆರಿಗೆ ಕಡಿತದ (tax deduction) ಸೌಲಭ್ಯವಿದೆ. ಸೆಕ್ಷನ್ 80ಸಿ ಅಡಿಯಲ್ಲಿ ವಾರ್ಷಿಕ ಗರಿಷ್ಠ 1.5ಕ್ಷ ರೂ.ಗೆ ತೆರಿಗೆ ಕಡಿತದ ಪ್ರಯೋಜನ ಪಡೆಯಲು ಅವಕಾಶವಿದೆ.
ಸುಸ್ತಿದಾರರಿಂದ ಬ್ಯಾಂಕ್‌ಗಳಿಗೆ 92 ಸಾವಿರ ಕೋಟಿ ರು. ಬಾಕಿ
ಯಾರು ಖಾತೆ ತೆರೆಯಬಹುದು?
ವಯಸ್ಕ ವ್ಯಕ್ತಿ ತನಗಾಗಿ ಅಥವಾ ಅಪ್ರಾಪ್ತರ ಪರವಾಗಿ ಎನ್ ಎಸ್ ಸಿ (NSC) ಖಾತೆ ತೆರೆಯಬಹುದು.10 ವರ್ಷ ಪೂರ್ಣಗೊಂಡ ಅಪ್ರಾಪ್ತರಿಗೆ ಕೂಡ ಖಾತೆ ತೆರೆಯಲು ಅವಕಾಶ ನೀಡಲಾಗಿದೆ. ಈ ಯೋಜನೆಯಡಿಯಲ್ಲಿ ಖಾತೆಗಳನ್ನು ತೆರೆಯಲು ಯಾವುದೇ ಮಿತಿಯಿಲ್ಲ.