Save Environment: ಮಕ್ಕಳ ಮುಖದಲ್ಲಿ ನಗು ತರಿಸ್ತಿದೆ ಸಿಗರೇಟ್ ತುಂಡು

By Suvarna NewsFirst Published Dec 23, 2022, 3:25 PM IST
Highlights

ಸಿಗರೇಟ್ ನಮ್ಮ ದೇಹವನ್ನು ಮಾತ್ರವಲ್ಲದೆ ಪರಿಸರವನ್ನೂ ಹಾಳು ಮಾಡ್ತಿದೆ. ಸಿಗರೇಟ್ ಚಟಕ್ಕೆ ಬಲಿಯಾಗ್ತಿರುವವರ ಸಂಖ್ಯೆ ದಿನ ದಿನಕ್ಕೂ ಹೆಚ್ಚಾಗಿದೆ. ಅವರು ಸೇದಿ ಬಿಸಾಕಿದ ತುಂಡುಗಳು ಪರಿಸರ ಹಾಳು ಮಾಡ್ತಿದೆ. ಪರಿಸರ ರಕ್ಷಣೆಗೆ ಇಬ್ಬರು ಯುವಕರು ಮಾಡ್ತಿರುವ ಕೆಲಸ ಹೆಮ್ಮೆಪಡುವಂತಿದೆ.
 

ನಮ್ಮ ದೇಶದಲ್ಲಿ ಸಿಗರೇಟ್ ಸೇದುವವರ ಸಂಖ್ಯೆ ಕೋಟಿಯಲ್ಲಿದೆ. ಜನರು ಸಿಗರೇಟ್ ಸೇದಿ ಉಳಿದ ತುಂಡನ್ನು ಕಂಡ ಕಂಡಲ್ಲಿ ಎಸೆದು ಹೋಗ್ತಾರೆ. ಸಿಗರೇಟ್ ಹೇಗೆ ನಮ್ಮ ಆರೋಗ್ಯವನ್ನು ಹಾಳು ಮಾಡುತ್ತೋ ಅದೇ ರೀತಿ ಸಿಗರೇಟ್ ತುಂಡುಗಳು ಪರಿಸರವನ್ನು ಹಾಳು ಮಾಡುತ್ತವೆ. ವಿಶ್ವದಾದ್ಯಂತ ಸಿಗರೇಟ್ ಸೇದುವವರ ಸಂಖ್ಯೆ ಹೆಚ್ಚಾಗ್ತನೆ ಇದೆ. ವಿಶ್ವದಾದ್ಯಂತ 120 ಕೋಟಿಗೂ ಹೆಚ್ಚು ಮಂದಿ ಧೂಮಪಾನ ಮಾಡ್ತಿದ್ದಾರೆ. ಅದ್ರಲ್ಲಿ ಶೇಕಡಾ 80ರಷ್ಟು ಪುರುಷರು ಸೇರಿದ್ದಾರೆ.

ಪೂರ್ವ ಯುರೋಪ್, ದಕ್ಷಿಣ ಕೋರಿಯಾ ಮತ್ತು ಜಪಾನ್ ನಲ್ಲಿ ಧೂಮಪಾನ (Smoking) ಮಾಡುವವರ ಸಂಖ್ಯೆ ಹೆಚ್ಚಿದೆ. ಇಷ್ಟು ದೊಡ್ಡ ಮಟ್ಟದಲ್ಲಿ ಜನರು ಸಿಗರೇಟ್ (Cigarette) ಸೇದುತ್ತಾರೆ ಅಂದ್ಮೇಲೆ ಅದ್ರ ತುಂಡುಗಳ ಸಂಖ್ಯೆ ಎಷ್ಟಿರುತ್ತೆ ಎಂಬುದನ್ನು ನೀವು ಊಹಿಸಬಹುದು. ನಿಮಗೆ ಅಚ್ಚರಿ ಆಗ್ಬಹುದು. ನಮ್ಮ ರಾಜಧಾನಿ ಬೆಂಗಳೂರಿ (Bangalore) ನಲ್ಲಿ 31 ಲಕ್ಷಕ್ಕೂ ಹೆಚ್ಚು ಸಿಗರೇಟ್ ಬಟ್ ಸಿಗುತ್ತೆ. ವಿಶ್ವದಾದ್ಯಂತ ಒಂದು ವರ್ಷದಲ್ಲಿ ಎಸೆಯುವ ಸಿಗರೇಟ್ ತುಂಡುಗಳು ಸುಮಾರು 1.69 ಬಿಲಿಯನ್ ಪೌಂಡ್ ಎಂದು ಅಂದಾಜಿಸಲಾಗಿದೆ. ಇದನ್ನು ಜೈವಿಕವಾಗಿ ನಷ್ಟಮಾಡಲು ಸಾಧ್ಯವಿಲ್ಲ. ಪರಿಸರಕ್ಕೆ ದೊಡ್ಡ ಮಟ್ಟದಲ್ಲಿ ಹಾನಿಯುಂಟು ಮಾಡ್ತಿರುವ ಈ ಸಿಗರೇಟ್ ತುಂಡುಗಳನ್ನು ಕಂಪನಿಯೊಂದು ಮರುಬಳಕೆ ಮಾಡಿ ಮಾದರಿಯಾಗಿದೆ. ನಾವಿಂದು ಆ ಕಂಪನಿ ಬಗ್ಗೆ ಮಾಹಿತಿ ನೀಡ್ತೆವೆ.

Startup ಕಂಪನಿಗೆ ಸೇರುವ ಮುನ್ನ ಕೆಲ ವಿಷ್ಯ ನೆನಪಿಡಿ

ಸಿಗರೇಟ್ ತುಂಡುಗಳ ಮರುಬಳಕೆ : ಭಾರತೀಯ ಕಂಪನಿ ಕೋಡ್ ಎಫರ್ಟ್ ಪ್ರೈವೇಟ್ ಲಿಮಿಟೆಡ್ ಸಿಗರೇಟ್ ತುಂಡುಗಳನ್ನು ಮರುಬಳಕೆ ತಯಾರು ಮಾಡುತ್ತದೆ. ಈ ಕಂಪನಿಯು ನೋಯ್ಡಾದಲ್ಲಿ ನೆಲೆಗೊಂಡಿದೆ. ನಮನ್ ಗುಪ್ತಾ ಮತ್ತು ವಿಪುಲ್ ಗುಪ್ತಾ ಇದರ ಸಂಸ್ಥಾಪಕರು. ಈ ಕಂಪನಿ ಸಾವಿರ ಕಿಲೋಗ್ರಾಂಗಳಷ್ಟು ಸಿಗರೇಟ್ ತುಂಡುಗಳನ್ನು ಮರುಬಳಕೆ ಮಾಡಿ ಆಟಿಕೆಗಳನ್ನು ತಯಾರಿಸಿದೆ.
ಈ ಕಂಪನಿ ಸಿಗರೇಟ್ ತುಂಡುಗಳನ್ನು ದೇಶದ 200 ಕ್ಕೂ ಹೆಚ್ಚು ಭಾಗಗಳಿಂದ ಸಂಗ್ರಹಿಸುತ್ತದೆ. ನಂತರ ಅದನ್ನು ಸ್ವಚ್ಛಗೊಳಿಸಿ ಮತ್ತು ಬ್ಲೀಚ್ ಮಾಡಿ ನಂತರ ಮರುಬಳಕೆ ಮಾಡಲಾಗುತ್ತದೆ. ಆಗ ಸಿಗರೇಟ್ ತುಂಡು ಪೇಪರ್ ಮತ್ತು ಕಾಂಪೋಸ್ಟ್ ಪುಡಿಯಾಗಿ ಪರಿವರ್ತಿಸಲಾಗುತ್ತದೆ. ಇದನ್ನು ಮೃದುವಾದ ಆಟಿಕೆಗಳನ್ನು ತಯಾರಿಸಲು ಬಳಸಲಾಗುತ್ತದೆ.

ಯಾವೆಲ್ಲ ವಸ್ತುಗಳನ್ನು ತಯಾರಿಸುತ್ತೆ ಕಂಪನಿ : ಕಂಪನಿಯು ಮಕ್ಕಳಿಗೆ ಆಟಿಕೆಗಳನ್ನು ಮಾತ್ರವಲ್ಲದೆ ಸಿಗರೇಟ್ ತುಂಡುಗಳಿಂದ ಇನ್ನೂ ಕೆಲ ವಸ್ತುಗಳನ್ನು ತಯಾರಿಸುತ್ತದೆ. ಕಂಪನಿಯಿಂದ ತಯಾರಾಗುವ ವಸ್ತುಗಳಲ್ಲಿ ಚೀಲ, ದಿಂಬು ಮತ್ತು ಅಲಂಕಾರಿಕ ವಸ್ತುಗಳು ಸೇರಿವೆ. ಈ ಎಲ್ಲ ವಸ್ತುಗಳ ಬೆಲೆಯೂ ತೀರಾ ಕಡಿಮೆ ಇರುವುದರಿಂದ ಮಧ್ಯಮ ವರ್ಗದವರೂ ಕೂಡ ಈ ವಸ್ತುಗಳನ್ನು ಖರೀದಿಸಿ ಬಳಸಬಹುದಾಗಿದೆ.

Earn Money: ರೀಲ್ಸ್ ಮಾಡೋ ಆಸಕ್ತಿ ಇದ್ರೆ ಹಣ ಗಳಿಸುವ ಮೂಲ ತಿಳಿದಿರಿ

ದೆಹಲಿಯಲ್ಲಿ ಪದವಿಪಡೆದ ಈ ಯುವಕರಿಗೆ ಪಾರ್ಟಿಯೊಂದರಲ್ಲಿ ಸಿಗರೇಟ್ ತುಂಡನ್ನು ಮರುಬಳಕೆ ಮಾಡುವ ಆಲೋಚನೆ ಬಂತು. ಪಾರ್ಟಿಯಲ್ಲಿ ಸಾಕಷ್ಟು ಸಿಗರೇಟ್ ತುಂಡುಗಳನ್ನು ಅವರು ನೋಡಿ ದಂಗಾಗಿದ್ದರು. ಇದನ್ನಿಟ್ಟುಕೊಂಡು ಸ್ಟಾರ್ಟ್ ಅಪ್ ಶುರು ಮಾಡ್ಬೇಕೆಂದು ಆಲೋಚಿಸಿದರು. 2016ರಲ್ಲಿಯೇ ಇವರು ಕಂಪನಿ ಶುರು ಮಾಡಿದ್ರು. ವಿಶೇಷವೆಂದ್ರೆ ಸಿಗರೇಟ್ ತುಂಡು ನೀಡಿದವರಿಗೂ ಇವರು ಹಣ ನೀಡ್ತಾರೆ. 100 ಗ್ರಾಂ ಸಿಗರೇಟ್ ತುಂಡಿಗೆ ಸುಮಾರು 80 ರೂಪಾಯಿಯನ್ನು ಅವರು ನೀಡ್ತಾರೆ. ಒಂದು ಕಿಲೋಗ್ರಾಮ್ ಸಿಗರೇಟ್ ತುಂಡಿಗೆ 700 ರೂಪಾಯಿ ನೀಡ್ತಾರೆ. ಸಿಗರೇಟ್ ತುಂಡಿನಿಂದ ತಯಾರಾಗುವ ಆಟಿಗೆ ಮತ್ತು ವಸ್ತುವಿಗೆ ಬೇಡಿಕೆಯಿದೆ. ನಿಧಾನವಾಗಿ ಇವರ ಕಂಪನಿ ಕೂಡ ಬೆಳೆಯುತ್ತಿದೆ. ಡಸ್ಟ್ ಬಿನ್ ನಲ್ಲಿ ಬಿಸಾಡುವ ಸಿಗರೇಟ್ ತುಂಡುಗಳು ಮಕ್ಕಳ ಮುಖದಲ್ಲಿ ನಗು ತರಿಸುಲು ನೆರವಾಗ್ತಿದೆ. ಹಾಗೆಯೇ ಈ ಯುವಕರ ಕೆಲಸದಿಂದ ಪರಿಸರ ರಕ್ಷಣೆ ಕೂಡ ಆಗ್ತಿದೆ.  
 

click me!