ಮುಖೇಶ್ ಅಂಬಾನಿ ತಮ್ಮ ಉದ್ಯಮ ಕ್ಷೇತ್ರವನ್ನು ವಿಸ್ತರಿಸುವ ಕಾರ್ಯ ಮುಂದುವರಿಸಿದ್ದು, ಅದರ ಭಾಗವಾಗಿಯೇ ಜಿಯೋ ಫೈನಾನ್ಷಿಯಲ್ ಸರ್ವೀಸಸ್ ಶೀಘ್ರದಲ್ಲೇ ಮ್ಯೂಚುವಲ್ ಫಂಡ್ ಕ್ಷೇತ್ರ ಪ್ರವೇಶಿಸಲಿದೆ. ಅದಕ್ಕಾಗಿ ಈಗಾಗಲೇ ಸಿದ್ಧತೆಗಳು ಕೂಡ ನಡೆದಿವೆ.
ಮುಂಬೈ (ಜ.4): ಮುಖೇಶ್ ಅಂಬಾನಿ ಕಳೆದ ಒಂದು ವರ್ಷದಿಂದ ತಮ್ಮ ಉದ್ಯಮ ಸಾಮ್ರಾಜ್ಯವನ್ನು ವಿಸ್ತರಿಸುತ್ತಿದ್ದಾರೆ. ಈ ವರ್ಷ ಕೂಡ ಇದು ಮುಂದುವರಿಯುವ ಸೂಚನೆ ಸಿಕ್ಕಿದೆ. ಮ್ಯೂಚುವಲ್ ಫಂಡ್ ಕ್ಷೇತ್ರಕ್ಕೂ ಪ್ರವೇಶಿಸಲು ರಿಲಯನ್ಸ್ ತಯಾರಿ ನಡೆಸಿದೆ. ಅದರ ಭಾಗವಾಗಿ ಜಿಯೋ ಫೈನಾನ್ಷಿಯಲ್ ಸರ್ವೀಸಸ್ ಬ್ಲಾಕ್ ರಾಕ್ ಸಹಭಾಗಿತ್ವದಲ್ಲಿ ಮ್ಯೂಚುವಲ್ ಫಂಡ್ ಲೈಸೆನ್ಸ್ ಗೆ ಅರ್ಜಿ ಸಲ್ಲಿಸಿದೆ. ಈ ಅರ್ಜಿಯನ್ನು ಸೆಕ್ಯುರಿಟೀಸ್ ಆಂಡ್ ಎಕ್ಸ್ ಚೇಂಜ್ ಬೋರ್ಡ್ ಆಫ್ ಇಂಡಿಯಾ (ಸೆಬಿ) ಪರಿಶೀಲನೆ ನಡೆಸುತ್ತಿದೆ ಎಂದು ಪಿಟಿಐ ವರದಿ ಮಾಡಿದೆ. ಜಿಯೋ ಫೈನಾನ್ಷಿಯಲ್ ಸರ್ವೀಸ್ ಸಂಸ್ಥೆ ಮುಖೇಶ್ ಅಂಬಾನಿ ಅವರ ರಿಲಯನ್ಸ್ ಇಂಡಸ್ಟ್ರೀಸ್ ಭಾಗವಾಗಿದ್ದು, 2023ರ ಆಗಸ್ಟ್ ನಲ್ಲಿ ಷೇರು ಮಾರುಕಟ್ಟೆಯಲ್ಲಿ ಲಿಸ್ಟಿಂಗ್ ಆಗಿತ್ತು. ಈ ಸಂಸ್ಥೆ ಜೀವ, ಆರೋಗ್ಯ ಹಾಗೂ ಜನರಲ್ ವಿಮಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದೆ. ಈಗ ರಿಲಯನ್ಸ್ ಇಂಡಸ್ಟ್ರೀಸ್ ಅಂಗಸಂಸ್ಥೆಯಾದ ಜಿಯೋ ಫೈನಾನ್ಷಿಯಲ್ ಸರ್ವೀಸಸ್ ಕಳೆದ ವರ್ಷ ಬ್ಲಾಕ್ ರಾಕ್ ಜೊತೆಗೆ 50:50 ಜಾಯಿಂಟ್ ವೆಂಚರ್ ನಡೆಸಿದೆ. ಈ ಎರಡೂ ಸಂಸ್ಥೆಗಳು ಭಾರತದಲ್ಲಿ ಆಸ್ತಿ ನಿರ್ವಹಣೆ ಉದ್ಯಮಕ್ಕೆ ಪ್ರವೇಶಿಸಲು ತಲಾ 1200 ಕೋಟಿ ರೂ. ಹೂಡಿಕೆ ಮಾಡಿವೆ.
50 ಲಕ್ಷ ಕೋಟಿ ರೂ. ಮ್ಯೂಚುವಲ್ ಫಂಡ್ ಇಂಡಸ್ಟ್ರೀಸ್ ನಲ್ಲಿ ಪಾರುಪತ್ಯ ಸಾಧಿಸಲು ಮುಖೇಶ್ ಅಂಬಾನಿ ನೇತೃತ್ವದ ಮ್ಯೂಚುವಲ್ ಫಂಡ್ ಸಂಸ್ಥೆ ಡಿಜಿಟಲ್ ವೇದಿಕೆಯನ್ನು ಬಳಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ ಎಂದು ಹೇಳಲಾಗಿದೆ. 2022ನೇ ಸಾಲಿನ ಮಾಹಿತಿ ಅನ್ವಯ ಬ್ಲಾಕ್ ರಾಕ್ 8.2 ಟ್ರಿಲಿಯನ್ ಡಾಲರ್ ವಹಿವಾಟು ನಡೆಸಿದೆ.
ರಿಲಯನ್ಸ್‌ನಲ್ಲಿ ಅತಿ ಹೆಚ್ಚು ಸಂಬಳ ಪಡೆಯುವ ಉದ್ಯೋಗಿ; ಅಬ್ಬಬ್ಬಾ ದಿನಕ್ಕೆ ಇಷ್ಟೊಂದು ಸ್ಯಾಲರೀನಾ?
ಇದರ ಹೊರತಾಗಿ ಜಿಯೋ ಫೈನಾನ್ಷಿಯಲ್ ಸರ್ವೀಸಸ್ ಕ್ರೆಡಿಟ್ ರೇಟಿಂಗ್ ಹಾಗೂ ಇತರ ಅಗತ್ಯ ಅನುಮೋದನೆಗಳನ್ನು ಪಡೆಯುವ ಪ್ರಕ್ರಿಯೆಯಲ್ಲಿ ನಿರತವಾಗಿದೆ. ಇಶಾ ಅಂಬಾನಿ, ಹಿತೇಶ್ ಸೇಥಿಯಾ ಮತ್ತು ಅಂಶುಮಾನ್ ಠಾಕೂರ್ ಅವರನ್ನು ಜಿಯೋ ಫೈನಾನ್ಷಿಯಲ್ ಸರ್ವಿಸಸ್‌ನ 6 ತಿಂಗಳ ಕಾಲ ನಿರ್ದೇಶಕರಾಗಿ ನೇಮಕ ಮಾಡಲು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ನವೆಂಬರ್ 15ರಂದು ಅನುಮೋದನೆ ನೀಡಿತ್ತು. ಹಿತೇಶ್ ಸೇಥಿಯಾ ಹಣಕಾಸು ಸೇವಾ ಉದ್ಯಮದಲ್ಲಿ 20 ವರ್ಷಗಳ ಅನುಭವ ಹೊಂದಿದ್ದಾರೆ. ಇವರು ಹಾರ್ವರ್ಡ್ ಹಳೆಯ ವಿದ್ಯಾರ್ಥಿಕೂಡ. ಹೀಗಾಗಿ ಜಿಯೋ ಫೈನಾನ್ಷಿಯಲ್ ಸರ್ವೀಸಸ್ ಕಾರ್ಯನಿರ್ವಹಣೆಯಲ್ಲಿ ಇವರು ನಿರ್ಣಾಯಕ ಪಾತ್ರ ವಹಿಸುವ ಸಾಧ್ಯತೆಯಿದೆ.
ಜಿಯೋ ಫೈನಾನ್ಷಿಯಲ್ ಸರ್ವೀಸಸ್ ಅನ್ನು ವಿಶ್ವದ ಅತ್ಯಧಿಕ ಕ್ಯಾಪಿಟಲೈಸ್ಡ್ ಫೈನಾನ್ಷಿಯಲ್ ಸರ್ವೀಸ್ ಪ್ಲಾಟ್ ಫಾರ್ಮ್ ಆಗಿ ರೂಪಿಸಲು ರಿಲಯನ್ಸ್ ಇಂಡಸ್ಟ್ರೀಸ್ 1,20,000 ಕೋಟಿ ರೂ. ಬಂಡವಾಳ ತೊಡಗಿಸಿರೋದಾಗಿ ಕಳೆದ ಆಗಸ್ಟ್ ನಲ್ಲಿ ನಡೆದ ರಿಲಯನ್ಸ್ ಇಂಡಸ್ಟ್ರೀಸ್ 46ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ (ಎಜಿಎಂನಲ್ಲಿ) ಮುಖೇಶ್ ಅಂಬಾನಿ ಮಾಹಿತಿ ನೀಡಿದ್ದರು. 'ಜಿಯೋ ಫೈನಾನ್ಶಿಯಲ್ ಸರ್ವೀಸಸ್ (JFS) ಸರಳ, ಆದರೆ ಸ್ಮಾರ್ಟ್, ಲೈಫ್, ಸಾಮಾನ್ಯ ಮತ್ತು ಆರೋಗ್ಯ ವಿಮಾ ಉತ್ಪನ್ನಗಳನ್ನು ತಡೆರಹಿತ ಡಿಜಿಟಲ್ ಇಂಟರ್‌ಫೇಸ್ ಮೂಲಕ ನೀಡಲು ವಿಮಾ ವಿಭಾಗವನ್ನು ಪ್ರವೇಶಿಸುತ್ತದೆ, ಜಾಗತಿಕ ಆಟಗಾರರೊಂದಿಗೆ ಸಂಭಾವ್ಯ ಪಾಲುದಾರಿಕೆ ಹೊಂದಿದೆ" ಎಂದೂ ಅವರು ಈ ಸಂದರ್ಭದಲ್ಲಿ ತಿಳಿಸಿದ್ದರು.
ತಂದೆಯಿಂದ ಸಾಲ ಪಡೆದು ಶೆಡ್‌ನಲ್ಲಿ ವ್ಯಾಪಾರ ಆರಂಭಿಸಿದ ವ್ಯಕ್ತಿ, ಈಗ ಮುಕೇಶ್ ಅಂಬಾನಿಯ ಜಿಯೋ ಪಾರ್ಟ್‌ನರ್!
ಯಾವುದೇ ಕ್ಷೇತ್ರಕ್ಕೆ ಪ್ರವೇಶಿಸಿದರೂ ರಿಲಯನ್ಸ್ ಅಲ್ಲಿ ಹೊಸ ಉದ್ಯಮ ತಂತ್ರಗಳ ಮೂಲಕ ನೆಲೆಯೂರುತ್ತಲೇ ಬಂದಿದೆ. ಹೀಗಾಗಿ ಫೈನಾನ್ಷಿಯಲ್ ಸರ್ವೀಸಸ್ ಕ್ಷೇತ್ರದಲ್ಲಿ ಕೂಡ ಮುಂದಿನ ದಿನಗಳಲ್ಲಿ ರಿಲಯನ್ಸ್ ಭದ್ರ ನೆಲೆ ಕಂಡುಕೊಳ್ಳುವ ಸಾಧ್ಯತೆ ಹೆಚ್ಚಿದೆ. ಇದು ಈಗಾಗಲೇ ಈ ಕ್ಷೇತ್ರದಲ್ಲಿ ಜನಪ್ರಿಯತೆ ಗಳಿಸಿರುವ ಸಂಸ್ಥೆಗಳಿಗೆ ನೇರ ಸ್ಪರ್ಧೆ ನೀಡುವುದು ಖಚಿತ.