
ಮಂಗಳೂರು: ಮಂಗಳೂರು ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್ ಲಿಮಿಟೆಡ್ ( Mangalore Refinery and Petrochemicals Limited ಎಂಆರ್‌ಪಿಎಲ್) 2026-27ನೇ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಅತ್ಯುತ್ತಮ ಆರ್ಥಿಕ ಸಾಧನೆ ದಾಖಲಿಸಿದ್ದು, 915 ಕೋಟಿ ರು.ನಿವ್ವಳ ಲಾಭ ಗಳಿಸಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ ಕಂಪನಿಗೆ 272 ಕೋಟಿ ರು. ನಷ್ಟವಾಗಿತ್ತು. ಬುಧವಾರ ನಡೆದ ನಿರ್ದೇಶಕರ ಮಂಡಳಿಯ 276ನೇ ಸಭೆಯಲ್ಲಿ ಮೊದಲ ತ್ರೈಮಾಸಿಕದ ಹಣಕಾಸು ಫಲಿತಾಂಶಗಳಿಗೆ ಅನುಮೋದನೆ ನೀಡಲಾಯಿತು.
ಈ ಅವಧಿಯಲ್ಲಿ ಕಂಪನಿಯ ಕಾರ್ಯಾಚರಣೆಯ ಒಟ್ಟು ಆದಾಯ 41,609 ಕೋಟಿ ರು.ಗೆ ಏರಿಕೆಯಾಗಿದ್ದು, ಕಳೆದ ವರ್ಷದ ಇದೇ ಅವಧಿಯ 20,989 ಕೋಟಿ ರು.ಗೆ ಹೋಲಿಸಿದರೆ ಸುಮಾರು ದುಪ್ಪಟ್ಟಾಗಿದೆ. ತೆರಿಗೆ ಪೂರ್ವ ಲಾಭ 1,215 ಕೋಟಿ ರು. ದಾಖಲಾಗಿದ್ದು, ಕಂಪನಿಯ ಆರ್ಥಿಕ ಸ್ಥಿತಿ ಗಮನಾರ್ಹವಾಗಿ ಸುಧಾರಿಸಿದೆ. ತೆರಿಗೆಗಿಂತ ಮುನ್ನ ಲಾಭ 1,215 ಕೋಟಿ ರೂ. ಆಗಿದೆ. ಕಳೆದ ವರ್ಷದ ಇದೇ ತ್ರೈಮಾಸಿಕದಲ್ಲಿ 403 ಕೋಟಿ ರೂ. ನಷ್ಟ ಉಂಟಾಗಿತ್ತು.
ಈ ಅವಧಿಯಲ್ಲಿ ಕಂಪನಿ ಹಲವು ಪ್ರಮುಖ ಸಾಧನೆಗಳನ್ನೂ ದಾಖಲಿಸಿದೆ. ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕಿಸುವ ಎಟಿಎಫ್ ( Aviation Turbine Fuel-ವಿಮಾನ ಇಂಧನ) ಪೈಪ್‌ಲೈನ್‌ಗೆ ಪಿಎನ್‌ಜಿಆರ್‌ಬಿ (Petroleum and Natural Gas Regulatory Board ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ನಿಯಂತ್ರಣ ಮಂಡಳಿ) ಅನುಮೋದನೆ ದೊರೆತಿದೆ. ಮಂಗಳೂರಿನ ಏಜಿಸ್ ಟರ್ಮಿನಲ್, ಆಂಧ್ರಪ್ರದೇಶದ ಹಿಂದೂಪುರ ಹಾಗೂ ತಮಿಳುನಾಡಿನ ಎನ್ನೋರ್ ಟರ್ಮಿನಲ್‌ಗಳಲ್ಲಿ ಉತ್ಪನ್ನಗಳ ಲೋಡಿಂಗ್ ಆರಂಭವಾಗಿದೆ. ನವಿ ಮುಂಬೈನ ಜೆಎನ್‌ಪಿಎ (ಜವಾಹರಲಾಲ್ ನೆಹರು ಪೋರ್ಟ್ ಅಥಾರಿಟಿ), ಕಾಕಿನಾಡ ಮತ್ತು ಕೃಷ್ಣಪಟ್ಟಣದ ಟ್ಯಾಂಕ್ ಸಂಗ್ರಹಣಾ ಸೌಲಭ್ಯಗಳಿಗೆ ಗುತ್ತಿಗೆ ಒಪ್ಪಂದಗಳನ್ನು ಕೈಗೊಳ್ಳಲಾಗಿದೆ.
ಜೊತೆಗೆ, ಬಳಸಿದ ಅಡುಗೆ ಎಣ್ಣೆ ಸಹ-ಸಂಸ್ಕರಣೆಗೆ ಐಎಸ್‌ಸಿಸಿ ಸಿಒಆರ್‌ಎಸ್‌ಐಎ (International Sustainability and Carbon Certification - Carbon Offsetting and Reduction Scheme for International Aviation) ಪ್ರಮಾಣೀಕರಣ ಪಡೆದು ಸುಸ್ಥಿರ ವಿಮಾನ ಇಂಧನ ಉತ್ಪಾದನೆಯಲ್ಲಿ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದೆ.
ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಸ್ವಚ್ಛತಾ ಪಖ್ವಾಡಾ ಪ್ರಶಸ್ತಿ 2023ರಲ್ಲಿ ’ಬಿ’ ವಿಭಾಗದಲ್ಲಿ ದ್ವಿತೀಯ ಬಹುಮಾನ ಹಾಗೂ 2024ರ ಆವೃತ್ತಿಯಲ್ಲಿ ಸಮಾಧಾನಕರ ಪ್ರಶಸ್ತಿಯನ್ನು ಎಂಆರ್‌ಪಿಎಲ್ ಪಡೆದುಕೊಂಡಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.