ಬೆಂಗಳೂರು ಸ್ಟಾರ್ಟ್‌ಅಪ್‌ Ather Energy ಕಂಪನಿಯಲ್ಲಿ 200 ಕೋಟಿ ಹೂಡಿಕೆ ಮಾಡಲಿರುವ ಭಾರತ ಸರ್ಕಾರ

Published : Jul 16, 2026, 05:53 PM IST
Ather Energy

ಸಾರಾಂಶ

ದೇಶದ ಪ್ರಮುಖ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಿಕಾ ಸಂಸ್ಥೆಯಾದ ಏಥರ್ ಎನರ್ಜಿ, 1,200 ಕೋಟಿ ರೂಪಾಯಿಗಳ ಬಂಡವಾಳ ಕ್ರೋಡೀಕರಣ ಮಾಡುತ್ತಿದೆ. ಇದರಲ್ಲಿ ಭಾರತ ಸರ್ಕಾರವು 'ಇಂಡಿಯಾ-ಜಪಾನ್ ಫಂಡ್' ಮೂಲಕ 200 ಕೋಟಿ ರೂ. ಹೂಡಿಕೆ ಮಾಡಲಿದೆ.

ಬೆಂಗಳೂರು (ಜು.16): ದೇಶದ ಪ್ರಮುಖ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಿಕಾ ಸಂಸ್ಥೆಯಾದ ಏಥರ್ ಎನರ್ಜಿ (Ather Energy) ಉದ್ದೇಶಿಸಿರುವ 1,200 ಕೋಟಿ ರೂಪಾಯಿಗಳ ಬಂಡವಾಳ ಕ್ರೋಡೀಕರಣ ಪ್ರಕ್ರಿಯೆಯಲ್ಲಿ ಭಾರತ ಸರ್ಕಾರವು 200 ಕೋಟಿ ರೂಪಾಯಿಗಳನ್ನು ಹೂಡಿಕೆ ಮಾಡಲಿದೆ. ಕಂಪನಿಯು ಜುಲೈ 15 ರಂದು ಬಾಂಬೆ ಸ್ಟಾಕ್ ಎಕ್ಸ್ಚೇಂಜ್‌ಗೆ (BSE) ಸಲ್ಲಿಸಿರುವ ಅಧಿಕೃತ ದಾಖಲೆಗಳಿಂದ ಈ ಮಹತ್ವದ ಮಾಹಿತಿ ಹೊರಬಿದ್ದಿದೆ. ಭಾರತ ಸರ್ಕಾರ ಮತ್ತು ಜಪಾನ್ ಬ್ಯಾಂಕ್ ಫಾರ್ ಇಂಟರ್ನ್ಯಾಷನಲ್ ಕೋಆಪರೇಷನ್ (JBIC) ಜಂಟಿಯಾಗಿ ಸ್ಥಾಪಿಸಿರುವ, 600 ಮಿಲಿಯನ್ ಡಾಲರ್ (ಸುಮಾರು 4,900 ಕೋಟಿ ರೂ.) ಮೌಲ್ಯದ ದ್ವಿಪಕ್ಷೀಯ ನಿಧಿಯಾದ 'ಇಂಡಿಯಾ-ಜಪಾನ್ ಫಂಡ್' (IJF) ಮೂಲಕ ಈ ಹೂಡಿಕೆಯನ್ನು ಮಾಡಲಾಗುತ್ತಿದೆ. ಈ ನಿಧಿಯನ್ನು ನ್ಯಾಷನಲ್ ಇನ್ವೆಸ್ಟ್‌ಮೆಂಟ್ ಅಂಡ್ ಇನ್ಫ್ರಾಸ್ಟ್ರಕ್ಚರ್ ಫಂಡ್ ಲಿಮಿಟೆಡ್ (NIIFL) ನಿರ್ವಹಿಸುತ್ತಿದೆ.

ಸರ್ಕಾರದ ಈ ಹೂಡಿಕೆಯೊಂದಿಗೆ ಏಥರ್ ಸಂಸ್ಥೆಯ ಸಂಸ್ಥಾಪಕರು ಮತ್ತು ಕಂಪನಿಯ ಪ್ರಮುಖ ಷೇರುದಾರ ಸಂಸ್ಥೆಯಾದ ಹೀರೋ ಮೋಟೋಕಾರ್ಪ್ (Hero MotoCorp) ಕೂಡ ಈ ಬಂಡವಾಳ ಕ್ರೋಡೀಕರಣದಲ್ಲಿ ಭಾಗಿಯಾಗುತ್ತಿದ್ದಾರೆ ಎಂದು ಈ ಬೆಳವಣಿಗೆಯನ್ನು ಹತ್ತಿರದಿಂದ ಬಲ್ಲ ಮೂಲಗಳು ಖಚಿತಪಡಿಸಿವೆ.

ಕಂಪನಿಯ ಪ್ರಿಫರೆನ್ಶಿಯಲ್ ಇಶ್ಯೂ (ಆದ್ಯತೆಯ ಷೇರು ಹಂಚಿಕೆ) ಅಡಿಯಲ್ಲಿ ಬಿಡುಗಡೆ ಮಾಡಲಾಗುತ್ತಿರುವ 1,200 ಕೋಟಿ ರೂಪಾಯಿಗಳ ಪೈಕಿ, ಭಾರತ-ಜಪಾನ್ ಫಂಡ್ (IJF) ಈಕ್ವಿಟಿ ಷೇರುಗಳ ಹಂಚಿಕೆಯ ಮೂಲಕ 200 ಕೋಟಿ ರೂಪಾಯಿಗಳನ್ನು ಹೂಡಿಕೆ ಮಾಡಲಿದೆ. ಹೀರೋ ಮೋಟೋಕಾರ್ಪ್ 960 ಕೋಟಿ ರೂಪಾಯಿ ಮೌಲ್ಯದ ಕನ್ವರ್ಟಿಬಲ್ ವಾರಂಟ್‌ಗಳನ್ನು (ಪರಿವರ್ತನೀಯ ವಾರಂಟ್‌ಗಳು) ಖರೀದಿಸಲಿದೆ.

ಇನ್ನು ಏಥರ್‌ ಕಂಪನಿಯ ಸಹ-ಸಂಸ್ಥಾಪಕರಾದ ತರುಣ್ ಮೆಹ್ತಾ ಮತ್ತು ಸ್ವಪ್ನಿಲ್ ಬಬನ್‌ಲಾಲ್ ಜೈನ್ ತಲಾ 20 ಕೋಟಿ ರೂಪಾಯಿಗಳಂತೆ (ತಲಾ 1,58,730 ಕನ್ವರ್ಟಿಬಲ್ ವಾರಂಟ್‌ಗಳ ಸಬ್‌ಸ್ಕ್ರಿಪ್ಷನ್ ಮೂಲಕ) ಒಟ್ಟು 40 ಕೋಟಿ ರೂಪಾಯಿಗಳನ್ನು ಹೂಡಿಕೆ ಮಾಡಲಿದ್ದಾರೆ.

ಈ 1,200 ಕೋಟಿ ರೂಪಾಯಿಗಳ ಆದ್ಯತೆಯ ಷೇರು ಹಂಚಿಕೆಯು, ಜೂನ್ ತಿಂಗಳಲ್ಲಿ ಏಥರ್ ಎನರ್ಜಿ ಮಂಡಳಿಯು ಅನುಮೋದಿಸಿದ್ದ ಒಟ್ಟು 2,500 ಕೋಟಿ ರೂಪಾಯಿಗಳ ಬೃಹತ್ ಬಂಡವಾಳ ಸಂಗ್ರಹಣಾ ಕಾರ್ಯಕ್ರಮದ ಮೊದಲ ಕಂತಾಗಿದೆ (Tranche). ಜೂನ್‌ನಲ್ಲಿ ಕಂಪನಿಯು ಕ್ವಾಲಿಫೈಡ್ ಇನ್‌ಸ್ಟಿಟ್ಯೂಷನಲ್ ಪ್ಲೇಸ್‌ಮೆಂಟ್ (QIP) ಮೂಲಕ 1,500 ಕೋಟಿ ರೂ. ಹಾಗೂ ರೈಟ್ಸ್ ಇಶ್ಯೂ ಅಥವಾ ಪ್ರಿಫರೆನ್ಶಿಯಲ್ ಇಶ್ಯೂ ಮೂಲಕ ಉಳಿದ 1,000 ಕೋಟಿ ರೂ. ಸಂಗ್ರಹಿಸಲು ಉದ್ದೇಶಿಸಿತ್ತು. ಜುಲೈ 15 ರಂದು ಅನುಮೋದಿಸಲಾದ ಆದ್ಯತೆಯ ಇಶ್ಯೂ ಇದರ ಒಂದು ಭಾಗವಾಗಿದ್ದು, ಕ್ಯುಐಪಿ (QIP) ಹಂತದ ವಿವರಗಳನ್ನು ಕಂಪನಿ ಇನ್ನಷ್ಟೇ ಪ್ರಕಟಿಸಬೇಕಿದೆ.

ಹೀರೋ ಮೋಟೋಕಾರ್ಪ್‌ನಿಂದ ಭಾರಿ ಬೆಂಬಲ; ಷೇರು ಮೌಲ್ಯದಲ್ಲಿ ಜಂಪ್

ಮೇ 2025 ರ ಐಪಿಒ (IPO) ನಂತರ ಏಥರ್ ಎನರ್ಜಿ ಕೈಗೆತ್ತಿಕೊಳ್ಳುತ್ತಿರುವ ಮೊದಲ ದೊಡ್ಡ ಬಂಡವಾಳ ಸಂಗ್ರಹಣೆ ಇದಾಗಿದೆ. ಇದಕ್ಕಾಗಿ ಕಂಪನಿಯು ಈಗಾಗಲೇ 12 ಪ್ರಮುಖ ಇನ್ವೆಸ್ಟ್‌ಮೆಂಟ್ ಬ್ಯಾಂಕ್‌ಗಳನ್ನು ಸಲಹೆಗಾರರನ್ನಾಗಿ ನೇಮಿಸಿಕೊಂಡಿದೆ ಎಂದು ಮಾಧ್ಯಮಗಳು ವರದಿ ಮಾಡಿದ್ದವು. ಜುಲೈ 14 ರಂದು ಬೆಂಗಳೂರು ಮೂಲದ ಏಥರ್ ಕಂಪನಿಯ ಅತಿ ದೊಡ್ಡ ಷೇರುದಾರ ಸಂಸ್ಥೆಯಾದ ಹೀರೋ ಮೋಟೋಕಾರ್ಪ್, ಈ ಇವಿ ತಯಾರಕ ಕಂಪನಿಯಲ್ಲಿ 1,000 ಕೋಟಿ ರೂಪಾಯಿಗಳವರೆಗೆ ಹೂಡಿಕೆ ಮಾಡಲು ಅನುಮೋದನೆ ನೀಡಿತ್ತು. ಜೂನ್ 30ರ ಸುಮಾರಿಗೆ ಏಥರ್ ಕಂಪನಿಯಲ್ಲಿ ಶೇ. 29.48 ರಷ್ಟು ಪಾಲನ್ನು ಹೊಂದಿದ್ದ ಹೀರೋ ಸಂಸ್ಥೆಯ ಅಂತಿಮ ಹೂಡಿಕೆಯು ಷೇರು ಮೌಲ್ಯದ ನಿರ್ಧಾರದ ಮೇಲೆ ನಿರ್ಧಾರವಾಗಲಿದೆ. ಹೂಡಿಕೆಯ ಪ್ರಕ್ರಿಯೆಯು ಅಂತಿಮ ಅನುಮೋದನೆ ಸಿಕ್ಕ 15 ದಿನಗಳಲ್ಲಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ಜಾಗತಿಕ ಕಡಲ ವಲಯಕ್ಕೆ ಟಾಟಾ ಗ್ರೂಪ್ ಲಗ್ಗೆ: ಕೇರಳದಲ್ಲಿ 1 ಬಿಲಿಯನ್ ವೆಚ್ಚದಲ್ಲಿ ಹಡಗು ನಿರ್ಮಾಣ ಕೇಂದ್ರ ಸ್ಥಾಪನೆ
ಬೆಂಗಳೂರಿನಲ್ಲಿ ಹೊಸ ಕ್ರಾಂತಿಗೆ ಮುಂದಾದ Yulu, ರಾಜಧಾನಿಯಲ್ಲಿ ಫ್ಲೀಟ್ ಹೆಚ್ಚಿಸಲು ಮುಂದಾದ ಎಲೆಕ್ಟ್ರಿಕ್ ಬೈಕ್!