ಮೂರು ವರ್ಷದಲ್ಲಿ 50 ಲಕ್ಷ ಮಂದಿ ಬೀದಿ ಬದಿ ವ್ಯಾಪಾರಿಗಳಿಗೆ ನೆರವಾದ ಪಿಎಂ ಸ್ವನಿಧಿ ಯೋಜನೆ

By Suvarna News  |  First Published Oct 5, 2023, 4:39 PM IST

ಬೀದಿ ಬದಿ ವ್ಯಾಪಾರಿಗಳಿಗೆ ಹಣಕಾಸಿನ ನೆರವು ನೀಡುವ ಉದ್ದೇಶದಿಂದ ಪ್ರಾರಂಭವಾದ ಪಿಎಂ ಸ್ವನಿಧಿ ಯೋಜನೆಗೆ ಮೂರು ವರ್ಷಗಳಾಗಿದ್ದು, 50 ಲಕ್ಷಕ್ಕೂ ಹೆಚ್ಚಿನ ಫಲಾನುಭವಿಗಳನ್ನು ತಲುಪಿದೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ. 
 


ನವದೆಹಲಿ (ಅ.5):  2020ರಲ್ಲಿ ಪ್ರಾರಂಭವಾದ ಮೈಕ್ರೋ ಕ್ರೆಡಿಟ್ ಯೋಜನೆ ಅಡಿಯಲ್ಲಿ 50 ಲಕ್ಷಕ್ಕೂ ಹೆಚ್ಚಿನ ಬೀದಿಬದಿ ವ್ಯಾಪಾರಿಗಳು 8,600 ಕೋಟಿ ರೂ. ಮೌಲ್ಯದ ಸಾಲಗಳನ್ನು ಪಡೆದಿದ್ದಾರೆ ಎಂದು ಕೇಂದ್ರ ಸರ್ಕಾರ ಇತ್ತೀಚೆಗೆ ಮಾಹಿತಿ ನೀಡಿದೆ. ಪ್ರಧಾನ ಮಂತ್ರಿ ಬೀದಿ ಬದಿ ವ್ಯಾಪಾರಿಗಳ ಆತ್ಮನಿರ್ಭರ ನಿಧಿಯನ್ನು (ಪಿಎಂ ಸ್ವನಿಧಿ) ಕೋವಿಡ್ ಸಾಂಕ್ರಾಮಿಕದ ಸಂದರ್ಭದಲ್ಲಿ ಪ್ರಾರಂಭಿಸಲಾಗಿತ್ತು. ಈ ಯೋಜನೆಯಡಿ ಬೀದಿಬದಿ ವ್ಯಾಪಾರಿಗಳಿಗೆ 50 ಸಾವಿರ ರೂ. ತನಕ ಸಾಲ ಸೌಲಭ್ಯ ನೀಡಲಾಗುತ್ತದೆ. ಇನ್ನು ಈ ಯೋಜನೆಯಡಿ ಪಡೆದ ಸಾಲವನ್ನು ನಿಯಮಿತವಾಗಿ ಮರುಪಾವತಿಸೋರಿಗೆ ಶೇ.7ರಷ್ಟು ಬಡ್ಡಿ ಸಬ್ಸಿಡಿ ನೀಡಲಾಗುತ್ತದೆ. ಅಲ್ಲದೆ ಡಿಜಿಟಲ್ ವಹಿವಾಟುಗಳಿಗೆ ವಾರ್ಷಿಕ 1,200 ರೂ. ಕ್ಯಾಶ್ ಬ್ಯಾಕ್ ಕೂಡ ನೀಡಲಾಗುತ್ತದೆ. ಈ ಯೋಜನೆಯನ್ನು ನಿರ್ವಹಿಸುತ್ತಿರುವ ಗೃಹ ಹಾಗೂ ನಗರ ವ್ಯವಹಾರಗಳ ಸಚಿವಾಲಯ ನೀಡಿರುವ ಹೇಳಿಕೆ ಅನ್ವಯ ಈ ಕಾರ್ಯಕ್ರಮದಡಿ ನಿಗದಿಪಡಿಸಿರುವ ಗುರಿಗಳನ್ನು ಪರಿಷ್ಕರಿಸಲಾಗಿದ್ದು, ಜುಲೈ 1ರಿಂದ ಈ ಸಂಬಂಧ ಆಂದೋಲನ ಕೂಡ ನಡೆಯುತ್ತಿದೆ. ಈ ಗುರಿ ಸಾಧನೆಗೆ ಸಂಬಂಧಿಸಿ ಈಗಾಗಲೇ ಸಾರ್ವಜನಿಕ ವಲಯದ ಬ್ಯಾಂಕ್ ಗಳ ಜೊತೆಗೆ ಹಿರಿಯ ಅಧಿಕಾರಿಗಳು ಮಾತುಕತೆಗಳನ್ನು ಕೂಡ ನಡೆಸಿದ್ದಾರೆ ಎಂದು ಸಚಿವಾಲಯ ತಿಳಿಸಿದೆ.

ಈ ತನಕ 8,600 ಕೋಟಿ ರೂ. ಮೀರಿದ ಒಟ್ಟು 65.75ಲಕ್ಷ ಸಾಲಗಳನ್ನು 50ಲಕ್ಷಕ್ಕೂ ಅಧಿಕ ಬೀದಿಬದಿ ವ್ಯಾಪಾರಿಗಳಿಗೆ ವಿತರಿಸಲಾಗಿದೆ ಎಂದು ಸಚಿವಾಲಯ ತಿಳಿಸಿದೆ. ಕಳೆದ ಮೂರು ತಿಂಗಳಲ್ಲಿ ರಾಜ್ಯಗಳು 12ಲಕ್ಷ ಹೊಸ ವ್ಯಾಪಾರಿಗಳನ್ನು ಈ ಯೋಜನೆಗೆ ಸೇರಿಸುವಲ್ಲಿ ಯಶಸ್ವಿಯಾಗಿವೆ.  ಮಧ್ಯ ಪ್ರದೇಶ, ಅಸ್ಸಾಂ ಹಾಗೂ ಗುಜರಾತ್ ಈ ಯೋಜನೆಯ ಅನುಷ್ಠಾನದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ. ಇನ್ನು ಅಹ್ಮದಾಬಾದ್, ಲಖ್ನೋ, ಕಾನ್ಪುರ, ಇಂದೋರ್ ಹಾಗೂ ಮುಂಬೈ ಈ ಯೋಜನೆಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸುತ್ತಿರುವ ಪ್ರಮುಖ ನಗರಗಳಾಗಿವೆ. 

Tap to resize

Latest Videos

LPG Price:ಉಜ್ವಲ ಯೋಜನೆ ಎಲ್ಪಿಜಿ ಸಬ್ಸಿಡಿ 300ರೂ.ಗೆ ಹೆಚ್ಚಳ; 603ರೂ.ಗೆ ಸಿಗಲಿದೆ ಅಡುಗೆ ಅನಿಲ ಸಿಲಿಂಡರ್

'ಪಿಎಂ ಸ್ವನಿಧಿ ಯೋಜನೆ ನಮ್ಮ ನಿರೀಕ್ಷೆಗೂ ಮೀರಿದ ಸಾಧನೆ ಮಾಡಿದೆ. ಕೇವಲ ಮೂರು ವರ್ಷಗಳಲ್ಲಿ 50ಲಕ್ಷಕ್ಕೂ ಅಧಿಕ ಫಲಾನುಭವಿಗಳನ್ನು ತಲುಪಿದೆ. ಈ ಸಾಧನೆ ಬೀದಿಬದಿ ವ್ಯಾಪಾರಿಗಳನ್ನು ಸಶಕ್ತಗೊಳಿಸುವ ನಮ್ಮ ಬದ್ಧತೆಯನ್ನು ಹೆಚ್ಚಿಸಿದೆ. ಅಲ್ಲದೆ, ಬೀದಿಬದಿ ವ್ಯಾಪಾರಿಗಳನ್ನು ಅಧಿಕೃತವಾಗಿ ಹಣಕಾಸು ವ್ಯವಸ್ಥೆಯೊಳಗೆ ಸೇರಿಸಿದೆ' ಎಂದು ಕೇಂದ್ರ ನಗರಾಭಿವೃದ್ಧಿ ಸಚಿವ ಹರ್ದೀಪ್ ಸಿಂಗ್ ಪುರಿ ಮಾಹಿತಿ ನೀಡಿದ್ದಾರೆ. 

ಇನ್ನು ಈ ಯೋಜನೆಯ ಮೂರನೇ ಹಂತದ ಸಾಲ ನೀಡುವ ಕಾರ್ಯಕ್ರಮನ್ನು ಈ ಹಿಂದೆಯೇ ಸರ್ಕಾರ  2024ರ ಡಿಸೆಂಬರ್ ತನಕ ವಿಸ್ತರಿಸಿದೆ. ಈ ಯೋಜನೆಯಲ್ಲಿ ಮೊದಲ ಸಾಲ ಸೌಲಭ್ಯದಲ್ಲಿ ಬೀದಿ ಬದಿ ವ್ಯಾಪಾರಿಗಳಿಗೆ 10,000 ರೂಪಾಯಿ ನೀಡಲಾಗುತ್ತಿತ್ತು. ಎರಡನೇ ಸೌಲಭ್ಯದಲ್ಲಿ 20,000 ರೂಪಾಯಿ ನೀಡಲಾಗುತ್ತಿದೆ. ಇದೀಗ ಮೂರನೇ ಸೌಲಭ್ಯದಲ್ಲಿ 50,000 ರೂಪಾಯಿ ಸಾಲ ನೀಡಲಾಗುತ್ತಿದೆ. 

ನಿವೃತ್ತಿ ಬಳಿಕ ಕೈತುಂಬಾ ಹಣವಿರಬೇಕಾ? ಹಾಗಾದ್ರೆ ತಪ್ಪದೇ ಈ ಟಿಪ್ಸ್ ಫಾಲೋ ಮಾಡಿ

5ಲಕ್ಷ ರೂ. ತನಕ ಉಚಿತ ವೈದ್ಯಕೀಯ ಚಿಕಿತ್ಸೆ
ಪ್ರಧಾನ ಮಂತ್ರಿ ಜನ್ ಆರೋಗ್ಯ ಯೋಜನೆ (ಪಿಎಂಜೆಎವೈ) ಬಡ ಹಾಗೂ ಕೆಳ ವರ್ಗದ ಕೋಟ್ಯಂತರ ಜನರಿಗೆ ಗುಣಮಟ್ಟದ ಆರೋಗ್ಯ ಸೇವೆಗಳು ಸಿಗುವಂತೆ ಮಾಡಿದೆ. ಈ ಯೋಜನೆಯಡಿ ಬಿಪಿಎಲ್ ಕುಟುಂಬಕ್ಕೆ ವರ್ಷಕ್ಕೆ 5ಲಕ್ಷ ರೂ. ತನಕ ವೈದ್ಯಕೀಯ ಚಿಕಿತ್ಸೆಯನ್ನು ಉಚಿತವಾಗಿ ಪಡೆಯಲು ಅವಕಾಶವಿದೆ. ಕ್ಯಾನ್ಸರ್ , ಹೃದಯ ಶಸ್ತ್ರಚಿಕಿತ್ಸೆ ಸೇರಿದಂತೆ ದುಬಾರಿ ವೆಚ್ಚದ ಚಿಕಿತ್ಸೆಗಳ ವೆಚ್ಚವನ್ನು ಕೂಡ ಈ ಯೋಜನೆಯಡಿ ಭರಿಸಲು ಅವಕಾಶವಿದೆ. ಐದು ವಸಂತಗಳನ್ನು ಪೂರೈಸಿರುವ ಈ ಯೋಜನೆಗೆ ಈ ವರ್ಷ ಸರ್ಕಾರ ಬಜೆಟ್ ನಲ್ಲಿ 1,600 ಕೋಟಿ ರೂ. ಮೀಸಲಿಟ್ಟಿದೆ ಕೂಡ. ಆಯುಷ್ಮಾನ್ ಭಾರತ ಯೋಜನೆಯ ಮೂರನೇ ಹಂತವನ್ನು ಸೆ17ರಿಂದ ಪ್ರಾರಂಭಿಸಲಾಗಿದೆ. 
 

click me!