126 ವರ್ಷದ ಇತಿಹಾಸ ಹೊಂದಿರುವ ಈ ಕಂಪನಿ ಇಂದು ಇಬ್ಬಾಗವಾಗುತ್ತಿದೆ. ಕುಟುಂಬ ಸದಸ್ಯರ ನಡುವೆ ಹರಿದು ಹಂಚಿಹೋಗಲಿರುವ 1.76 ಲಕ್ಷ ಕೋಟಿ ಮೌಲ್ಯದ ಕಂಪನಿಯ ಉತ್ಪನ್ನದ ಜಾಹೀರಾತಿನಲ್ಲಿ ದೇಶದ ರಾಷ್ಟ್ರಗೀತೆ ಬರೆದ ರವೀಂದ್ರನಾಥ್ ಠಾಗೋರ್ ನಟಿಸಿದ್ದರು.
ಬೆಂಗಳೂರು (ಅ.5): ದೇಶದ ಹೆಮ್ಮೆಯ ಕಂಪನಿ ಈಗ ಕುಟುಂಬದ ಸದಸ್ಯರ ನಡುವೆಯೇ ಹರಿದು ಹಂಚಿಹೋಗಲಿದೆ. 126 ವರ್ಷಗಳ ಹಿಂದೆ ಆರಂಭವಾಗಿದ್ದ ಈ ಕಂಪನಿಯ ಇಂದಿನ ಮಾರುಕಟ್ಟೆ ಮೌಲ್ಯವೇ 1.76 ಲಕ್ಷ ಕೋಟಿ ರೂಪಾಯಿ. ಕಂಪನಿ ಕುಟುಂಬದ ಸದಸ್ಯರ ನಡುವೆ ಹಂಚಿಕೆಯಾಗಲಿದೆ ಎನ್ನುವ ಸುದ್ದಿ ಹೊರಬೀಳುತ್ತಿದ್ದಂತೆಯೇ, ಷೇರು ಮಾರುಕಟ್ಟೆಯಲ್ಲಿರುವ ಈ ಕಂಪನಿಯ ವಿವಿಧ ಅಂಗಗಳು ಷೇರುಗಳು ಕುಸಿಯಲು ಆರಂಭಿಸಿವೆ. ಹೌದು, ಮನೆಯ ಡೋರ್ ಲಾಕ್‌ನಿಂದ ಹಿಡಿದು ಇತ್ತೀಚೆಗೆ ಚಂದ್ರಯಾನ-3ಗೆ ಸೇರಿದ ಉತ್ಪನ್ನಗಳ ತಯಾರಿಕೆ ಮಾಡಿದ್ದ ದಿ ಗೋದ್ರೇಜ್ ಗ್ರೂಪ್ ಕುಟುಂಬದ ಸದಸ್ಯರ ನಡುವೆ ಹಂಚಿಕೆಯಾಗಲಿದೆ. ಈ ಹಂತದಲ್ಲಿ ಈ ಕಂಪನಿಯ ಆರಂಭಿಕ ದಿನಗಳು ಹೇಗಿದ್ದವು. ರಾಷ್ಟ್ರಪ್ರೇಮಿ ಆರ್ದೇಶಿರ್ ಗೋದ್ರೇಜ್ 1897ರಲ್ಲಿ ಈ ಕಂಪನಿ ಆರಂಭಿಸಿದ ಬಳಿಕ ಅದು ಇಲ್ಲಿಯ ಹಂತದವರೆಗೆ ಏರಿದ್ದು ಹೇಗೆ ಅನ್ನೋದೆ ರೋಚಕ ಕಹಾನಿ.
ವೃತ್ತಿಯಲ್ಲಿ ವಕೀಲರಾಗಿದ್ದ ಆರ್ದೆಶೀರ್ ಗೋದ್ರೇಜ್ (The Godrej Group), ಸೂಕ್ತ ಸಾಕ್ಷ್ಯವೇ ಇಲ್ಲದೇ ಕಕ್ಷಿದಾರನ ರಕ್ಷಣೆಗೆ ವಾದ ಮಾಡಲು ಸಾಧ್ಯವಿಲ್ಲ ಎಂದು ವೃತ್ತಿಯನ್ನು ಬಿಟ್ಟಿದ್ದರು. ಬಳಿಕ ತಂದೆಯ ಸ್ನೇಹಿತರ ಬಳಿ ಸಾಲ ಪಡೆದು ಸರ್ಜಿಕಲ್ ಟೂಲ್ ಉತ್ಪಾದನೆ ಆರಂಭಿಸ್ದ ಆರ್ದೆಶೀರ್‌ಗೆಬೇಕಾದ ಯಶಸ್ಸು ಸಿಗಲಿಲ್ಲ. ಈ ಹಂತದಲ್ಲಿ ಬಾಂಬೆಯಲ್ಲಿ ಸಿಕ್ಕಾಪಟ್ಟೆ ಕಳ್ಳತನ ಪ್ರಕರಣಗಳು ವರದಿ ಆಗುತ್ತಿದ್ದವು. ಅದರ ಬೆನ್ನಲ್ಲಿಯೇ ಬೀಗದ ಕಂಪನಿ ಆರಂಭಿಸುವ ಐಡಿಯಾ ಹೊಳೆದಾಗ ಹುಟ್ಟಿದ್ದೇ ದಿ ಗೋದ್ರೇಜ್ ಕಂಪನಿ. ಹಾಗಂತ ಗೋದ್ರೇಜ್ ಬೀಗ ಮಾತ್ರವಲ್ಲ, ಸಿಕ್ಕಾಪಟ್ಟೆ ಉತ್ಪನ್ನಗಳನ್ನು ಉತ್ಪಾದಿಸಿದೆ. ಆದರೆ, ವಿಶ್ವದ ಮೊಟ್ಟಮೊದಲ ತರಕಾರಿ ಎಣ್ಣೆಯ ಸೋಪ್‌ಅನ್ನು ಕಂಡುಹಿಡಿದ್ದು ಇದೇ ಗೋದ್ರೇಜ್ ಕಂಪನಿ ಎನ್ನುವ ಮಾಹಿತಿ ಹೆಚ್ಚಿನವರಿಗೆ ಇದ್ದಿರಲಿಲ್ಲ. ಹೌದು, 1918ರಲ್ಲಿ ಗೋದ್ರೇಜ್ ಕಂಪನಿ ವಿಶ್ವದ ಮೊಟ್ಟಮೊದಲ ತರಕಾರಿ ಎಣ್ಣೆಯ ಸೋಪ್‌ಅನ್ನು ಸಿದ್ಧ ಮಾಡಿತ್ತು. ಅಲ್ಲಿಯವರೆಗೂ ಸೋಪ್‌ಗಳು ಪ್ರಾಣಿಗಳ ಕೊಬ್ಬಿನಿಂದ ತಯಾರಿಸಲಾಗುತ್ತಿತ್ತು.
ಮತ್ತೂ ವಿಶೇಷವೆಂದರೆ, ಗೋದ್ರೇಜ್ ಸಿದ್ಧಮಾಡಿದ್ದ ವಿಶ್ವದ ಮೊಟ್ಟಮೊದಲ ತರಕಾರಿ ಸೋಪ್‌ಅನ್ನು ಚಾಬಿ (ಬೀಗ) ಎನ್ನುವ ಬ್ರ್ಯಾಂಡ್‌ನೇಮ್‌ನಲ್ಲಿ ಮಾರುಕಟ್ಟಗೆ ಬಿಡುಗಡೆ ಮಾಡಿತತು. ಅಂದು ಈ ಸೋಪ್ ಮಾರುಕಟ್ಟೆಗೆ ಬಿಡುಗಡೆ ಮಾಡುವ ವೇಳೆ, ಈ ಸೋಪ್ ಸ್ವದೇಶಿ ಮಾತ್ರವಲ್ಲ, ದೇಶದ ಅಹಿಂಸಾ ಹೋರಾಟವನ್ನು ಪ್ರತಿಬಿಂಬಿಸುತ್ತದೆ ಎಂದು ಗೋದ್ರೇಜ್ ಗ್ರೂಪ್ ಹೇಳಿಕೊಂಡಿತ್ತು. ಅಂದು ಭಾರತದಲ್ಲಿ ಹೆಚ್ಚಿನ ಜನರು ಪ್ರಾಣಿಗಳ ಕೊಬ್ಬಿನಿಂದ ತಯಾರಿಸಲಾಗುವ ಸೋಪ್‌ಗಳನ್ನು ಬಳಸಲು ನಿರಾಕರಿಸಿದ್ದರು.
ಸೋಪ್ ತಯಾರಿಸಿದ್ದು ಮಾತ್ರವಲ್ಲ ಅದನ್ನು ಪ್ರಚಾರ ಮಾಡುವುದು ಗೋದ್ರೇಜ್‌ಗೆ ಸವಾಲಾಗಿತ್ತು. ಅಂದು ಗೋದ್ರೇಜ್ ಗ್ರೂಪ್ ಇದರ ಪ್ರಚಾರಕ್ಕಾಗಿ ರವೀಂದ್ರನಾಥ್ ಠಾಗೋರ್ ಅವರ ಬಳಿ ಹೋಗಿತ್ತು. ಅದಾಗಲೇ ಸಾಹಿತ್ಯದಲ್ಲಿ ನೋಬೆಲ್ ಪ್ರಶಸ್ತಿ ಗೆದ್ದಿದ್ದ ರವೀಂದ್ರನಾಥ್ ಠಾಗೋರ್, ಮುಂದೊಂದು ದಿನ ದೇಶದ ರಾಷ್ಟ್ರಗೀತೆಯಾಗಬಲ್ಲ ಜನ ಗಣ ಮನ ಗೀತೆಯನ್ನೂ ಬರೆದು ಪ್ರಸಿದ್ಧರಾಗಿದ್ದರು. ಈ ಸೋಪ್‌ನ ಜಾಹೀರಾತಿನಲ್ಲಿದ್ದ ಟಾಗೋರ್, "ನನಗೆ ಗೋದ್ರೇಜ್‌ಗಿಂತ ಉತ್ತಮವಾದ ಬೇರೆ ಯಾವುದೇ ವಿದೇಶಿ ಸಾಬೂನುಗಳು ತಿಳಿದಿಲ್ಲ ಮತ್ತು ನಾನು ಗೋದ್ರೇಜ್‌ನ ಸೋಪ್‌ಗಳನ್ನು ಬಳಸುತ್ತೇನೆ" ಎಂದು ಹೇಳಿದ್ದರು.
ಕುಟುಂಬದ ನಡುವೆ ಸೌಹಾರ್ದ ವಿಭಜನೆಗೆ ರೆಡಿಯಾಯ್ತು 1.76 ಲಕ್ಷ ಕೋಟಿ ಒಡೆತನದ ಭಾರತದ ಹೆಮ್ಮೆಯ ಕಂಪನಿ!
ಗೋದ್ರೇಜ್ ಕಂಡುಹಿಡಿದ ಈ ಸೋಪ್‌ಅನ್ನು ಟಾಗೋರ್ ಮಾತ್ರವಲ್ಲ, ಅನ್ನಿಬೇಸಂಟ್, ಮಹಾತ್ಮಾ ಗಾಂಧಿಯಂಥ ಶ್ರೇಷ್ಠ ವ್ಯಕ್ತಿಗಳು ಬಳಸಿದ್ದರು ಎಂದು ಕಂಪನಿ ಹೇಳಿದೆ.
ಮಹಾತ್ಮಾ ಗಾಂಧೀಜಿ ಅವರಿಂದ ಸಣ್ಣ ಸಹಾಯ ಬೇಕು ಎಂದು ಗೋದ್ರೇಜ್ ಕಂಪನಿಯ ಪ್ರತಿಸ್ಪರ್ಧಿಯೊಬ್ಬರು ಬರೆದ ಪತ್ರಕ್ಕೆ ಉತ್ತರಿಸಿದ್ದ ಗಾಂಧೀಜಿ, "ನನ್ನ ಸಹೋದರ ಗೋದ್ರೇಜ್ ಅವರನ್ನು ನಾನು ತುಂಬಾ ಗೌರವಿಸುತ್ತೇನೆ, ನಿಮ್ಮ ಉದ್ಯಮವು ಅವರಿಗೆ ಯಾವುದೇ ರೀತಿಯಲ್ಲಿ ಹಾನಿಯನ್ನುಂಟುಮಾಡುವ ಸಾಧ್ಯತೆಯಿದ್ದರೆ, ನಿಮಗೆ ಆಶೀರ್ವಾದ ನೀಡಲು ಸಾಧ್ಯವಾಗದೇ ಇರೋದಕ್ಕೆ ನನಗೆ ವಿಷಾದವಾಗುತ್ತಿದೆ' ಎಂದಿದ್ದರು.
ಇದೆಂಥಾ ಡೀಲ್.. ಕಾಮಸೂತ್ರ ಕಾಂಡಮ್ ತಯಾರಿಸೋ ಕಂಪನಿಯನ್ನು ಗೋದ್ರೆಜ್‌ಗೆ ಮಾರಿದ ರೇಮಂಡ್ಸ್!