
ನವದೆಹಲಿ(ಸೆ.18): ದೇಶಾದ್ಯಂತ ಇ-ಸಿಗರೇಟ್ ಮಾರಾಟ, ಉತ್ಪಾದನೆ, ಆಮದು ಮತ್ತು ವಿತರಣೆಗೆ ನಿಷೇಧ ಹೇರಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಇ-ಸಿಗರೇಟ್ ಮೇಲೆ ನಿರ್ಬಂಧ ವಿಧಿಸಲು ನಿರ್ಧಾರ ತೆಗೆದುಕೊಳ್ಳಲಾಗಿದೆ.
ಈ ಕುರಿತು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ದೇಶದಲ್ಲಿ ಇ-ಸಿಗರೇಟ್ ಆಮದು, ಉತ್ಪಾದನೆ, ವಿತರಣೆ, ಮಾರಾಟವನ್ನು ಸಂಪೂರ್ಣ ನಿಷೇಧಿಸಲಾಗಿದೆ ಎಂದು ಮಾಹಿತಿ ನೀಡಿದರು.
ಧೂಮಪಾನದ ಚಟ ಬಿಡುವುದಕ್ಕೆ ಸಹಕಾರಿ ಎಂದು ಹೇಳಲಾಗುವ ಇ-ಸಿಗರೇಟ್‌ಗಳನ್ನು ವಿಶ್ವಾದ್ಯಂತ ಅಪಾಯವಿಲ್ಲದ ಸರಕೆಂದು ಪರಿಗಣಿಸಿ ಮಾರಾಟ ಮಾಡಲಾಗುತ್ತಿದೆ. ಆದರೆ ತಜ್ಞರ ಹೇಳಿಕೆಯ ಪ್ರಕಾರ ಇ-ಸಿಗರೇಟ್‌ಗಳೂ ಆರೋಗ್ಯಕ್ಕೆ ಹಾನಿಕಾರಕವೇ ಆಗಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಇ-ಸಿಗರೇಟ್‌ಗಳನ್ನು ನಿಷೇಧಿಸಿದೆ.
ದೇಶದಲ್ಲಿ 400ಕ್ಕೂ ಅಧಿಕ ಇ-ಸಿಗರೇಟ್ ಬ್ರ್ಯಾಂಡ್‌ಗಳಿದ್ದು, ಸುಮಾರು 150ಕ್ಕೂ ಹೆಚ್ಚು ಫ್ಲೇವರ್‌ಗಳಲ್ಲಿ ದೊರೆಯುತ್ತದೆ. ಇದರಲ್ಲಿ ಯಾವ ಇ-ಸಿಗರೇಟ್ ಕೂಡ ಭಾರತದಲ್ಲಿ ತಯಾರಾಗದಿರುವುದು ವಿಶೇಷ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.