ಕಚ್ಚಾತೈಲ ಏರಿಕೆ, ಗಲ್ಪ್ ಯುದ್ಧದ ಭೀತಿ: ಸೆನ್ಸೆಕ್ಸ್ 642 ಅಂಕ ಕುಸಿತ| ತೈಲ ಬಾವಿಗಳ ಮೇಲಿನ ದಾಳಿಯಿಂದಾಗಿ ಕಚ್ಚಾತೈಲ ಬೆಲೆ ಭಾರೀ ಏರಿಕೆ
ಮುಂಬೈ[ಸೆ.18]: ಸೌದಿ ಅರೇಬಿಯಾದ ತೈಲ ಬಾವಿಗಳ ಮೇಲೆ ಇರಾನ್ ಬೆಂಬಲಿತ ಹೌತಿ ಬಂಡುಕೋರರು ಇತ್ತೀಚೆಗೆ ನಡೆಸಿದ ಡ್ರೋನ್ ದಾಳಿ, ಜಾಗತಿಕ ಷೇರುಪೇಟೆ ಮೇಲೆ ತನ್ನ ಕರಾಳ ಛಾಯೆಯನ್ನು ಮತ್ತಷ್ಟುದಟ್ಟವಾಗಿಸಿದೆ.
ತೈಲ ಬಾವಿಗಳ ಮೇಲಿನ ದಾಳಿಯಿಂದಾಗಿ ಕಚ್ಚಾತೈಲ ಬೆಲೆ ಭಾರೀ ಏರಿಕೆಯಾದ ಸಂಗತಿಯು ಭಾರತದ ಆರ್ಥಿಕತೆ ಮೇಲೆ ಕೆಟ್ಟಪರಿಣಾಮ ಬೀರಲಿದೆ ಎಂಬ ವರದಿಗಳು ಮಂಗಳವಾರ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕವಾದ ಸೆನ್ಸೆಕ್ಸ್ ಅನ್ನು 642 ಅಂಕ ಕುಸಿಯುವಂತೆ ಮಾಡಿದೆ. ಪರಿಣಾಮ ಸೆನ್ಸೆಕ್ಸ್ 36481 ಅಂಕಗಳಲ್ಲಿ ಮುಕ್ತಾಯವಾಗಿದೆ.
ಮತ್ತೊಂದೆಡೆ ರಾಷ್ಟ್ರೀಯ ಷೇರು ಸೂಚ್ಯಂಕ ನಿಫ್ಟಿಕೂಡ 185.90 ಅಂಕ ಕುಸಿತ ದಾಖಲಿಸಿದ್ದು, 10,817 ಅಂಕದಲ್ಲಿ ಕೊನೆಗೊಂಡಿದೆ. ಪ್ರಮುಖವಾಗಿ ಹಿರೋ ಮೊಟರ್, ಟಾಟಾ ಮೋಟರ್ಸ್, ಎಕ್ಸಿಸ್ ಬ್ಯಾಂಕ್ ಹಾಗೂ ಎಸ್‌ಬಿಐ ಷೇರುಗಳು ಕುಸಿತ ಕಂಡಿವೆ.