ರೇಖಾ ಜುಂಜುನ್ವಾಲಾ ಅವರು ಷೇರು ಮಾರುಕಟ್ಟೆಯಲ್ಲಿ 2 ತಿಂಗಳಲ್ಲಿ ಟೈಟಾನ್ ಷೇರುಗಳಿಂದಲೇ 2400 ಕೋಟಿ ಸಂಪತ್ತು ಹೆಚ್ಚಿಸಿಕೊಂಡಿದ್ದಾರೆ.
ನವದೆಹಲಿ (ಜುಲೈ 27, 2023): ಇತ್ತೀಚೆಗೆ ದೇಶದ ಷೇರುಪೇಟೆಯಲ್ಲಿ ಗೂಳಿಯ ಆರ್ಭಟ ಹೆಚ್ಚಾಗಿದೆ. ಈ ಹಿನ್ನೆಲೆ ಸೆನ್ಸೆಕ್ಸ್ ಹಾಗೂ ನಿಫ್ಟಿ ಸೂಚ್ಯಂಕಗಳು ಹೊಸ ಹೊಸ ದಾಖಲೆಯನ್ನೇ ಬರೆಯುತ್ತಿದೆ. ಇದೇ ರೀತಿ, ಟೈಟಾನ್‌ನ ಷೇರುಗಳು ಕಳೆದ ಎರಡು ತಿಂಗಳುಗಳಲ್ಲಿ ಶೇ. 65 ರಷ್ಟು ಬೆಳವಣಿಗೆ ಕಂಡಿದೆ. ಈ ಹಿನ್ನೆಲೆ ಈ ಕಂಪನಿಯ ಷೇರುದಾರರು ಸಹ ಭರ್ಜರಿ ಲಾಭ ಗಳಿಸಿದ್ದಾರೆ. ಭಾರತದ ಶ್ರೀಮಂತ ಮಹಿಳೆಯೊಬ್ಬರು ಷೇರು ಮಾರುಕಟ್ಟೆಯಿಂದ ಹೆಚ್ಚು ಲಾಭ ಗಳಿಸಿದವರಲ್ಲಿ ಒಬ್ಬರು. ಈ ಮಹಿಳೆ ಕಳೆದ ಎರಡು ತಿಂಗಳಿನಿಂದ ಬರೋಬ್ಬರಿ 2400 ಕೋಟಿ ಗಳಿಸಿದ್ದಾರೆ. ಅಂದರೆ ದಿನಕ್ಕೆ 40 ಕೋಟಿ ರೂ.!
ಈ ಮಹಿಳೆ ಯಾರು ಗೊತ್ತಾ? ಖ್ಯಾತ ಹೂಡಿಕೆದಾರರಾಗಿದ್ದ ದಿವಂಗತ ರಾಕೇಶ್ ಜುಂಜುನ್ವಾಲಾ ಅವರ ಪತ್ನಿ ರೇಖಾ ಜುಂಜುನ್ವಾಲಾ. ಕಳೆದ ವರ್ಷ ಇವರ ಪತಿ ನಿಧನರಾದ ನಂತರ ಇವರು ಸಹ ಬಿಲಿಯನೇರ್ ಆಗಿದ್ದಾರೆ. ರೇಖಾ ಜುಂಜುನ್ವಾಲಾ ಅವರು ತಮ್ಮ ಪತಿಯ ಪರಂಪರೆಯನ್ನು ಷೇರು ಮಾರುಕಟ್ಟೆಯಲ್ಲಿ ಅದ್ಭುತ ಪ್ರದರ್ಶನದೊಂದಿಗೆ ಮುಂದೆ ಹೋಗುತ್ತಿದ್ದು, 2 ತಿಂಗಳಲ್ಲಿ ಟೈಟಾನ್ ಷೇರುಗಳಿಂದಲೇ 2400 ಕೋಟಿ ಸಂಪತ್ತು ಹೆಚ್ಚಾಗಿಸಿಕೊಂಡಿದ್ದಾರೆ.
ಇದನ್ನು ಓದಿ: ಟಾಟಾ ಕಂಪನಿಯ ಈ ಷೇರಿನಿಂದ ಕೆಲವೇ ನಿಮಿಷಗಳಲ್ಲಿ 500 ಕೋಟಿ ಸಂಪತ್ತು ಗಳಿಸಿದ ರಾಕೇಶ್ ಜುಂಜುನ್ವಾಲಾ ಪತ್ನಿ!
ರೇಖಾ ಜುಂಜುನ್ವಾಲಾ ಅವರು ಟೈಟನ್‌ನ ಷೇರುಗಳಲ್ಲಿ ದೊಡ್ಡ ಮಾನ್ಯತೆ ಹೊಂದಿದ್ದಾರೆ. ಟಾಟಾ ಗ್ರೂಪ್ ಕಂಪನಿಯ ಷೇರುಗಳ ಬೆಲೆ ಏರಿಕೆಯೊಂದಿಗೆ, ಕಂಪನಿಯಲ್ಲಿನ ಅವರ ಷೇರುಗಳು ಅದರ ಮೌಲ್ಯವನ್ನು 2400 ಕೋಟಿ ರೂ. ಹೆಚ್ಚಿಸಿದೆ. ರೇಖಾ ಜುಂಜುನ್ವಾಲಾ ಅವರು 4,69,45,970 ಷೇರುಗಳನ್ನು ಹೊಂದಿದ್ದು, ಕಂಪನಿಯಲ್ಲಿ ಸುಮಾರು 5.29 ಶೇಕಡಾ ರಷ್ಟು ಪಾಲನ್ನು ಹೊಂದಿದ್ದಾರೆ. ಕಳೆದ ಎರಡು ತಿಂಗಳಿನಿಂದ ಟೈಟಾನ್ ಷೇರುಗಳು 512 ರೂ.ಗಳಷ್ಟು ದುಬಾರಿಯಾಗಿದೆ.
ಆಗಸ್ಟ್ 2022 ರಲ್ಲಿ ರಾಕೇಶ್ ಜುಂಜುನ್ವಾಲಾ ಅವರ ಮರಣದ ನಂತರ, ಅವರ ಷೇರುಗಳನ್ನು ರೇಖಾ ಜುಂಜುನ್ವಾಲಾಗೆ ವರ್ಗಾಯಿಸಲಾಯಿತು. ರೇಖಾ ಜುಂಜುನ್ವಾಲಾ ಅವರು 1963 ರಲ್ಲಿ ಜನಿಸಿದರು. ಅವರು ಮುಂಬೈ ವಿಶ್ವವಿದ್ಯಾಲಯದಿಂದ ಪದವೀಧರರಾಗಿದ್ದಾರೆ. ಇವರು ಮತ್ತು ರಾಕೇಶ್ 1987 ರಲ್ಲಿ ವಿವಾಹವಾದರು. ರಾಕೇಶ್ ಜುಂಜುನ್ವಾಲಾ ಅವರನ್ನು ಭಾರತದ ವಾರೆನ್ ಬಫೆಟ್ ಎಂದು ಕರೆಯಲಾಗುತ್ತಿತ್ತು.
ಇದನ್ನೂ ಓದಿ: ರಾಕೇಶ್ ಜುಂಜುನ್‌ವಾಲಾ ನಂಬಿಕೆ ಇಟ್ಟಿದ್ದ ಹೂಡಿಕೆಯ 5 ಟಿಪ್ಸ್ ಹೀಗಿದೆ..
ಟೈಟಾನ್ ಕಂಪನಿ ಸದ್ಯ ರೇಖಾ ಜುಂಜುನ್ವಾಲಾ ಅವರ ಪೋರ್ಟ್‌ಫೋಲಿಯೋದಲ್ಲಿ ಅತ್ಯಂತ ಮೌಲ್ಯಯುತವಾದ ಹಿಡುವಳಿಯಾಗಿದೆ. ಕಂಪನಿಯು ಸ್ಟಾರ್ ಹೆಲ್ತ್ ಮತ್ತು ಅಲೈಡ್ ಇನ್ಶೂರೆನ್ಸ್ ಹಾಗೂ ಮೆಟ್ರೋ ಬ್ರ್ಯಾಂಡ್‌ಗಳಲ್ಲಿ ಹೂಡಿಕೆ ಮಾಡಿದ್ದು, 2021 ರಲ್ಲಿ ಆ ಕಂಪನಿಗಳು ಲಿಸ್ಟೆಡ್ ಕಂಪನಿಗಳಾದಾಗ ದೊಡ್ಡ ಲಾಭ ಗಳಿಸಿತು.
ಇನ್ನೊಂದೆಡೆ, ದಿವಂಗತ ರಾಕೇಶ್ ಜುಂಜುನ್ವಾಲಾ ಅವರ ಪತ್ನಿ ರೇಖಾ ಜುಂಜುನ್ವಾಲಾ ಅವರ ಆಸ್ತಿಯ ನಿವ್ವಳ ಮೌಲ್ಯ ಸುಮಾರು 47,650 ಕೋಟಿ ರೂ. ಎಂದು ತಿಳಿದುಬಂದಿದೆ.
ಇದನ್ನೂ ಓದಿ: 10 ವರ್ಷಗಳ ಹಿಂದೆ ಈ ಕಂಪನಿಗೆ 10,000 ರೂ. ಹೂಡಿಕೆ ಮಾಡಿದ್ರೆ ಈಗ ನಿಮ್ಮ ಬಳಿ 27 ಲಕ್ಷ ರೂ ಇರ್ತಿತ್ತು!