
Business Desk:ಸ್ವಂತ ಉದ್ಯಮ ಪ್ರಾರಂಭಿಸಬೇಕು ಎಂಬ ಕನಸು ಅನೇಕರಿಗಿರುತ್ತದೆ. ಆದರೆ, ಕೆಲವೇ ಕೆಲವು ಮಂದಿ ಮಾತ್ರ ಈ ಕನಸನ್ನು ನನಸು ಮಾಡಿಕೊಳ್ಳುತ್ತಾರೆ. ಸ್ವಂತ ಉದ್ಯಮ ಪ್ರಾರಂಭಿಸೋದು ಅಂದ್ಕೊಂಡಷ್ಟು ಸುಲಭದ ಕೆಲಸವಂತೂ ಅಲ್ಲವೇ ಅಲ್ಲ. ದೃಢ ಸಂಕಲ್ಪ ಹಾಗೂ ಕಠಿಣ ಪರಿಶ್ರಮ ಅಗತ್ಯ. ಇತ್ತೀಚಿನ ದಿನಗಳಲ್ಲಿ ಯುವಜನತೆ ಸ್ವ ಉದ್ಯಮದ ಕಡೆಗೆ ಹೆಚ್ಚಿನ ಒಲವು ತೋರುತ್ತಿದ್ದಾರೆ. ಪರಿಣಾಮ ದೇಶದಲ್ಲಿ ಸ್ಟಾರ್ಟ್ ಅಪ್ ಗಳ ಸಂಖ್ಯೆ ಹೆಚ್ಚಿದೆ. ಕೆಲವರಂತೂ ಎಳೆಯ ಪ್ರಾಯದಲ್ಲೇ ಸ್ವಂತ ಉದ್ಯಮ ಪ್ರಾರಂಭಿಸಿ ಯಶಸ್ಸು ಸಾಧಿಸಿದ್ದಾರೆ. ಅಂಥವರಲ್ಲಿ ತಾಪ್ಸಿ ಉಪಾಧ್ಯಾಯ ಕೂಡ ಒಬ್ಬರು. ತಾಪ್ಸಿ ಬಿ.ಟೆಕ್ ಪದವಿ ಮುಗಿಯುತ್ತಿದ್ದಂತೆ ಎಲ್ಲರಂತೆ ಉದ್ಯೋಗಕ್ಕಾಗಿ ಕಂಪನಿಯಿಂದ ಕಂಪನಿಗೆ ಅಲೆದಾಟ ನಡೆಸಲಿಲ್ಲ. ಬದಲಿಗೆ ಪಾನಿಪುರಿ ಅಂಗಡಿ ಪ್ರಾರಂಭಿಸಿದರು. ಅರೇ, ಬಿ.ಟೆಕ್ ಪದವೀಧರೆ ಪಾನಿಪುರಿ ಅಂಗಡಿ ನಡೆಸೋದಾ ಎಂಬ ಅಚ್ಚರಿ ಮೂಡಬಹುದು. ಕೆಲವರು ಈ ಕಾರಣಕ್ಕೆ ತಾಪ್ಸಿ ಅವರನ್ನು ಗೇಲಿ ಕೂಡ ಮಾಡಿರಬಹುದು. ಆದರೆ, ಇದ್ಯಾವುದಕ್ಕೂ ಆಕೆ ತಲೆಕೆಡಿಸಿಕೊಂಡಿಲ್ಲ. 'ಬಿಟೆಕ್ ಪಾನಿಪುರಿವಾಲಿ' ಎಂದೇ ಖ್ಯಾತಿ ಗಳಿಸಿರುವ ತಾಪ್ಸಿ ತಮ್ಮ ಉದ್ಯಮವನ್ನು ಯಶಸ್ವಿಯಾಗಿ ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ. ಈ ಮೂಲಕ ಉದ್ಯೋಗ ಸಿಕ್ಕಿಲ್ಲ ಎಂದು ಬರಿಗೈಲಿ ಕುಳಿತಿರುವ ಅದೆಷ್ಟೋ ಯುವಕ, ಯುವತಿಯರಿಗೆ ಸ್ವ ಉದ್ಯೋಗ ಕೈಗೊಳ್ಳಲು ಸ್ಫೂರ್ತಿಯಾಗಿದ್ದಾರೆ.
ರಾಷ್ಟ್ರರಾಜಧಾನಿ ದೆಹಲಿಯ ಜೈಲ್ ರೋಡ್ ಮೆಟ್ರೋ ಸ್ಟೇಷನ್ ಬಳಿ ತಾಪ್ಸಿ ತಮ್ಮ ತಳ್ಳುಗಾಡಿಯಲ್ಲಿ ಪಾನಿಪುರಿ ಮಾಡುತ್ತಾರೆ. ವಿಶೇಷ ಅಂದ್ರೆ ಈ ಪಾನಿಪುರಿ ಗಾಡಿಯನ್ನು ತಮ್ಮ ಬುಲೆಟ್ ಗೆ ಜೋಡಿಸಿಕೊಂಡು ತಾಪ್ಸಿ ಮನೆಯಿಂದ ನಮ್ಮ ನಿತ್ಯದ ವ್ಯಾಪಾರ ಸ್ಥಳಕ್ಕೆ ಬರುತ್ತಾರೆ. ಕೇವಲ 21 ವರ್ಷದ ತಾಪ್ಸಿ ತನ್ನ ಗ್ರಾಹಕರಿಗೆ ಆರೋಗ್ಯಯುತವಾದ ಆಹಾರ ಒದಗಿಸಲು ಬಯಸುತ್ತಾರೆ. ಈ ಕಾರಣಕ್ಕೆ ಅವರು ಪುರಿಯನ್ನು ಎಣ್ಣೆಯಲ್ಲಿ ಕರಿಯುವ ಬದಲು ಏರ್ ಪ್ರೈಯರ್ ಬಳಸುತ್ತಾರೆ. ತಾಪ್ಸಿ ತನ್ನ ವೆಬ್ ಸೈಟ್ ನಲ್ಲಿ ಈ ಬಗ್ಗೆ ಉಲ್ಲೇಖಿಸಿದ್ದು, ತನ್ನ ಸ್ಟಾಲ್ ನಲ್ಲಿ ಇನ್ನಷ್ಟು ಸ್ಟ್ರೀಟ್ ಫುಡ್ ಗಳನ್ನು ಪರಿಚಯಿಸುವ ಬಯಕೆ ಹೊಂದಿದ್ದು, ಆ ಮೂಲಕ ಜನರಿಗೆ ಆರೋಗ್ಯಕರ ಸ್ಟ್ರೀಟ್ ಫುಡ್ ಒದಗಿಸುವ ಉದ್ದೇಶ ಹೊಂದಿರೋದಾಗಿ ತಿಳಿಸಿದ್ದಾರೆ.
ಮಹಿಳೆಯಾಗಿ ಪಾನಿಪುರಿ ಅಂಗಡಿ ನಡೆಸೋದು ತಾಪ್ಸಿಗೆ ಸುಲಭದ ಕೆಲಸವಾಗಿರಲಿಲ್ಲ. ಅನೇಕರು ಆಕೆಯನ್ನು ನೋಡಿ ಇದೆಲ್ಲ ಏಕೆ, ಮನೆಗೆ ಹೋಗು ಎಂದು ಹೇಳಿದ್ದೂ ಇದೆಯಂತೆ.ಮಹಿಳೆ ರಸ್ತೆಯಲ್ಲಿ ನಿಂತು ವ್ಯಾಪಾರ ನಡೆಸೋದು ಸುರಕ್ಷಿತವಲ್ಲ ಎಂಬುದು ಅನೇಕರ ಸಲಹೆಯಾಗಿತ್ತು. ಅಲ್ಲದೆ, ಇನ್ನೂ ಕೆಲವರು ಬಿ.ಟೆಕ್ ಪದವಿ ಹೊಂದಿದ್ದರೂ ಪಾನಿಪುರಿ ಅಂಗಡಿ ನಡೆಸೋದು ಏಕೆ ಎಂದು ಪ್ರಶ್ನಿಸಿದ್ದೂ ಇದೆಯಂತೆ. ಆದರೆ, ತಾಪ್ಸಿ ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ತನ್ನ ವ್ಯಾಪಾರ ಮುಂದುವರಿಸಿದ್ದಾರೆ.
Women's Day Special : ಸೋಲಾರ್ ಪ್ಯಾನಲ್ ಮೂಲಕ ಮಹಿಳೆಯರಿಗೆ ಆಸರೆಯಾದ ಲಕ್ಷ್ಮಿ
ಇತ್ತೀಚೆಗೆ ಇನ್ ಸ್ಟಾಗ್ರಾಮ್ ನಲ್ಲಿ ತಾಪ್ಸಿ ಉಪಾಧ್ಯಾಯ ಅವರಿಗೆ ಸಂಬಂಧಿಸಿದ ರೀಲ್ ವೈರಲ್ ಆಗಿತ್ತು. ಈ ವಿಡಿಯೋ ಅನ್ನು Instagram page @are_you_hungry007 ಶೇರ್ ಮಾಡಿದ್ದರು. ಈ ವಿಡಿಯೋದಲ್ಲಿ ತಾಪ್ಸಿ ತಮ್ಮ ಸ್ಟಾಲ್ ತೆರೆದು ವ್ಯಾಪಾರ ಪ್ರಾರಂಭಿಸೋದು ಹಾಗೂ ತಮ್ಮ ಪಾನಿಪುರಿಯ ವಿಶೇಷತೆಯ ಬಗ್ಗೆ ಮಾತನಾಡಿರುವುದು ಇದೆ. ಹಾಗೆಯೇ ಮಹಿಳೆಯಾಗಿ ಆಕೆ ಎದುರಿಸಿದ ಸವಾಲುಗಳ ಬಗ್ಗೆಯೂ ಮಾತನಾಡಿದ್ದಾರೆ. ಈ ವಿಡಿಯೋ ಅನ್ನು ಒಂದು ವಾರದ ಹಿಂದೆ ಶೇರ್ ಮಾಡಲಾಗಿತ್ತು. ಇದಕ್ಕೆ ಎರಡು ಲಕ್ಷಕ್ಕೂ ಅಧಿಕ ಲೈಕ್ಸ್ ಬಂದಿದೆ. ಹಾಗೆಯೇ ಅನೇಕರು ಕಾಮೆಂಟ್ಸ್ ಕೂಡ ಮಾಡಿದ್ದಾರೆ. 'ಸೂಪರ್ ಹುಡುಕಿ, ಹೀಗೆ ಮುಂದುವರಿಯಿರಿ, ಒಳ್ಳೆಯದಾಗಲಿ'ಎಂದು ಒಬ್ಬರು ಪೋಸ್ಟ್ ಮಾಡಿದ್ದರೆ, ಇನ್ನೊಬ್ಬರು 'ಬಲಿಷ್ಠ ಹುಡುಗಿ. ದೇವರು ನಿನಗೆ ಇನ್ನಷ್ಟು ಯಶಸ್ಸು ನೀಡಲಿ' ಎಂದು ಹೇಳಿದ್ದಾರೆ. 'ಒಳ್ಳೆಯ ಕೆಲಸ. ತಂಗಿ ನಿನಗೆ ನನ್ನ ಸಲ್ಯೂಟ್' ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.