ಭಾರತದ ಜನಪ್ರಿಯ ಮಹಿಳಾ ಉದ್ಯಮಿಗಳಲ್ಲಿ ಮಲ್ಲಿಕಾ ಶ್ರೀನಿವಾಸನ್ ಕೂಡ ಒಬ್ಬರು. ಟ್ರಾಕ್ಟರ್ ರಾಣಿ ಎಂದೇ ಜನಪ್ರಿಯತೆ ಗಳಿಸಿರುವ ಇವರ ಉದ್ಯಮದ ಯಶಸ್ಸಿಕ ಕಥೆ ಇಲ್ಲಿದೆ.
Business Desk: ಮಹಿಳೆ ಮನಸ್ಸು ಮಾಡಿದರೆ ಏನು ಬೇಕಾದರೂ ಸಾಧಿಸಬಲ್ಲಳು ಅನ್ನೋದಕ್ಕೆ ಅನೇಕ ನಿದರ್ಶನಗಳು ನಮ್ಮ ಕಣ್ಣ ಮುಂದಿವೆ. ಶತಕೋಟಿ ಮೌಲ್ಯದ ಕಂಪನಿಗಳನ್ನು ಮಹಿಳೆಯರು ಇಂದು ಮುನ್ನಡೆಸುತ್ತಿದ್ದಾರೆ. ಆ ಮೂಲಕ ಉದ್ಯಮ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಇಂಥ ಯಶಸ್ವಿ ಭಾರತೀಯ ಮಹಿಳಾ ಉದ್ಯಮಿಗಳಲ್ಲಿ ಮಲ್ಲಿಕಾ ಶ್ರೀನಿವಾಸನ್ ಕೂಡ ಒಬ್ಬರು. ಇವರು 10,000 ಕೋಟಿ ರೂ.ಗಿಂತಲೂ ಅಧಿಕ ಆದಾಯ ಹೊಂದಿದ್ದು, ವಿಶ್ವದ ಮೂರನೇ ಅತೀದೊಡ್ಡ ಟ್ರಾಕ್ಟರ್ ಉತ್ಪಾದಕರಾಗಿ ಗುರುತಿಸಿಕೊಂಡಿದ್ದಾರೆ. ಆ ಮೂಲಕ ಮಹಿಳೆಯರು ಉದ್ಯಮ ಮುನ್ನಡೆಸುವಲ್ಲಿ ಪುರುಷರಷ್ಟೇ ಸಮರ್ಥರು ಎಂಬುದನ್ನು ಸಾಬೀತು ಮಾಡಿದ್ದಾರೆ. ಅಂದಹಾಗೇ ಮಲ್ಲಿಕಾ ಶ್ರೀನಿವಾಸನ್ ಭಾರತದ ಬಿಲಿಯನೇರ್ ಉದ್ಯಮಿ ವೇಣು ಶ್ರೀನಿವಾಸನ್ ಅವರ ಪತ್ನಿ. ಇತ್ತೀಚೆಗಷ್ಟೇ ಮಲ್ಲಿಕಾ ಅವರು ಆನ್ ಲೈನ್ ಫುಡ್ ಡೆಲಿವರಿ ಪ್ಲಾಟ್ ಫಾರ್ಮ್ ಸ್ವಿಗ್ಗಿಯ ಸ್ವತಂತ್ರ ನಿರ್ದೇಶಕಿ ಹುದ್ದೆಯಿಂದ ಕೆಳಗಿಳಿದಿದ್ದಾರೆ.
ಶಿಕ್ಷಣದ ಬಳಿಕ ಕುಟುಂಬ ಉದ್ಯಮಕ್ಕೆ ಸೇರ್ಪಡೆ
1959ರಲ್ಲಿ ಜನಿಸಿದ ಮಲ್ಲಿಕಾ ಶ್ರೀನಿವಾಸನ್, ಓದಿನಲ್ಲಿ ಜಾಣೆಯಾಗಿದ್ದರು. ಹೀಗಾಗಿ ಅತ್ಯುತ್ತಮ ಅಂಕಗಳೊಂದಿಗೆ ಶಿಕ್ಷಣ ಪೂರ್ಣಗೊಳಿಸಿದರು. ಮದ್ರಾಸ್ ವಿಶ್ವವಿದ್ಯಾಲಯದಿಂದ ಪದವಿ ಪೂರ್ಣಗೊಳಿಸಿದ ಇವರು ಅಮೆರಿಕದ ಪೆನ್ಸೆಲ್ವನಿಯಾ ವಿಶ್ವವಿದ್ಯಾಲಯದ ವಾರ್ಟನ್ ಸ್ಕೂಲ್ ನಿಂದ ಎಂಬಿಎ ಪೂರ್ಣಗೊಳಿಸಿದರು. 1986ರಲ್ಲಿ ಕುಟುಂಬ ಉದ್ಯಮಕ್ಕೆ ಸೇರ್ಪಡೆಗೊಂಡರು. ಚೆನ್ನೈಯ ಅಭಿವೃದ್ಧಿಯಲ್ಲಿ ನಿರ್ಣಾಯಕ ಪಾತ್ರ ವಹಿಸಿದ ಉದ್ಯಮಿ ಎಸ್. ಅನಂತರಾಮಕೃಷ್ಣನ್ ಅವರ ಕುಟುಂಬಕ್ಕೆ ಸೇರಿದ ಮಲ್ಲಿಕಾ, ಉದ್ಯಮವನ್ನುಹೊಸ ಎತ್ತರಕ್ಕೆ ಕೊಂಡೊಯ್ಯದರು. ಪರಿಣಾಮ ಇಂದು TAFE ಸಂಸ್ಥೆ ವಿಶ್ವಾದ್ಯಂತ ಜನಪ್ರಿಯತೆ ಗಳಿಸಿದೆ.
ಬರೋಬ್ಬರಿ 7000 ಕೋಟಿ ಮೌಲ್ಯದ ಸಂಸ್ಥೆ ಸ್ಥಾಪಿಸಿ, ತನ್ನದೇ ಕಂಪನಿಯಿಂದ ವಜಾಗೊಂಡ ಮಹಿಳೆ!
ಟ್ರಾಕ್ಟರ್ ರಾಣಿ ಎಂದೇ ಪ್ರಸಿದ್ಧಿ
TAFE ಭಾರತದ ಜನಪ್ರಿಯ ಟ್ರಾಕ್ಟರ್ ಉತ್ಪಾದನಾ ಸಂಸ್ಥೆಯಾಗಿದೆ. TAFE ಬೆಳವಣಿಗೆ ಬಳಿಕ ಮಲ್ಲಿಕಾ, ಅದರಲ್ಲಿ ಅನೇಕ ತಂತ್ರಜ್ಞಾನ ಆಧಾರಿತ ಪರಿವರ್ತನೆಗಳನ್ನು ಪರಿಚಯಿಸಿದರು. 64 ವರ್ಷದ ಮಲ್ಲಿಕಾ ಅವರನ್ನು 'ಟ್ರಾಕ್ಟರ್ ರಾಣಿ' ಎಂದು ಕೂಡ ಕರೆಯಲಾಗುತ್ತದೆ. ಇವರಿಗೆ ಪದ್ಮಶ್ರೀ ಪ್ರಶಸ್ತಿ ಕೂಡ ದೊರಕಿದ್ದು, ಬಹುಕೋಟಿ ಉತ್ಪಾದನಾ ಕಂಪನಿಯನ್ನು ಮುನ್ನಡೆಸುತ್ತಿರುವ ಬೆರಳೆಣಿಕೆಯಷ್ಟು ಮಹಿಳೆಯರಲ್ಲಿ ಇವರು ಒಬ್ಬರಾಗಿದ್ದಾರೆ. ಮಲ್ಲಿಕಾ ಅವರ ಕಂಪನಿ ವಹಿವಾಟು10,000 ಕೋಟಿ ರೂ. ಇದ್ದು, ಜಗತ್ತಿನಲ್ಲಿಮೂರನೇ ಅತೀದೊಡ್ಡ ಟ್ರಾಕ್ಟರ್ ಉತ್ಪಾದನಾ ಸಂಸ್ಥೆಯಾಗಿ ಗುರುತಿಸಿಕೊಂಡಿದೆ.
ಅನೇಕ ಸಂಸ್ಥೆಗಳನ್ನು ಸ್ವಾಧಿನಪಡಿಸಿಕೊಂಡ TAFE
ಮಲ್ಲಿಕಾ ಅವರ ನಾಯಕತ್ವದಡಿಯಲ್ಲಿ TAFE ಅನೇಕ ಕಂಪನಿಗಳನ್ನು ಸ್ವಾಧೀನಪಡಿಸಿಕೊಂಡಿದೆ ಕೂಡ. ಫ್ರೆಂಚ್ ಸಂಸ್ಥೆ ಫೌರೇಷಿಯಾ ಇಂಡಿಯಾದ ಉದ್ಯಮವನ್ನು 2022ರಲ್ಲಿ 400 ಕೋಟಿ ರೂ.ಗೆ ಖರೀದಿಸಿದ್ದರು. ಹಾಗೆಯೇ 2018ರಲ್ಲಿ ಸರ್ಬಿಯಾದ ಟ್ರಾಕ್ಟರ್ ಬ್ರ್ಯಾಂಡ್ ಇಂಡಸ್ಟ್ರಿಜ ಮಸಿನ ಐ ಟ್ರ್ಯಾಕ್ಟೋರ (ಐಎಂಟಿ) ಸ್ವಾಧೀನಪಡಿಸಿಕೊಂಡಿದ್ದರು.
ಅನೇಕ ಸಂಸ್ಥೆಗಳ ಮಂಡಳಿಗಳಲ್ಲಿ ಹುದ್ದೆ
ಮಲ್ಲಿಕಾ ಅವರ ನಾಯಕತ್ವದ ಗುಣವನ್ನು ಗುರುತಿಸಿ ಅನೇಕ ಜನಪ್ರಿಯ ಸಂಸ್ಥೆಗಳು ತಮ್ಮ ಆಡಳಿತ ಮಂಡಳಿಯಲ್ಲಿ ಅವರಿಗೆ ನಿರ್ದೇಶಕರ ಹುದ್ದೆಗಳನ್ನು ನೀಡಿದ್ದಾರೆ. ಎಜಿಸಿಒ ಮಂಡಳಿ, ಟಾಟಾ ಸ್ಟೀಲ್, ಟಾಟಾ ಗ್ಲೋಬಲ್ ಬಿವರೇಜಸ್ , ಚೆನ್ನೈ ಇಂಡಿಯನ್ ಇನ್ಸಿಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ), ಹೈದರಾಬಾದ್ ಇಂಡಿಯನ್ ಸ್ಕೂಲ್ ಆಫ್ ಬ್ಯುಸಿನೆಸ್ (ಐಎಸ್ ಬಿ) ಕಾರ್ಯಕಾರಿ ಮಂಡಳಿಗಳಲ್ಲಿ ಮಲ್ಲಿಕಾ ಅವರಿದ್ದಾರೆ. ವಿವಿಧ ಜವಾಬ್ದಾರಿಗಳು ಹಾಗೂ ಕೆಲಸದೊತ್ತಡ ಹೆಚ್ಚಿದ ಹಿನ್ನೆಲೆಯಲ್ಲಿ ಇತ್ತೀಚೆಗೆ ಅವರು ಸ್ವಿಗ್ಗಿ ಆಡಳಿತ ಮಂಡಳಿಯ ಸ್ವತಂತ್ರ ನಿರ್ದೇಶಕಿ ಹುದ್ದೆಯಿಂದ ಕೆಳಗಿಳಿದಿದ್ದರು. ಸ್ವಿಗ್ಗಿ ಮಾರುಕಟ್ಟೆ ಮೌಲ್ಯ 68,918 ಕೋಟಿ ರೂ. ಇದೆ. ಉದ್ಯಮ ರಂಗದಲ್ಲಿನ ಇವರ ಸಾಧನೆ ಗುರುತಿಸಿ ಭಾರತ ಸರ್ಕಾರ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ.
84 ಲಕ್ಷ ರೂ. ಸಂಬಳದ ಕೆಲಸ ಬಿಟ್ಟು 100 ಕೋಟಿ ರೂ. ಉದ್ಯಮ ಕಟ್ಟಿದ ಐಐಟಿ ಪದವೀಧರ
23 ಸಾವಿರ ಕೋಟಿ ಸಂಪತ್ತು
ಮಲ್ಲಿಕಾ ಶ್ರೀನಿವಾಸನ್ ಅವರ ನಿವ್ವಳ ಸಂಪತ್ತು 23,625.96 ಕೋಟಿ ರೂ. ಇದ್ದು, ಭಾರತದ 83ನೇ ಶ್ರೀಮಂತ ಉದ್ಯಮಿಯಾಗಿ ಗುರುತಿಸಿಕೊಂಡಿದ್ದಾರೆ.