ಪಿಎಂ ಸ್ವನಿಧಿ ಯೋಜನೆ ಅಡಿಯಲ್ಲಿ ಬೀದಿ ಬದಿ ವ್ಯಾಪಾರಿಗಳು 50 ಸಾವಿರ ರೂ. ತನಕ ಸಾಲ ಪಡೆಯಬಹುದು. ಇದಕ್ಕೆ ಅರ್ಜಿ ಸಲ್ಲಿಸೋದು ಹೇಗೆ?
ನವದೆಹಲಿ (ಫೆ.9): ಬೀದಿ ಬದಿ ವ್ಯಾಪಾರಿಗಳಿಗೆ ನೆರವಾಗುವ ಉದ್ದೇಶದಿಂದ ಕೇಂದ್ರ ಸರ್ಕಾರ ಪ್ರಾರಂಭಿಸಿದ ಪಿಎಂ ಸ್ವನಿಧಿ ಯೋಜನೆಯಿಂದ ಈಗಾಗಲೇ ಲಕ್ಷಾಂತರ ಮಂದಿ ನೆರವು ಪಡೆದಿದ್ದಾರೆ. ಬೀದಿ ಬದಿ ವ್ಯಾಪಾರಿಗಳಿಗೆ ಸಾಲ ನೀಡುವ ಮೂಲಕ ಅವರಿಗೆ ಆರ್ಥಿಕ ನೆರವು ನೀಡುವ ಜೊತೆಗೆ ಅವರ ಸಮಗ್ರ ಅಭಿವೃದ್ಧಿ ಹಾಗೂ ಹಣಕಾಸಿನ ಪ್ರಗತಿಗೆ ಸಹಾಯ ಮಾಡೋದು ಈ ಯೋಜನೆ ಉದ್ದೇಶ. ಪ್ರಧಾನ ಮಂತ್ರಿ ಬೀದಿ ಬದಿ ವ್ಯಾಪಾರಿಗಳ ಆತ್ಮನಿರ್ಭರ ನಿಧಿಯನ್ನು (ಪಿಎಂ ಸ್ವನಿಧಿ) ಕೋವಿಡ್ ಸಾಂಕ್ರಾಮಿಕದ ಸಂದರ್ಭದಲ್ಲಿ ಅಂದರೆ 2020ರ ಜೂನ್ 1ರಂದು ಆರಂಭಿಸಲಾಗಿತ್ತು. ಇನ್ನು ಈ ಯೋಜನೆಯ ಮೂರನೇ ಹಂತದ ಸಾಲ ನೀಡುವ ಕಾರ್ಯಕ್ರಮನ್ನು ಸರ್ಕಾರ 2024ರ ಡಿಸೆಂಬರ್ ತನಕ ವಿಸ್ತರಿಸಿದೆ. ಈ ಯೋಜನೆಯಲ್ಲಿ ಮೊದಲ ಸಾಲ ಸೌಲಭ್ಯದಲ್ಲಿ ಬೀದಿ ಬದಿ ವ್ಯಾಪಾರಿಗಳಿಗೆ 10,000 ರೂಪಾಯಿ ನೀಡಲಾಗುತ್ತಿತ್ತು. ಎರಡನೇ ಸೌಲಭ್ಯದಲ್ಲಿ 20,000 ರೂಪಾಯಿ ನೀಡಲಾಗುತ್ತಿದೆ. ಇದೀಗ ಮೂರನೇ ಸೌಲಭ್ಯದಲ್ಲಿ 50,000 ರೂಪಾಯಿ ಸಾಲ ನೀಡಲಾಗುತ್ತಿದೆ.
ಪಿಎಂ ಸ್ವನಿಧಿ ಯೋಜನೆ ಮೊಬೈಲ್ ಆ್ಯಪ್ ಅನ್ನು ಕೇಂದ್ರ ಸರ್ಕಾರ 2023ರ ಜುಲೈ 17ರಂದು ಬಿಡುಗಡೆ ಮಾಡಿದೆ. ಈ ಆ್ಯಪ್ ಯುಪಿಐ, ಕ್ಯುಆರ್ ಕೋಡ್ ಹಾಗೂ ರುಪೇ ಡೆಬಿಟ್ ಕಾರ್ಡ್ ಮುಂತಾದ ವಿಧಾನಗಳ ಮೂಲಕ ಬೀದಿಬದಿ ವ್ಯಾಪಾರಿಗಳಿಗೆ ಡಿಜಿಟಲ್ ವಹಿವಾಟುಗಳಿಗೆ ಪ್ರೇರಣೆ ನೀಡುತ್ತಿದೆ. ಡಿಜಿಟಲ್ ವಹಿವಾಟು ನಡೆಸಿದ್ದಕ್ಕೆ ವ್ಯಾಪಾರಿಗಳಿಗೆ ಮಾಸಿಕ ಕ್ಯಾಶ್ ಬ್ಯಾಕ್ ಸೌಲಭ್ಯಗಳನ್ನು ನೀಡಲಾಗುತ್ತಿದೆ.
ಸಾಲಗಾರರಿಗೆ ಈ ಬಾರಿಯೂ ಇಎಂಐ ಹೆಚ್ಚಳದ ಚಿಂತೆ ಇಲ್ಲ; ರೆಪೋ ದರ ಬದಲಾಯಿಸದ ಆರ್ ಬಿಐ
ಪಿಎಂ ಸ್ವನಿಧಿ ಯೋಜನೆ ಪ್ರಯೋಜನಗಳು?
*ಬೀದಿ ಬದಿ ವ್ಯಾಪಾರಿಗಳಿಗೆ 50 ಸಾವಿರ ರೂ. ತನಕ ಸಾಲ ಸೌಲಭ್ಯ.
*ಈ ಯೋಜನೆಯಡಿ ಪಡೆದ ಸಾಲವನ್ನು ನಿಯಮಿತವಾಗಿ ಮರುಪಾವತಿಸೋರಿಗೆ ಶೇ.7ರಷ್ಟು ಬಡ್ಡಿ ಸಬ್ಸಿಡಿ ನೀಡಲಾಗುತ್ತದೆ.
*ಡಿಜಿಟಲ್ ವಹಿವಾಟುಗಳಿಗೆ ವಾರ್ಷಿಕ 1,200 ರೂ. ಕ್ಯಾಶ್ ಬ್ಯಾಕ್ ನೀಡಲಾಗುತ್ತಿದೆ.
ಯಾರು ಅರ್ಜಿ ಸಲ್ಲಿಸಬಹುದು?
ಬೀದಿ ಬದಿ ವ್ಯಾಪಾರಿಗಳ (ಜೀವನಹಕ್ಕು ಸಂರಕ್ಷಣೆ ಹಾಗೂ ಬೀದಿ ವ್ಯಾಪಾರ ನಿರ್ವಹಣೆ) ಕಾಯ್ದೆ 2014 ಅಡಿಯಲ್ಲಿ ರೂಪಿಸಿರುವ ನಿಯಮಗಳು ಹಾಗೂ ಯೋಜನೆಗಳ ಅಧಿಸೂಚನೆ ಹರಡಿಸಿರುವ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಫಲಾನುಭವಿಗಳು ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಕೆ ಹೇಗೆ?
ಹಂತ 1: www.pmsvanidhi.mohua.gov.in ಭೇಟಿ ನೀಡಿ.
ಹಂತ 2: 'Apply for a loan' ಆಯ್ಕೆ ಮೇಲೆ ಕ್ಲಿಕ್ ಮಾಡಿ.
ಹಂತ 3: ನಿಮ್ಮ ಮೊಬೈಲ್ ಸಂಖ್ಯೆ ಹಾಗೂ ಕ್ಯಾಪ್ಚ ಕೋಡ್ ನಮೂದಿಸಿ.
ಹಂತ 4: ಆ ಬಳಿಕ ವರ್ಗ ಆಯ್ಕೆ ಮಾಡಿ ಹಾಗೂ ಅಗತ್ಯ ಮಾಹಿತಿಗಳನ್ನು ಭರ್ತಿ ಮಾಡಿ.
ಹಂತ 5: ಆ ಬಳಿಕ submit ಬಟನ್ ಮೇಲೆ ಕ್ಲಿಕ್ ಮಾಡಿ.
ರೈತರ ನಿರೀಕ್ಷೆ ಹುಸಿ; ಪಿಎಂ ಕಿಸಾನ್ ವಾರ್ಷಿಕ ಮೊತ್ತ 6 ಸಾವಿರಕ್ಕಿಂತ ಹೆಚ್ಚು ಮಾಡಲ್ಲ,ಕೇಂದ್ರ ಸ್ಪಷ್ಟನೆ
ಪಿಎಂ ಸ್ವನಿಧಿ ಮೊಬೈಲ್ ಆ್ಯಪ್
ಈ ಯೋಜನೆ ಹೆಚ್ಚು ಫಲಾನುಭವಿಗಳಿಗೆ ತಲುಪಬೇಕು ಎಂಬ ಉದ್ದೇಶದಿಂದ ಕೇಂದ್ರ ಸರ್ಕಾರ ಪಿಎಂ ಸ್ವನಿಧಿ ಮೊಬೈಲ್ ಆ್ಯಪ್ ಬಿಡುಗಡೆ ಮಾಡಿದೆ. ಈ ಆ್ಯಪ್ ಬಳಕೆದಾರರ ಸ್ನೇಹಿ ಡಿಜಿಟಲ್ ವೇದಿಕೆಯಾಗಿದ್ದು, ಸಾಲ ನೀಡುವ ಸಂಸ್ಥೆಗಳು ಹಾಗೂ ಅವುಗಳ ಫೀಲ್ಡ್ ಏಜೆಂಟ್ ಗಳಿಗೆ ಸಾಲದ ಅರ್ಜಿಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡಲು ನೆರವು ನೀಡುತ್ತಿದೆ. ಈ ಆ್ಯಪ್ ಮೂಲಕ ಬೀದಿ ಬದಿ ವ್ಯಾಪಾರಿಗಳು ಈಗ ಈ ಯೋಜನೆಯ ಗರಿಷ್ಠ ಕವರೇಜ್ ಪಡೆಯಬಹುದಾಗಿದೆ. ಬೀದಿ ಬದಿ ವ್ಯಾಪಾರಿಗಳಿಗೆ ವ್ಯವಹಾರ ನಡೆಸಲು ಅಗತ್ಯವಾದ ಸಾಮಗ್ರಿಗಳ ಖರೀದಿ ಸೇರಿದಂತೆ ವಿವಿಧ ಅಗತ್ಯಗಳಿಗೆ ಈ ಯೋಜನೆಯ ಸಾಲವನ್ನು ಬಳಸಿಕೊಳ್ಳಬಹುದು.