ಫೇಸ್‌ಬುಕ್‌ ಉದ್ಯೋಗಿಗಳ ವಜಾ ಬೆನ್ನಲ್ಲೇ ಜುಕರ್‌ಬರ್ಗ್‌ ಭದ್ರತಾ ವೆಚ್ಚದಲ್ಲಿ 82 ಕೋಟಿ ಏರಿಕೆ!

By Santosh NaikFirst Published Feb 16, 2023, 3:06 PM IST
Highlights

ಫೇಸ್‌ಬುಕ್‌ನಲ್ಲಿ ಸಾಕಷ್ಟು ಉದ್ಯೋಗಿಗಳು ವಜಾ ಮಾಡಿದ ಬಳಿಕ, ಜುಕರ್‌ಬರ್ಗ್‌ ಅವರ ಜೀವಕ್ಕೆ ಅಪಾಯವಿರುವ ಮುನ್ಸೂಚನೆ ಸಿಕ್ಕಿದೆಯಂತೆ. ಅದಕ್ಕಾಗಿ ಮೆಟಾ, ಮಾರ್ಕ್‌ ಜುಕರ್‌ಬರ್ಗ್‌ ಅವರ ಭದ್ರತಾ ವೆಚ್ಚದಲ್ಲಿ ಬರೋಬ್ಬರಿ 82 ಕೋಟಿ ರೂಪಾಯಿ ಏರಿಕೆ ಮಾಡಿದೆ.

ನವದೆಹಲಿ (ಫೆ.16): ಫೇಸ್‌ಬುಕ್‌ನಲ್ಲಿ ಕಳೆದ ವರ್ಷದ ಅಂತ್ಯದ ವೇಳೆಗೆ ಬರೋಬ್ಬರಿ 11 ಸಾವಿರ ಉದ್ಯೋಗಿಗಳನ್ನು ವಜಾ ಮಾಡಲಾಗಿತ್ತು. ಆ ಬಳಿಕ ಮೆಟಾ ಸಂಸ್ಥಾಪಕ ಮಾರ್ಕ್‌ ಜುಕರ್‌ಬರ್ಗ್‌ ಅವರಿಗೆ ಭದ್ರತಾ ಅತಂಕ ಎದುರಾಗಿದೆಯಂತೆ. ವಜಾಗೊಂಡಿರುವ ಉದ್ಯೋಗಿಗಳಿಂದ ಜೀವ ಬೆದರಿಕೆ ಇರುವ ಹಿನ್ನಲೆಯಲ್ಲಿ ಮಾರ್ಕ್‌ ಜುಕರ್‌ಬರ್ಗ್‌ ಅವರ ಭದ್ರತಾ ವೆಚ್ಚದಲ್ಲಿ ದೊಡ್ಡ ಮಟ್ಟದ ಏರಿಕೆಯಾಗಿದೆ. ಕಂಪನಿಯ ಸಿಇಒ ಹಾಗೂ ಸಹ ಸಂಸ್ಥಾಪಕರಾಗಿರುವ ಮಾರ್ಕ್‌ ಜುಕರ್‌ಬರ್ಗ್‌ ಅವರ ಭದ್ರತೆಗೆ ಮೆಟಾ ಈವರೆಗೂ 4 ಮಿಲಿಯನ್‌ ಯುಎಸ್‌ ಡಾಲರ್‌ (33 ಕೋಟಿ ರೂಪಾಯಿ) ಖರ್ಚು ಮಾಡುತ್ತಿತ್ತು. ಈಗ ಈ ವೆಚ್ಚದಲ್ಲಿ 10 ಮಿಲಿಯನ್‌ ಯುಎಸ್‌ ಡಾಲರ್‌ (82 ಕೋಟಿ ರೂಪಾಯಿ) ಏರಿಕೆ ಮಾಡಿದೆ. ಇದರಿಂದಾಗಿ ಮಾರ್ಕ್‌ ಜುಕರ್‌ಬರ್ಗ್‌ ಅವರ ಭದ್ರತೆಗೆ ಮೆಟಾ ಕಂಪನಿ 14 ಮಿಲಿಯನ್‌ (115 ಕೋಟಿ ರೂಪಾಯಿ) ಖರ್ಚು ಮಾಡಲಿದೆ. ಹಾಗೂ ಇಷ್ಟು ಃನ ಖರ್ಚು ಮಾಡುವುದು ಈಗಿನ ತುರ್ತು ಅಗತ್ಯ ಎಂದು ಕಂಪನಿ ಹೇಳಿದೆ. ಪ್ರಸ್ತುತ ಮಾರ್ಕ್‌ ಜುಕರ್‌ಬರ್ಗ್‌ ಪೋರ್ಬ್ಸ್‌ನ ವಿಶ್ವದ ಶ್ರೀಮಂತ ವ್ಯಕ್ತಿಗಳ ಪಟ್ಟಿಯಲ್ಲಿ 63 ಬಿಲಿಯನ್‌ ಯುಎಸ್‌ ಡಾಲರ್‌ನೊಂದಿಗೆ 16ನೇ ಸ್ಥಾನದಲ್ಲಿದ್ದಾರೆ. 2021ರಲ್ಲಿ ಮಾರ್ಕ್‌ ಜುಕರ್‌ಬರ್ಗ್‌ ಅವರಿಗೆ 224 ಕೋಟಿ ರೂ. ಪರಿಹಾರ ನೀಡಲಾಗಿತ್ತು. ಇನ್ನು 2022ರಲ್ಲಿ ಮಾರ್ಕ್‌ ಜುಕರ್‌ಬರ್ಗ್‌ ಅವರಿಗೆ ನೀಡಲಾಗಿರುವ ಹರಿಹಾರ ಹಣದ ವಿವರನ್ನು ಈವರೆಗೂ ಪ್ರಕಟಿಸಿಲ್ಲ.

ಫೇಸ್‌ಬುಕ್‌ ಕಳೆದ ವರ್ಷದ ನವೆಂಬರ್‌ನಲ್ಲಿ 11 ಸಾವಿರ ಉದ್ಯೋಗಿಗಳನ್ನು ವಜಾ ಮಾಡಿತ್ತು. ಮುಂಬರುವ ತಿಂಗಳಲ್ಲಿ ಮತ್ತಷ್ಟು ಉದ್ಯೋಗಿಗಳಿಗೆ ಪಿಂಕ್‌ಸ್ಲಿಪ್‌ ನೀಡಲು ಸಿದ್ಧತೆ ಮಾಡುತ್ತಿದೆ. ಆ ನಿಟ್ಟಿನಲ್ಲಿ ಜುಕರ್‌ಬರ್ಗ್‌ ಅವರ ಭದ್ರತೆಯನ್ನು ಇನ್ನಷ್ಟು ಹೆಚ್ಚಳ ಮಾಡಲಾಗಿದೆ. ಕಂಪನಿ ಆರಂಭವಾದ 18 ವರ್ಷಗಳ ಬಳಿಕ ಇಷ್ಟು ಪ್ರಮಾಣದ ಉದ್ಯೋಗಿಗಳನ್ನು ಹೊರಹಾಕಿದ್ದು ಇದೇ ಮೊದಲಾಗಿದೆ. ತನ್ನ ಕೆಲವು ತಪ್ಪು ನಿರ್ಧಾರಗಳಿಂದ ಕಂಪನಿಯ ಆದಾಯದಲ್ಲಿ ಸಾಕಷ್ಟು ಇಳಿಕೆಯಾಗಿದೆ. ಹಾಗಾಗಿ ಇಂಥ ಕಷ್ಟದ ನಿರ್ಧಾರ ಮಾಡುತ್ತಿದ್ದೇನೆ ಎಂದು ಜುಕರ್‌ಬರ್ಗ್‌ ಹೇಳಿದ್ದರು.

'ಇಂದು ನಾನು ಮೆಟಾ ಇತಿಹಾಸದಲ್ಲಿ ಮಾಡಿದ ಕೆಲವು ಕಠಿಣ ನಿರ್ಧಾರಗಳ ಬಗ್ಗೆ ಹೇಳಲಿದ್ದೇನೆ. ನಮ್ಮ ತಂಡದ ಗಾತ್ರವನ್ನು ಸರಿಸುಮಾರು 13% ರಷ್ಟು ಕಡಿಮೆ ಮಾಡಲು ನಾವು ನಿರ್ಧರಿಸಿದ್ದೇವೆ. ಇದರಿಂದ 11 ಸಾವಿರಕ್ಕೂ ಹೆಚ್ಚು ಪ್ರತಿಭಾವಂತ ನೌಕರರು ಕೆಲಸ ಕಳೆದುಕೊಳ್ಳಲಿದ್ದಾರೆ. ವೆಚ್ಚವನ್ನು ಕಡಿತಗೊಳಿಸುವ ಮೂಲಕ ಮತ್ತು Q1 ಮೂಲಕ ನೇಮಕಾತಿ ಫ್ರೀಜ್ ಅನ್ನು ವಿಸ್ತರಿಸುವ ಮೂಲಕ ನಾವು ಹೆಚ್ಚು ಪರಿಣಾಮಕಾರಿ ಕಂಪನಿಯಾಗಲು ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ' ಎಂದು ಮಾರ್ಕ್‌ ಜುಕರ್‌ಬರ್ಗ್‌ ಉದ್ಯೋಗಿಗಳನ್ನು ವಜಾ ಮಾಡುವ ವೇಳೆ ತಿಳಿಸಿದ್ದರು.

ಫೇಸ್‌ಬುಕ್‌ನಲ್ಲಿ ಮತ್ತಷ್ಟು ನೌಕರಿ ಕಡಿತ, ಫಿಲಿಫ್ಸ್‌ನಿಂದಲೂ Lay off ಘೋಷಣೆ

ಅದಲ್ಲದೆ, ನೌಕರರನ್ನು ವಜಾ ಮಾಡುವ ಸಂಪೂರ್ಣ ನಿರ್ಧಾರವನ್ನು ತಾನೇ ಮಾಡಿದ್ದೇನೆ. ಇದರಿಂದ ಸಂತ್ರಸ್ತರಾದ ಉದ್ಯೋಗಿಗಳಬಗ್ಗೆಯೂ ವಿಷಾದವಿದೆ ಎಂದು ಮಾರ್ಕ್‌ ಜುಕರ್‌ಬರ್ಗ್ ಹೇಳಿದ್ದರು. ಈ ದಿನ ಎಲ್ಲರಿಗೂ ಕಷ್ಟಕರವಾಗಿದೆ ಎಂದು ನನಗೆ ತಿಳಿದಿದೆ ಮತ್ತು ನನ್ನ ನಿರ್ಧಾರದಿಂದ ಪರಿಣಾಮ ಬೀರಿದ ನೌಕರರ ಬಗ್ಗೆ ನಾನು ವಿಶೇಷವಾಗಿ ವಿಷಾದಿಸುತ್ತೇನೆ ಎಂದಿದ್ದರು.

ಫೇಸ್‌ಬುಕ್‌ ಮಾತೃಸಂಸ್ಥೆ ಮೆಟಾದಿಂದ 11 ಸಾವಿರ ಉದ್ಯೋಗಿಗಳಿಗೆ ಗೇಟ್‌ಪಾಸ್‌ ಅಧಿಕೃತ!

2004ರಲ್ಲಿ ಆರಂಭವಾಗಿದ್ದ ಕಂಪನಿ: ಜುಕರ್‌ಬರ್ಗ್ 2004 ರಲ್ಲಿ ಹಾರ್ವರ್ಡ್‌ನಲ್ಲಿರುವ ತಮ್ಮ ಹಾಸ್ಟೆಲ್ ಕೋಣೆಯಲ್ಲಿ ಫೇಸ್‌ಬುಕ್ ಅನ್ನು ಸ್ಥಾಪಿಸಿದರು. ಹಾರ್ವರ್ಡ್ ವಿದ್ಯಾರ್ಥಿಗಳು ಆನ್‌ಲೈನ್‌ನಲ್ಲಿ ಪರಸ್ಪರ ಸಂಪರ್ಕ ಹೊಂದಲು ಸಾಮಾಜಿಕ ನೆಟ್‌ವರ್ಕ್ ಅನ್ನು ರಚಿಸುವುದು ಅವರ ಮೂಲ ಕಲ್ಪನೆಯಾಗಿತ್ತು. ಹಾಗಿದ್ದರೂ, ಸೈಟ್ ಬಹಳ ಬೇಗ ಜನಪ್ರಿಯತೆಯನ್ನು ಗಳಿಸಿತು ಮತ್ತು ಇತರ ವಿಶ್ವವಿದ್ಯಾಲಯಗಳಿಗೆ ವಿಸ್ತರಿಸಿತು. ಈಗ ಇದು 2.9 ಶತಕೋಟಿಗಿಂತ ಹೆಚ್ಚು ದೈನಂದಿನ ಸಕ್ರಿಯ ಬಳಕೆದಾರರೊಂದಿಗೆ ಜಾಗತಿಕ ವೇದಿಕೆ ಎನಿಸಿಕೊಂಡಿದೆ. ಮಾರ್ಕ್ ಜುಕರ್‌ಬರ್ಗ್ ಫೇಸ್‌ಬುಕ್ ಪ್ರಾರಂಭದಿಂದಲೂ ಸಿಇಒ ಆಗಿದ್ದಾರೆ. ಅವರ ನಾಯಕತ್ವದಲ್ಲಿ, ಫೇಸ್‌ಬುಕ್ ಸಣ್ಣ ಸ್ಟಾರ್ಟ್‌ಅಪ್‌ನಿಂದ ಜಾಗತಿಕ ಸಾಮಾಜಿಕ ಮಾಧ್ಯಮ ದೈತ್ಯವಾಗಿ ಬೆಳೆದಿದೆ. ಹಾಗಿದ್ದರೂ, ಫೇಸ್‌ಬುಕ್‌ ವೇದಿಕೆಯಲ್ಲಿ ಡೇಟಾ ಸೋರಿಕೆ ಮತ್ತು ನಕಲಿ ಸುದ್ದಿಗಳಿಗಾಗಿ ಜುಕರ್‌ಬರ್ಗ್ ಅವರನ್ನು ಟೀಕಿಸಲಾಗಿದೆ.

click me!