ಪ್ಯಾನ್ ಕಾರ್ಡ್ ಕಳೆದು ಹೋಗಿದೆಯಾ? ಡೋಂಟ್ ವರಿ, ಮರು ಅರ್ಜಿ ಸಲ್ಲಿಕೆ ಮಾಡಿ

By Suvarna NewsFirst Published Feb 20, 2023, 7:09 PM IST
Highlights

ಪ್ಯಾನ್ ಕಾರ್ಡ್ ಕಳೆದು ಹೋದಾಗ ಏನು ಮಾಡಬೇಕು ಎಂಬುದು ಬಹುತೇಕರಿಗೆ ತಿಳಿದಿರೋದಿಲ್ಲ. ತಕ್ಷಣ ಸ್ಥಳೀಯ ಪೊಲೀಸ್ ಠಾಣಿಯಲ್ಲಿ ಎಫ್ ಐಆರ್ ಫೈಲ್ ಮಾಡಬೇಕು. ಹಾಗೆಯೇ ಪ್ಯಾನ್ ಕಾರ್ಡ್ ಗೆ ಮರು ಅರ್ಜಿ ಸಲ್ಲಿಕೆ ಮಾಡಬೇಕು. ಆನ್ ಲೈನ್ ನಲ್ಲಿ ಪ್ಯಾನ್ ಕಾರ್ಡ್ ಗೆ ಅರ್ಜಿ ಸಲ್ಲಿಕೆ ಮಾಡೋದು ಹೇಗೆ? ಇಲ್ಲಿದೆ ಮಾಹಿತಿ. 

Business Desk:ಕಾಯಂ ಖಾತೆ ಸಂಖ್ಯೆ ಅಥವಾ ಪ್ಯಾನ್ ಕಾರ್ಡ್ ಅತ್ಯಂತ ಪ್ರಮುಖವಾದ ದಾಖಲೆಗಳಲ್ಲಿ ಒಂದು. ಇದು 10 ಅಂಕೆಗಳ ಇಂಗ್ಲಿಷ್ ಅಕ್ಷರಗಳು ಹಾಗೂ ಸಂಖ್ಯೆಗಳ ಸಮೂಹ. ಆದಾಯ ತೆರಿಗೆ ಇಲಾಖೆ ಪ್ಯಾನ್ ಕಾರ್ಡ್ ಗಳನ್ನು ವಿತರಿಸುತ್ತದೆ. ಪ್ಯಾನ್ ಕಾರ್ಡ್ ಪ್ರಮುಖ ಗುರುತು ದೃಢೀಕರಣ ದಾಖಲೆಯಾಗಿದ್ದು, ಮುಖ್ಯವಾಗಿ ತೆರಿಗೆ ಸಂಬಂಧಿ ಉದ್ದೇಶಗಳಿಗೆ ಬಳಸಲಾಗುತ್ತದೆ.  ಪ್ಯಾನ್ ಕಾರ್ಡ್ಗೆ ಆನ್ ಲೈನ್ ಅಥವಾ ಆಪ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಆದರೆ, ಯಾವುದೋ ಕಾರಣದಿಂದ ನಿಮ್ಮ ಪ್ಯಾನ್ ಕಾರ್ಡ್ ಕಳೆದು ಹೋಗಿದ್ರೆ ಆಗ ನೀವು ಮರಳಿ ಪ್ಯಾನ್ ಕಾರ್ಡ್ ಪಡೆಯಲು ಆದಾಯ ತೆರಿಗೆ ಇಲಾಖೆಗೆ ಅರ್ಜಿ ಸಲ್ಲಿಸೋದು ಅಗತ್ಯ. ಪ್ಯಾನ್ ಕಾರ್ಡ್ ಕಳೆದು ಹೋದ ತಕ್ಷಣ ಸ್ಥಳೀಯ ಪೊಲೀಸ್ ಠಾಣಿಯಲ್ಲಿ ಎಫ್ ಐಆರ್ ಫೈಲ್ ಮಾಡೋದು ಅಗತ್ಯ. ಇದರಿಂದ ಬೇರೆಯವರು ನಿಮ್ಮ ಪ್ಯಾನ್ ಕಾರ್ಡ್ ದುರ್ಬಳಕೆ ಮಾಡದಂತೆ ತಡೆಯಲು ಸಾಧ್ಯವಾಗುತ್ತದೆ. ಇತ್ತೀಚೆಗೆ ಪ್ಯಾನ್ ಕಾರ್ಡ್ ದುರ್ಬಳಕೆ ಪ್ರಕರಣಗಳು ಹೆಚ್ಚುತ್ತಿದ್ದು, ಈ ಬಗ್ಗೆ ಆದಾಯ ತೆರಿಗೆ ಇಲಾಖೆ ಅನೇಕ ಬಾರಿ ಎಚ್ಚರಿಕೆ ಕೂಡ ನೀಡಿದೆ. ಹೀಗಾಗಿ ಪ್ಯಾನ್ ಕಾರ್ಡ್ ಕಳೆದು ಹೋದ ಸಂದರ್ಭದಲ್ಲಿ ಎಚ್ಚರಿಕೆ ವಹಿಸೋದು ಅಗತ್ಯ.

ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಕೆ ಹೇಗೆ?
ಹಂತ 1: ಆದಾಯ ತೆರಿಗೆ ಇಲಾಖೆ ಅಧಿಕೃತ ವೆಬ್ ಸೈಟ್ TIN-NSDL ಭೇಟಿ ನೀಡಿ.
ಹಂತ 2: ಪ್ರಸ್ತುತ ಇರುವ 'ಪ್ಯಾನ್ ಮಾಹಿತಿಯಲ್ಲಿ ಬದಲಾವಣೆಗಳು ಅಥವಾ ತಿದ್ದುಪಡಿ/ ಪ್ಯಾನ್ ಕಾರ್ಡ್ ಮರು ಪ್ರಿಂಟ್' ಅರ್ಜಿ ಮಾದರಿ ಆಯ್ಕೆ ಮಾಡಿ.
ಹಂತ 3:  ಹೆಸರು, ಜನ್ಮದಿನಾಂಕ ಹಾಗೂ ಮೊಬೈಲ್ ಸಂಖ್ಯೆ ಸೇರಿದಂತೆ ಕಡ್ಡಾಯವಾಗಿ ಭರ್ತಿ ಮಾಡಬೇಕಾದ ಮಾಹಿತಿಗಳನ್ನು ಭರ್ತಿ ಮಾಡಿ. ಆ ಬಳಿಕ ಅದನ್ನು ಸಲ್ಲಿಕೆ ಮಾಡಿ.

ಅಂಚೆ ಕಚೇರಿಯಲ್ಲಿ ಉಳಿತಾಯ ಖಾತೆ ಹೊಂದಿದ್ದೀರಾ? ಹಾಗಾದ್ರೆ ಈ 8 ಸೇವಾ ಶುಲ್ಕಗಳ ಬಗ್ಗೆ ತಿಳಿದಿರಲಿ

ಹಂತ 4: ಟೋಕನ್ ಸಂಖ್ಯೆ ಸೃಷ್ಟಿಸಿ ಅದನ್ನು ಅರ್ಜಿದಾರರ ನೋಂದಾಯಿತ ಇ-ಮೇಲ್ ಗೆ ಕಳುಹಿಸಲಾಗುತ್ತದೆ. ಈಗ ಅರ್ಜಿ ಭರ್ತಿ ಮಾಡೋದನ್ನು ಮುಂದುವರಿಸಿ.
ಹಂತ 5: 'ವೈಯಕ್ತಿಕ ಮಾಹಿತಿಗಳು' ಪುಟದಲ್ಲಿರುವ ಎಲ್ಲ ಮಾಹಿತಿಗಳನ್ನು ಭರ್ತಿ ಮಾಡಿ. ಪ್ಯಾನ್ ಅರ್ಜಿ ಸಲ್ಲಿಕೆಯನ್ನು ನೀವು ಮೂರು ಮಾದರಿಯಲ್ಲಿ ಮಾಡಬಹುದು. ಒಂದು ಅರ್ಜಿ ದಾಖಲೆಗಳನ್ನು ಕಚೇರಿಗೆ ಭೇಟಿ ನೀಡಿ ಸಲ್ಲಿಕೆ ಮಾಡುವುದು, ಇ-ಕೆವೈಸಿ ಮೂಲಕ ಡಿಜಿಟಲ್ ಭರ್ತಿ ಮಾಡೋದು ಹಾಗೂ ಇ-ಸಹಿ ಮೂಲಕ ಸಲ್ಲಿಕೆ ಮಾಡಬಹುದು. 
ಹಂತ 6: ಒಂದು ವೇಳೆ ನೀವು ಅರ್ಜಿಯನ್ನು ಅಂಚೆ ಮೂಲಕ (ಭೌತಿಕ) ಸಲ್ಲಿಕೆ ಮಾಡಲು ಬಯಸಿದ್ರೆ ಅರ್ಜಿ ಪಾವತಿ ಜೊತೆಗೆ ಸ್ವೀಕೃತಿ ಅರ್ಜಿ ಸೃಷ್ಟಿಯಾಗುತ್ತದೆ. ಇದು ಸ್ವ ದೃಢೀಕರಣ ಹೊಂದಿರುವ ಡ್ರೈವಿಂಗ್ ಲೈಸೆನ್ಸ್, ಆಧಾರ್, ಮತದಾರರ ಐಡಿ, ಜನ್ಮ ಪ್ರಮಾಣಪತ್ರ, ಪಾಸ್ ಪೋರ್ಟ್, 10ನೇ ತರಗತಿ ಪ್ರಮಾಣಪತ್ರ ಹಾಗೂ ಇತರ ದಾಖಲೆಗಳೊಂದಿಗೆ ಮುದ್ರಣಗೊಳ್ಳುತ್ತದೆ. ಆ ಬಳಿಕ ಇದನ್ನು ಎನ್ ಎಸ್ ಡಿಎಲ್ ಪ್ಯಾನ್ ಸೇವೆಗಳ ಘಟಕಕ್ಕೆ ರಿಜಿಸ್ಟರ್ಡ್ ಪೋಸ್ಟ್ ಮಾಡಬೇಕು. ಆ ಲಕೋಟೆ ಮೇಲೆ “Acknowledgement No.-xxxx – Application for Reprint of PAN or Application for changes or correction in PAN data” ಎಂದು ನಮೂದಿಸಬೇಕು.

ಗೃಹಸಾಲದಂತೆ ಕ್ರೆಡಿಟ್ ಕಾರ್ಡ್ ಸಾಲದ ವರ್ಗಾವಣೆ ಸಾಧ್ಯನಾ? ಇಲ್ಲಿದೆ ಮಾಹಿತಿ

ಹಂತ 7: ಇ-ಕೆವೈಸಿ ಅವಾ ಇ-ಸಹಿ ಮೂಲಕ ಡಿಜಿಟಲ್ ಸಲ್ಲಿಕೆ ಮಾಡಿ. ಈ ಸೇವೆ ಬಳಸಲು ಆಧಾರ್ ಅಗತ್ಯ. ನೀವು ನೀಡಿರುವ ಮಾಹಿತಿ ಸಮರ್ಪಕವಾಗಿದೆಯಾ ಎಂದು ಪರಿಶೀಲಿಸಲು ಆಧಾರ್ ನಲ್ಲಿ ನಮೂದಾಗಿರುವ ಮೊಬೈಲ್ ಸಂಖ್ಯೆಗೆ ಒಟಿಪಿ ಕಳುಹಿಸಲಾಗುತ್ತದೆ. ಅಂತಿಮ ಅರ್ಜಿ ಸಲ್ಲಿಕೆ ಮಾಡಿದ ಬಳಿಕ ಅರ್ಜಿಗೆ ಇ-ಸಹಿ ಮಾಡಲು ಡಿಜಿಟಲ್ ಸಹಿಯ ಅಗತ್ಯವಿರುತ್ತದೆ.
ಹಂತ 8: ಇ-ಸಹಿ ಮೂಲಕ ಸ್ಕ್ಯಾನ್ ಮಾಡಿದ ಫೋಟೋಗಳನ್ನು ಸಲ್ಲಿಕೆ ಮಾಡಿ. ಈ ಆಯ್ಕೆ ಬಳಕೆಗೆ ಆಧಾರ್ ಕಾರ್ಡ್ ಕೂಡ ಕಡ್ಡಾಯ.ನಿಮ್ಮ ಪಾಸ್ ಪೋರ್ಟ್ ಫೋಟೋ, ಸಹಿ ಹಾಗೂ ಇತರ ದಾಖಲೆಗಳ ಫೋಟೋಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್  ಅಥವಾ ಸಲ್ಲಿಕೆ ಮಾಡಿ. ಈ ದಾಖಲೆಗಳನ್ನು ಅಪ್ಲೋಡ್ ಮಾಡಿದ ಬಳಿಕ ಅರ್ಜಿಯ ದೃಢೀಕರಣಕ್ಕೆ ಒಟಿಪಿ ಸೃಷ್ಟಿಯಾಗುತ್ತದೆ.
ಹಂತ 9: ಈಗ ನೀವು ಭೌತಿಕ ಪ್ಯಾನ್ ಕಾರ್ಡ್ ಹಾಗೂ ಎಲೆಕ್ಟ್ರಾನಿಕ್ ಪ್ಯಾನ್ ಕಾರ್ಡ್ ನಡುವೆ ಆಯ್ಕೆ ಮಾಡಬೇಕು. ಇ-ಪ್ಯಾನ್ ಕಾರ್ಡ್ಗೆ ವ್ಯಾಲಿಡ್ ಇ-ಮೇಲ್ ವಿಳಾಸ ಅಗತ್ಯ. ಸಂಪರ್ಕ ಮಾಹಿತಿಗಳು ಹಾಗೂ ದಾಖಲೆ ಮಾಹಿತಿಗಳನ್ನು ಭರ್ತಿ ಮಾಡಿ ಅರ್ಜಿ ಸಲ್ಲಿಕೆ ಮಾಡಿ.
ಹಂತ 10: ಈಗ ನೀವು ಪಾವತಿ ಪುಟಕ್ಕೆ ತೆರಳುತ್ತೀರಿ. ಪಾವತಿ ಪೂರ್ಣಗೊಂಡ ಬಳಿಕ ಸ್ವೀಕೃತಿ ಅರ್ಜಿ ಸೃಷ್ಟಿಯಾಗುತ್ತದೆ.  15-20 ಕೆಲಸದ ದಿನಗಳ ಅವಧಿಯೊಳಗೆ ಪ್ಯಾನ್ ಕಾರ್ಡ್ ಅನ್ನು ನಿಮಗೆ ವಿತರಿಸಲಾಗುತ್ತದೆ. 

click me!