
ಗಿರೀಶ್ ಲಿಂಗಣ್ಣ, ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ
ಏರ್ ಇಂಡಿಯಾ ಸಂಸ್ಥೆ ಬಿಲಿಯನ್ ಗಟ್ಟಲೆ ಮೊತ್ತದ ವ್ಯವಹಾರದಲ್ಲಿ ಏರ್‌ಬಸ್ ಸಂಸ್ಥೆಯಿಂದ 250 ವಿಮಾನಗಳನ್ನು ಖರೀದಿಸುವ ಒಪ್ಪಂದ ಕೈಗೊಳ್ಳುತ್ತಿದ್ದ ಹಾಗೇ ಭಾರತದ ವೈಮಾನಿಕ ಉದ್ಯಮದಲ್ಲಿ ಭಾರೀ ಬದಲಾವಣೆ ಕಂಡುಬರುವ ಸಾಧ್ಯತೆಗಳು ದಟ್ಟವಾಗಿವೆ. ಏರ್ ಇಂಡಿಯಾದ ನಡೆ ವೈಮಾನಿಕ ಮಾರುಕಟ್ಟೆಯಲ್ಲಿರುವ ಇತರ ವಿಮಾನಯಾನ ಸಂಸ್ಥೆಗಳ ಮೇಲೆ ಹೆಚ್ಚಿನ ಒತ್ತಡ ಉಂಟುಮಾಡಿದೆ. ಅವುಗಳೂ ಈಗ ವಿಮಾನಗಳ ಮೇಲೆ ಹೂಡಿಕೆ ಮಾಡಿ, ತಮ್ಮ ವಿಮಾನಗಳ ಸಂಖ್ಯೆಯನ್ನು ಹೆಚ್ಚಿಸುವ ಅನಿವಾರ್ಯತೆ ಎದುರಾಗಿದೆ. ಭಾರತದ ಅತಿದೊಡ್ಡ ವಿಮಾನಯಾನ ಸಂಸ್ಥೆಯಾಗಿರುವ ಇಂಡಿಗೋ ಏರ್‌ಲೈನ್ಸ್ ಪ್ರಸ್ತುತ 500 ವಿಮಾನಗಳನ್ನು ಖರೀದಿಸುವ ಯೋಜನೆ ಹಾಕಿಕೊಂಡಿದೆ ಎನ್ನುತ್ತವೆ ವರದಿಗಳು.
ಈ ಖರೀದಿ ಆದೇಶ ಇಂಡಿಗೋ (IndiGo)ಸಂಸ್ಥೆಗೆ ಅತ್ಯಂತ ಪ್ರಮುಖವಾಗಿರಲಿದೆ. ಇಂಡಿಗೋ ಈಗಾಗಲೇ 2025ರ ವೇಳೆಗೆ 150 ಏರ್‌ಬಸ್ ಎ320 ನಿಯೋ ವಿಮಾನಗಳನ್ನು ಹೊಂದುವ ಉದ್ದೇಶ ಹೊಂದಿತ್ತು. ಅದರೊಡನೆ, ಇಂಡಿಗೋ ತನ್ನ ಮಹತ್ವಾಕಾಂಕ್ಷೆಯ ಅಭಿವೃದ್ಧಿ ಯೋಜನೆಗಳಿಗೆ ಹೆಸರಾಗಿದ್ದು, ತನ್ನ ಕಾರ್ಯಾಚರಣೆ ವಿಸ್ತರಿಸುವ ವಿಚಾರದಲ್ಲಿ ಉತ್ತಮ ದಾಖಲೆ ಹೊಂದಿದೆ. ಈ ಖರೀದಿಯೂ ಏರ್‌ಬಸ್ (Air bus) ಹಾಗೂ ಬೋಯಿಂಗ್ ಸಂಸ್ಥೆಗಳ ಮಧ್ಯ ಹಂಚಿಹೋಗುವ ಸಾಧ್ಯತೆಗಳಿವೆ. ವರದಿಗಳ ಪ್ರಕಾರ ಇಂಡಿಗೋ ಈಗಾಗಲೇ ಎರಡೂ ವಿಮಾನ ಉತ್ಪಾದನಾ ಸಂಸ್ಥೆಗಳೊಡನೆ ಮಾತುಕತೆಯಲ್ಲಿ ನಿರತವಾಗಿದೆ. ಇಂಡಿಗೋ ಏರ್‌ಬಸ್ ಸಂಸ್ಥೆಯ ಎ320 ನಿಯೋ, ಎ321 ನಿಯೋ ಹಾಗೂ ಬೋಯಿಂಗ್ ಸಂಸ್ಥೆಯ 737 ಮ್ಯಾಕ್ಸ್ ಸೇರಿದಂತೆ ವಿವಿಧ ವಿಮಾನಗಳ ಖರೀದಿಯಲ್ಲಿ ಆಸಕ್ತವಾಗಿದೆ.
ವಿಮಾನಯಾನದಲ್ಲಿ ಭಾರತ ಶೀಘ್ರ 3ನೇ ದೊಡ್ಡ ಮಾರುಕಟ್ಟೆ: ಮೋದಿ
ಇಂಡಿಗೋದ ಈ ಹೆಜ್ಜೆ ಏರ್ ಇಂಡಿಯಾ (Air India) ನೂತನ ವಿಮಾನಗಳನ್ನು ಖರೀದಿಸುವ ಮೂಲಕ ಉಂಟಾಗುವ ಸ್ಪರ್ಧೆಗೆ ಪ್ರತ್ಯುತ್ತರ ಎಂಬಂತೆ ಕಂಡುಬರುತ್ತಿದೆ. ಅದರೊಡನೆ, ಭಾರತದ ದೇಶೀಯ ವಿಮಾನಯಾನದಲ್ಲಿ ತನ್ನ ಪ್ರಾಬಲ್ಯ ಮುಂದುವರಿಸುವ ಯೋಜನೆಯಂತೆಯೂ ತೋರುತ್ತಿದೆ. ಏರ್ ಇಂಡಿಯಾ 250 ನೂತನ ವಿಮಾನಗಳನ್ನು ಪಡೆದುಕೊಳ್ಳುವುದು ಇತರ ವಿಮಾನಯಾನ ಸಂಸ್ಥೆಗಳ ಮೇಲೆ ಹೆಚ್ಚಿನ ಒತ್ತಡ ಹೇರಿ, ಅವುಗಳೂ ತಮ್ಮ ವಿಮಾನಗಳ ಸಂಖ್ಯೆಯನ್ನು ಹೆಚ್ಚಿಸುವಂತೆ ಮಾಡುತ್ತಿದೆ.
500 ನೂತನ ವಿಮಾನಗಳ ಖರೀದಿಗೆ ಇಂಡಿಗೋ ಮುಂದಾಗುತ್ತಿರುವುದು ಆ ಸಂಸ್ಥೆಗೆ ಭಾರತೀಯ ವೈಮಾನಿಕ ಮಾರುಕಟ್ಟೆಯ ಭವಿಷ್ಯದ ಅಭಿವೃದ್ಧಿಯ ಕುರಿತು ಇರುವ ಭರವಸೆಯನ್ನು ತೋರಿಸುತ್ತದೆ. ಕೋವಿಡ್-19 ಸಾಂಕ್ರಾಮಿಕದ ಬಳಿಕ ಉದ್ಯಮ ಹಲವು ಸಮಸ್ಯೆ, ಸವಾಲುಗಳನ್ನು ಎದುರಿಸುತ್ತಿದ್ದರೂ, ಇಂಡಿಗೋ ಭವಿಷ್ಯದ ಕುರಿತು ಆಶಾಭಾವನೆ ಹೊಂದಿದೆ.
ಆತ್ಮವಿಶ್ವಾಸದ ಲಕ್ಷಣಗಳು: ಕೋವಿಡ್-19 ಸವಾಲುಗಳ ಮಧ್ಯೆಯೇ ದೃಢ ಹೆಜ್ಜೆ
ಕೋವಿಡ್-19 ಸಾಂಕ್ರಾಮಿಕದ (Covid pandemic) ಪರಿಣಾಮದ ಹಿನ್ನೆಲೆಯಲ್ಲಿ ಇಷ್ಟು ಬೃಹತ್ ಪ್ರಮಾಣದ ಹೂಡಿಕೆಯ ಕುರಿತು ಹಲವು ವಿಶ್ಲೇಷಕರು ತಮ್ಮ ಕಳವಳ ವ್ಯಕ್ತಪಡಿಸಿದ್ದಾರೆ. ಕೋವಿಡ್ ಸಾಂಕ್ರಾಮಿಕ ವೈಮಾನಿಕ ಉದ್ಯಮದ ಮೇಲೆ ಅಪಾರ ಪ್ರಭಾವ ಉಂಟುಮಾಡಿತ್ತು. ಜಗತ್ತಿನಾದ್ಯಂತ ಎಲ್ಲ ವಿಮಾನಯಾನ ಸಂಸ್ಥೆಗಳೂ ತಮ್ಮ ವಿಮಾನಗಳನ್ನು ಭೂಸ್ಪರ್ಶಗೊಳಿಸಿದ್ದವು. ಪ್ರಯಾಣ ನಿರ್ಬಂಧ ಹಾಗೂ ಕೋವಿಡ್ ನಿಯಮಗಳ ಅನುಸಾರ ಮತ್ತು ವಿಮಾನ ಪ್ರಯಾಣಕ್ಕೆ ಬೇಡಿಕೆ ಕುಸಿದ ಪರಿಣಾಮವಾಗಿ ಸಾವಿರಾರು ಪ್ರಯಾಣಗಳು ರದ್ದಾಗಿದ್ದವು. ಆದರೆ ಈಗ ಪರಿಸ್ಥಿತಿ ನಿಯಮಿತವಾಗಿ ಸುಧಾರಿಸಲ್ಪಡುತ್ತಿದ್ದು, ಸಾಕಷ್ಟು ರಾಷ್ಟ್ರಗಳು ಪ್ರಯಾಣ ನಿಯಮಗಳನ್ನು ಸಡಿಲಗೊಳಿಸಿವೆ. ಆದರೂ ವೈಮಾನಿಕ ಉದ್ಯಮ ಸಾಕಷ್ಟು ಪ್ರಮುಖ ಸವಾಲುಗಳನ್ನು ಎದುರಿಸುತ್ತಿದೆ. ಹಲವು ವಿಮಾನಯಾನ ಸಂಸ್ಥೆಗಳು ಇಂದಿಗೂ ಸಾಂಕ್ರಾಮಿಕದ ಪರಿಣಾಮವಾಗಿ ಎದುರಿಸಿದ ಆರ್ಥಿಕ ಹೊಡೆತದಿಂದ ಸುಧಾರಿಸಲು ಕಷ್ಟಪಡುತ್ತಿವೆ. ಅವುಗಳು ಇನ್ನೂ ಕಾರ್ಯಾಚರಣೆ ನಡೆಸಬೇಕಾದರೆ ಇನ್ನಷ್ಟು ಸಾಲ ಮಾಡಬೇಕಾದ ಪರಿಸ್ಥಿತಿ ಇದೆ.
ವಿಶ್ವದ ಅತಿದೊಡ್ಡ ವಿಮಾನ ಖರೀದಿ ಒಪ್ಪಂದ: 470 ವಿಮಾನಗಳಿಗೆ ಟಾಟಾ ಬಿಗ್‌ಡೀಲ್
ಈ ಎಲ್ಲ ಸವಾಲುಗಳ ಹೊರತಾಗಿಯೂ, ಇಂಡಿಗೋ ನಿರ್ವಹಣಾ ಮಂಡಳಿ ಸಂಸ್ಥೆಯ ಭವಿಷ್ಯದ ಕುರಿತು ಆಶಾಭಾವನೆ ಹೊಂದಿದೆ. ಇತ್ತೀಚಿನ ಸಂದರ್ಶನ ಒಂದರಲ್ಲಿ ಇಂಡಿಗೋ ಸಂಸ್ಥೆಯ ಸಿಇಓ 500 ನೂತನ ವಿಮಾನಗಳ ಖರೀದಿಗೆ ಇಂಡಿಗೋ ಆಲೋಚಿಸುತ್ತಿರುವುದು ಭಾರತೀಯ ವೈಮಾನಿಕ ಮಾರುಕಟ್ಟೆಗೆ ಇರುವ ದೀರ್ಘಾವಧಿಯಲ್ಲಿ ಅಭಿವೃದ್ಧಿ ಹೊಂದುವ ಸಾಮರ್ಥ್ಯ ಮತ್ತು ಅದರ ಮೇಲಿರುವ ಇಂಡಿಗೋದ ವಿಶ್ವಾಸ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಇಂಡಿಗೋದ ಈ ನಿರ್ಧಾರ ಒಟ್ಟಾರೆಯಾಗಿ ಭಾರತೀಯ ವೈಮಾನಿಕ ಉದ್ಯಮದ ಮೇಲೆ ಅಪಾರ ಪರಿಣಾಮ ಬೀರುವ ಸಾಧ್ಯತೆಗಳಿವೆ. ಈಗ ಭಾರತದ ಆರ್ಥಿಕತೆ ಚೇತರಿಕೆ ಕಂಡುಬರುತ್ತಿದ್ದು, ವಿಮಾನ ಪ್ರಯಾಣಕ್ಕೆ ಬೇಡಿಕೆ ಹೆಚ್ಚಾಗುವ ನಿರೀಕ್ಷೆಗಳಿವೆ. ಏರ್ ಇಂಡಿಯಾ - ಏರ್‌ಬಸ್ ಒಪ್ಪಂದ ಹಾಗೂ ಇಂಡಿಗೋದ ಸಂಭಾವ್ಯ ವಿಮಾನಗಳ ಖರೀದಿ ವೈಮಾನಿಕ ಕ್ಷೇತ್ರದ (aviation sector) ಭವಿಷ್ಯದ ಕುರಿತು ಆಶಾ ಭಾವನೆ ಮೂಡಿಸಿದೆ.
ಎಲ್ಲ ಕಳವಳಕಾರಿ ಅಂಶಗಳ ಹೊರತಾಗಿಯೂ, ಭಾರತೀಯ ವೈಮಾನಿಕ ಉದ್ಯಮ ಅಭಿವೃದ್ಧಿ (Development of Indian Aviation Industry) ಮತ್ತು ಬದಲಾವಣೆಯನ್ನು ಎದುರು ನೋಡುತ್ತಿದೆ. ರಾಷ್ಟ್ರದ ಅತಿದೊಡ್ಡ ವಿಮಾನಯಾನ ಸಂಸ್ಥೆಗಳು ಅಪಾರ ಪ್ರಮಾಣದ ಹೂಡಿಕೆ ಮತ್ತು ಕಾರ್ಯತಂತ್ರದ ಹೆಜ್ಜೆಗಳನ್ನು ಕೈಗೊಳ್ಳುತ್ತಿವೆ. ವೈಮಾನಿಕ ಉದ್ಯಮ ಅಭಿವೃದ್ಧಿ ಹೊಂದುತ್ತಾ, ಬದಲಾಗುತ್ತಿರುವ ಮಾರುಕಟ್ಟೆ ಪರಿಸ್ಥಿತಿಗಳಿಗೆ ಹೊಂದಿಕೊಳ್ಳುತ್ತಿದೆ. ಇಂತಹ ಸಂದರ್ಭದಲ್ಲಿ, ಉದ್ಯಮ ಹೇಗೆ ಬೆಳೆಯುತ್ತದೆ, ವೈಮಾನಿಕ ಉದ್ಯಮದ ಅಭಿವೃದ್ಧಿ ಒಟ್ಟಾರೆ ಆರ್ಥಿಕತೆಯ ಮೇಲೆ ಎಂತಹ ಪರಿಣಾಮ ಬೀರುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.