ಸಾಫ್ಟ್‌ವೇರ್‌ ದೋಷದಿಂದ ಸಿಗದ ಎಣ್ಣೆ: ಚಡಪಡಿಸಿದ ಮದ್ಯ ಪ್ರಿಯರು

By Kannadaprabha NewsFirst Published Jul 5, 2022, 8:01 AM IST
Highlights

* ಸರಾಯಿ ಸಂಗ್ರಹ ಇದ್ದರೂ ಸರಬರಾಜಿನಲ್ಲಿ ಭಾರಿ ವ್ಯತ್ಯಯ
*  60 ಕೋಟಿ ವ್ಯವಹಾರಕ್ಕೆ ಹೊಡೆತ
*  ಬಿಲ್ಲಿಂಗ್‌ ತಂತ್ರಾಶದಿಂದ ತಾಂತ್ರಿಕ ಸಮಸ್ಯೆ 
 

ರಾಘು ಕಾಕರಮಠ

ಅಂಕೋಲಾ(ಜು.05): ಕಳೆದ ಮೂರು ದಿನಗಳಿಂದ ಮದ್ಯಪ್ರಿಯರಿಗೆ ಸರಾಯಿ ಸಿಗದೇ ಚಡಪಡಿಸುವಂತಾಗಿದ್ದಾರೆ. ಹೊಸ ಬಿಲ್ಲಿಂಗ್‌ ತಂತ್ರಾಂಶದಲ್ಲಿನ ದೋಷದಿಂದಾಗಿ ಮದ್ಯ ಪೂರೈಕೆಯಲ್ಲಿ ವ್ಯತ್ಯಯ ಆಗಿದೆ. ರಾಜ್ಯ ಪಾನೀಯ ನಿಗಮದ ಮೂಲಕವೇ ರಾಜ್ಯದಲ್ಲಿ ಮದ್ಯ ಪೂರೈಕೆಯಾಗುತ್ತಿದೆ. ಕಳೆದ ಮಾಚ್‌ರ್‍ ಅಂತ್ಯದವರೆಗೂ ಹಳೆಯ ಸಾಫ್ಟ್‌ವೇರ್‌ ಮೂಲಕವೇ ಮದ್ಯ ಪೂರೈಕೆಯ ಬಿಲ್ಲಿಂಗ್‌ ಆಗುತ್ತಿತ್ತು. ಆದರೆ 2022ರ ಏಪ್ರಿಲ್‌ 1ರಿಂದ ವೆಬ್‌ ಇಂಡೆಂಟಿಂಗ್‌ ಎಂಬ ಹೊಸ ಸಾಫ್ಟ್‌ವೇರ್‌ ಮೂಲಕವೇ ಮದ್ಯದ ಬಿಲ್ಲಿಂಗ್‌ ಮಾಡುವಂತೆ ಸರ್ಕಾರ ಸೂಚಿಸಿದ್ದರಿಂದ ವೆಬ್‌ ಇಂಡೆಂಟಿಂಗ್‌ ಮೂಲಕ ಬಿಲ್ಲಿಂಗ್‌ ನಡೆಯುತ್ತಿದೆ.

ಸ್ಥಗಿತಗೊಂಡ ಸಾಫ್ಟ್‌ವೇರ್‌:

ಮದ್ಯದ ಗೋಡೌನ್‌ನಲ್ಲಿ ಸಾಕಷ್ಟು ಪ್ರಮಾಣದಲ್ಲಿ ಮದ್ಯ ಶೇಖರಣೆಯಾಗಿದೆ. ಆದರೆ ಬಿಲ್ಲಿಂಗ್‌ ವ್ಯವಸ್ಥೆಯ ನೂತನ ವೆಬ್‌ ಇಂಡೆಂಟಿಂಗ್‌ ತಂತ್ರಜ್ಞಾನವು ತಾಂತ್ರಿಕ ತೊಂದರೆ ಒಳಪಟ್ಟಿದ್ದರಿಂದ ಬಿಲ್ಲಿಂಗ್‌ ಆಗುತ್ತಿಲ್ಲ. ಹೀಗಾಗಿ ಮದ್ಯವು ಬಿಲ್ಲಿಂಗ್‌ ಆಗದೇ ಗೋಡೌನ್‌ದಲ್ಲಿದೆ. ಇದು ಮದ್ಯ ಪ್ರಿಯರ ಕೈಗೆ ಸಿಗದಂತಾಗಿದೆ.

ಏನಿದು ವೆಬ್‌ ಇಂಡೆಂಟಿಂಗ್‌?:

ಬಾರ್‌ ಹಾಗೂ ವೈನ್‌ ಶಾಪ್‌ ಮಾಲಕರು ತಾವು ಕುಳಿತಲ್ಲಿಯೇ, ಕೈ ಬೆರಳ ತುದಿಯಲ್ಲಿ ಮೊಬೈಲ್‌ ಮೂಲಕ ತಮಗೆ ಬೇಕಾದ, ಅಗತ್ಯತೆಗೆ ತಕ್ಕಂತೆ ಮದ್ಯ ಆಮದು ಮಾಡಿಕೊಳ್ಳಲು ವೆಬ್‌ ಇಂಡೆಂಟಿಂಗ್‌ ತಂತ್ರಜ್ಞಾನವನ್ನು ಪರಿಚಯಿಸಲಾಗಿತ್ತು. ಇದರಿಂದಾಗಿ ಬಾರ್‌ ಹಾಗೂ ವೈನ್‌ ಶಾಪ್‌ ಮಾಲಕರಿಗೆ ಸಮಯದ ಉಳಿತಾಯದ ಜೊತೆಗೆ ಸರಳವಾಗಿ ಆನ್‌ಲೈನ್‌ನಲ್ಲಿಯೇ ಮದ್ಯದ ಬುಕ್ಕಿಂಗ್‌ ಮಾಡಬಹುದಿತ್ತು. ಆದರೆ ಈ ತಂತ್ರಾಂಶವು ಸರಿಯಾಗಿ ಬಳಕೆಯಾಗದೇ ಇರುವುದು ಸಮಸ್ಯೆಗೆ ಕಾರಣವಾಗಿದೆ.

ಮದ್ಯಪ್ರಿಯರ ಗೊಣಗಾಟ:

ಕೆಲವರು ಸಾಮಾನ್ಯವಾಗಿ ಕಡಿಮೆ ಬೆಲೆಯ ಮದ್ಯ ಖರೀದಿಸುತ್ತಾರೆ. ಸರ್ಕಾರ ಬಡಜನರಿಗೆಂದೇ .100 ಒಳಗಿನ ಸುಮಾರು 20 ಬ್ರಾಂಡ್‌ಗಳನ್ನು ಪರಿಚಯಿಸಿದೆ. ಆದರೆ ಮದ್ಯದ ಸರಬರಾಜು ಸ್ಥಗಿತಗೊಂಡಿದ್ದರಿಂದ ಚೀಪರ್‌ ಬ್ರಾಂಡ್‌ಗಳು ಮದ್ಯ ಪ್ರಿಯರಿಗೆ ಸಿಗುತ್ತಿಲ್ಲ. ದುಬಾರಿ ಬೆಲೆಯ ಉತ್ಪನ್ನವನ್ನು ವೈನ್‌ ಹಾಗೂ ಬಾರ್‌ನಲ್ಲಿ ಲಭ್ಯವಿದ್ದರೂ ಅದನ್ನು ಖರೀದಿಸುವ ಶಕ್ತಿ ಬಡ ಮದ್ಯಪಾನ ಪ್ರಿಯರಿಗೆ ಇಲ್ಲದಂತಾಗಿದೆ.

ಹೆಚ್ಚಿನ ದರಕ್ಕೆ ಮಾರಾಟ

ಮದ್ಯದ ಸರಬರಾಜು ಸ್ಥಗಿತಗೊಂಡಿದ್ದರಿಂದ ಜಿಲ್ಲೆಯಲ್ಲಿ ಕಳೆದ ನಾಲ್ಕು ದಿನಗಳಿಂದ ಅಂದಾಜು .60 ಕೋಟಿ ವ್ಯವಹಾರಕ್ಕೆ ಹೊಡೆತ ಬಿದ್ದಿದೆ. ಜಿಲ್ಲೆಯ ಕೆಲವೊಂದು ವೈನ್‌ ಶಾಪ್‌ ಹಾಗೂ ಬಾರ್‌ಗಳಲ್ಲಿ ದಾಸ್ತಾನು ಇದ್ದ ಮದ್ಯಗಳಿಗೆ ಬ್ಲಾಕ್‌ (ಹೆಚ್ಚಿನ ಹಣಕ್ಕೆ) ಮಾರುತ್ತಿರುವ ಬಗ್ಗೆ ಸಾಕಷ್ಟು ದೂರುಗಳು ಕೂಡ ಕೇಳಿ ಬರುತ್ತಿವೆ.

ಸರ್ಕಾರ ಮಧ್ಯ ಪ್ರವೇಶಿಸಲಿ:

ತಾಂತ್ರಿಕ ಸಮಸ್ಯೆ ಬಗೆಹರಿಯುವವರೆಗೂ ಹಳೆಯ ಪದ್ಧತಿಯಂತೆ ಮದ್ಯ ಪೂರೈಸುವಂತಾಗಬೇಕು. ಮದ್ಯ ಸಿಗದೇ ನಾವು ಕಂಗಾಲಾಗಿದ್ದೇವೆ. ಕೂಡಲೇ ಸರ್ಕಾರ ಮಧ್ಯ ಪ್ರವೇಶಿಸಿ ಆಗಿರುವ ತೊಂದರೆಗೆ ಪರಿಹಾರ ಕಂಡುಕೊಳ್ಳಬೇಕು. ಇಲ್ಲದಿದ್ದಲ್ಲಿ ಸರಾಯಿ ಪ್ರಿಯರು ಅಕ್ರಮ ಮದ್ಯದ ಹಿಂದೆ ಬೀಳುವುದು ನಿಶ್ಚಿತ ಎನ್ನುತ್ತಾರೆ ಸಾರ್ವಜನಿಕರು.

ಬಿಲ್ಲಿಂಗ್‌ ತಂತ್ರಾಶದಿಂದ ತಾಂತ್ರಿಕ ಸಮಸ್ಯೆಯಿಂದ ಮದ್ಯ ಪೂರೈಕೆ ನಿಂತಿದೆ. ಶೀಘ್ರದಲ್ಲಿಯೆ ಇದಕ್ಕೆ ಪರಿಹಾರವನ್ನು ಕಂಡು ಕೊಳ್ಳುವ ನಿಟ್ಟಿನಲ್ಲಿ ರಾಜ್ಯದಲ್ಲಿ ಪ್ರಯತ್ನ ನಡೆದಿದೆ ಅಂತ ಅಂಕೋಲಾ ಅಬಕಾರಿ ಇಲಾಖೆ ನಿರೀಕ್ಷಕ ರಾಹುಲ ನಾಯಕ ತಿಳಿಸಿದ್ದಾರೆ. 
 

click me!