
ನವದೆಹಲಿ (ಜು.05): ಉದಯೋನ್ಮುಖ ಉದ್ಯಮಿಗಳಿಗಾಗಿ ಸ್ಟಾರ್ಟಪ್‌ಗೆ ಪೂರಕವಾದ ವಾತಾವರಣ ಅಭಿವೃದ್ಧಿಪಡಿಸುವಲ್ಲಿ ಗುಜರಾತ್ ಹಾಗೂ ಕರ್ನಾಟಕ ದೇಶದಲ್ಲೇ ಅತ್ಯುತ್ತಮ ಸಾಧಕ ರಾಜ್ಯಗಳಾಗಿ ಹೊರಹೊಮ್ಮಿವೆ. ಕೇಂದ್ರ ಸರ್ಕಾರದ ಉದ್ದಿಮೆ ಉತ್ತೇಜನ ಹಾಗೂ ಆಂತರಿಕ ವ್ಯಾಪಾರ ಇಲಾಖೆ ಈ ಕುರಿತು ರ್ಯಾಂಕಿಂಗ್ ಅನ್ನು ಬಿಡುಗಡೆ ಮಾಡಿದೆ. ಸ್ಟಾರ್ಟಪ್‌ಗೆ ವಿವಿಧ ರಾಜ್ಯಗಳು ಕಲ್ಪಿಸಿರುವ ಪೂರಕ ವಾತಾವರಣವನ್ನು ಆಧರಿಸಿ ಅತ್ಯುತ್ತಮ, ಉನ್ನತ, ನಾಯಕ, ಆಶೋತ್ತರದ ಹಾಗೂ ಉದಯೋನ್ಮುಖ ಎಂಬ ಐದು ವಿಭಾಗಗಳಲ್ಲಿ ರ್ಯಾಂಕಿಂಗ್ ನೀಡಲಾಗಿದೆ.
ಅತ್ಯುತ್ತಮ ವಿಭಾಗದಲ್ಲಿ ಗುಜರಾತ್ ಸತತ ಮೂರನೇ ವರ್ಷ ಪ್ರಥಮ ಸ್ಥಾನ ಪಡೆದಿದ್ದರೆ, ಕರ್ನಾಟಕ 2ನೇ ಸ್ಥಾನ ಗಳಿಸಿದೆ. ಮೇಘಾಲಯ ಮೂರನೇ ಸ್ಥಾನದಲ್ಲಿದೆ. ಮಹಾರಾಷ್ಟ್ರ, ಕೇರಳ, ತೆಲಂಗಾಣ, ದೆಹಲಿಯಂತಹ ರಾಜ್ಯಗಳು ಅತ್ಯುತ್ತಮ ವಿಭಾಗದಲ್ಲಿ ಸ್ಥಾನ ಪಡೆಯುವಲ್ಲಿ ವಿಫಲವಾಗಿವೆ. ಕೇರಳ, ಮಹಾರಾಷ್ಟ್ರ, ತೆಲಂಗಾಣ ರಾಜ್ಯಗಳು ಉನ್ನತ ಸಾಧಕ ರಾಜ್ಯಗಳ ಪಟ್ಟಿಯಲ್ಲಿದ್ದರೆ, ದೆಹಲಿ ಆಶೋತ್ತರದ ಪಟ್ಟಿಯಲ್ಲಿ ಸ್ಥಾನ ಪಡೆದಿದೆ.
ನವೋದ್ಯಮಗಳ ಶೇ.30ರಷ್ಟು ಆದಾಯ ಸಂಶೋಧನೆಗಿರಲಿ: ಸಚಿವ ಅಶ್ವತ್ಥ್ ನಾರಾಯಣ
ಸಾಂಸ್ಥಿಕ ಬೆಂಬಲ, ನಾವೀನ್ಯತೆಗೆ ಉತ್ತೇಜನ, ಮಾರುಕಟ್ಟೆ ಲಭ್ಯತೆ, ಇನ್‌ಕ್ಯುಬೇಷನ್, ಅನುದಾನ ಬೆಂಬಲ ಸೇರಿದಂತೆ 26 ಕ್ರಿಯಾ ಯೋಜನೆಗಳನ್ನು ಆಧರಿಸಿ ರಾಜ್ಯಗಳನ್ನು ಮೌಲ್ಯಮಾಪನಕ್ಕೆ ಒಳಪಡಿಸಲಾಗಿದೆ. ‘ರಾಜ್ಯಗಳ ಸ್ಟಾರ್ಟಪ್ ರ್ಯಾಂಕಿಂಗ್ 2021’ ಹೆಸರಿನ ಈ ಪಟ್ಟಿಯನ್ನು ವಾಣಿಜ್ಯ ಹಾಗೂ ಕೈಗಾರಿಕಾ ಮಂತ್ರಿ ಪೀಯೂಷ್ ಗೋಯಲ್ ಬಿಡುಗಡೆ ಮಾಡಿದ್ದಾರೆ.
ಸ್ಟಾರ್ಟ್‌ಅಪ್‌ಗಳಿಗೆ ಕರ್ನಾಟಕ ಅಗ್ರತಾಣ: ಸ್ಟಾರ್ಟ್‌ಅಪ್ ಆವಿಷ್ಕಾರದಲ್ಲಿ ಕರ್ನಾಟಕ ಮುಂಚೂಣಿಯಲ್ಲಿದ್ದು, ಕೇವಲ ಅಗ್ರ ರಾಜ್ಯಗಳಲ್ಲಿ ಒಂದಾಗಿರದೆ ಸ್ಟಾರ್ಚ್‌ಅಪ್‌ಗಳಿಗೆ ಆಗ್ರ ತಾಣವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಭಿಪ್ರಾಯಪಟ್ಟಿದ್ದಾರೆ. ಗುರುವಾರ ನಗರದ ಕಾನ್ರಾಡ್ ಹೊಟೇಲ್‌ನಲ್ಲಿ ಕರ್ನಾಟಕ ಡಿಜಿಟಲ್ ಎಕಾನಮಿ, ಕ್ಯಾಟಮರನ್ ವೆಂಚರ್ಸ್ ಮತ್ತು ಟಾಟಾ ಡಿಜಿಟಲ್‌ನ ಸಹಭಾಗಿತ್ವದಲ್ಲಿ ನಡೆದ ಇಂಡಿಯಾ ಗ್ಲೋಬಲ್ ಇನ್ನೋವೇಶನ್ ಕನೆಕ್ಟ್ ಉದ್ಘಾಟಿಸಿ ಮಾತನಾಡಿದರು. ಸ್ಟಾರ್ಟ್‌ಅಪ್‌ಗಳನ್ನು ಬೆಂಬಲಿಸುವಲ್ಲಿ ಕರ್ನಾಟಕ ಸರ್ಕಾರವು ಎಷ್ಟು ದೂರ ಬೇಕಾದರೂ ಹೋಗಲು ಸಿದ್ಧವಿದೆ.
ಕೇಂದ್ರ ಸರ್ಕಾರದ ನೀತಿಯಿಂದ ಸ್ಟಾರ್ಟಪ್ ಹೆಚ್ಚಳ: ರಾಜೀವ್ ಚಂದ್ರಶೇಖರ್
ನಾವು ಸ್ಪರ್ಧೆಯ ಬಗ್ಗೆ ಚಿಂತಿಸುವುದಿಲ್ಲ. ಇದು ನಮ್ಮನ್ನು ಮುಂದುವರಿಸುತ್ತದೆ ಮತ್ತು ಬೆಳೆಸುತ್ತದೆ. ನಾವು ಸ್ಪರ್ಧೆಯನ್ನು ವೇಗವರ್ಧಕವಾಗಿ ಪರಿವರ್ತಿಸುತ್ತೇವೆ ಎಂದು ಹೇಳಿದರು. ಭಾರತ ಮತ್ತು ಜಾಗತಿಕ ಮಟ್ಟದಲ್ಲಿ ತಂತ್ರಜ್ಞಾನ ಆವಿಷ್ಕಾರ ಮತ್ತು ಉದ್ಯಮಶೀಲತೆಯ ಕ್ರಿಯಾತ್ಮಕ ಕೇಂದ್ರವಾಗಿ ಕರ್ನಾಟಕ ಪ್ರೊಫೈಲ್‌ಅನ್ನು ಹೆಚ್ಚಿಸುವ ಕೊಡುಗೆ ನೀಡುವ ಮೂಲಕ ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ ಈ ಕಾರ್ಯಕ್ರಮದಲ್ಲಿ ಅವಿಭಾಜ್ಯ ಪಾತ್ರ ವಹಿಸಿದೆ. ಸ್ವಾತಂತ್ರ್ಯ ಸಿಗುವ ಮೊದಲೇ ಕೈಗಾರೀಕರಣ, ಬ್ಯಾಂಕಿಂಗ್ ಅನ್ನು ಬೆಂಬಲಿಸಿದ ಮೈಸೂರು ಮಹಾರಾಜರು ಸ್ಟಾರ್ಟ್‌ಅಪ್ ಕ್ರಾಂತಿಯ ಬೀಜಗಳನ್ನು ಬಿತ್ತಿದರು ಎಂದರು.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.