ಮಾಲ್ಡೀವ್ಸ್ ಹಾಗೂ ಭಾರತದ ನಡುವಿನ ವೈಮನಸ್ಸು ಲಕ್ಷದ್ವೀಪದತ್ತ ಪ್ರವಾಸಿಗರು ಚಿತ್ತ ನೆಡುವಂತೆ ಮಾಡಿದೆ. ಈ ಬೆಳವಣಿಗೆಗಳ ನಡುವೆ ಗುಜರಾತ್ ಮೂಲದ ಹಾಸ್ಪಿಟಲಿಟಿ ಕಂಪನಿಯ ಷೇರಿನ ಬೆಲೆ ಎರಡೇ ದಿನಗಳಲ್ಲಿ ಭಾರೀ ಏರಿಕೆ ಕಂಡಿದೆ.
ಮುಂಬೈ (ಜ.9): ಪ್ರಧಾನಿ ನರೇಂದ್ರ ಮೋದಿ ಭೇಟಿ ಬಳಿಕ ಲಕ್ಷದ್ವೀಪದ ಕುರಿತ ಭಾರತೀಯರ ಆಸಕ್ತಿ ಹೆಚ್ಚಿರುವ ಜೊತೆಗೆ ಷೇರು ಮಾರುಕಟ್ಟೆಯಲ್ಲಿ ಈ ಒಂದು ಷೇರಿನ ಬೆಲೆ ಕೂಡ ಏರಿಕೆ ಕಂಡಿದೆ. ಹೌದು, ಪ್ರಧಾನಿ ಲಕ್ಷದ್ವೀಪದ ಮನಮೋಹಕ ಫೋಟೋಗಳನ್ನು 'ಎಕ್ಸ್' ನಲ್ಲಿ ಹಂಚಿಕೊಂಡ ಬಳಿಕ ನಡೆದ ವಿದ್ಯಮಾನಗಳ ಬಗ್ಗೆ ತಿಳಿದೇ ಇದೆ. ಹಾಗೆಯೇ ಅವೆಲ್ಲವೂ ದೊಡ್ಡ ಮಟ್ಟದಲ್ಲಿ ಸುದ್ದಿಯಾಗುತ್ತಿವೆ ಕೂಡ. ಆದರೆ, ಈ ನಡುವೆ ಸದ್ದೇ ಇಲ್ಲದೆ ಈ ಒಂದು ಷೇರಿನ ಬೆಲೆ ಭಾರೀ ಏರಿಕೆ ಕಂಡಿದೆ. ಅಂದಹಾಗೇ ಮೋದಿ ಲಕ್ಷದ್ವೀಪ ಭೇಟಿಗೂ ಈ ಷೇರಿನ ಬೆಲೆಯಲ್ಲಿ ಭಾರೀ ಏರಿಕೆಯಾಗೋದಕ್ಕೂ ಏನ್ ಸಂಬಂಧ? ಅಂದಹಾಗೇ ಈ ಷೇರು ಯಾವುದು? ಇಲ್ಲಿದೆ ಮಾಹಿತಿ.
ಸ್ಮಾಲ್ ಕ್ಯಾಪ್ ಸ್ಟಾಕ್ ಪ್ರವೇಗ್ (Praveg) ಷೇರುಗಳು ಇಂದು (ಜ.9) ಭಾರೀ ಏರಿಕೆ ಕಂಡಿವೆ. ಈ ಷೇರಿನ ಬೆಲೆ ಶೇ.39ರಷ್ಟು ಏರಿಕೆ ಕಂಡು, 52 ವಾರಗಳ ದಾಖಲೆಯ ಮಟ್ಟವಾದ 1,199ರೂ. ತಲುಪಿದೆ. ಅಂದರೆ ಪ್ರವೇಗ್ ಲಿಮಿಟೆಡ್ ಷೇರಿನ ಬೆಲೆಯಲ್ಲಿ ಶೇ.18.02ರಷ್ಟು ಏರಿಕೆಯಾಗಿದೆ. ಜನವರಿ 5ರಂದು ಈ ಷೇರಿನ ಕ್ಲೋಸಿಂಗ್ ಬೆಲೆ 862.90ರೂ. ಇತ್ತು. ಆದರೆ, ಎರಡೇ ಟ್ರೇಡಿಂಗ್ ಸೀಸನ್ ನಲ್ಲಿಇದು ಶೇ.38.95ರಷ್ಟು ಹೆಚ್ಚಳ ಕಂಡಿದೆ.
ಲಕ್ಷದ್ವೀಪದಲ್ಲಿ ತಾಜ್ ಬ್ರ್ಯಾಂಡ್‌ನ ಎರಡು ಐಷಾರಾಮಿ ಹೋಟೆಲ್ ನಿರ್ಮಿಸಲು ಟಾಟಾ ನಿರ್ಧಾರ
ಪ್ರವೇಗ್ ಲಿಮಿಟೆಡ್ ಏನು?
ಪ್ರವೇಗ್ ಲಿಮಿಟೆಡ್ ಅಹ್ಮದಾಬಾದ್ ಮೂಲದ ಹಾಸ್ಪಿಟಲಿಟಿ ಸಂಸ್ಥೆಯಾಗಿದೆ. ಭಾರತ-ಮಾಲ್ಡೀವ್ಸ್ ನಡುವಿನ ವೈಮನಸ್ಸಿನಿಂದ ಜನ್ಮ ತಾಳಿರುವ 'ಚಲೋ ಲಕ್ಷದ್ವೀಪ' ಆಂದೋಲನದ ಪ್ರಮುಖ ಫಲಾನುಭವಿಯಾಗಿ ಈ ಕಂಪನಿ ಹೊರಹೊಮ್ಮುವ ನಿರೀಕ್ಷೆಯಿಂದ ಇದರ ಷೇರಿನ ಬೆಲೆಯಲ್ಲಿ ಭಾರೀ ಏರಿಕೆಯಾಗಿದೆ. ಪ್ರವೇಗ್ ರಾಣ್ ಆಫ್ ಕಛ್ ಸೇರಿದಂತೆ ಪ್ರವಾಸಿ ತಾಣಗಳಲ್ಲಿ ಲಕ್ಸುರಿ ರೆಸಾರ್ಟ್ ಗಳನ್ನು ನಿರ್ವಹಿಸುತ್ತಿದೆ. ಇತ್ತೀಚೆಗೆ ಈ ಸಂಸ್ಥೆ ಲಕ್ಷದ್ವೀಪದ ಅಗತ್ತಿ ದ್ವೀಪದಲ್ಲಿ 50 ಟೆಂಟ್ ಗಳ ಅಭಿವೃದ್ಧಿ, ಕಾರ್ಯನಿರ್ವಹಣೆಯ ವರ್ಕ್ ಆರ್ಡರ್ ಪಡೆದುಕೊಂಡಿದೆ.
ಲಕ್ಷದ್ವೀಪದಲ್ಲಿರುವ ರೆಸಾರ್ಟ್ ಗಳು ಸ್ಕೂಬಾ ಡೈವಿಂಗ್, ಡೆಸ್ಟಿನೇಷನ್ ವೆಡ್ಡಿಂಗ್, ಕಾರ್ಪೋರೇಟ್ ಕಾರ್ಯಕ್ರಮ ಇತ್ಯಾದಿ ವಾಣಿಜ್ಯ ಸೇವೆಗಳನ್ನು ಒದಗಿಸುತ್ತಿವೆ. ಇನ್ನು ಕಂಪನಿಯ ಇತ್ತೀಚಿನ ಘೋಷಣೆ ಪ್ರಕಾರ ಮೂರು ವರ್ಷಗಳ ವರ್ಕ್ ಆರ್ಡರ್ ಡೆಯಲಾಗಿದೆ. ಹಾಗೆಯೇ ಎರಡು ವರ್ಷಗಳ ವಿಸ್ತರಣೆಗೆ ಕೂಡ ಇದರಲ್ಲಿ ಅವಕಾಶವಿದೆ.
'ಅಗತ್ತಿ ದ್ವೀಪ ಅನೇಕ ಜಲಚರ ಜೀವಿಗಳಿಗೆ ವಾಸಸ್ಥಾನವಾಗಿದೆ. ಅಲ್ಲದೆ, ಇದು ಭಾರತದ ಅತ್ಯಂತ ಸುಂದರವಾದ ಹವಳದ ದಂಡೆಯನ್ನು ಹೊಂದಿದೆ. ಈ ಸ್ಥಳವು ಸಾಂಸ್ಕೃತಿಕ ಸಂಪತ್ತಿನ ತಾಣವೂ ಹೌದು. ದ್ವೀಪದ ಜನರ ಶ್ರೀಮಂತ ಹಾಗೂ ವೈವಿಧ್ಯಮಯ ಸಂಸ್ಕೃತಿಯನ್ನು ಅನೇಕ ಹಬ್ಬಗಳು ಹಾಗೂ ಆಚರಣೆಗಳ ಮೂಲಕ ಈ ಪ್ರದೇಶದಲ್ಲಿ ಪ್ರದರ್ಶಿಸಲಾಗುತ್ತದೆ' ಎಂದು ಪ್ರವೇಗ್ ಸಂಸ್ಥೆ ಮಾಹಿತಿ ನೀಡಿದೆ.
ಆರು ತಿಂಗಳಲ್ಲಿ ದುಪ್ಪಟ್ಟು ಏರಿಕೆ
ಷೇರು ನಿರ್ವಹಣೆಯಲ್ಲಿ ಈಗಾಗಲೇ ಪ್ರವೇಗ್ ಸಂಸ್ಥೆ ಹೆಚ್ಚಳ ಕಂಡಿದೆ. ಕಳೆದ ಆರು ತಿಂಗಳಲ್ಲಿ ಪ್ರವೇಗ್ ಸಂಸ್ಥೆ ಷೇರು ನಿರ್ವಹಣೆಯಲ್ಲಿ ಎರಡು ಪಟ್ಟು ಹೆಚ್ಚಳ ಕಂಡುಬಂದಿದೆ. ಇದಕ್ಕೆ ಕಾರಣ ಹಾಸ್ಪಿಟಲಿಟಿ ಕ್ಷೇತ್ರ ಕೋವಿಡ್ ಬಳಿಕ ಮತ್ತೆ ಚೇತರಿಕೆ ಕಂಡು, ಏರಿಕೆಯ ಹಾದಿಯಲ್ಲಿರೋದು. ಇನ್ನು ಈ ಕ್ಷೇತ್ರದಲ್ಲಿ ಬೇಡಿಕೆಯು ಪೂರೈಕೆಗಿಂತ ಹೆಚ್ಚಿರೋದು ಹಾಗೂ ರೂಮ್ ಬಾಡಿಗೆಗಳಲ್ಲಿ ಹೆಚ್ಚಳವಾಗಿರೋದು ಕೂಡ ಷೇರುಗಳ ಬೆಲೆಗಳಲ್ಲಿ ಏರಿಕೆ ಕಂಡುಬರಲು ಕಾರಣವಾಗಿತ್ತು.
ಪ್ರಧಾನಿ ಭೇಟಿ ನಂತರ MakeMyTripನಲ್ಲಿ ಲಕ್ಷದ್ವೀಪ ಸರ್ಚ್‌ನಲ್ಲಿ 3,400% ಏರಿಕೆ: ನೂತನ ಅಭಿಯಾನ ಪ್ರಾರಂಭ!
ಮಾಲ್ಡೀವ್ಸ್ ಫ್ಲೈಟ್ ಬುಕ್ಕಿಂಗ್ ರದ್ದು
ಇನ್ನು ಮಾಲ್ಡೀವ್ಸ್ ವಿರುದ್ಧ ದೇಶಾದ್ಯಂತ ಟೀಕೆಗಳು ವ್ಯಕ್ತವಾಗುತ್ತಿದ್ದು, ದೇಶದ ಆತ್ಮಗೌರವಕ್ಕೆ ಧಕ್ಕೆಯಾಗಿರುವ ಕಾರಣಕ್ಕೆ ಟ್ರಾವೆಲ್ ಏಜೆನ್ಸಿ ಮಾಲ್ಡೀವ್ಸ್ ಟಿಕೆಟ್ ಬುಕ್ಕಿಂಗ್ ರದ್ದುಗೊಳಿಸಿತ್ತು. ಅಲ್ಲದೆ, ಲಕ್ಷದ್ವೀಪ ಸೇರಿದಂತೆ ಭಾರತದಲ್ಲಿರುವ ದ್ವೀಪಗಳಿಗೆ ಭೇಟಿ ನೀಡುವಂತೆ ಭಾರತೀಯರಿಗೆ ಉತ್ತೇಜನ ನೀಡುತ್ತಿದೆ.
ಮಾಲ್ಡೀವ್ಸ್ ರಾಜಕಾರಣಿಗಳು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಅವಳಹೇನಕಾರಿ ಹೇಳಿಕೆಗಳನ್ನು ನೀಡುವ ಜೊತೆಗೆ ಅವರ ಲಕ್ಷದ್ವೀಪ ಭೇಟಿಯನ್ನು ಅವಹೇಳನ ಮಾಡಿದ್ದರು. ಈ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದೆ. #BoycottMaldives ಹ್ಯಾಶ್ ಟ್ಯಾಗ್ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಆಗಿದೆ. ಈ ನಡುವೆ ಮಾಲ್ಡೀವ್ಸ್ ಸರ್ಕಾರಮೋದಿ ಅವರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಮೂವರು ಸಚಿವರನ್ನು ಅಮಾನತ್ತು ಮಾಡಿದೆ.