
ಸ್ವಂತಕ್ಕೊಂದು ಸೂರು, ಇದು ಮಧ್ಯಮ ವರ್ಗದವರ ಬಹುದೊಡ್ಡ ಕನಸು. ಜೀವನ ಪರ್ಯಂತ ಹೊಟ್ಟೆ, ಬಟ್ಟೆ ಕಟ್ಟಿ, ಒಂದಿಷ್ಟು ಹಣವನ್ನು ಕೂಡಿಹಾಕಿ, ಸ್ವಂತ ಮನೆ ನಿರ್ಮಾಣ ಮಾಡುವವರು ಎಷ್ಟೋ ಜನರಿದ್ದಾರೆ. ಈಗಿನ ದಿನಗಳಲ್ಲಿ ಗೃಹ ಸಾಲ ಸುಲಭವಾಗಿ ಸಿಗುವ ಕಾರಣ ಡೌನ್ ಪೇಮೆಂಟ್ ಗೆ ಹಣ ಹೊಂದಿಸಿಕೊಂಡು ಉಳಿದ ಹಣವನ್ನು ಸಾಲ ಮಾಡಿ ಮನೆ ಖರೀದಿಸುವವರ ಸಂಖ್ಯೆಯೂ ಕಡಿಮೆಯೇನಿಲ್ಲ.
ಮನೆ (House) ಖರೀದಿ ಮಾಡುವುದು ಸುಲಭದ ವ್ಯವಹಾರವಲ್ಲ. ಮನೆ ಖರೀದಿಗೆ ವೇಳೆ ತೆರಿಗೆ (Tax) ಬಗ್ಗೆಯೂ ಆಲೋಚನೆ ಮಾಡ್ಬೇಕಾಗುತ್ತದೆ. ಮನೆ, ತೆರಿಗೆ ಸೇರಿದಂತೆ ಹೆಚ್ಚು ಹಣ ಖರ್ಚು ಮಾಡಲು ನೀವು ಸಿದ್ಧರಿಲ್ಲವೆಂದಾದ್ರೆ ನಿಮ್ಮ ಪತ್ನಿ ಹೆಸರಿನಲ್ಲಿ ನೀವು ಮನೆ ಖರೀದಿ ಮಾಡ್ಬಹುದು. ಗಂಡ – ಹೆಂಡತಿ ಒಂದು ನಾಣ್ಯದ ಎರಡು ಮುಖಗಳಿದ್ದಂತೆ. ಹಾಗಾಗಿ ಪತ್ನಿ (Wife) ಹೆಸರಿನಲ್ಲಿ ನೀವು ಮನೆ ಖರೀದಿ ಮಾಡಿದ್ರೆ ಇಬ್ಬರಿಗೂ ಲಾಭವಿದೆ. ಭಾರತದಲ್ಲಿ ಮಹಿಳೆಯರ ಹೆಸರಿನಲ್ಲಿ ಮನೆ ಖರೀದಿ ಮಾಡಿದ್ರೆ ಕೆಲ ವಿಶೇಷ ರಿಯಾಯಿತಿ ನೀಡಲಾಗುತ್ತದೆ. ನಾವಿಂದು ಪತ್ನಿ ಹೆಸರಿನಲ್ಲಿ ಮನೆ ಖರೀದಿಯಿಂದಾಗುವ ಲಾಭಗಳ ಬಗ್ಗೆ ನಿಮಗೊಂದಿಷ್ಟು ಮಾಹಿತಿ ನೀಡ್ತೇವೆ.
Personal Finance : ಸಾಲ ಮಾಡಿ ಸ್ಕೂಟಿ ಖರೀದಿ ಮಾಡ್ತಿದ್ರೆ ಇದು ನೆನಪಿರಲಿ
ಪತ್ನಿ ಹೆಸರಿನಲ್ಲಿ ಮನೆ ಖರೀದಿ ಮಾಡಿದ್ರೆ ಇದೆ ಈ ಎಲ್ಲ ಲಾಭ :
ತೆರಿಗೆ ಲಾಭ (Tax Benefit): ಮನೆಯನ್ನು ಪತ್ನಿ ಹೆಸರಿನಲ್ಲಿ ಅಥವಾ ಜಂಟಿಯಾಗಿ ಖರೀದಿ ಮಾಡಬಹುದು. ಆಗ ನಿಮಗೆ ಹೆಚ್ಚುವರಿ ತೆರಿಗೆ ಪ್ರಯೋಜನ ಸಿಗುತ್ತದೆ. ತೆರಿಗೆಯಲ್ಲಿ ನೀವು ವಾರ್ಷಿಕವಾಗಿ 1.5 ಲಕ್ಷ ರೂಪಾಯಿಯಿಂದ 2 ಲಕ್ಷ ರೂಪಾಯಿವರೆಗೆ ವಿನಾಯಿತಿ ಪಡೆಯಬಹುದು. 1961 ರ ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 80C ಅಡಿಯಲ್ಲಿ ನೀವು ಅದನ್ನು ಕ್ಲೈಮ್ ಮಾಡಬಹುದು.
ಇಲ್ಲಿ ನೀವು ಗಮನಿಸಬೇಕಾದ ಒಂದು ವಿಷ್ಯವಿದೆ. ಅದೇನೆಂದ್ರೆ ನೀವು ಮತ್ತು ನಿಮ್ಮ ಸಂಗಾತಿ ಅದೇ ಮನೆಯಲ್ಲಿ ವಾಸಿಸಬೇಕು. ಆಗ ಮಾತ್ರ ನಿಮಗೆ ತೆರಿಗೆ ವಿನಾಯಿತಿ ಸಿಗುತ್ತದೆ. ಪತ್ನಿಗೆ ಪ್ರತ್ಯೇಕವಾದ ಆದಾಯದ ಮೂಲವಿದ್ದರೆ, ಮಾಲಿಕತ್ವದ ಪಾಲಿನ ಆದಾರದ ಮೇಲೆ ಕ್ಲೈಮ್ ಕಡಿತವನ್ನು ಪಡೆಯಬಹುದು. ಅಂದ್ರೆ ಪತ್ನಿ ಪಾಲು ಎಷ್ಟಿದೆಯೋ ಅದಕ್ಕೆ ತೆರಿಗೆ ಕಡಿತವಾಗುತ್ತದೆ. ಇನ್ನು ಪತ್ನಿ ಮನೆಯನ್ನು ಬಾಡಿಗೆಗೆ ನೀಡಿದ್ದರೂ ಸಹ ಗೃಹ ಸಾಲದ ಅಸಲು ಮೊತ್ತದ ಮೇಲೆ ಪತ್ನಿ ತೆರಿಗೆ ಕಡಿತವನ್ನು ಪಡೆಯಬಹುದು.
ಸ್ಟ್ಯಾಂಪ್ ಡ್ಯೂಟಿ (Stamp Duty) ಶುಲ್ಕದಲ್ಲಿ ವಿನಾಯಿತಿ : ಬಹುತೇಕ ಜನರು ಇದೇ ಕಾರಣಕ್ಕೆ ಪತ್ನಿ ಹೆಸರಿನಲ್ಲಿ ಮನೆ ಖರೀದಿ ಮಾಡ್ತಾರೆ. ಬಹುತೇಕ ಎಲ್ಲ ರಾಜ್ಯಗಳಲ್ಲೂ ಮಹಿಳೆ ಹೆಸರಿನಲ್ಲಿರುವ ಮನೆಗೆ ಸ್ಟ್ಯಾಂಪ್ ಡ್ಯೂಟಿ ಶುಲ್ಕದಲ್ಲಿ ವಿನಾಯಿತಿ ಸಿಗುತ್ತದೆ. ಸ್ಟ್ಯಾಂಪ್ ಡ್ಯೂಟಿ ಶುಲ್ಕದಲ್ಲಿ ಶೇಕಡಾ ಒಂದರಿಂದ ಎರಡರಷ್ಟನ್ನು ಉಳಿಸಬಹುದು. ರಾಜ್ಯದಿಂದ ರಾಜ್ಯಕ್ಕೆ ಈ ಸ್ಟ್ಯಾಂಪ್ ಡ್ಯೂಟಿ ಶುಲ್ಕ ಭಿನ್ನವಾಗಿದೆ. ಕೆಲ ರಾಜ್ಯಗಳಲ್ಲಿ ಪತಿ ಹಾಗೂ ಪತ್ನಿ ಇಬ್ಬರಿಗೂ ಒಂದೇ ಶುಲ್ಕವಿದೆ. ಮತ್ತೆ ಕೆಲ ರಾಜ್ಯಗಳಲ್ಲಿ ಮಹಿಳೆಯರಿಗೆ ವಿನಾಯಿತಿ ನೀಡಲಾಗಿದೆ.
New Investment : ಮಹಿಳೆಯರಿಗೆ ಲಾಭಕಾರಿ ಈ ಹೂಡಿಕೆ ಯೋಜನೆ
ಗೃಹ ಸಾಲದ ಬಡ್ಡಿ (Home Loan Interest) ಮೇಲೂ ಸಿಗುತ್ತೆ ರಿಯಾಯಿತಿ : ಮನೆ ನಿರ್ಮಾಣ ಆಡ್ಬೇಕು ಇಲ್ಲವೆ ಮನೆ ಖರೀದಿ ಮಾಡ್ಬೇಕು ಎಂದಾಗ ಗೃಹ ಸಾಲದ ಮೊರೆ ಹೋಗ್ತೇವೆ. ಪುರುಷರ ಹೆಸರಿನಲ್ಲಿ ಗೃಹ ಸಾಲ ಪಡೆಯುವುದಕ್ಕಿಂತ ಮಹಿಳೆ ಹೆಸರಿನಲ್ಲಿ ಸಾಲ ಪಡೆದ್ರೆ ಒಳ್ಳೆಯದು. ಯಾಕೆಂದ್ರೆ ಅನೇಕ ಬ್ಯಾಂಕ್ ಪುರುಷರಿಗಿಂತ ಮಹಿಳೆಯರಿಗೆ ಗೃಹ ಸಾಲದ ಬಡ್ಡಿಯಲ್ಲಿ ರಿಯಾಯಿತಿ ನೀಡುತ್ತದೆ. ಶೇಕಡಾ ಒಂದರಷ್ಟು ಬಡ್ಡಿ ರಿಯಾಯಿತಿ ಮಹಿಳೆಯರಿಗೆ ಸಿಗುತ್ತದೆ. ಎಲ್ಲ ಬ್ಯಾಂಕ್ ನಲ್ಲೂ ಇದು ಒಂದೇ ರೀತಿಯಿಲ್ಲ. ಬ್ಯಾಂಕ್ ನಿಂದ ಸಾಲ ಪಡೆಯುವ ಮುನ್ನ ಯಾವ ಬ್ಯಾಂಕ್ ಕಡಿಮೆ ಬಡ್ಡಿ ನೀಡ್ತಿದೆ ಎಂಬುದನ್ನು ನೀವು ಪರಿಶೀಲಿಸಿ. ಜೊತೆಗೆ ಸಿಬಿಲ್ ಸ್ಕೋರ್ ಬಗ್ಗೆ ಗಮನವಿರಲಿ. ಪತ್ನಿ ಹೆಸರಿನಲ್ಲಿ ಸಾಲ ಪಡೆಯುತ್ತಿದ್ದರೆ ಆಕೆ ಸಿಬಿಲ್ ಸ್ಕೋರ್ ಕೂಡ ಮುಖ್ಯವಾಗುತ್ತದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.