Karnataka's Public Debt: ರಾಜ್ಯದ ಸಾಲ 2 ವರ್ಷದಲ್ಲಿ 73 ಸಾವಿರ ಕೋಟಿ ಹೆಚ್ಚಳ!

By Kannadaprabha NewsFirst Published Dec 15, 2021, 8:58 AM IST
Highlights

*2019ರಲ್ಲಿ 2.34 ಲಕ್ಷ ಕೋಟಿ ರು. ಸಾಲ
*2021ರ ಅಂತ್ಯಕ್ಕೆ 3.07 ಕೋಟಿಗೆ ಏರಿಕೆ
*ಕೊರೋನಾ ಸಂಕಷ್ಟವೇ ಇದಕ್ಕೆ ಕಾರಣ: ಸಿಎಜಿ

ವಿಧಾನಸಭೆ(ಡಿ. 15):  ಕೊರೋನಾ ಸಂಕಷ್ಟಮತ್ತಿತರ (Corona Pandemic) ಕಾರಣಗಳಿಂದ ನಿರೀಕ್ಷಿತ ಆದಾಯವಿಲ್ಲದೆ 2019-20 ರಿಂದ 2020-21ರವರೆಗಿನ ಎರಡು ವರ್ಷದ ಅವಧಿಯಲ್ಲಿ ರಾಜ್ಯದ ಸಾಲ ಶೇ.31.38 ರಷ್ಟುಹೆಚ್ಚಾಗಿದೆ ಎಂದು ಸಿಎಜಿ ವರದಿ ಹೇಳಿದೆ. ಮಂಗಳವಾರ ವಿಧಾನಸಭೆಯಲ್ಲಿ ಭಾರತ ಲೆಕ್ಕ ನಿಯಂತ್ರಕ ಮತ್ತು ಮಹಾ ಲೆಕ್ಕ ಪರಿಶೋಧಕರ (Comptroller and Auditor General of India) ಧನ ವಿನಿಯೋಗ ಲೆಕ್ಕಗಳು ಹಾಗೂ ಹಣಕಾಸು ಲೆಕ್ಕಗಳ ವರದಿಯನ್ನು ಮಂಡಿಸಲಾಯಿತು. 

ವರದಿಯಲ್ಲಿ 2019-20ರ ಹಣಕಾಸು ವರ್ಷದ ಅಂತ್ಯದಿಂದ 2020-21ರ ಅಂತ್ಯಕ್ಕೆ 2.34 ಲಕ್ಷ ಕೋಟಿಯಷ್ಟಿದ್ದ ರಾಜ್ಯದ ಸಾಲ 3.07 ಲಕ್ಷ ಕೋಟಿಗೆ ಹೆಚ್ಚಾಗಿತ್ತು. 2.34 ಲಕ್ಷ ಕೋಟಿಯಿಂದ ಎರಡು ವರ್ಷದಲ್ಲೇ 73 ಸಾವಿರ ಕೋಟಿ ರು. ಸಾಲ ಪಡೆಯುವುದು ಹೆಚ್ಚಾಗಿದ್ದು, ಶೇ.31.38 ರಷ್ಟುಹೆಚ್ಚಾಗಿದೆ. ಇದರಲ್ಲಿ ಕೇಂದ್ರದಿಂದ ಸಾಲ ಹಾಗೂ ಮುಂಗಡ ಪಡೆದಿರುವ 13,908 ಕೋಟಿ ರು.ಸೇರಿದೆ.

ಕೊರೋನಾದಿಂದ ಜಿಎಸ್‌ಟಿ ಆದಾಯ ಕುಸಿತ

ಸಾಲದ ಹೊರೆ ಹೆಚ್ಚಾಗಲು ರಾಜ್ಯದ ಜಿಎಸ್‌ಡಿಪಿಯ ಶೇ.5ರವರೆಗೆ ಸಾಲ ಪಡೆಯಲು ಅವಕಾಶ ಮಾಡಿಕೊಂಡಿದ್ದು ಕಾರಣ. ತನ್ಮೂಲಕ ಒಂದೇ ವರ್ಷದಲ್ಲಿ 80 ಸಾವಿರ ಕೋಟಿ ರು.ವರೆಗೆ ಸಾಲ ಮಾಡಿಕೊಳ್ಳಲು ನಿಯಮ ಮಾಡಿಕೊಳ್ಳಲಾಯಿತು. ಆದರೆ ಕೊರೋನಾದಿಂದ ಜಿಎಸ್‌ಟಿ ಆದಾಯ ಕುಸಿದಿದ್ದರಿಂದ ಲಭ್ಯ ಆದಾಯ ಮೂಲಗಳಿಂದ ಆದಾಯ ಹರಿದುಬರಲಿಲ್ಲ.

ಕೇಂದ್ರ ಸರ್ಕಾರದಿಂದ ಜಿಎಸ್‌ಟಿ ಸರ್ಕಾರ 18 ಸಾವಿರ ಕೋಟಿ ರು. ಬಾಕಿ ಉಳಿದಿದ್ದು ಮತ್ತೊಂದು ಸಮಸ್ಯೆಯಾಯಿತು. ಇನ್ನು 2019-20ರಲ್ಲಿ 42,147 ಕೋಟಿ ರು.ಗಳಿಂದ 2020-21ರ ವೇಳೆಗೆ ಜಿಎಸ್‌ಟಿ ಆದಾಯ 37,711 ಕೋಟಿ ರು.ಗೆ ಕುಸಿಯಿತು.ಅಬಕಾರಿ, ನೋಂದಣಿ ಮತ್ತು ಮುದ್ರಾಂಕ ಶುಲ್ಕ ಸೇರಿದಂತೆ ಬಹುತೇಕ ಆದಾಯಗಳು ಕಡಿಮೆಯಾಯಿತು. ಹೀಗಾಗಿ ಬಜೆಟ್‌ನಲ್ಲಿ ತೋರಿಸಿರುವ ಸಾಲಗಳು ಸೇರಿ ಒಟ್ಟು ಸಾಲ 95,506 ಕೋಟಿಗೆ ಹೆಚ್ಚಾಗಿದ್ದು, ರಾಜ್ಯದ ಒಟ್ಟು ಆಂತರಿಕ ಉತ್ಪನ್ನ (ಜಿಡಿಪಿ) ಶೇ.23.06 ರಷ್ಟುಸಾಲ ಹೊಂದಿದಂತಾಗಿದೆ ಎಂದು ಸಿಎಜಿ ವರದಿಯಲ್ಲಿ ತಿಳಿಸಲಾಗಿದೆ.

3500 ವಸತಿ ಪ್ರದೇಶಕ್ಕೆ ಕಂದಾಯ ಗ್ರಾಮ ಸ್ಥಾನಮಾನ: ಅಶೋಕ್‌

ರಾಜ್ಯದಲ್ಲಿ ಲಂಬಾಣಿ ತಾಂಡಾ, ಹಟ್ಟಿಗಳು ಸೇರಿದಂತೆ 3,513 ಜನವಸತಿ ಪ್ರದೇಶಗಳನ್ನು ಕಂದಾಯ ಗ್ರಾಮಗಳಾಗಿ ಪರಿವರ್ತಿಸಲು ಉದ್ದೇಶಿಸಲಾಗಿದ್ದು, ಇವುಗಳಲ್ಲಿ 800 ಜನ ವಸತಿ ಪ್ರದೇಶಗಳನ್ನು ಈಗಾಗಲೇ ಪರಿವರ್ತಿಸಿ ಅಧಿಸೂಚನೆ ಹೊರಡಿಸಲಾಗಿದೆ ಎಂದು ಕಂದಾಯ ಸಚಿವ ಆರ್‌.ಅಶೋಕ್‌ ತಿಳಿಸಿದ್ದಾರೆ. ಮಂಗಳವಾರ ಶೂನ್ಯವೇಳೆಯಲ್ಲಿ ಕಾಂಗ್ರೆಸ್‌ ಸದಸ್ಯ ಪ್ರಕಾಶ್‌ ರಾಥೋಡ್‌ ಅವರು ಲಂಬಾಣಿ ತಾಂಡಾಗಳು ಶಾಲೆ, ರಸ್ತೆ ಸೇರಿದಂತೆ ಮೂಲ ಸೌಕರ್ಯಗಳಿಂದ ವಂಚಿತವಾಗುತ್ತಿವೆ ಎಂದು ಸರ್ಕಾರದ ಗಮನ ಸೆಳೆದಾಗ ಸಚಿವರು ಉತ್ತರ ನೀಡಿದರು.

ಯಾವುದೇ ಜನವಸತಿ ಪ್ರದೇಶಗಳನ್ನು ಕಂದಾಯ ಗ್ರಾಮಗಳಾಗಿ ಪರಿವರ್ತಿಸಿದಾಗ ಮಾತ್ರ ಸರ್ಕಾರ ಅಗತ್ಯ ಮೂಲ ಸೌಕರ್ಯ ಕಲ್ಪಿಸಲು ಸಾಧ್ಯ. ಈ ನಿಟ್ಟಿನಲ್ಲಿ ಜನವಸತಿ ಪ್ರದೇಶಗಳನ್ನು ಗುರುತಿಸಿ ಕಂದಾಯ ಗ್ರಾಮಗಳಾಗಿ ಪರಿವರ್ತಿಸಲು ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯಲಾಗಿದೆ. ಜಿಲ್ಲಾಧಿಕಾರಿಗಳು ಈಗಾಗಲೇ ತಾಂಡಾಗಳು, ಹಟ್ಟಿಗಳು ಸೇರಿ 3513 ಜನವಸತಿ ಪ್ರದೇಶಗಳನ್ನು ಗುರುತಿಸಿದ್ದಾರೆ. ಈ ಪೈಕಿ 800 ಪ್ರದೇಶಗಳನ್ನು ಕಂದಾಯ ಗ್ರಾಮಗಳಾಗಿ ಅಧಿಕೃತ ಅಧಿಸೂಚನೆ ಹೊರಡಿಸಲಾಗಿದೆ ಎಂದರು.

1,472 ಪ್ರದೇಶಗಳ ಸಂಬಂಧ ಪ್ರಾಥಮಿಕ ಅಧಿಸೂಚನೆ ಮಾಡಲಾಗಿದೆ. ಉಳಿದ ಪ್ರದೇಶಗಳಿಗೂ ಅಧಿಸೂಚನೆ ಹೊರಡಿಸಲು ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ. ಒಮ್ಮೆ ತಾಂಡಾಗಳು ಸೇರಿದಂತೆ ಎಲ್ಲ ಜನವಸತಿ ಪ್ರದೇಶಗಳಿಗೆ ಕಂದಾಯ ಗ್ರಾಮದ ಮಾನ್ಯತೆ ಸಿಕ್ಕರೆ ಶಾಲೆಗಳು ಸೇರಿದಂತೆ ಎಲ್ಲಾ ರೀತಿಯ ಮೂಲ ಸೌಕರ್ಯಗಳು ತಾನಾಗೇ ದೊರೆಯಲಿವೆ ಎಂದರು.

ಇದನ್ನೂ ಓದಿ:

1) ಕಾಂಗ್ರೆಸ್‌ ಪಾಲಿಗೆ ಇದು ಬೂಸ್ಟರ್‌ ಡೋಸ್‌ - ನಾಯಕರಿಗೆ ಹೊಸ ಚೈತನ್ಯ

2) Seed Funding: ಸಾಮಾನ್ಯ ವರ್ಗದ ಯುವಕರಿಗೂ ಸ್ವಯಂ ಉದ್ಯೋಗಕ್ಕೆ ‘ಸೀಡ್‌ ಮನಿ’: ಮುರುಗೇಶ್‌ ನಿರಾಣಿ

3) Scrapping Legislative Council: ಗೆದ್ದವರೆಲ್ಲಾ ಹಣ ಖರ್ಚು ಮಾಡಿದ್ದಾರೆ, ಪರಿಷತ್‌ ರದ್ದು ಚರ್ಚೆ ಅಗತ್ಯ: ಈಶ್ವರಪ್ಪ

click me!