Seed Funding: ಸಾಮಾನ್ಯ ವರ್ಗದ ಯುವಕರಿಗೂ ಸ್ವಯಂ ಉದ್ಯೋಗಕ್ಕೆ ‘ಸೀಡ್‌ ಮನಿ’: ಮುರುಗೇಶ್‌ ನಿರಾಣಿ

By Kannadaprabha News  |  First Published Dec 15, 2021, 6:57 AM IST

*ಶೇ.10ರಷ್ಟು ಜನರಲ್‌ ಕೆಟಗರಿಗೆ ಸೌಲಭ್ಯ
*ಆರ್ಥಿಕವಾಗಿ ಹಿಂದುಳಿದ ಜನರಿಗೆ ಸೀಡ್‌ ಫಂಡಿಂಗ್
*ಕೈಗಾರಿಕೆಗೆ ಬಳಸದ 500 ಎಕರೆ ನಿವೇಶನ ವಾಪಸ್‌


ವಿಧಾನ ಪರಿಷತ್‌(ಡಿ. 15): ನಿರುದ್ಯೋಗಿ ಪದವೀಧರರಿಗೂ (Unemployed Graduates) ಸ್ವಯಂ ಉದ್ಯೋಗ ಆರಂಭಿಸಲು ಪರಿಶಿಷ್ಟರಿಗೆ ನೀಡಿದಂತೆ ಸೀಡ್‌ ಮನಿ (Seed Money) ಮತ್ತಿತರ ಸೌಲಭ್ಯ ನೀಡಲು ಆರ್ಥಿಕ ಇಲಾಖೆ ಒಪ್ಪಿಗೆ ನೀಡಿದ್ದು, ಶೀಘ್ರದಲ್ಲಿ ಜಾರಿ ಮಾಡಲಾಗುವುದು ಎಂದು ಬೃಹತ್‌ ಮತ್ತು ಮಧ್ಯಮ ಕೈಗಾರಿಕೆ ಸಚಿವ ಮುರುಗೇಶ್‌ ನಿರಾಣಿ (Murugesh Nirani) ತಿಳಿಸಿದ್ದಾರೆ. ಮಂಗಳವಾರ ಬಿಜೆಪಿಯ ಎಸ್‌.ವಿ. ಸಂಕನೂರು ಅವರ ಪ್ರಶ್ನೆಗೆ ಅವರು ಉತ್ತರಿಸಿದ್ದಾರೆ.

ಶೇ.10 ರಷ್ಟುಸಾಮಾನ್ಯ ವರ್ಗ ಅಥವಾ ಆರ್ಥಿಕವಾಗಿ ಹಿಂದುಳಿದ ಜನರಿಗೆ ಈ ಸೌಲಭ್ಯ ನೀಡಲಾಗುವುದು, ಇದರಿಂದ ಸರ್ಕಾರಕ್ಕೆ ಸುಮಾರು 130 ಕೋಟಿ ರು. ಹೊರೆ ಬೀಳಲಿದೆ. ಮುಖ್ಯಮಂತ್ರಿಗಳು ಸಹ ಇದಕ್ಕೆ ಒಪ್ಪಿಗೆ ನೀಡಿದ್ದಾರೆ ಎಂದು ಹೇಳಿದರು. ಇದಕ್ಕೂ ಮುನ್ನ ಉತ್ತರಿಸಿದ ಸಚಿವ ಎಂ.ಟಿ.ಬಿ. ನಾಗರಾಜ್‌, ಸ್ವಯಂ ಉದ್ಯೋಗ ಆರಂಭಿಸಲು ‘ಉದ್ಯಮಿಯಾಗು, ಉದ್ಯೋಗ ನೀಡು’ ಜಾಗೃತಿ ಕಾರ್ಯಕ್ರಮವನ್ನು ಮುಂದಿನ ದಿನಗಳಲ್ಲಿ ಕಲಬುರಗಿ, ಬೆಳಗಾವಿ, ಮೈಸೂರು ಹಾಗೂ ಮಂಗಳೂರು ಮತ್ತು ತುಮಕೂರಿನಲ್ಲಿ ನಡೆಸಲು ಉದ್ದೇಶಿಸಲಾಗಿದೆ ಎಂದರು. ಅಲ್ಲದೇ, ಇಲಾಖೆಯು ಜಿಲ್ಲಾ ಮಟ್ಟದಲ್ಲಿ 13 ಕಡೆ ನಡೆಸಿದ್ದು, ಉಳಿದ ಜಿಲ್ಲೆಗಳಲ್ಲಿ ಮುಂದಿನ ದಿನಗಳಲ್ಲಿ ಆಯೋಜಿಸಲಾಗುವುದು ಎಂದು ವಿವರಿಸಿದರು.

Latest Videos

undefined

ಕೈಗಾರಿಕೆಗೆ ಬಳಸದ 500 ಎಕರೆ ನಿವೇಶನ ವಾಪಸ್‌

ಕೈಗಾರಿಕೆ ಉದ್ದೇಶಕ್ಕೆ (Industrial Purpose) ಪಡೆದ ಭೂಮಿಯನ್ನು ನಿಗದಿತ ಅವಧಿಯಲ್ಲಿ ಬಳಸದಿದ್ದರೆ ಕಾನೂನು ಪ್ರಕಾರ ಹಿಂಪಡೆಯಲಾಗುವುದು. ಈಗಾಗಲೇ ಸುಮಾರು 500 ಎಕರೆ ವಾಪಸ್‌ ಪಡೆಯಲು ನೋಟಿಸ್‌ ನೀಡಲಾಗಿದೆ ಎಂದು ಬೃಹತ್‌ ಮತ್ತು ಮಧ್ಯಮ ಕೈಗಾರಿಕೆ ಸಚಿವ ಮುರುಗೇಶ ಆರ್‌. ನಿರಾಣಿ ತಿಳಿಸಿದ್ದಾರೆ.

ಮಂಗಳವಾರ ಜೆಡಿಎಸ್‌ (JDS) ಸದಸ್ಯ ಮರಿತಿಬ್ಬೇಗೌಡ ಹಾಗೂ ಕಾಂಗ್ರೆಸ್‌ನ ಮೋಹನ್‌ಕುಮಾರ್‌ ಕೊಂಡಜ್ಜಿ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಕೈಗಾರಿಕೆ ಸ್ಥಾಪನೆಗೆ ಪಡೆದುಕೊಂಡ ಭೂಮಿ ಅಥವಾ ಶೆಡ್‌ಗಳನ್ನು ನಿಗದಿತ ಅವಧಿಯಲ್ಲಿ ಬಳಸಬೇಕು, ಮೂರು ವರ್ಷಗಳಾದರೂ ಯೋಜನೆ ಅನುಷ್ಠಾನಗೊಳಿಸದಿದ್ದರೆ ಅಂತಹ ಭೂಮಿ ಅಥವಾ ಶೆಡ್‌ಗಳನ್ನು ಹಿಂಪಡೆದು ಬೇರೆಯವರಿಗೆ ಹಂಚಲು ಕಾನೂನಿನಲ್ಲಿ ಅವಕಾಶವಿದೆ ಎಂದರು.

ಇದಕ್ಕೂ ಮುನ್ನ ಮಾತನಾಡಿದ ಮರಿತಿಬ್ಬೇಗೌಡ ಅವರು, ಮಂಡ್ಯ ಜಿಲ್ಲೆ ಮದ್ದೂರು ತಾಲ್ಲೂಕಿನ ಸೋಮನಹಳ್ಳಿ ಕೈಗಾರಿಕಾ ಪ್ರದೇಶಕ್ಕೆ ಭೂ ಸ್ವಾಧೀನ ಪಡಿಸಿಕೊಂಡಿರುವ ಜಮೀನುಗಳ ಪೈಕಿ ಸೋಮನಹಳ್ಳಿ ಗ್ರಾಮದ ಸರ್ವೆ ನ. 20ರಲ್ಲಿನ 3-16 ಎಕರೆ ಜಮೀನಿನಲ್ಲಿ ಅಕ್ರಮವಾಗಿ ಖಾಸಗಿ ಮಾಲೀಕತ್ವದ ಬಡಾವಣೆಗಳನ್ನು ನಿರ್ಮಿಸಲಾಗಿದೆ. ಆದರೆ ಕೆಐಎಡಿಬಿ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ.  ಕೈಗಾರಿಕಾ ಪ್ರದೇಶಗಳಲ್ಲಿ ಮೂರ್ನಾಲ್ಕು ನಿವೇಶನಗಳನ್ನು ಅನೇಕ ವರ್ಷಗಳ ಹಿಂದೆಯೇ ಪಡೆದಿದ್ದರೂ ಈವರೆಗೆ ಕಾರ್ಯಾರಂಭವಾಗಿಲ್ಲ. ಮೂರು ವರ್ಷದೊಳಗೆ ಯೋಜನೆ ಅನುಷ್ಠಾನಗೊಳಿಸದೇ ಇದ್ದರೂ ಈವರೆಗೆ ಈ ನಿವೇಶನಗಳನ್ನು ಹಿಂಪಡೆದಿಲ್ಲ ಎಂದು ಆರೋಪಿಸಿದರು. ಇದಕ್ಕೆ ಉತ್ತರಿಸಿದ ಸಚಿವ ನಿರಾಣಿ ಅವರು, ಈ ಬಗ್ಗೆ ತಾವು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಮುಂದಿನ ವಾರ ಬಿಟ್‌ಕಾಯಿನ್‌ ಪ್ರಸ್ತಾಪ: ಪ್ರಿಯಾಂಕ್‌

‘ಬಿಟ್‌ ಕಾಯಿನ್‌ ವಿಷಯದಲ್ಲಿ ಯಾವುದೇ ಅಡ್ಜೆಸ್ಟ್‌ಮೆಂಟೂ ಇಲ್ಲ. ಹಿಂದೆ ಸರಿಯೋ ಪ್ರಶ್ನೆಯೂ ಇಲ್ಲ. ಮುಂದಿನ ವಾರ ಸದನದಲ್ಲಿ ಬಿಟ್‌ ಕಾಯಿನ್‌ ವಿಷಯ ಪ್ರಸ್ತಾಪಿಸುತ್ತೇವೆ’ ಎಂದು ಕಾಂಗ್ರೆಸ್‌ ಶಾಸಕ ಪ್ರಿಯಾಂಕ ಖರ್ಗೆ ತಿಳಿಸಿದ್ದಾರೆ. ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಸತ್ಯಾಂಶ ಮುಚ್ಚಿಹಾಕಲು ಸರ್ಕಾರ ಪ್ರಯತ್ನ ಮಾಡುತ್ತಿದೆ. ನಾವು ಮೊದಲಿನಿಂದಲೂ ತನಿಖೆ ಆಗಬೇಕು ಎನ್ನುತ್ತಿದ್ದೇವೆ. ಹೊಂದಾಣಿಕೆ ರಾಜಕಾರಣವನ್ನು ಕಾಂಗ್ರೆಸ್‌ ಮಾಡಿಲ್ಲ’ ಎಂದರು.‘ಮುಂದಿನ ವಾರ ಬಿಟ್‌ ಕಾಯಿನ್‌ ವಿಚಾರ ಚರ್ಚೆಗೆ ಬರುತ್ತದೆ. ಸಿಎಲ್‌ಪಿ ನಾಯಕರಾದ ಸಿದ್ದರಾಮಯ್ಯ ವಿಷಯ ಚರ್ಚೆಗೆ ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ’ ಎಂದು ಮಾಹಿತಿ ನೀಡಿದರು.

ಇದನ್ನೂ ಓದಿ:

1) Siddaramaiah Vs Somanna: 'ಕಾಂಗ್ರೆಸ್ ಮಾಡಿದ ಪಾಪದ ಕೊಳೆಯನ್ನು ತೊಳೆಯುತ್ತಿದ್ದೇವೆ'

2) Scrapping Legislative Council: ಗೆದ್ದವರೆಲ್ಲಾ ಹಣ ಖರ್ಚು ಮಾಡಿದ್ದಾರೆ, ಪರಿಷತ್‌ ರದ್ದು ಚರ್ಚೆ ಅಗತ್ಯ: ಈಶ್ವರಪ್ಪ

3) Siddaramaiah Vs Somanna: 'ಕಾಂಗ್ರೆಸ್ ಮಾಡಿದ ಪಾಪದ ಕೊಳೆಯನ್ನು ತೊಳೆಯುತ್ತಿದ್ದೇವೆ'

click me!