
ಬೆಂಗಳೂರು (ಮಾ.07): ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿದ ರಾಜ್ಯ ಬಜೆಟ್ ಅತ್ಯಂತ ನಿರಾಶಾದಾಯಕ, ಅಭಿವೃದ್ಧಿ ಶೂನ್ಯ, ದೂರದೃಷ್ಟಿ ರಹಿತ ಅಡ್ಡಕಸುಬಿ ಬಜೆಟ್. ಇದು ಕೇವಲ ಮುಸ್ಲಿಮರ ಓಟಿನ ಋಣ ತೀರಿಸುವ ಬಜೆಟ್ ಆಗಿದೆ ಎಂದು ವಿಪಕ್ಷ ನಾಯಕ ಆರ್. ಅಶೋಕ ವಾಗ್ದಾಳಿ ಮಾಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿಕೊಂಡಿರುವ ಆರ್. ಅಶೋಕ್ ಅವರು, ಸಿದ್ದರಾಮಯ್ಯನವರು ಔಟ್‌ಗೋಯಿಂಗ್ ಮುಖ್ಯಮಂತ್ರಿ (Outgoing CM) ಎಂದು ಜನಸಾಮಾನ್ಯರ ಮನಸ್ಸಿನಲ್ಲಿ ಗಟ್ಟಿಯಾದ ಅಭಿಪ್ರಾಯ ಮೂಡಿರುವುದರಿಂದ, ಈ ಬಜೆಟ್ ನಿಂದ ಕನ್ನಡಿಗರಿಗೆ ಹೆಚ್ಚಿನ ನಿರೀಕ್ಷೆಗಳೇನೂ ಇರಲಿಲ್ಲ. ಆದರೂ ತಮ್ಮ ಕಡೆಯ ಬಜೆಟ್ ನಲ್ಲಿ ಒಂದಿಷ್ಟಾದರೂ ಜನಪರ ಯೋಜನೆಗಳನ್ನ ಘೋಷಿಸುತ್ತಾರೆ ಎಂದು ಎದುರು ನೋಡುತ್ತಿದ್ದ ಜನರಿಗೆ ಈ ಬಜೆಟ್ ಸಂಪೂರ್ಣ ನಿರಾಸೆ ಮೂಡಿಸಿದೆ. ಇದು ಕೇವಲ 'ಬೊಗಳೆರಾಮಯ್ಯ ಬಜೆಟ್'.
ಸಾಧನೆಯ ಬಲದಿಂದಾಗಲಿ, ದಿಟ್ಟ ನಾಯಕತ್ವದಿಂದಾಗಲಿ, ಅಹಿಂದ ನಾಮ ಜಪದಿಂದಾಗಲಿ ಚುನಾವಣೆಯನ್ನು ಎದುರಿಸಲು ಅಸಾಧ್ಯವೆಂದು ಗೊತ್ತಾದಾಗ ಅವಸರದಲ್ಲಿ ಐದು ಗ್ಯಾರೆಂಟಿ ಯೋಜನೆಗಳನ್ನು ಘೋಷಣೆ ಮಾಡಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂತು. ಈ ಗ್ಯಾರೆಂಟಿಗಳು ಬಡವರ ಮೇಲಿನ ಪ್ರೀತಿ ಇಲ್ಲವೇ ಕಾಳಜಿಯಿಂದ ಘೋಷಿಸಿದ್ದಲ್ಲ, ಇದರ ಹಿಂದಿನ ದುರುದ್ದೇಶ ಜನರನ್ನ ದಿಕ್ಕು ತಪ್ಪಿಸಿ, ಮತಗಳಿಸಿ ಅಧಿಕಾರಕ್ಕೆ ಏರುವುದು ಮಾತ್ರ ಆಗಿತ್ತು. ಆದರೆ, ಅಧಿಕಾರಕ್ಕೆ ಬಂದ ಮೇಲೆ ಬಿಸಿ ತುಪ್ಪದಂತಾಗಿರುವ ಗ್ಯಾರೆಂಟಿಗಳನ್ನು ಮುಂದುವರೆಸಲು ಆಗದೆ ನಿಲ್ಲಿಸಲೂ ಆಗದೆ ಕಾಂಗ್ರೆಸ್ ಸರ್ಕಾರ ಅಡಕತ್ತರಿಯಲ್ಲಿ ಸಿಕ್ಕಿಹಾಕಿಕೊಂಡಿದೆ.
ಇದನ್ನೂ ಓದಿ: ರಾಜಧಾನಿ ಅಭಿವೃದ್ಧಿಗೆ 7,000 ಕೋಟಿ ರೂ, ಬ್ರ್ಯಾಂಡ್ ಬೆಂಗಳೂರು ಹೆಸರಿನಲ್ಲಿ ಬಂಪರ್ ಕೊಡುಗೆ!
ಕೆಡಿಪಿ ಅಂಕಿ-ಅಂಶದ ಪ್ರಕಾರ, ಕಳೆದ ವರ್ಷದ ಅಂದರೆ 2024-25 ನೇ ಬಜೆಟ್ ವರ್ಷದ 10 ತಿಂಗಳಲ್ಲಿ ಶೇ.62% ರಷ್ಟು ಮಾತ್ರ ಪ್ರಗತಿ ಸಾಧಿಸಲಾಗಿದೆ. ಕಳೆದ ವರ್ಷದ ಅನುದಾನವೇ ಖರ್ಚು ಆಗದೆ ಇರುವಾಗ ಈಗ ಇನ್ನೊಂದು ಬಜೆಟ್ ಮಂಡಿಸಿದರೆ ಪ್ರಯೋಜನವೇನು? ಐದನೇ ಕ್ಲಾಸು ಪಾಸಾಗದ ವಿದ್ಯಾರ್ಥಿ ಆರನೇ ಕ್ಲಾಸಿನ ಪರೀಕ್ಷೆಗೆ ಕಟ್ಟಿದರೆ ಏನು ಪ್ರಯೋಜನ? ಹಾಗಾಗಿದೆ ಸಿದ್ದರಾಮಯ್ಯ ನವರ ಬಜೆಟ್ ನ ಕಥೆ-ವ್ಯಥೆ. ಇದು ಕೇವಲ ನಾಮಕಾವಸ್ತೆ ಬಜೆಟ್. ಪಾಪರ್ ಸರ್ಕಾರದ ಪಾಪರ್ ಬಜೆಟ್. ನಿವೃತ್ತಿ ಆಗುತ್ತಿರುವ ಮುಖ್ಯಮಂತ್ರಿಗಳ ನಿರ್ಗಮನದ ಬಜೆಟ್. ಇದರಿಂದ ಕರ್ನಾಟಕಕ್ಕೆ, ಕನ್ನಡಿಗರಿಗೆ ನಯಾಪೈಸೆ ಉಪಯೋಗವಿಲ್ಲ.
ಕರ್ನಾಟಕದ ಇತಿಹಾಸದಲ್ಲಿ ಒಂದೇ ವರ್ಷದಲ್ಲಿ ಅತ್ಯಧಿಕ ಅಂದರೆ 1,16,170 ಕೋಟಿ ರೂ. ಸಾಲ ಮಾಡಲಾಗಿದೆ. ಇದು ಮುಖ್ಯಮಂತ್ರಿ ಸಿದ್ದರಾಮಯ್ಯನವರ ದಾಖಲೆಯಾಗಿದೆ. ಒಟ್ಟು ಸಾಲದ ಪ್ರಮಾಣ 7,81,095 ಕೋಟಿ ರೂ. ಗೆ ಏರಿದೆ. ಅಬಕಾರಿ ಇಲಾಖೆಗೆ 60,000 ಕೋಟಿ ರೂ. ಗುರಿ ನೀಡಿ, ಹೊಸ ಬಾರ್‌ಗಳನ್ನು ಘೋಷಿಸಲಾಗಿದೆ. ಇದನ್ನು ಕಾಂಗ್ರೆಸ್ ಶಾಸಕರ ಬಾಯಿ ಮುಚ್ಚಿಸಲು ಮಾಡಲಾಗಿದೆ. ಇದರಿಂದ 40,000 ಕೋಟಿ ರೂ. ಆದಾಯ ಬರಲಿದೆ. ಅನ್ನಭಾಗ್ಯ ಹೋಗಿ ಕುಡುಕರ ಭಾಗ್ಯ ಬಂದಿದೆ. 4-5 ಸಾವಿರ ಕೋಟಿ ರೂ. ಆದಾಯ ಹೆಚ್ಚಿಸಲು ಈ ಕ್ರಮ ವಹಿಸಲಾಗಿದೆ ಎಂದರು.
ಇದನ್ನೂ ಓದಿ: Karnataka Budget 2025 live: ಮುಸ್ಲಿಮರಿಗೆ ಶೇ.20ರಷ್ಟು ಭೂಮಿ ಮೀಸಲು
ಮುಸ್ಲಿಮರ ಬಜೆಟ್: ಇದು ಕೇವಲ ಮುಸ್ಲಿಮರ ಬಜೆಟ್. ಮುಸ್ಲಿಮರ ಜಟಕಾ ಗಾಡಿ ಏರಿಕೊಂಡು ಸಿದ್ದರಾಮಯ್ಯ ಪ್ರಯಾಣ ಮಾಡಿದ್ದಾರೆ. ಅಲ್ಪಸಂಖ್ಯಾತರ ಕಾಲೋನಿ ಅಭಿವೃದ್ಧಿಗೆ 1,000 ಕೋಟಿ ರೂ. ನೀಡಲಾಗಿದೆ. ವಕ್ಫ್ ಬೋರ್ಡ್ ಮುಚ್ಚಿ ಎಂದರೆ, ಅದಕ್ಕೆ 150 ಕೋಟಿ ರೂ. ನೀಡಿದ್ದಾರೆ. ಮುಸ್ಲಿಮರ ವಿದೇಶ ಪ್ರಯಾಣಕ್ಕೆ 30 ಲಕ್ಷ ರೂ. ನೀಡಲಾಗುತ್ತದೆ. ಆದರೆ ಗುರುದ್ವಾರಗಳಿಗೆ ಕೇವಲ 2 ಕೋಟಿ ರೂ. ನೀಡಲಾಗಿದೆ. ಮುಸ್ಲಿಮರ ಓಟಿನ ಋಣ ತೀರಿಸಲು ಈ ಬಜೆಟ್ ನೀಡಲಾಗಿದೆ ಎಂದು ದೂರಿದರು.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.