ಬರೀ 1 ಪೈಸೆ ಬಿಡ್‌ ಸಲ್ಲಿಸಿ ತಮಿಳುನಾಡು ಸರ್ಕಾರದ 755 ಕೋಟಿಯ ಗೋಲ್ಡ್‌ ರಿಂಗ್‌ ಒಪ್ಪಂದ ಗಿಟ್ಟಿಸಿಕೊಂಡ Joyalukkas

Published : Aug 22, 2026, 10:56 AM IST
Thaimaman Thanga Mothiram Thittam

ಸಾರಾಂಶ

ತಮಿಳುನಾಡು ಸರ್ಕಾರದ 'ತಾಯ್ಮಾಮನ್ ತಂಗ ಮೊದಿರಂ ತಿಟ್ಟಂ' ಯೋಜನೆಯಡಿ, ಜೋಯಾಲುಕ್ಕಾಸ್ ಸಂಸ್ಥೆಯು ಪ್ರತಿ ಚಿನ್ನದ ಉಂಗುರಕ್ಕೆ ಕೇವಲ 1 ಪೈಸೆ ಸೇವಾ ಶುಲ್ಕದ ಬಿಡ್ ಸಲ್ಲಿಸಿ 755 ಕೋಟಿ ರೂ. ಮೌಲ್ಯದ ಟೆಂಡರ್‌ನ ಶೇ. 70ರಷ್ಟು ಭಾಗವನ್ನು ಪಡೆದುಕೊಂಡಿದೆ.

ಚೆನ್ನೈ (ಆ.22): ತಮಿಳುನಾಡು ಸರ್ಕಾರದ 'ತಾಯ್ಮಾಮನ್ ತಂಗ ಮೊದಿರಂ ತಿಟ್ಟಂ' ಯೋಜನೆಯಡಿ ನವಜಾತ ಶಿಶುಗಳಿಗೆ ವಿತರಿಸಲು ಕರೆಯಲಾಗಿದ್ದ ಬೃಹತ್ ಟೆಂಡರ್‌ನಲ್ಲಿ ಪ್ರಮುಖ ಜ್ಯುವೆಲ್ಲರಿ ಸಂಸ್ಥೆ ಜೋಯಾಲುಕ್ಕಾಸ್ ಅಭೂತಪೂರ್ವ ಬಿಡ್ ಸಲ್ಲಿಸುವ ಮೂಲಕ ಗಮನ ಸೆಳೆದಿದೆ. ಬರೋಬ್ಬರಿ 755 ಕೋಟಿ ರೂಪಾಯಿ ಅಂದಾಜು ಮೌಲ್ಯದ ಈ ಯೋಜನೆಯಲ್ಲಿ, ಸಂಸ್ಥೆಯು ಪ್ರತಿ ಉಂಗುರಕ್ಕೆ ಕೇವಲ 1 ಪೈಸೆ (0.01 ರೂ.) ಸೇವಾ ಶುಲ್ಕ (Service Charge) ವಿಧಿಸುವ ಮೂಲಕ ಅತಿ ಕಡಿಮೆ ಬಿಡ್‌ದಾರರಾಗಿ ಹೊರಹೊಮ್ಮಿದೆ. ಒಟ್ಟು 11 ಪ್ರಮುಖ ಚಿನ್ನದ ವ್ಯಾಪಾರಿ ಸಂಸ್ಥೆಗಳು ಭಾಗವಹಿಸಿದ್ದ ಈ ಕಾಂಟ್ರಾಕ್ಟ್‌ನ ಶೇ. 70 ರಷ್ಟು ಭಾಗವನ್ನು ಜೋಯಾಲುಕ್ಕಾಸ್ ಪಡೆದುಕೊಂಡಿದೆ.

ಏನಿದು 'ತಾಯ್ಮಾಮನ್ ತಂಗ ಮೊದಿರಂ ತಿಟ್ಟಂ' ಯೋಜನೆ?

ಟಿವಿಕೆ ಪಕ್ಷ ನೀಡಿದ ಆಶ್ವಾಸನೆಯಂತೆ, ತಮಿಳುನಾಡು ವೈದ್ಯಕೀಯ ಸೇವೆಗಳ ನಿಗಮ (TNMSC) ಅನುಷ್ಠಾನಗೊಳಿಸುತ್ತಿರುವ ಈ ಯೋಜನೆಯಡಿ, ಸರ್ಕಾರಿ ಆಸ್ಪತ್ರೆಗಳಲ್ಲಿ ಜನಿಸುವ ಪ್ರತಿಯೊಂದು ಮಗುವಿಗೂ 1 ಗ್ರಾಂ ತೂಕದ, 22 ಕ್ಯಾರಟ್‌ನ ಚಿನ್ನದ ಉಂಗುರವನ್ನು ಉಚಿತವಾಗಿ ನೀಡಲಾಗುತ್ತದೆ. ಪ್ರತಿ ಉಂಗುರದ ಮೇಲೆ ತಮಿಳುನಾಡು ಸರ್ಕಾರದ ಅಧಿಕೃತ ಲಾಂಛನ ಮತ್ತು ಮುಖ್ಯಮಂತ್ರಿಗಳ ಚಿತ್ರವನ್ನು ಕಡ್ಡಾಯವಾಗಿ ಕೆತ್ತಿರಬೇಕು. ಒಟ್ಟು 4,41,667 ಉಂಗುರಗಳ ಪೂರೈಕೆಗಾಗಿ ಈ ಟೆಂಡರ್ ಕರೆಯಲಾಗಿತ್ತು. ಮೊದಲ ಹಂತದಲ್ಲಿ 4 ತಿಂಗಳ ಅವಧಿಗೆ ಅಗತ್ಯವಿರುವ 1,28,499 ಉಂಗುರಗಳನ್ನು ಅರ್ಹ ಫಲಾನುಭವಿಗಳಿಗೆ ವಿತರಿಸಲಾಗುತ್ತದೆ.

70:30 ಅನುಪಾತದಲ್ಲಿ ಹಂಚಿಕೆ

ಸೋಶಿಯಲ್‌ ಮೀಡಿಯಾದಲ್ಲಿ ಕೇವಲ 1 ಪೈಸೆಯ ಬಿಡ್ ಮೊತ್ತ ದೊಡ್ಡ ಮಟ್ಟದ ಚರ್ಚೆ ಮತ್ತು ರಾಜಕೀಯ ವಾಗ್ದಾಳಿಗೆ ಕಾರಣವಾದ ಹಿನ್ನೆಲೆಯಲ್ಲಿ, ಶುಕ್ರವಾರ ತಡರಾತ್ರಿ ಸ್ಪಷ್ಟನೆ ನೀಡಿರುವ ತಮಿಳುನಾಡು ಆರೋಗ್ಯ ಇಲಾಖೆ,'ತಮಿಳುನಾಡು ಟೆಂಡರ್ ಪಾರದರ್ಶಕತೆ ಕಾಯ್ದೆ ಮತ್ತು ನಿಯಮಾವಳಿಗಳ ಪ್ರಕಾರ, ಅತಿ ಕಡಿಮೆ ಬಿಡ್ (L1) ಸಲ್ಲಿಸಿದ ಜೋಯಾಲುಕ್ಕಾಸ್ ಸಂಸ್ಥೆಯ ದರಕ್ಕೆ (1 ಪೈಸೆ ಸೇವಾ ಶುಲ್ಕ) ಕಾಂಟ್ರಾಕ್ಟ್ ಒಪ್ಪಿಕೊಳ್ಳಲು ಉಳಿದ 10 ಸಂಸ್ಥೆಗಳಿಗೆ ಆಫರ್ ನೀಡಲಾಗಿತ್ತು. ಆದರೆ, 'ಕಲ್ಯಾಣ್ ಜ್ಯುವೆಲ್ಲರ್ಸ್' ಮಾತ್ರ ಈ ದರಕ್ಕೆ ಉಂಗುರ ಪೂರೈಸಲು ಸಮ್ಮತಿಸಿತು. ಹೀಗಾಗಿ ಶೇ. 70 ರಷ್ಟು ಕಾಂಟ್ರಾಕ್ಟ್ ಅನ್ನು ಜೋಯಾಲುಕ್ಕಾಸ್‌ಗೆ ಹಾಗೂ ಶೇ. 30 ರಷ್ಟು ಕಾಂಟ್ರಾಕ್ಟ್ ಅನ್ನು ಕಲ್ಯಾಣ್ ಜ್ಯುವೆಲ್ಲರ್ಸ್‌ಗೆ ಹಂಚಿಕೆ ಮಾಡಲಾಗಿದೆ," ಎಂದು ಸ್ಪಷ್ಟಪಡಿಸಿದೆ.

ಬಿಡ್ ದರಗಳ ಪಟ್ಟಿ

ಚಿನ್ನದ ಚಾಲ್ತಿ ದರವನ್ನು ಹೊರತುಪಡಿಸಿ, ಉಂಗುರ ತಯಾರಿಕೆ ವೆಚ್ಚ (Making charges), ವಿಮೆ, ಸಾಗಾಣಿಕೆ ಮತ್ತು ಬಿಐಎಸ್ (BIS) ಹಾಲ್‌ಮಾರ್ಕಿಂಗ್ ಒಳಗೊಂಡಂತೆ ಜೋಯಾಲುಕ್ಕಾಸ್ 0.01 ರೂ. ಬಿಡ್ ಮಾಡಿತ್ತು.

  • ಜೋಯಾಲುಕ್ಕಾಸ್: 0.01 ರೂ. (L1)
  • ಜಿಆರ್‌ಟಿ ಜ್ಯುವೆಲ್ಲರ್ಸ್ (GRT): 410.97 ರೂ. (L2)
  • ವುಮ್ಮಿಡಿ ಬಂಗಾರು ಜ್ಯುವೆಲ್ಲರ್ಸ್: 822.97 ರೂ. (L3)

ಲಾಭದ ಉದ್ದೇಶವಲ್ಲ, ಜನಕಲ್ಯಾಣ ಸೇವೆಯಷ್ಟೇ: ಜೋಯಾಲುಕ್ಕಾಸ್

ಈ ಬಗ್ಗೆ ಸ್ಪಷ್ಟನೆ ನೀಡಿರುವ ಜೋಯಾಲುಕ್ಕಾಸ್ ಸಂಸ್ಥೆಯ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಜೋಯ್ ಆಲುಕ್ಕಾಸ್, "ನಾವು ಯಾವುದೇ ವಾಣಿಜ್ಯ ಲಾಭದ ಉದ್ದೇಶದಿಂದ ಈ ನಿರ್ಧಾರ ತೆಗೆದುಕೊಂಡಿಲ್ಲ. ಸರ್ಕಾರದ ಜನಕಲ್ಯಾಣ ಕಾರ್ಯಕ್ರಮಕ್ಕೆ ಬೆಂಬಲ ನೀಡುವ ಉದ್ದೇಶದಿಂದ ಕನಿಷ್ಠ ಲಾಭಾಂಶದ (Low-margin commitment) ಆಧಾರದಲ್ಲಿ ಈ ಬಿಡ್ ಸಲ್ಲಿಸಿದ್ದೇವೆ. ರಾಜ್ಯಾದ್ಯಂತ ಸಾವಿರಾರು ಬಡ ಕುಟುಂಬಗಳನ್ನು ತಲುಪುವ ಯೋಜನೆಗೆ ಸಹಕರಿಸುವುದು ನಮಗೆ ಸಿಕ್ಕ ಅವಕಾಶ," ಎಂದು ಹೇಳಿದ್ದಾರೆ.

ರಾಜಕೀಯ ಆರೋಪ - ಪ್ರತ್ಯಾರೋಪ

ಈ ಟೆಂಡರ್ ಪ್ರಕ್ರಿಯೆಯು ರಾಜ್ಯದಲ್ಲಿ ರಾಜಕೀಯ ಕಾಳಗಕ್ಕೂ ಕಾರಣವಾಗಿದೆ. ವಿರೋಧ ಪಕ್ಷ AIADMK ಯ ಐಟಿ ವಿಭಾಗವು 'X' (ಟ್ವಿಟರ್) ನಲ್ಲ ಪೋಸ್ಟ್ ಮಾಡಿ, ಜೋಯಾಲುಕ್ಕಾಸ್‌ನ ಈ 1 ಪೈಸೆ ಬಿಡ್ ಅನುಮಾನಾಸ್ಪದವಾಗಿದೆ ಎಂದು ಆರೋಪಿಸಿದೆ. ಅಲ್ಲದೆ, ಜೋಯಾಲುಕ್ಕಾಸ್‌ನ ಸಹೋದರ ಸಂಸ್ಥೆಯಾದ 'ಜೋಸ್ ಆಲುಕ್ಕಾಸ್'ಗೆ ನಟ, ತಮಿಳಗ ವೆಟ್ರಿ ಕಳಗಂ (TVK) ಅಧ್ಯಕ್ಷ 'ವಿಜಯ್' ಬ್ರ್ಯಾಂಡ್ ಅಂಬಾಸಿಡರ್ ಆಗಿರುವುದನ್ನು ಉಲ್ಲೇಖಿಸಿ ರಾಜಕೀಯವಾಗಿ ಲಿಂಕ್ ಮಾಡಲು ಯತ್ನಿಸಿದೆ.

ಇನ್ನೊಂದೆಡೆ, ಡಿಎಂಕೆ (DMK) ಮಾಜಿ ಶಾಸಕ ಡಾ. ಎಳಿಲನ್ ನಾಗನಾಥನ್ ಮಾತನಾಡಿ, ಗುಣಮಟ್ಟದ ಔಷಧಿ ಪೂರೈಕೆಗೆ ಹೆಸರುವಾಸಿಯಾಗಿದ್ದ ತಮಿಳುನಾಡು ವೈದ್ಯಕೀಯ ಸೇವೆಗಳ ನಿಗಮವು (TNMSC), ಈ ಚಿನ್ನದ ಪೂರೈಕೆ ಯೋಜನೆಯಿಂದಾಗಿ ತನ್ನ ಘನತೆಯನ್ನು ಕಳೆದುಕೊಳ್ಳುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಗುಣಮಟ್ಟ ಪರಿಶೀಲನೆ ಮತ್ತು ನಿಯಮ

ಯೋಜನೆಯ ನಿಯಮಾವಳಿಯಂತೆ, ಪೂರೈಸಲಾದ ಉಂಗುರಗಳ ಬ್ಯಾಚ್ (Batch) ಯಾವುದೇ ಗುಣಮಟ್ಟದ ಪರೀಕ್ಷೆಯಲ್ಲಿ ವಿಫಲವಾದರೆ, TNMSC ಕಾಂಟ್ರಾಕ್ಟ್ ಮೌಲ್ಯದ ಶೇ. 10 ರಷ್ಟು ದಂಡ ವಿಧಿಸುವುದಲ್ಲದೆ, ಮೂಲ ಬೆಲೆ ಅಥವಾ ಅಂದಿನ ಚಾಲ್ತಿ ಬೆಲೆಯಲ್ಲಿ ಯಾವುದು ಹೆಚ್ಚೋ ಆ ದರದಲ್ಲಿ ಆ ಉಂಗುರಗಳನ್ನು ಕಡ್ಡಾಯವಾಗಿ ಕಂಪನಿಯೇ ಮರುಖರೀದಿಸುವ (Mandatory buyback) ಕಠಿಣ ಷರತ್ತು ವಿಧಿಸಿದೆ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

AI ಕಡೆಗೆ Apple ಬಿಗ್ ಶಿಫ್ಟ್; 200ಕ್ಕೂ ಹೆಚ್ಚು ಉದ್ಯೋಗಿಗಳಿಗೆ ಗೇಟ್‌ಪಾಸ್!
ಲೀಟರ್‌ ಲೆಕ್ಕದಲ್ಲಿ ಯಾಕೆ ಮದ್ಯ ಮಾರಾಟ ಆಗೋದಿಲ್ಲ, ಫುಲ್‌ ಬಾಟಲ್‌ 750ML ಇರೋದರ ಹಿಂದಿನ ಕಾರಣವೇನು?