ಜಿಯೋ ರಿಚಾರ್ಜ್ ದರ ಹೆಚ್ಚಳ ಬಹುತೇಕ ಖಚಿತ: ಗ್ರಾಹಕರಿಗೆ ಶೀಘ್ರದಲ್ಲೇ ಶಾಕ್ ನೀಡಲು ಮುಹೂರ್ತ ಫಿಕ್ಸ್!

Published : Aug 20, 2026, 09:58 PM IST
Jio 5G

ಸಾರಾಂಶ

ರಿಲಯನ್ಸ್ ಜಿಯೋ ಶೀಘ್ರದಲ್ಲೇ ತನ್ನ ರೀಚಾರ್ಜ್ ದರಗಳನ್ನು ಶೇಕಡಾ 15-20 ರಷ್ಟು ಹೆಚ್ಚಿಸಲು ಸಿದ್ಧತೆ ನಡೆಸಿದೆ. ಈ ದರ ಏರಿಕೆಯಿಂದ ಗ್ರಾಹಕರನ್ನು ತಾತ್ಕಾಲಿಕವಾಗಿ ರಕ್ಷಿಸಲು, ಕಂಪನಿಯು ₹300 ಮೌಲ್ಯದ 'ಜಿಯೋ ಪ್ರೈಮ್ ಮೆಂಬರ್‌ಶಿಪ್' ಅನ್ನು ಪರಿಚಯಿಸಿದೆ.

ಮುಂಬೈ (ಆ.20): ಭಾರತದ ಅತಿ ದೊಡ್ಡ ಟೆಲಿಕಾಂ ಸಂಸ್ಥೆಯಾದ ರಿಲಯನ್ಸ್ ಜಿಯೋ (Reliance Jio), ತನ್ನ ಮೊಬೈಲ್ ರಿಚಾರ್ಜ್ ಪ್ಲಾನ್‌ಗಳ ದರಗಳನ್ನು ಶೀಘ್ರದಲ್ಲೇ ಹೆಚ್ಚಿಸಲು ಸಂಪೂರ್ಣ ಸಿದ್ಧತೆ ನಡೆಸಿದೆ. ಇತ್ತೀಚೆಗೆ ಕಂಪನಿಯು ಬಿಡುಗಡೆ ಮಾಡಿರುವ ನೂತನ 'ಜಿಯೋ ಪ್ರೈಮ್ ಮೆಂಬರ್‌ಶಿಪ್' (Jio Prime Membership) ಯೋಜನೆಯು ದರ ಏರಿಕೆಯ ಸುಳಿವನ್ನು ಬಹುತೇಕ ಖಚಿತಪಡಿಸಿದೆ. ಕಂಪನಿಯು 300 ರೂಪಾಯಿ ಬೆಲೆಯ ಜಿಯೋ ಪ್ರೈಮ್ ಮೆಂಬರ್‌ಶಿಪ್ ಅನ್ನು ಪರಿಚಯಿಸಿದ್ದು, ಈ ಸದಸ್ಯತ್ವ ಪಡೆಯುವ ಗ್ರಾಹಕರು ಭವಿಷ್ಯದ ದರ ಏರಿಕೆಯಿಂದ ರಕ್ಷಣೆ ಪಡೆಯಲಿದ್ದಾರೆ ಎಂದು ಹೇಳಿದೆ. ಈ ನಡೆ ಕಂಪನಿಯು ಶೀಘ್ರದಲ್ಲೇ ಬಹುಶಃ ಮುಂಬರುವ ಸೆಪ್ಟೆಂಬರ್ ತ್ರೈಮಾಸಿಕದಲ್ಲೇ ರೀಚಾರ್ಜ್ ದರಗಳನ್ನು ಶೇಕಡಾ 15 ರಿಂದ 20 ರಷ್ಟು ಹೆಚ್ಚಿಸಲಿದೆ ಎಂಬುದನ್ನು ಸ್ಪಷ್ಟವಾಗಿ ಸೂಚಿಸುತ್ತಿದೆ.

ಏನಿದು 'ಜಿಯೋ ಪ್ರೈಮ್' ಪಾಸ್ ಆಫರ್?

ಜಿಯೋ ನೀಡಿರುವ ಮಾಹಿತಿಯ ಪ್ರಕಾರ, ಗ್ರಾಹಕರು 300 ರೂಪಾಯಿ ಕೊಟ್ಟು ಪ್ರೈಮ್ ಮೆಂಬರ್‌ಶಿಪ್ ಖರೀದಿಸಿದರೆ, ಅವರು ಸೆಪ್ಟೆಂಬರ್ 5, 2027 ರವರೆಗೆ ಹಳೆಯ ದರಗಳಲ್ಲೇ ರಿಚಾರ್ಜ್ ಮಾಡಿಕೊಳ್ಳಬಹುದು. ಅಂದರೆ ನೂತನ ದರ ಏರಿಕೆಯು ಸೆಪ್ಟೆಂಬರ್ 5, 2026 ರ ನಂತರವೇ ಜಾರಿಗೆ ಬರುವ ಸಾಧ್ಯತೆಯಿದೆ. ಆದರೆ, ದರ ಏರಿಕೆಯ ನಿಖರ ದಿನಾಂಕವನ್ನು ಜಿಯೋ ಅಧಿಕೃತವಾಗಿ ಇನ್ನು ಪ್ರಕಟಿಸಿಲ್ಲ.

ಎಆರ್‌ಪಿಯು (ARPU) ಹೆಚ್ಚಿಸಲು ದರ ಏರಿಕೆ ಅನಿವಾರ್ಯ

ಕಂಪನಿಯು ಹಣಕಾಸು ವರ್ಷ 2027ರ ಮೊದಲ ತ್ರೈಮಾಸಿಕದಲ್ಲಿ (Q1 FY27) ತನ್ನ ಪ್ರತಿ ಬಳಕೆದಾರರಿಂದ ಬರುವ ಸರಾಸರಿ ಆದಾಯ (ARPU) 215.6 ರೂಪಾಯಿ ಎಂದು ವರದಿ ಮಾಡಿದೆ. ಇದು ಹಿಂದಿನ ತ್ರೈಮಾಸಿಕದ 214 ರೂಪಾಯಿಗೆ ಹೋಲಿಸಿದರೆ ತೀರಾ ಸಣ್ಣ ಪ್ರಮಾಣದ ಏರಿಕೆಯಾಗಿದೆ.

ಕೇವಲ ಡೇಟಾ ಬಳಕೆ ಹೆಚ್ಚಳದಿಂದ ಕಂಪನಿಯ ಎಆರ್‌ಪಿಯು ಹೆಚ್ಚಿಸಲು ಸಾಧ್ಯವಿಲ್ಲ. ಕಂಪನಿಯ ಆದಾಯದಲ್ಲಿ ಗಣನೀಯ ಪ್ರಗತಿ ಕಾಣಬೇಕಾದರೆ ಪ್ಲಾನ್ ಬೆಲೆಗಳಲ್ಲಿ ಶೇಕಡಾ 15-20 ರಷ್ಟು ಏರಿಕೆ ಮಾಡುವುದು ಜಿಯೋಗೆ ತೀರಾ ಅನಿವಾರ್ಯವಾಗಿದೆ.

ಐಪಿಒ (IPO) ಲಾಂಚ್‌ ಮತ್ತು ಕಂಪನಿಯ ತಂತ್ರ

300 ರೂಪಾಯಿಯ ಜಿಯೋ ಪ್ರೈಮ್ ಮೆಂಬರ್‌ಶಿಪ್‌ನಿಂದಾಗಿ ಕಂಪನಿಗೆ ಒಂದೇ ತ್ರೈಮಾಸಿಕದಲ್ಲಿ ಭಾರಿ ಪ್ರಮಾಣದ ಹೆಚ್ಚುವರಿ ಆದಾಯ ಹರಿದುಬರಲಿದೆ. ಇದು ತಾತ್ಕಾಲಿಕವಾಗಿ ಕಂಪನಿಯ ಎಆರ್‌ಪಿಯು ಅನ್ನು ಹೆಚ್ಚಿಸಲಿದೆ. ಪ್ರೈಮ್ ಪಾಸ್ ಪಡೆದವರು 2027ರ ಸೆಪ್ಟೆಂಬರ್‌ವರೆಗೆ ಹಳೆಯ ದರದಲ್ಲೇ ಮುಂದುವರಿಯಬಹುದಾದರೂ, ಈ ಪಾಸ್ ಅನ್ನು ಮತ್ತೆ ಪಡೆಯಲು ಅವಕಾಶವಿದೆಯೇ ಅಥವಾ ಇಲ್ಲವೇ ಎಂಬುದು ಸ್ಪಷ್ಟವಾಗಿಲ್ಲ.

ಸಣ್ಣ ಅವಧಿಯಲ್ಲಿ ಆದಾಯ ಹೆಚ್ಚಿಸಿಕೊಳ್ಳುವುದು ಮಾತ್ರವಲ್ಲದೆ, ಶೀಘ್ರದಲ್ಲೇ ಶೇರು ಮಾರುಕಟ್ಟೆಗೆ ಬರಲಿರುವ ಜಿಯೋ ಐಪಿಒ (IPO) ಅನ್ನು ಅತ್ಯಂತ ಯಶಸ್ವಿಗೊಳಿಸಲು ಕಂಪನಿಯು ತನ್ನ ಎಆರ್‌ಪಿಯು ಹೆಚ್ಚಿಸುವ ಈ ತಂತ್ರಕ್ಕೆ ಮೊರೆ ಹೋಗಿದೆ ಎನ್ನಲಾಗಿದೆ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ಎಚ್‌ಎಎಲ್-ಸೈಯಂಟ್ ಜಂಟಿ ಉದ್ಯಮಕ್ಕೆ ತೆರೆ: ಇನ್ಫೋಟೆಕ್ HAL ಮುಚ್ಚಲು NCLT ಆದೇಶ, ತೆರೆಮರೆಗೆ ಸರಿದ ಜಂಟಿ ಉದ್ಯಮ
ಭಾರತದ ಮೊದಲ ಎಟಿಎಂ ಯಾವುದು? ಎಲ್ಲಿ ಸ್ಥಾಪಿಸಲಾಯಿತು? ಇದರ ಹಿಂದಿನ ಇತಿಹಾಸ ಗೊತ್ತಾ?