2 ದಿನಗಳಲ್ಲಿ 45 ಸಾವಿರ ಕೋಟಿ ರೂ. ದಾಟಿದ ದೀಪಾವಳಿ ವ್ಯಾಪಾರ: ಚಿನ್ನ, ಬೆಳ್ಳಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು..!

By BK AshwinFirst Published Oct 25, 2022, 4:03 PM IST
Highlights

ಹಬ್ಬದ ಸಮಯದಲ್ಲಿ ಗ್ರಾಹಕರು ಕೇವಲ ಭಾರತೀಯ ವಸ್ತುಗಳನ್ನು ಖರೀದಿಸಲು ಆದ್ಯತೆ ನೀಡುತ್ತಿರುವುದರಿಂದ ಚೀನಾಕ್ಕೆ ವ್ಯಾಪಾರದಲ್ಲಿ 75,000 ಕೋಟಿ ರೂಪಾಯಿಗಳಷ್ಟು ನಷ್ಟವನ್ನುಂಟು ಮಾಡಿದೆ ಎಂದೂ ಅಂದಾಜಿಸಲಾಗುತ್ತಿದೆ. 

ಭಾರತೀಯರ ಪೈಕಿ ಹೆಚ್ಚು ಜನ ಆಚರಿಸುವ ಹಬ್ಬಗಳಲ್ಲಿ ದೀಪಾವಳಿಗೆ (Deepavali) ಪ್ರಮುಖವಾದ ಸ್ಥಾನವಿದೆ. ಈ ಸಮಯದಲ್ಲಿ ಚಿನ್ನ (Gold), ಬೆಳ್ಳಿ (Silver), ಬಟ್ಟೆ (Clothes), ಇತರೆ ಉಡುಗೊರೆ (Gifts) - ಹೀಗೆ ವ್ಯಾಪಾರ (Business) ಭರ್ಜರಿಯಾಗೇ ನಡೆಯುತ್ತದೆ. ಕೋವಿಡ್‌ - 19 ನಿಂದ ಕಳೆದ 2 ವರ್ಷ ಬೇಸತ್ತಿದ್ದ ಜನರು ಈ ಬಾರಿ ದೀಪಾವಳಿಗೆ ಭರ್ಜರಿಯಾಗೇ ಶಾಪಿಂಗ್ ಮಾಡಿದ್ದಾರೆ. ಇದಕ್ಕೆ ಸಾಕ್ಷಿ ಇಲ್ಲಿದೆ ನೋಡಿ.. ಧನ್ತೇರಸ್‌ (Dhanteras) ಸಂದರ್ಭದಲ್ಲಿ ಕೇವಲ 2 ದಿನಗಳಲ್ಲಿ ಅಂದರೆ ಅಕ್ಟೋಬರ್ 22 ಮತ್ತು 23 ರಂದು 25,000 ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣ ವ್ಯಾಪಾರವನ್ನು ಕಂಡಿದೆ. ಇನ್ನು, ಒಟ್ಟು ವ್ಯವಹಾರವು ದೇಶದಲ್ಲಿ 45,000 ಕೋಟಿ ರೂಪಾಯಿಗಳನ್ನು ದಾಟಿದೆ. ಶನಿವಾರ ಹಾಗೂ ಭಾನುವಾರ ಸೇರಿ 2 ದಿನಗಳಂದು ದೇಶಾದ್ಯಂತ ಧನ್ತೇರಸ್ ಹಬ್ಬವನ್ನು ಆಚರಿಸಲಾಯಿತು.

ಇನ್ನು, ಚಿನ್ನ, ಬೆಳ್ಳಿ ಸೇರಿ ಆಭರಣಗಳ ವ್ಯಾಪಾರವನ್ನು ಬಿಟ್ಟು ಸುಮಾರು 20,000 ಕೋಟಿ ರೂಪಾಯಿಗಳ ವ್ಯವಹಾರವು ಆಟೋಮೊಬೈಲ್‌ಗಳು, ಕಂಪ್ಯೂಟರ್ ಮತ್ತು ಕಂಪ್ಯೂಟರ್ ಸಂಬಂಧಿತ ವಸ್ತುಗಳು, ಪೀಠೋಪಕರಣಗಳು, ಮನೆ ಮತ್ತು ಕಚೇರಿ ಅಲಂಕಾರಕ್ಕೆ ಬೇಕಾದ ವಸ್ತುಗಳು, ಸಿಹಿತಿಂಡಿಗಳು ಮತ್ತು ಇತರೆ ತಿಂಡಿಗಳು, ಅಡುಗೆ ವಸ್ತುಗಳು, ಎಲ್ಲಾ ರೀತಿಯ ಪಾತ್ರೆಗಳು, ಎಲೆಕ್ಟ್ರಾನಿಕ್ಸ್ ಮತ್ತು ಮೊಬೈಲ್ ವಸ್ತುಗಳ ಮಾರಾಟದಿಂದ ಆಗಿದೆ. 

ಇದನ್ನು ಓದಿ: 2 ವರ್ಷಗಳ ಬಳಿಕ ದೀಪಾವಳಿ ವ್ಯಾಪಾರಕ್ಕೆ ವರ್ತಕರು ಖುಷ್‌...!

ಈ ಬಗ್ಗೆ ಮಾಹಿತಿ ನೀಡಿರುವ ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟದ (ಸಿಎಐಟಿ) ರಾಷ್ಟ್ರೀಯ ಅಧ್ಯಕ್ಷರು ‘’2 ದಿನಗಳ ಧನ್ತೇರಸ್ ಹಬ್ಬವು ದೇಶದಲ್ಲಿ ಚಿನ್ನ ಮತ್ತು ಬೆಳ್ಳಿಯ ನಾಣ್ಯಗಳು, ನೋಟುಗಳು, ಶಿಲ್ಪಗಳು ಮತ್ತು ಪಾತ್ರೆಗಳ ಬೃಹತ್ ಮಾರಾಟಕ್ಕೆ ಕಾರಣವಾಯಿತು. ಈ ಪೈಕಿ ಚಿನ್ನ ಮತ್ತು ಬೆಳ್ಳಿ ನಾಣ್ಯಗಳ ಸುಮಾರು 25,000 ಕೋಟಿ ಮೌಲ್ಯದ ವ್ಯಾಪಾರವಾಗಿದೆ’’ ಎಂದು ಮಾಹಿತಿ ನೀಡಿದ್ದಾರೆ.

ಇನ್ನೊಂದೆಡೆ, ಧನ್ತೇರಸ್ ಸಂದರ್ಭದಲ್ಲಿ ಶನಿವಾರ ಹಾಗೂ ಭಾನುವಾರ ದೇಶಾದ್ಯಂತ ಮಾರುಕಟ್ಟೆಗಳಲ್ಲಿ ಹೆಚ್ಚಿನ ಜನಸಂದಣಿ ಇತ್ತು. ಇದು ಭಾರತೀಯ ಸರಕುಗಳನ್ನು ವಿಶೇಷವಾಗಿ ಆಫ್‌ಲೈನ್ ಮಾರುಕಟ್ಟೆಗಳಿಂದ (ಆನ್‌ಲೈನ್‌ ವ್ಯಾಪಾರವನ್ನು ಹೊರತುಪಡಿಸಿ) ಖರೀದಿಸಲು ಜನರ ಉತ್ಸುಕತೆಯನ್ನು ಸಾಬೀತುಪಡಿಸುತ್ತದೆ ಮತ್ತು ಪ್ರದರ್ಶಿಸುತ್ತದೆ ಎಂದು ಸಿಎಐಟಿ (CAIT) ಯ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಖಂಡೇಲ್ವಾಲ್ ಹೇಳಿದ್ದಾರೆ. ಕೊರೊನಾದಿಂದ ಉಂಟಾದ 2 ವರ್ಷಗಳ ಮಾರುಕಟ್ಟೆ ಕುಸಿತದ ನಂತರ, ಮಾರುಕಟ್ಟೆಗಳಲ್ಲಿ ಗ್ರಾಹಕರ ನಿರಂತರ ಹೊರಹರಿವು ವ್ಯಾಪಾರಿಗಳಿಗೆ ಹರ್ಷವನ್ನು ತಂದಿದ್ದು, ಅವರ ಬಲ ಹೆಚ್ಚಿಸಿದೆ ಎಂದು ಹೇಳಬಹುದು.

ಇದನ್ನೂ ಓದಿ: ಕೋಲಾರದಲ್ಲಿ ಪರಿಸರ ಸ್ನೇಹಿ ದೀಪಾವಳಿ, ಪಟಾಕಿ ಖರೀದಿಗೆ ಬಂದವರಿಗೆ ಗಿಡಗಳ ವಿತರಣೆ

ಈ ಮಧ್ಯೆ, ಈ ವರ್ಷದ ದೀಪಾವಳಿ ಹಬ್ಬದ ಒಟ್ಟಾರೆ ಮಾರಾಟವು ದೇಶದಲ್ಲಿ 1,50,000 ಕೋಟಿ ರೂಪಾಯಿಗಳನ್ನು ಮೀರುತ್ತದೆ ಎಂದೂ ಸಿಎಐಟಿ ಅಂದಾಜಿಸಿದೆ. ಇನ್ನು, ಈ ಬಾರಿಯ ದೀಪಾವಳಿ ಹಬ್ಬದ ಮತ್ತೊಂದು ಸಕಾರಾತ್ಮಕ ಅಂಶವೆಂದರೆ ಗ್ರಾಹಕರು ಭಾರತೀಯ ವಸ್ತುಗಳ ಖರೀದಿಗೆ ಆದ್ಯತೆ ನೀಡಿರುವುದು. ಕರೋನಾದಿಂದ ಉಂಟಾದ 2 ವರ್ಷಗಳ ಮಾರುಕಟ್ಟೆ ಕುಸಿತದ ನಂತರ ಭಾರತೀಯ ವಸ್ತುಗಳು ಹೆಚ್ಚು ವ್ಯಾಪಾರ ನಷ್ಟಕ್ಕೆ ಕಾರಣವಾಗಿತ್ತು. ಆದರೆ, ಈ ಹಬ್ಬದ ಸಮಯದಲ್ಲಿ ಮಾರುಕಟ್ಟೆಗಳಲ್ಲಿ ಗ್ರಾಹಕರ ನಿರಂತರ ಹೊರಹರಿವು ವ್ಯಾಪಾರಿಗಳಿಗೆ ಹರ್ಷ ತಂದಿದ್ದು ಅವರ ಬಲವನ್ನು ಹೆಚ್ಚಿಸಿದೆ. 

ಹಬ್ಬದ ಸಮಯದಲ್ಲಿ ಗ್ರಾಹಕರು ಕೇವಲ ಭಾರತೀಯ ವಸ್ತುಗಳನ್ನು ಖರೀದಿಸಲು ಆದ್ಯತೆ ನೀಡುತ್ತಿರುವುದರಿಂದ ಚೀನಾಕ್ಕೆ ವ್ಯಾಪಾರದಲ್ಲಿ 75,000 ಕೋಟಿ ರೂಪಾಯಿಗಳಷ್ಟು ನಷ್ಟವನ್ನುಂಟು ಮಾಡಿದೆ ಎಂದೂ ಅಂದಾಜಿಸಲಾಗುತ್ತಿದೆ. 
 
ಇನ್ನು, "ಭಾರತದಲ್ಲಿ ಚಿನ್ನದ ಬೇಡಿಕೆಯು ಉತ್ತುಂಗಕ್ಕೇರಿರುವುದರಿಂದ ಭಾರತೀಯ ಚಿನ್ನದ ಉದ್ಯಮವು ಕೋವಿಡ್ ಬಿಕ್ಕಟ್ಟಿನಿಂದ ಸಂಪೂರ್ಣವಾಗಿ ಚೇತರಿಸಿಕೊಂಡಿದೆ" ಎಂದು ಸಿಎಐಟಿಯ ಸಹವರ್ತಿ ಸಂಸ್ಥೆಯಾದ ಆಲ್ ಇಂಡಿಯಾ ಜ್ಯುವೆಲ್ಲರ್ಸ್ ಮತ್ತು ಗೋಲ್ಡ್ ಸ್ಮಿತ್ ಫೆಡರೇಶನ್‌ನ ರಾಷ್ಟ್ರೀಯ ಅಧ್ಯಕ್ಷ ಪಂಕಜ್ ಅರೋರಾ ಹೇಳಿದ್ದಾರೆ.

ಇದನ್ನೂ ಓದಿ: ದೀಪಾವಳಿಗೆ ಏನಾದ್ರೂ ಖರೀದಿಸುವ ಪ್ಲ್ಯಾನ್ ಇದೆಯಾ? ಹಾಗಾದ್ರೆ ನೋ ಕಾಸ್ಟ್ ಇಎಂಐ ಬಗ್ಗೆ ನಿಮ್ಗೆ ತಿಳಿದಿರಲಿ

ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟದ (ಸಿಎಐಟಿ) ರಾಷ್ಟ್ರೀಯ ಅಧ್ಯಕ್ಷ ಬಿ.ಸಿ.ಭಾರ್ಟಿಯಾ ಪ್ರಕಾರ, 2 ದಿನಗಳ ಆಭರಣ ವ್ಯವಹಾರದ ಜೊತೆಗೆ, ಆಟೋಮೊಬೈಲ್ ಕ್ಷೇತ್ರವು 6 ಸಾವಿರ ಕೋಟಿ ರೂ. ವ್ಯವಹಾರ ಮಾಡಿದ್ದರೆ, ಪೀಠೋಪಕರಣಗಳು ಸುಮಾರು 1500 ಕೋಟಿ ರೂ. ಮಾಡಿದೆ. ಹಾಗೂ, ಸುಮಾರು 2500 ಕೋಟಿ ಕಂಪ್ಯೂಟರ್ ಮತ್ತು ಕಂಪ್ಯೂಟರ್ ಸಂಬಂಧಿತ ವಸ್ತುಗಳು, ಮತ್ತು ಎಫ್‌ಎಂಸಿಜಿಯಲ್ಲಿ ಸುಮಾರು 3 ಸಾವಿರ ಕೋಟಿಗಳು. ಎಲೆಕ್ಟ್ರಾನಿಕ್ಸ್ ಸರಕುಗಳಲ್ಲಿ ಸುಮಾರು 1000 ಕೋಟಿಗಳು, ಸ್ಟೇನ್‌ಲೆಸ್ ಸ್ಟೀಲ್, ಅಲ್ಯೂಮಿನಿಯಂ ಮತ್ತು ಹಿತ್ತಾಳೆ ಪಾತ್ರೆಗಳಲ್ಲಿ ಸುಮಾರು 500 ಕೋಟಿಗಳು. ಮತ್ತು ಸುಮಾರು 700 ಕೋಟಿಗಳ ವ್ಯವಹಾರ ಅಡುಗೆ ಉಪಕರಣಗಳು, ಟೆಕ್ಸ್‌ಟೈಲ್, ಸಿದ್ಧ ಉಡುಪುಗಳು ಮತ್ತು ಫ್ಯಾಷನ್ ಬಟ್ಟೆಗಳಿಂದ ಆಗಿದೆ. ಇನ್ನು, ದೀಪಾವಳಿಯ ಪೂಜಾ ಸಾಮಗ್ರಿಗಳು, ಮನೆ ಮತ್ತು ಕಚೇರಿ ಅಲಂಕಾರ, ವಿದ್ಯುತ್ ಮತ್ತು ವಿದ್ಯುತ್ ಉಪಕರಣಗಳು, ಬಿಲ್ಡರ್ ಹಾರ್ಡ್‌ವೇರ್, ವುಡ್‌ ಮತ್ತು ಪ್ಲೈವುಡ್ ಇತ್ಯಾದಿಗಳ ವ್ಯಾಪಾರವೂ ಭರ್ಜರಿಯಾಗೇ ಆಗಿದೆ ಎಂದು ಮಾಹಿತಿ ನೀಡಿದ್ದಾರೆ. 

click me!