2 ವರ್ಷದಿಂದ ಕುಂದಿದ್ದ ವ್ಯಾಪಾರ ಈ ಬಾರಿ ಬಲು ಜೋರು, ಚಿನ್ನ, ವಾಹನ, ಬಟ್ಟೆ ಖರೀದಿಯಲ್ಲಿ ಭಾರಿ ಏರಿಕೆ
ಬೆಂಗಳೂರು(ಅ.25): ದೀಪಾವಳಿ ಹಬ್ಬವು ವರ್ತಕರಿಗೆ ಬೆಳಕು ನೀಡಿದೆ. ಹಬ್ಬದ ಮೊದಲ ದಿನ ಮಾರುಕಟ್ಟೆಯಲ್ಲಿ ಭರ್ಜರಿ ವ್ಯಾಪಾರವಾಗಿದ್ದು, ಚಿನ್ನಾಭರಣ, ಜವಳಿ ವರ್ತಕರು ಈ ಬಾರಿಯ ವ್ಯಾಪಾರದಿಂದ ಉಲ್ಲಸಿತರಾಗಿದ್ದಾರೆ. ಸೋಮವಾರವೂ ಕಿಕ್ಕಿರಿದು ತುಂಬಿದ ಗ್ರಾಹಕರು, ಹಬ್ಬದ ಪರಿಕರಗಳನ್ನು ಖರೀದಿ ಮಾಡಿದ್ದಾರೆ. ಸಂಜೆ ವೇಳೆಗೆ ಮನೆ, ಅಂಗಡಿ ಮುಂಗಟ್ಟುಗಳಲ್ಲಿ ಸಂಭ್ರಮದಿಂದ ಲಕ್ಷ್ಮಿ ಪೂಜೆ ನಡೆಯಿತು. ಇಡೀ ದಿನ ನಗರದ ಪ್ರಮುಖ ವ್ಯಾಪಾರಿ ಕೇಂದ್ರಗಳು ಜನರಿಂದ ತುಂಬಿದ್ದವು. ನಗರದ ಕೆ.ಆರ್.ಮಾರುಕಟ್ಟೆಯಲ್ಲಿರುವ ಅವೆನ್ಯೂ ರಸ್ತೆ, ಮಲ್ಲೇಶ್ವರದ ಸಂಪಿಗೆ ರಸ್ತೆ ಸೇರಿ ಸುತ್ತಮುತ್ತಲ ಪ್ರದೇಶ ಟ್ರಾಫಿಕ್ ಜಾಮ್‌ನಿಂದ ಕೂಡಿತ್ತು.
ನವರಾತ್ರಿಯಲ್ಲಿ ಕೇಜಿಗೆ .60 ತಲುಪಿ ದಾಖಲೆಯಾಗಿದ್ದ ಬೂದುಗುಂಬಳ ದೀಪಾವಳಿಗೆ .40 ಕೇಜಿ ಇಳಿದು ಸಾಮಾನ್ಯ ದರಕ್ಕೆ ತಲುಪಿದೆ. ಕನಕಾಂಬರ .1500ರಿಂದ 2 ಸಾವಿರ ದರದಲ್ಲಿ ಮುಂದುವರಿದಿದೆ. ಇನ್ನು, ಹೂವು ಹಣ್ಣುಗಳ ದರ ಏರಿಕೆಯಲ್ಲೆ ಇದೆ. ಗ್ರಹಣ ಕಾರಣದಿಂದ ಮಂಗಳವಾರ ವಹಿವಾಟು ಕುಂಠಿತವಾಗುವ ಸಾಧ್ಯತೆಯಿದ್ದು, ಬುಧವಾರ ಪುನಃ ಹಬ್ಬದ ವ್ಯಾಪಾರ ನಡೆಯಲಿದೆ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ.
Chikkaballapur: ದತ್ತು ಪಡೆದ ಮಕ್ಕಳೊಂದಿಗೆ ದೀಪಾವಳಿ ಆಚರಿಸಿದ ಸಚಿವ ಸುಧಾಕರ್
ಚಿನ್ನದ ವಹಿವಾಟು ಹೆಚ್ಚಳ
ನಿರೀಕ್ಷೆಯಂತೆ ಈ ಬಾರಿ ದೀಪಾವಳಿ ಚಿನ್ನಾಭರಣ ವರ್ತಕ ವಲಯಕ್ಕೆ ಬೆಳಕು ತಂದಿದೆ. ಕಳೆದ ಬಾರಿಗಿಂತ ಶೇ.25ರಷ್ಟುಹೆಚ್ಚಿನ ವ್ಯಾಪಾರವಾಗಿದ್ದು, ಇನ್ನೂ ಹೆಚ್ಚಿನ ವಹಿವಾಟು ನಡೆಯುವ ಬಗ್ಗೆ ಸಂತಸ ಹಂಚಿಕೊಂಡಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.95ರಷ್ಟುಗ್ರಾಹಕರು ಮಳಿಗೆಗೆ ಬಂದಿದ್ದಾರೆ. ‘ದೀಪಾವಳಿಗಾಗಿ ನೀಡಿದ್ದ ವಿಶೇಷ ಆಫರ್‌ಗಳು ಕೆಲಸ ಮಾಡಿವೆ. ಮುಂಗಡ ಬುಕ್ಕಿಂಗ್ ಆಗಿರಬಹುದು ಅಥವಾ ಸೀದಾ ಮಳಿಗೆಗಳಲ್ಲಿ ಖರೀದಿ ಆಗಿರಬಹುದು, ಒಟ್ಟಾರೆ ಈ ಬಾರಿ ಉತ್ತಮ ವಹಿವಾಟು ನಡೆದಿವೆ. ಗುರುವಾರ ರಾಜ್ಯಾದ್ಯಂತ ಲಕ್ಕಿ ಡ್ರಾದ ಬಹುಮಾನ ನೀಡಲು ನಿರ್ಧರಿಸಲಾಗಿದೆ’ ಎಂದು ಜ್ಯುವೆಲರ್ಸ್ ಅಸೋಸಿಯೇಶನ್ ಬೆಂಗಳೂರಿನ ಅಧ್ಯಕ್ಷ ಡಾ. ಬಿ.ರಾಮಾಚಾರಿ ತಿಳಿಸಿದರು.
ಜವಳಿ ವಹಿವಾಟು ಶೇ.90
ಇನ್ನು, ಮಾರುಕಟ್ಟೆಯಲ್ಲಿ ಜವಳಿ ವ್ಯಾಪಾರ ಕೂಡ ಉತ್ತಮವಾಗಿ ನಡೆದಿದೆ ಎಂದು ಬೆಂಗಳೂರು ವೊಲ್‌ಸೆಲ್ ಕ್ಲಾಥ್ ಮರ್ಚೆಂಟ್ ಅಸೋಸಿಯೇಶನ್ ತಿಳಿಸಿದೆ. ಕಳೆದೆರಡು ವರ್ಷ ಕೋವಿಡ್ ಕಾರಣದಿಂದ ಶೇ.50-60ರಷ್ಟುವಹಿವಾಟಾಗಿತ್ತು. ಈ ಬಾರಿ ಶೇ.90ರಷ್ಟುವ್ಯಾಪಾರವಾಗಿದೆ. ಕೇರಳ, ತಮಿಳುನಾಡು, ಆಂಧ್ರ, ತಿರುವನಂತಪುರ ಸೇರಿ ಹಲವೆಡೆಗೆ ಬಟ್ಟೆಗಳು ಹೆಚ್ಚಾಗಿ ಇಲ್ಲಿಂದಲೆ ಹೋಗಿವೆ. ಕಳೆದ ವಾರ ಮಳೆಯಿಂದಾಗಿ ಮಾರಾಟಕ್ಕೆ ಸ್ವಲ್ಪ ಅಡ್ಡಿಯಾಗಿತ್ತು. ಅದು ಬಿಟ್ಟರೆ ನಿರೀಕ್ಷೆಯಂತೆ ವಹಿವಾಟಾಗಿದೆ ಎಂದು ಅಸೋಸಿಯೇಶನ್ ಅಧ್ಯಕ್ಷ ಪ್ರಕಾಶ ಪಿರ್ಗಲ್ ತಿಳಿಸಿದರು.
ಪಟಾಕಿ ಅವಾಂತರ, ಬೆಂಗಳೂರಿನ ವಿವಿಧೆಡೆ 9 ಮಂದಿ ಆಸ್ಪತ್ರೆಗೆ ದಾಖಲು
ಇದಲ್ಲದೆ, ಪಾತ್ರೆ ಪಗಡೆ, ಎಲೆಕ್ಟ್ರಾನಿಕ್ ವಸ್ತುಗಳು, ದ್ವಿಚಕ್ರ ಸೇರಿ ವಾಹನಗಳ ಮಾರಾಟ ವಹಿವಾಟು ಕೂಡ ಹಬ್ಬದಲ್ಲಿ ಜೋರಾಗಿ ನಡೆದಿದೆ. ಪ್ರತಿಷ್ಠಿತ ಬ್ರ್ಯಾಂಡ್‌ಗಳು ಸೇರಿ ಚಿಲ್ಲರೆ ಮಾರುಕಟ್ಟೆಯಲ್ಲಿಯೂ ವ್ಯಾಪಾರ ಚೆನ್ನಾಗಿ ನಡೆದಿದೆ ಎಂದು ವರ್ತಕರು ಸಂತಸ ವ್ಯಕ್ತಪಡಿಸಿದ್ದಾರೆ.
ಮಾರುಕಟ್ಟೆಯಲ್ಲಿ ಅದ್ಧೂರಿ ಲಕ್ಷ್ಮಿ ಪೂಜೆ
ಸಂಜೆ ವೇಳೆಗೆ ನಗರದ ಪ್ರಮುಖ ಮಾರುಕಟ್ಟೆಗಳಲ್ಲಿನ ಮಳಿಗೆಗಳಲ್ಲಿ ದೀಪಾವಳಿ ಲಕ್ಷ್ಮಿ ಪೂಜೆ ಅದ್ಧೂರಿಯಾಗಿ ನಡೆಯಿತು. ಯಶವಂತಪುರ ಎಪಿಎಂಸಿ, ಬಿನ್ನಿಮಿಲ್, ಕಲಾಸಿಪಾಳ್ಯ, ಸಿಂಗೇನ ಅಗ್ರಹಾರ, ತರಕಾರಿ ಉಪ ಮಾರುಕಟ್ಟೆಗಳಲ್ಲಿ ವರ್ತಕರು ಪೂಜೆ ನೆರವೇರಿಸಿದರು. ಇನ್ನು, ನಗರದ ದಿನಸಿ, ಚಿನ್ನಾಭರಣ, ಎಲೆಕ್ಟ್ರಾನಿಕ್, ಜವಳಿ ಸೇರಿ ಎಲ್ಲ ಮಳಿಗೆಗಳಲ್ಲಿ ಕುಟುಂಬ ಸಮೇತರಾಗಿ, ಸ್ನೇಹಿತರ ಒಡಗೂಡಿ ವರ್ತಕರು ಹಬ್ಬ ಆಚರಿಸಿದರು. ಮಳಿಗೆಗಳನ್ನು ಹೂವು, ವಿದ್ಯುದೀಪಗಳಿಂದ ಅಲಂಕೃತಗೊಳಿಸಲಾಗಿತ್ತು. ಮಳಿಗೆಗಳಲ್ಲಿ ಲಕ್ಷ್ಮಿ ದೇವಿಯನ್ನು ಪ್ರತಿಷ್ಠಾಪಿಸಿ ವೈದಿಕರೊಳಗೊಂಡು ಧಾರ್ಮಿಕ ಕೈಂಕರ್ಯಗಳನ್ನು ನೆರವೇರಿಸಿದರು. ಈ ವೇಳೆ ಆಗಮಿಸಿದ ಗ್ರಾಹಕರಿಗೂ ಸಿಹಿ ವಿತರಿಸಿ ಸಂಭ್ರಮಿಸಿದರು. ಸಂಜೆ ವೇಳೆಗೆ ಮಳಿಗೆಗಳಲ್ಲಿ ಪೂಜೆಯಿದ್ದ ಕಾರಣ ಕೆಲಹೊತ್ತು ವ್ಯಾಪಾರ ನಿಲ್ಲಿಸಿದ್ದರು.