2022-23ನೇ ಹಣಕಾಸು ಸಾಲಿನ ಆದಾಯ ತೆರಿಗೆ ರಿಟರ್ನ್ (ಐಟಿಆರ್) ಸಲ್ಲಿಕೆ ಪ್ರಕ್ರಿಯೆಗಳು ಈಗಾಗಲೇ ಪ್ರಾರಂಭಗೊಂಡಿವೆ. ಹೀಗಿರುವಾಗ ಐಟಿಆರ್ ಸಲ್ಲಿಕೆ ಮಾಡಿದ ಎಷ್ಟು ಸಮಯದ ಬಳಿಕ ತೆರಿಗೆ ರೀಫಂಡ್ ಪಡೆಯಬಹುದು? ಆದಾಯ ತೆರಿಗೆ ರೀಫಂಡ್ ಸ್ಟೇಟಸ್ ಚೆಕ್ ಮಾಡೋದು ಹೇಗೆ? ಇಲ್ಲಿದೆ ಮಾಹಿತಿ.
Business Desk: 2022-23ನೇ ಹಣಕಾಸು ಸಾಲಿನ ಆದಾಯ ತೆರಿಗೆ ರಿಟರ್ನ್ (ಐಟಿಆರ್) ಫೈಲಿಂಗ್ ಪ್ರಕ್ರಿಯೆಗಳು ಈಗ ನಡೆಯುತ್ತಲಿವೆ. ಆನ್ ಲೈನ್ ಹಾಗೂ ಆಪ್ ಲೈನ್ ಎರಡೂ ವಿಧಾನಗಳಲ್ಲಿ ಐಟಿಆರ್ ಸಲ್ಲಿಕೆಗೆ ಅವಕಾಶ ನೀಡಲಾಗಿದೆ. ಇನ್ನು 2022-23ನೇ ಹಣಕಾಸು ಸಾಲಿನ ಐಟಿಆರ್ ಸಲ್ಲಿಕೆಗೆ ಜುಲೈ 31ರ ತನಕ ಅವಕಾಶ ನೀಡಲಾಗಿದೆ. ಹೀಗಿರುವಾಗ ಐಟಿಆರ್ ಸಲ್ಲಿಕೆ ಮಾಡಿದ ಎಷ್ಟು ಸಮಯದ ಬಳಿಕ ಆದಾಯ ತೆರಿಗೆ ರೀಫಂಡ್ ಪಡೆಯಬಹುದು ಎಂಬ ಪ್ರಶ್ನೆ ಅನೇಕರನ್ನು ಕಾಡುತ್ತದೆ. ಹೌದು, ನಿಮಗೆ ತೆರಿಗೆ ರೀಫಂಡ್ ಪಡೆಯಬೇಕಿದ್ದರೆ ನೀವು ಐಟಿಆರ್ ಸಲ್ಲಿಕೆ ಮಾಡೋದು ಕಡ್ಡಾಯ. ನೀವು ಎಷ್ಟು ಬೇಗ ಐಟಿಆರ್ ಸಲ್ಲಿಕೆ ಮಾಡುತ್ತೀರೋ ಅಷ್ಟು ಬೇಗ ನಿಮಗೆ ತೆರಿಗೆ ರೀಫಂಡ್ ಸಿಗುತ್ತದೆ. ನೀವು ನಿಮ್ಮ ಆದಾಯದ ಮೇಲೆ ಹೆಚ್ಚುವರಿ ತೆರಿಗೆ ಪಾವತಿಸಿದ್ರೆ ಮಾತ್ರ ತೆರಿಗೆ ರೀಫಂಡ್ ಕ್ಲೇಮ್ ಮಾಡಬಹುದು. ಬಹುತೇಕ ಸಂದರ್ಭಗಳಲ್ಲಿ ತೆರಿಗೆದಾರರು ಅಗತ್ಯಕ್ಕಿಂತ ಹೆಚ್ಚು ಮೊತ್ತದ ತೆರಿಗೆ ಪಾವತಿಸಿರುತ್ತಾರೆ. ಇಂಥ ಸಂದರ್ಭಗಳಲ್ಲಿ ತೆರಿಗೆದಾರರು ಪಾವತಿಸಿರುವ ಹೆಚ್ಚುವರಿ ಹಣವನ್ನು ರೀಫಂಡ್ ಪಡೆಯಲು ಸಾಧ್ಯವಿದೆ.
ತೆರಿಗೆ ರೀಫಂಡ್ ಗೆ ಎಷ್ಟು ಸಮಯ ಬೇಕು?
ಸಾಮಾನ್ಯವಾಗಿ ಐಟಿಆರ್ ಸಲ್ಲಿಕೆ ಮಾಡಿ ಸಮಯಕ್ಕೆ ಸರಿಯಾಗಿ ಅದರ ಪರಿಶೀಲನೆ ನಡೆದ ಬಳಿಕ ತೆರಿಗೆ ರೀಫಂಡ್ ಮಾಡಲಾಗುತ್ತದೆ. ಸಾಮಾನ್ಯವಾಗಿ ಇದಕ್ಕೆ 20-45 ದಿನಗಳು ಬೇಕಾಗುತ್ತವೆ. ನೇರ ತೆರಿಗೆಗಳ ಕೇಂದ್ರೀಯ ಮಂಡಳಿ (ಸಿಬಿಡಿಟಿ) ಮುಖ್ಯಸ್ಥ ನಿತಿನ್ ಗುಪ್ತ ಅವರ ಹೇಳಿಕೆ ಪ್ರಕಾರ ಆದಾಯ ತೆರಿಗೆ ಇಲಾಖೆ ರೀಫಂಡ್ ಮಾಡಲು ತೆಗೆದುಕೊಳ್ಳುವ ಸಮಯದ ಅವಧಿಯಲ್ಲಿ ಈಗ ಗಮನಾರ್ಹ ಇಳಿಕೆಯಾಗಿದೆ. 2022-23ನೇ ಸಾಲಿನಲ್ಲಿ ಐಟಿಆರ್ ಫೈಲ್ ಮಾಡಿದ ಮೊದಲ 30 ದಿನಗಳಲ್ಲಿ ಶೇ.80ರಷ್ಟು ರೀಫಂಡ್ ನೀಡಲಾಗಿತ್ತು.
ITR ಫೈಲ್ ಮಾಡುವಾಗ ತಪ್ಪಾದ್ರೆ ಚಿಂತೆ ಬೇಡ, ಸರಿಪಡಿಸಲು ಅವಕಾಶವಿದೆ; ಅದು ಹೇಗೆ? ಇಲ್ಲಿದೆ ಮಾಹಿತಿ
ಆದಾಯ ತೆರಿಗೆ ರೀಫಂಡ್ ಚೆಕ್ ಮಾಡೋದು ಹೇಗೆ?
ನೀವು ಐಟಿಆರ್ ಸಲ್ಲಿಕೆ ಮಾಡಿದ್ರೆ ಆದಾಯ ತೆರಿಗೆ ಮರುಪಾವತಿ ಸ್ಟೇಟಸ್ ಅನ್ನು ಆದಾಯ ತೆರಿಗೆ ಪೋರ್ಟಲ್ ಅಥವಾ ಎನ್ ಎಸ್ ಡಿಎಲ್ (NSDL) ವೆಬ್ ಸೈಟ್ ಮೂಲಕ ಪರಿಶೀಲಿಸಬಹುದು.
ಹಂತ 1:https://www.incometax.gov.in/iec/foportal/ಭೇಟಿ ನೀಡಿ.
ಹಂತ 2: ಈಗ ಒಟಿಪಿ ಬರಲು ನಿಮ್ಮ ಮೊಬೈಲ್ ಸಂಖ್ಯೆ ಜೊತೆಗೆ ನಿಮ್ಮ ಪ್ಯಾನ್ (PAN ) ಸಂಖ್ಯೆ ಹಾಗೂ ಪಾಸ್ ವರ್ಡ್ ( password) ನಮೂದಿಸಿ.
ಹಂತ 3: ನಿಮ್ಮ ಪ್ಯಾನ್ (PAN ) ಸಂಖ್ಯೆ, ಪಾಸ್ ವರ್ಡ್ ( password), ಒಟಿಪಿ ಹಾಗೂ ಕ್ಯಾಪ್ಚ ಕೋಡ್ ಬಳಸಿ ನಿಮ್ಮ ಖಾತೆಗೆ ಲಾಗಿ ಇನ್ ಆಗಿ.
ಹಂತ 4: e-file ಆಯ್ಕೆ ಆರಿಸಿ. ಆ ಬಳಿಕ e-file ಆಯ್ಕೆ ಅಡಿಯಲ್ಲಿರೋ 'Income tax returns'ಆಯ್ಕೆ ಮಾಡಿ. ನಂತರ 'View Filed
returns'ಆರಿಸಿ.
ಹಂತ 5: ಆ ಬಳಿಕ ಅಂದಾಜು ವರ್ಷ (AY) ಆಯ್ಕೆ ಮಾಡಬೇಕು. 2022-23ನೇ ಆರ್ಥಿಕ ಸಾಲಿಗೆ ಅಂದಾಜು ವರ್ಷ 2023-24 ಆಗಿರುತ್ತದೆ.
ಹಂತ 6: ಆ ನಂತರ 'View Details'ಆಯ್ಕೆ ಮಾಡಿ. ಈಗ ನಿಮಗೆ ನಿಮ್ಮ ಆದಾಯ ತೆರಿಗೆ ರೀಫಂಡ್ ಸ್ಟೇಟಸ್ ಕಾಣಿಸುತ್ತದೆ.
ITR Filing:ಈಗ ಆನ್ ಲೈನ್ ನಲ್ಲಿ ಐಟಿಆರ್ ಫಾರ್ಮ್ 2 ಲಭ್ಯ; ಇದನ್ನು ಯಾರು ಬಳಸಬಹುದು?
ಐಟಿಆರ್ ಸಲ್ಲಿಕೆಗೆ 7 ನಮೂನೆಯ ಫಾರ್ಮ್ ಗಳಿವೆ. ಹೀಗಾಗಿ ನಿಮ್ಮ ಆದಾಯ ಮೂಲಗಳು ಹಾಗೂ ತೆರಿಗೆದಾರರು ಯಾವ ವರ್ಗಕ್ಕೆ ಸೇರುತ್ತಾರೆ ಎಂಬ ಆಧಾರದಲ್ಲಿ ಸಮರ್ಪಕವಾದ ಐಟಿಆರ್ ಅರ್ಜಿ ಆಯ್ಕೆ ಮಾಡಿ.ನೀವು ತಪ್ಪಾದ ಐಟಿಆರ್ ಅರ್ಜಿ ಭರ್ತಿ ಮಾಡಿದರೆ ನಿಮ್ಮ ಐಟಿಆರ್ ಫೈಲಿಂಗ್ ತಪ್ಪಾಗಲಿದೆ.