NPS ಹೂಡಿಕೆದಾರರಿಗೆ ಅನುಕೂಲ ಕಲ್ಪಿಸಲು ಸರ್ಕಾರದ ಚಿಂತನೆ; ವಿತ್ ಡ್ರಾ ನಿಯಮದಲ್ಲಿ ಶೀಘ್ರ ಬದಲಾವಣೆ ಸಾಧ್ಯತೆ

By Suvarna NewsFirst Published Jun 8, 2023, 4:54 PM IST
Highlights

ಎನ್ ಪಿಎಸ್ ವಿತ್ ಡ್ರಾ ನಿಯಮದಲ್ಲಿ ಶೀಘ್ರದಲ್ಲಿ ಬದಲಾವಣೆ ತರಲು ಕೇಂದ್ರ ಸರ್ಕಾರ ಯೋಜನೆ ರೂಪಿಸಿದೆ. ಎಸ್ ಎಲ್ ಡಬ್ಲ್ಯು ಆಯ್ಕೆ ಮೂಲಕ ಪಿಂಚಣಿ ಮೊತ್ತವನ್ನು ಹಿಂಪಡೆಯಲು ಎನ್ ಪಿಎಸ್ ಚಂದಾದಾರರಿಗೆ ಅವಕಾಶ ಸಿಗಲಿದೆ ಎಂದು ಪಿಎಫ್ ಆರ್ ಡಿಎ ಮುಖ್ಯಸ್ಥ ದೀಪಕ್ ಮೊಹಂಟೆ ಮಾಹಿತಿ ನೀಡಿದ್ದಾರೆ. 

ನವದೆಹಲಿ (ಜೂ.8): ರಾಷ್ಟ್ರೀಯ ಪಿಂಚಣಿ ಯೋಜನೆ (ಎನ್ ಪಿಎಸ್ ) ವಿತ್ ಡ್ರಾ ನಿಯಮದಲ್ಲಿ ಕೇಂದ್ರ ಸರ್ಕಾರ ಶೀಘ್ರದಲ್ಲಿ ಬದಲಾವಣೆ ಮಾಡುವ ಸಾಧ್ಯತೆಯಿದೆ. ಈ ತ್ರೈಮಾಸಿಕದ ಅಂತ್ಯದೊಳಗೆ ಸಿಸ್ಟಮೆಟಿಕ್ ಲುಂಪ್ ಸಮ್ ವಿತ್ ಡ್ರಾವಲ್ (ಎಸ್ ಎಲ್ ಡಬ್ಲ್ಯು) ಆಯ್ಕೆ ಮೂಲಕ ಪಿಂಚಣಿ ಮೊತ್ತವನ್ನು ಹಿಂಪಡೆಯಲು ಎನ್ ಪಿಎಸ್ ಚಂದಾದಾರರಿಗೆ ಅವಕಾಶ ಸಿಗಲಿದೆ ಎಂದು ಪಿಎಫ್ ಆರ್ ಡಿಎ ಮುಖ್ಯಸ್ಥ ದೀಪಕ್ ಮೊಹಂಟೆ ತಿಳಿಸಿದ್ದಾರೆ. ಈ ಸೌಲಭ್ಯವು ಎನ್ ಪಿಎಸ್ ಚಂದಾದಾರರಿಗೆ 75 ವಯಸ್ಸಿನ ತನಕ ಮಾಸಿಕ, ತ್ರೈಮಾಸಿಕ, ಅರ್ಧವಾರ್ಷಿಕ ಅಥವಾ ವಾರ್ಷಿಕವಾಗಿ ವಿತ್ ಡ್ರಾ ಆಯ್ಕೆಯನ್ನು ಆರಿಸಿಕೊಳ್ಳಲು ನೆರವು ನೀಡುತ್ತದೆ. ಪ್ರಸ್ತುತ ಎನ್ ಪಿಎಸ್ ಚಂದಾದಾರರಿಗೆ 60 ವರ್ಷವಾದ ಬಳಿಕ ಮಾತ್ರ ನಿವೃತ್ತಿ ನಿಧಿಯ ಶೇ.60ರಷ್ಟು ದೊಡ್ಡ ಮೊತ್ತದ ಹಣ ವಿತ್ ಡ್ರಾ ಮಾಡಲು ಅವಕಾಶವಿದೆ. ನಿಧಿಯ ಉಳಿದ ಶೇ.40ರಷ್ಟು ಕಡ್ಡಾಯವಾಗಿ ವರ್ಷಾಶನ ಖರೀದಿಗೆ ಹೋಗುತ್ತದೆ. ಹೀಗಾಗಿ ಹೊಸ ನಿಯಮ ಎನ್ ಪಿಎಸ್ ಚಂದಾದಾರಿಗೆ ನೆರವು ನೀಡಲಿದೆ ಎಂದು ಹೇಳಲಾಗಿದೆ.

ವಿತ್ ಡ್ರಾ ಹೊಸ ನಿಯಮದಲ್ಲಿ ಏನಿದೆ?
ಎನ್ ಪಿಎಸ್ ನಿಧಿಯ ಶೇ.60ರಷ್ಟು ಮೊತ್ತವನ್ನು ಒಂದೇ ಬಾರಿಗೆ ವಿತ್ ಡ್ರಾ ಮಾಡದಂತೆ ಆದರೆ, ಚಂದಾದಾರರಿಗೆ ಅನುಕೂಲಕರವಾದ ನಿಯಮ ಜಾರಿಗೆ ತರಲು ಪಿಎಫ್ ಆರ್ ಡಿಎ ಯೋಜನೆ ರೂಪಿಸುತ್ತಿದೆ ಎಂದು ವರದಿಗಳು ಮಾಹಿತಿ ನೀಡಿವೆ.  ಇದರ ಅನ್ವಯ ಎನ್ ಪಿಎಸ್ ನಲ್ಲಿ ಅವಧಗೆ ಮುನ್ನ ನಿಯಮಿತ ಹೂಡಿಕೆ ಹಿಂತೆಗೆತಕ್ಕೆ ಅವಕಾಶ ಸಿಗಲಿದೆ. 75ನೇ ವಯಸ್ಸಿನ ತನಕ ಚಂದಾದಾರರು ಎನ್ ಪಿಎಸ್ ಅಲ್ಲಿನ ಮೊತ್ತವನ್ನು ಮಾಸಿಕ, ತ್ರೈಮಾಸಿಕ, ಅರ್ಧವಾರ್ಷಿಕ ಅಥವಾ ವಾರ್ಷಿಕ ಆಧಾರದಲ್ಲಿ ವಿತ್ ಡ್ರಾ ಮಾಡಬಹುದಾಗಿದೆ. ಇನ್ನು ಈ ನಿಯಮದ ಅಡಿಯಲ್ಲಿ ಪಿಎಫ್ ಆರ್ ಡಿಯಲ್ಲಿ ಉಳಿದ ಎನ್ ಪಿಎಸ್ ನಿಧಿಯನ್ನು ಹೂಡಿಕೆ ಮಾಡಲಾಗುವುದು ಹಾಗೂ ನಿಧಿಯನ್ನು ಸಂಪೂರ್ಣವಾಗಿ ವಿತ್ ಡ್ರಾ ಮಾಡುವ ತನಕ ಹೂಡಿಕೆ ಮಾಡಿ ರಿಟರ್ನ್ ಗಳಿಕೆ ಮಾಡುತ್ತಲೇ ಇರಲಾಗುತ್ತದೆ. 

ಏ.1ರಿಂದ NPS ನಿಯಮದಲ್ಲಿ ಬದಲಾವಣೆ; ವಿತ್ ಡ್ರಾ ಮಾಡಲು ದಾಖಲೆಗಳನ್ನುಅಪ್ಲೋಡ್ ಮಾಡೋದು ಅಗತ್ಯ

ಇನ್ನು ಎನ್ ಪಿಎಸ್ ಚಂದಾದಾರರಿಗೆ ಸಿಸ್ಟಮೆಟಿಕ್ ಲುಂಪ್ ಸಮ್ ವಿತ್ ಡ್ರಾವಲ್ (ಎಸ್ ಎಲ್ ಡಬ್ಲ್ಯು) ಆಯ್ಕೆ ಮಾಡಲು ಅವರು 75ನೇ ವಯಸ್ಸಿಗೆ ತಲುಪುವ ತನಕ ಮುಂದಿನ 15 ವರ್ಷಗಳವರೆಗೆ ಅವಕಾಶ ನೀಡಲಾಗುವುದು ಎಂದು ದೀಪಕ್ ಮೊಹಂಟೆ ಮಾಹಿತಿ ನೀಡಿದ್ದಾರೆ. ಈ ಸೌಲಭ್ಯವನ್ನು ಟೈರ್-I ಹಾಗೂ ಟೈರ್ -II ಖಾತೆಗಳಿಗೂ ನೀಡಲಾಗುವುದು. 

ಈಗಿನ ನಿಯಮವೇನು?
ಪ್ರಸ್ತುತ ಇರುವ ನಿಯಮದ ಅನ್ವಯ ಎನ್ ಪಿಎಸ್ ಚಂದಾದಾರರು 60 ವರ್ಷ ವಯಸ್ಸಾದ ಮೇಲೆ ಮಾತ್ರ ನಿವೃತ್ತಿ ನಿಧಿಯಲ್ಲಿ ಶೇ.60ರಷ್ಟು ಮೊತ್ತ ವಿತ್ ಡ್ರಾ ಮಾಡಿಕೊಳ್ಳಬಹುದು. ಉಳಿದ ಶೇ.40ರಷ್ಟು ಮೊತ್ತವನ್ನು ಕಡ್ಡಾಯವಾಗಿ ವರ್ಷಾಶನ ಖರೀದಿಗೆ ವಿನಿಯೋಗಿಸಬೇಕು. ಆದರೆ, ಹೊಸ ನಿಯಮದ ಅನ್ವಯ ಚಂದಾದಾರರು 60 ವರ್ಷದ ಬಳಿಕ ಶೇ.60ರಷ್ಟು ಹಣವನ್ನು ಮುಂದಿನ 15 ವರ್ಷಗಳ ತನಕ ಅಂದರೆ ಅವರಿಗೆ 75 ವರ್ಷಗಳಾಗುವ ತನಕ ಮಾಸಿಕ, ತ್ರೈಮಾಸಿಕ, ವಾರ್ಷಿಕ ಅಥವಾ ಅರ್ಧವಾರ್ಷಿಕ ಅವಧಿಯಲ್ಲಿ ಹಿಂತೆಗೆದುಕೊಳ್ಳಲು ಅವಕಾಶವಿದೆ. 

NPS ವಿತ್ ಡ್ರಾಗೆ ಕೆವೈಸಿ ಕಡ್ಡಾಯ; ಏ.1ರಿಂದ ಹೊಸ ನಿಯಮ ಜಾರಿ

ವಿತ್ ಡ್ರಾ ನಿಯಮಗಳಲ್ಲಿ ಏ.1ರಿಂದ ಬದಲಾವಣೆ
ಎನ್ ಪಿಎಸ್ ವಿತ್ ಡ್ರಾ ಹಾಗೂ ವರ್ಷಾಶನಕ್ಕೆ ಸಂಬಂಧಿಸಿದ ನಿಯಮಗಳಲ್ಲಿ ಏ.1ರಿಂದ ಬದಲಾವಣೆಯಾಗಿದೆ. ಎನ್ ಪಿಎಸ್ ಖಾತೆಯಿಂದ ವಿತ್ ಡ್ರಾ ಮಾಡಲು ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಬೇಕು. ಹಾಗೆಯೇ  ಈ ಹಿಂದಿನಂತೆ ಈಗ ವರ್ಷಾಶನ ಪಡೆಯಲು ಪ್ರತ್ಯೇಕ ಅರ್ಜಿ ಭರ್ತಿ ಮಾಡಿ ಸಲ್ಲಿಸಬೇಕಾದ ಅಗತ್ಯವಿಲ್ಲ. ಗ್ರಾಹಕರು ಸಲ್ಲಿಸುವ ನಿರ್ಗಮನ ಅರ್ಜಿಯನ್ನೇ ವರ್ಷಾಶನ ಪ್ರಸ್ತಾವನೆ ನಮೂನೆ ಎಂದು ಪರಿಗಣಿಸಲಾಗುತ್ತದೆ. 
 

click me!