Digital Currency: ಮುಂದಿನ ವರ್ಷಾರಂಭದಲ್ಲಿ ಬರಲಿದೆ ಡಿಜಿಟಲ್‌ ಕರೆನ್ಸಿ

By Kannadaprabha News  |  First Published Feb 7, 2022, 7:04 AM IST

ಇತ್ತೀಚಿನ ಕೇಂದ್ರ ಬಜೆಟ್‌ನಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಘೋಷಿಸಿದ ಭಾರತದ ಮೊದಲ ಡಿಜಿಟಲ್‌ ಕರೆನ್ಸಿ 2023ರ ಆರಂಭದಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ.
 


ನವದೆಹಲಿ (ಫೆ.07): ಇತ್ತೀಚಿನ ಕೇಂದ್ರ ಬಜೆಟ್‌ನಲ್ಲಿ (Union Budget) ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ (Nirmala Sitharaman) ಘೋಷಿಸಿದ ಭಾರತದ ಮೊದಲ ಡಿಜಿಟಲ್‌ ಕರೆನ್ಸಿ (Digital Currency) 2023ರ ಆರಂಭದಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ. ಇದು ಹೆಚ್ಚುಕಮ್ಮಿ ಖಾಸಗಿ ಕಂಪನಿಗಳು ನಿರ್ವಹಿಸುತ್ತಿರುವ ಎಲೆಕ್ಟ್ರಾನಿಕ್‌ ವ್ಯಾಲೆಟ್‌ನಂತೆಯೇ ಇರಲಿದ್ದು, ಆದರೆ ಭಾರತ ಸರ್ಕಾರದಿಂದ ನಿರ್ವಹಣೆಯಾಗಲಿದೆ ಎಂದು ಕೇಂದ್ರ ಸರ್ಕಾರದ ಮೂಲಗಳು ಹೇಳಿವೆ.

ಕಾಗದದ ನೋಟಿನ ರೂಪದಲ್ಲಿರುವ ಹಣಕ್ಕೆ ಫಿಯೆಟ್‌ ಕರೆನ್ಸಿ ಎನ್ನುತ್ತಾರೆ. ಆರ್‌ಬಿಐ (RBI) ಬಿಡುಗಡೆ ಮಾಡಲಿರುವ ಡಿಜಿಟಲ್‌ ಕರೆನ್ಸಿಗೂ ಪೇಪರ್‌ ನೋಟಿಗೆ ಇರುವಂತೆ ಪ್ರತ್ಯೇಕ ನಂಬರ್‌ಗಳಿರುತ್ತವೆ. ಆದರೆ ಈ ನಂಬರ್‌ಗಳು ಯುನಿಟ್‌ಗಳಲ್ಲಿರುತ್ತವೆ. ಈ ಯುನಿಟ್‌ಗಳು ಆರ್‌ಬಿಐ ಮೂಲಕ ದೇಶದಲ್ಲಿ ಚಲಾವಣೆಯಾಗುವ ಕರೆನ್ಸಿಯ ಭಾಗವಾಗಿರುತ್ತವೆ. 

Tap to resize

Latest Videos

ಅಂದರೆ ಪೇಪರ್‌ ಕರೆನ್ಸಿಗೂ ಡಿಜಿಟಲ್‌ ಕರೆನ್ಸಿಗೂ ಹೆಚ್ಚು ವ್ಯತ್ಯಾಸವಿರುವುದಿಲ್ಲ. ಡಿಜಿಟಲ್‌ ಕರೆನ್ಸಿಯೆಂಬುದು ಮುದ್ರಿತ ನೋಟಿನ ಎಲೆಕ್ಟ್ರಾನಿಕ್‌ ರೂಪವಷ್ಟೇ ಆಗಿರುತ್ತದೆ. ಒಂದರ್ಥದಲ್ಲಿ ಇದು ಕೇಂದ್ರ ಸರ್ಕಾರದಿಂದ ನಡೆಸಲ್ಪಡುವ ಎಲೆಕ್ಟ್ರಾನಿಕ್‌ ವ್ಯಾಲೆಟ್‌ನಂತಿರುತ್ತದೆ. ಜನರು ಕಿಸೆಯಲ್ಲಿ ಪೇಪರ್‌ ಹಣ ಒಯ್ಯುವ ಬದಲು ಮೊಬೈಲ್‌ಗಳಲ್ಲಿ (Mobile) ವರ್ಚುವಲ್‌ ಹಣ ಒಯ್ಯುತ್ತಾರೆ ಎಂದು ಮೂಲಗಳು ಹೇಳಿವೆ.

Budget 2022: ಬ್ಲಾಕ್‌ಚೈನ್ ಬಳಸಿ RBI ಡಿಜಿಟಲ್ ಕರೆನ್ಸಿ: ಡಿಜಿಟಲ್‌ ಸ್ವತ್ತು ಆದಾಯದ ಮೇಲೆ ತೆರಿಗೆ!

ಹೇಗೆ ಇದರ ಕಾರ‍್ಯನಿರ್ವಹಣೆ?: ಮುಂದಿನ ಹಣಕಾಸು ವರ್ಷದಲ್ಲಿ ಡಿಜಿಟಲ್‌ ರುಪಾಯಿ (Digital Rupee) ಬಿಡುಗಡೆಯಾಗಲಿದೆ. ಇದು ಎಲ್ಲೆಲ್ಲಿ ಚಲಾವಣೆಯಾಗುತ್ತಿದೆ ಎಂಬುದನ್ನು ಆರ್‌ಬಿಐ ಕರಾರುವಾಕ್ಕಾಗಿ ನಿಗಾ ಇಡಬಹುದು. ಈಗ ಖಾಸಗಿ ಕಂಪನಿಗಳು ನಡೆಸುತ್ತಿರುವ ಮೊಬೈಲ್‌ ವ್ಯಾಲೆಟ್‌ನ ಹಣ ಎಲ್ಲೆಲ್ಲಿ ಓಡಾಡುತ್ತದೆ ಎಂಬುದು ಸರ್ಕಾರಕ್ಕೆ ತಿಳಿಯುವುದಿಲ್ಲ. ಎಲೆಕ್ಟ್ರಾನಿಕ್‌ ವ್ಯಾಲೆಟ್‌ ಬಳಸುವವರು ತಮ್ಮ ಹಣವನ್ನು ಖಾಸಗಿ ಕಂಪನಿಯ ಖಾತೆಗೆ ವರ್ಗಾಯಿಸುತ್ತಾರೆ. 

ಆ ಕಂಪನಿಯು ಸದರಿ ವ್ಯಕ್ತಿಯು ಯಾವುದಾದರೂ ವ್ಯವಹಾರ ನಡೆಸಿದಾಗ ಆತನ ಪರವಾಗಿ ವ್ಯಾಪಾರಿಗೆ ಹಣ ವರ್ಗಾಯಿಸುತ್ತದೆ. ಆರ್‌ಬಿಐನ ಡಿಜಿಟಲ್‌ ರುಪಾಯಿ ಹೀಗೆ ಕೆಲಸ ಮಾಡುವುದಿಲ್ಲ. ಇದು ಜನರ ಮೊಬೈಲ್‌ನಲ್ಲಿರುತ್ತದೆ. ಅದನ್ನು ಆರ್‌ಬಿಐ ತನ್ನ ಖಾತೆಯಲ್ಲಿರಿಸಿಕೊಂಡಿರುತ್ತದೆ. ವಹಿವಾಟು ನಡೆಸುವಾಗ ವ್ಯಕ್ತಿಯೇ ನೇರವಾಗಿ ಅದನ್ನು ವರ್ಗಾಯಿಸುತ್ತಾನೆ ಎಂದು ಮೂಲಗಳು ತಿಳಿಸಿವೆ.

ಕ್ರಿಪ್ಟೋಗೆ ತೆರಿಗೆ ಹಾಕಿದ ಮಾತ್ರಕ್ಕೆ ಕಾನೂನಿನ ಮಾನ್ಯತೆ ನೀಡಿದಂತಲ್ಲ: ಕಾನೂನು ಮಾನ್ಯತೆ ಹೊಂದಿಲ್ಲದ ಕ್ರಿಪ್ಟೊಕರೆನ್ಸಿ ಆದಾಯದ ಮೇಲೆ ತೆರಿಗೆ ವಿಧಿಸುವ ಕೇಂದ್ರ ಸರ್ಕಾರದ ನಿರ್ಧಾರವು, ಕ್ರಿಪ್ಟೋಕರೆನ್ಸಿಗೆ ಪರೋಕ್ಷವಾಗಿ ಕಾನೂನಿನ ಮಾನ್ಯತೆ ನೀಡಿದಂತೆ ಅಲ್ಲ ಎಂದು ಕೇಂದ್ರೀಯ ನೇರ ತೆರಿಗೆ ಮಂಡಳಿ (ಸಿಬಿಡಿಟಿ) ಸ್ಪಷ್ಟಪಡಿಸಿದೆ. 

Digital Currency ಕ್ರಿಪ್ಟೋಗೆ ತೆರಿಗೆ ಹಾಕಿದ ಮಾತ್ರಕ್ಕೆ ಕಾನೂನಿನ ಮಾನ್ಯತೆ ನೀಡಿದಂತಲ್ಲ, CBDT ಸ್ಪಷ್ಟನೆ!

ಈ ಕುರಿತು ಪ್ರತಿಕ್ರಿಯೆ ನೀಡಿರುವ ಸಿಬಿಡಿಟಿ ಅಧ್ಯಕ್ಷ ಜೆ.ಪಿ.ಮಹಾಪಾತ್ರ ‘ಕ್ರಿಪ್ಟೋಕರೆನ್ಸಿ ಆದಾಯಕ್ಕೆ ತೆರಿಗೆ ಮತ್ತು ವಹಿವಾಟಿಗೆ ಟಿಡಿಎಸ್‌ ವಿಧಿಸುವ ನಿರ್ಧಾರವು, ದೇಶದಲ್ಲಿನ ಕ್ರಿಪ್ಟೋ ಉದ್ಯಮದ ಆಳಗಲವನ್ನು ಪರಿಶೀಲಿಸುವ ಉದ್ದೇಶ ಹೊಂದಿದೆಯೇ ಹೊರತೂ ಅವುಗಳಿಗೆ ಕಾನೂನು ಮಾನ್ಯತೆ ನೀಡುವ ಉದ್ದೇಶದ್ದಲ್ಲ. ಯಾರು ಹೂಡಿಕೆ ಮಾಡುತ್ತಿದ್ದಾರೆ? ಅವರ ಹೂಡಿಕೆಯ ಮೊತ್ತ ಎಷ್ಟು? ಅದರ ಮೂಲ ಏನು? ಹೂಡಿಕೆಯಿಂದ ಬಂದ ಆದಾಯವನ್ನು ಅವರು ತೋರಿಸುತ್ತಿದ್ದಾರೆಯೇ? ಎಂಬುದನ್ನು ಪರಿಶೀಲಿಸುವುದಷ್ಟೇ ನಮ್ಮ ಕೆಲಸ’ ಎಂದು ಸ್ಪಷ್ಟಪಡಿಸಿದ್ದಾರೆ.

ನಾವು ಯಾವುದೇ ವಹಿವಾಟಿನ ಕಾನೂನಿನ ಮಾನ್ಯತೆಯ ಗೋಜಿಗೆ ಹೋಗುವುದಿಲ್ಲ. ನಮ್ಮ ಇಲಾಖೆ ಮತ್ತು ನಮ್ಮ ತೆರಿಗೆ ಕಾಯ್ದೆಗಳು, ಯಾವುದೇ ವ್ಯಕ್ತಿ ನಡೆಸಿದ ವ್ಯವಹಾರದಿಂದ ಆತನಿಗೆ ಆದಾಯ ಬಂದಿದೆಯೇ ಎಂಬುದನ್ನಷ್ಟೇ ಪರಿಶೀಲಿಸುತ್ತದೆ. ನಾವು ಆದಾಯದ ಕಾನೂನಿನ ಮಾನ್ಯತೆ ಪರಿಶೀಲಿಸುವುದಿಲ್ಲ, ಬದಲಾಗಿ ಅದರ ಮೇಲೆ ತೆರಿಗೆ ವಿಧಿಸುವುದನ್ನು ಪರಿಶೀಲಿಸುತ್ತೇವೆ. ಈ ಕಾರಣಕ್ಕಾಗಿಯೇ ಈಗಲೂ ನಾವು ಕ್ರಿಪ್ಟೋ ಕರೆನ್ಸಿಗೆ ತೆರಿಗೆ ವಿಧಿಸುವುದು ಅದಕ್ಕೆ ಕಾನೂನಿನ ಮಾನ್ಯತೆ ನೀಡಿದಂತೆ ಆಗುವುದಿಲ್ಲ ಎಂದು ಹೇಳುತ್ತಿರುವುದು ಎಂದು ಮಹಾಪಾತ್ರ ಹೇಳಿದ್ದಾರೆ.

click me!