ಚಿಲ್ಲರೆ ಹಣದುಬ್ಬರ ಮೂರು ತಿಂಗಳ ಕನಿಷ್ಠ ಮಟ್ಟಕ್ಕೆ ಇಳಿಕೆ; ಜನವರಿ ತಿಂಗಳಲ್ಲಿ ಶೇ.5.1ಕ್ಕೆ ಕುಸಿಯಲು ಇದೇ ಕಾರಣ

By Suvarna NewsFirst Published Feb 12, 2024, 7:13 PM IST
Highlights

ಜನವರಿ ತಿಂಗಳಲ್ಲಿ ಚಿಲ್ಲರೆ ಹಣದುಬ್ಬರ ಮೂರು ತಿಂಗಳ ಕನಿಷ್ಠ ಮಟ್ಟಕ್ಕೆ ಇಳಿಕೆಯಾಗಿದೆ. ಇದರಿಂದ ಬೆಲೆಯೇರಿಕೆಯಿಂದ ಬೇಸತ್ತ ಜನಸಾಮಾನ್ಯರಿಗೆ ತುಸು ನಿರಾಳತೆ ಸಿಕ್ಕಿದೆ. 

ನವದೆಹಲಿ (ಫೆ.12): ಭಾರತದ ಚಿಲ್ಲರೆ ಹಣದುಬ್ಬರ ಜನವರಿ ತಿಂಗಳಲ್ಲಿ ಮೂರು ತಿಂಗಳ ಕನಿಷ್ಠ ಮಟ್ಟ ಶೇ.5.1ಕ್ಕೆ ಕುಸಿದಿದೆ. ಆಹಾರ ಪದಾರ್ಥಗಳ ಬೆಲೆಯೇರಿಕೆಯಲ್ಲಿ ನಿಧಾನಗತಿ ಸೇರಿದಂತೆ ಕೆಲವೊಂದು ಬೆಳವಣಿಗೆಗಳು ಈ ಇಳಿಕೆಗೆ ಕಾರಣ. ಈ ಬಗ್ಗೆ ಸಾಂಖ್ಯಿಕ ಹಾಗೂ ಕಾರ್ಯಕ್ರಮ ಅನುಷ್ಠಾನ ಸಚಿವಾಲಯ ಮಾಹಿತಿ ನೀಡಿದ್ದು, ಅದರ ಅನ್ವಯ ಗ್ರಾಮೀಣ ಸಿಪಿಐ ಹಣದುಬ್ಬರ ಶೇ.5.34ರಷ್ಟಿದ್ದು, ನಗರ ಪ್ರದೇಶದ ಹಣದುಬ್ಬರ ಶೇ.4.92ರಷ್ಟಿದೆ. ಇನ್ನು ಭಾರತದ ಕೈಗಾರಿಕಾ ಉತ್ಪಾದನೆ ಸೂಚ್ಯಂಕದಲ್ಲಿ  2023ರ ಡಿಸೆಂಬರ್ ನಲ್ಲಿ ಶೇ.3.8ರಷ್ಟು ಬೆಳವಣಿಗೆಯಾಗಿದೆ. 2023ರ ನವೆಂಬರ್ ನಲ್ಲಿ ಇದು ಶೇ.6.4ರಷ್ಟು ಬೆಳವಣಿಗೆ ದಾಖಲಿಸಿತ್ತು. ದೇಶದ  ಚಿಲ್ಲರೆ ಹಣದುಬ್ಬರ 2023ರ ಜನವರಿಯಲ್ಲಿ ಶೇ.6.52ರಷ್ಟಿತ್ತು ಹಾಗೂ 2023ರ ಡಿಸೆಂಬರ್ ನಲ್ಲಿ ಶೇ.5.69ರಷ್ಟಿತ್ತು. ಈ ಎರಡು ತಿಂಗಳಿಗೆ ಹೋಲಿಸಿದರೆ ಈ ಬಾರಿ ಚಿಲ್ಲರೆ ಹಣದುಬ್ಬರ ಇಳಿಕೆಯಾಗಿದೆ. ಹಣದುಬ್ಬರಕ್ಕೆ ಆರ್ ಬಿಐ ಶೇ.4ರಿಂದ ಶೇ.6ರ ಸಹನ ಮಿತಿಯನ್ನು ನಿಗದಿಪಡಿಸಿದೆ. 

ರಾಷ್ಟ್ರೀಯ ಸಾಂಖ್ಯಿಕ ಕಚೇರಿ (NSO) ಬಿಡುಗಡೆಗೊಳಿಸಿರುವ ಅಂಕಿಅಂಶಗಳ ಅನ್ವಯ ಆಹಾರ ಬಾಸ್ಕೆಟ್ ಚಿಲ್ಲರೆ ಹಣದುಬ್ಬರ ಶೇ.7.58ರಷ್ಟಿದೆ. 2023ರ ಡಿಸೆಂಬರ್ ನಲ್ಲಿ ಇದು ಶೇ.9.53ರಷ್ಟಿತ್ತು. ಇನ್ನು ಕಳೆದ ವಾರ ಆರ್ ಬಿಐ ಘೋಷಿಸಿದ ಹಣಕಾಸು ನೀತಿಯಲ್ಲಿ ಆರ್ ಬಿಐ ಸಿಪಿಐ ಹಣದುಬ್ಬರವನ್ನು 2023-24ನೇ ಸಾಲಿಗೆ ಶೇ.5.4ಕ್ಕೆ ನಿಗದಿಪಡಿಸಿತ್ತು. ಇನ್ನು 2024–2025ನೇ ಹಣಕಾಸು ಸಾಲಿಗೆ ಸಿಪಿಐ ಹಣದುಬ್ಬರವನ್ನು ಶೇ. 4.5ಕ್ಕೆ ಅಂದಾಜಿಸಲಾಗಿದೆ. 

Latest Videos

ಸೋಶಿಯಲ್‌ ಮೀಡಿಯಾದಲ್ಲಿ ಬೆಳ್ಳುಳ್ಳಿ ಕಬಾಬ್‌ ಟ್ರೆಂಡ್‌, ಮಾರ್ಕೆಟ್‌ನಲ್ಲಿ ಬೆಳ್ಳುಳ್ಳಿ ಕೆಜಿಗೆ ಫೈವ್‌ ಹಂಡ್ರೆಡ್‌!

ಇನ್ನು ಹೆಡ್ ಲೈನ್ ಚಿಲ್ಲರೆ ಹಣದುಬ್ಬರ ಜನವರಿಯಲ್ಲಿ ತಗ್ಗಿತ್ತು. ಸತತ 52 ತಿಂಗಳಿಂದ ಚಿಲ್ಲರೆ ಹಣದುಬ್ಬರ ಭಾರತೀಯ ರಿಸರ್ವ್ ಬ್ಯಾಂಕಿನ (ಆರ್ ಬಿಐ) ಮಧ್ಯಮ ಅವಧಿ ಗುರಿಯಾದ ಶೇ.4ಕ್ಕಿಂತ ಮೇಲಿದೆ. ಆದರೂ ಕಳೆದ 5 ತಿಂಗಳಿಂದ ಇದು ಆರ್ ಬಿಐಯ ಸಹನ ಮಿತಿಯಾದ ಶೇ.2ರಿಂದ ಶೇ.6ರ ನಡುವೆ ಇದೆ. 

ಜನವರಿಯಲ್ಲಿ ಹಣದುಬ್ಬರದಲ್ಲಿ ಆಹಾರ ಪದಾರ್ಥಗಳ ಬೆಲೆಗಳಲ್ಲಿನ ಇಳಿಕೆಯೇ ಕಾರಣ. ಆಹಾರ ಪದಾರ್ಥಗಳ ಬೆಲೆಗಳಲ್ಲಿ ತಿಂಗಳಿಂದ ತಿಂಗಳಿಗೆ ಇಳಿಕೆ ಕಂಡುಬರುತ್ತಿದೆ. 2023ರ ಡಿಸೆಂಬರ್ ನಿಂದ ಆಹಾರ ಬೆಲೆ ಸೂಚ್ಯಂಕದಲ್ಲಿ ಶೇ.0.7ರಷ್ಟು ಇಳಿಕೆ ಕಂಡುಬಂದಿದೆ. ಇನ್ನು ಆಹಾರ ಪದಾರ್ಥಗಳಲ್ಲಿ ತರಕಾರಿಗಳ ಬೆಲೆ ಸೂಚ್ಯಂಕದಲ್ಲಿ ತಿಂಗಳಿಂದ ತಿಂಗಳಿಗೆ ಶೇ.4.2ರಷ್ಟು ಇಳಿಕೆಯಾಗಿದೆ. ಇನ್ನು ಹಣ್ಣುಗಳ ಬೆಲೆಗಳಲ್ಲಿ ಶೇ.2.0ರಷ್ಟು ಇಳಿಕೆ ಕಂಡುಬಂದಿದೆ. 

ಇನ್ನು ಆಹಾರ ಪದಾರ್ಥಗಳಲ್ಲಿನ ಬೆಲೆಯೇರಿಕೆ ನೋಡೋದಾದರೆ ಮೊಟ್ಟೆ ಬೆಲೆಯಲ್ಲಿ ಶೇ.3.5ರಷ್ಟು ಹಾಗೂ ಧಾನ್ಯಗಳ ಬೆಲೆಯಲ್ಲಿ ಶೇ.0.8ರಷ್ಟು ಏರಿಕೆ ಕಂಡುಬಂದಿದೆ. ಒಟ್ಟಾರೆ ನೋಡಿದ್ರೆ 2023ರ ಡಿಸೆಂಬರ್ ಗೆ ಹೋಲಿಸಿದರೆ ಜನವರಿ ತಿಂಗಳಲ್ಲಿ ಆಹಾರ ಹಣದುಬ್ಬರ ಇಳಿಕೆಯಾಗಿದೆ. ಡಿಸೆಂಬರ್ ನಲ್ಲಿ ಶೇ.9.53ರಷ್ಟಿದ್ದ ಆಹಾರ ಹಣದುಬ್ಬರ ಜನವರಿಯಲ್ಲಿ ಶೇ.8.30ಕ್ಕೆ ಇಳಿಕೆಯಾಗಿದೆ. 

ಜಾಗತಿಕ ಹಸಿವು ಸೂಚ್ಯಂಕ: 111ನೇ ಸ್ಥಾನಕ್ಕೆ ಕುಸಿದ ಭಾರತ: ಕೇಂದ್ರದಿಂದ ವರದಿ ತಿರಸ್ಕಾರ

ಕಳೆದ ವಾರದ ನಡೆದ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿಐ) ಹಣಕಾಸು ನೀತಿ ಸಮಿತಿ (ಎಂಪಿಸಿ) ದ್ವೈಮಾಸಿಕ ಸಭೆಯಲ್ಲಿ ರೆಪೋ ದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಹೀಗಾಗಿ ರೆಪೋ ದರ ಈ ಹಿಂದಿನ ಶೇ. 6.5ರಲ್ಲೇ ಇರಲಿದೆ. ಈ ಮೂಲಕ ಸತತ ಆರನೇ ಬಾರಿ ಆರ್ ಬಿಐ ರೆಪೋ ದರದಲ್ಲಿ ಯಥಾಸ್ಥಿತಿ ಕಾಯ್ದುಕೊಂಡಿದೆ. 2024ರಲ್ಲಿ ಜಾಗತಿಕ ಬೆಳವಣಿಗೆ ಸ್ಥಿರವಾಗಿರುವ ವಿಶ್ವಾಸವನ್ನು ಆರ್ ಬಿಐ ಗವರ್ನರ್ ವ್ಯಕ್ತಪಡಿಸಿದ್ದಾರೆ. ಜಾಗತಿಕ ವ್ಯಾಪಾರದ ವೇಗ ದುರ್ಬಲವಾಗಿದ್ದರು ಕೂಡ ಚೇತರಿಕೆಯ ಸೂಚನೆಗಳು ಕಂಡುಬರುತ್ತಿವೆ. 2024ರಲ್ಲಿ ಇದು ಇನ್ನಷ್ಟು ವೇಗವಾಗಿ ಬೆಳೆಯುವ ನಿರೀಕ್ಷೆಯಿದೆ. ಹಣದುಬ್ಬರ ಗಮನಾರ್ಹವಾಗಿ ತಗ್ಗಿದ್ದು, 2024ರಲ್ಲಿ ಮತ್ತಷ್ಟು ಇಳಿಕೆಯಾಗುವ ನಿರೀಕ್ಷೆಯಿದೆ ಎಂದು ಆರ್ ಬಿಐ ಗವರ್ನರ್ ತಿಳಿಸಿದ್ದಾರೆ. ಇನ್ನು ಚಿಲ್ಲರೆ ಹಣದುಬ್ಬರ ಕೂಡ ಇಳಿಕೆಯ ಹಾದಿಯಲ್ಲಿರುವ ಕಾರಣ ಈ ವರ್ಷದ ಜೂನ್ ತನಕವಾದರೂ ಆರ್ ಬಿಐ ರೆಪೋ ದರದಲ್ಲಿ ಯಾವುದೇ ಬದಲಾವಣೆ ಮಾಡುವ ಸಾಧ್ಯತೆಯಿಲ್ಲ ಎಂದು ಊಹಿಸಲಾಗಿದೆ. 


 

click me!