
ನವೆದೆಹಲಿ (ಡಿ.03) ಸರ್ಕಾರಿ ಸ್ವಾಮ್ಯ ಹಾಗೂ ಖಾಸಗಿ ಬ್ಯಾಂಕ್‌ಗಳಲ್ಲಿ ಒಟ್ಟು ಸೇರಿ ಬರೋಬ್ಬರಿ 67,004 ಕೋಟಿ ರೂಪಾಯಿ ಬಿದ್ದಿದೆ. ಈ ಹಣಕ್ಕೆ ಮಾಲೀಕರಿಲ್ಲ, ಮಾಲೀಕರು ಇದ್ದರೂ ಇದುವರೆಗೂ ಕ್ಲೈಮ್ ಮಾಡಿಲ್ಲ. ಉಳಿತಾಯ ಖಾತೆ, ಮ್ಯೂಚ್ಯುವಲ್ ಫಂಡ್, ಫಿಕ್ಸೆಡ್ ಸೇರದಿಂತೆ ಹಲವು ರೂಪದಲ್ಲಿ ಈ ಹಣ ಬ್ಯಾಂಕ್‌ನಲ್ಲಿ ಭದ್ರವಾಗಿದೆ. ಹಣವನ್ನು ಮಾಲೀಕರಿಗೆ ಹಿಂದರುಗಿಸಲು ಆರ್‌ಬಿಐ ಶತಪ್ರಯತ್ನ ಮಾಡುತ್ತಿದೆ. ಅತೀ ಸುಲಭ ರೂಪದಲ್ಲಿ ಹಣ ಕ್ಲೈಮ್ ಮಾಡಲು ಎಲ್ಲಾ ನೆರವು ನೀಡುತ್ತಿದೆ. ಹೀಗೆ ಬ್ಯಾಂಕ್‌ನಲ್ಲಿ ಕೊಳೆಯುತ್ತಿರುವ ಕೋಟಿ ಕೋಟಿ ರೂಪಾಯಿ ಮೊತ್ತದಲ್ಲಿ ನಿಮ್ಮ ಹಣ ಇದೆಯಾ ಅನ್ನೋದು ಸುಲಭವಾಗಿ ಚೆಕ್ ಮಾಡಬಹುದು. ಈ ಪೈಕಿ ನಿಮ್ಮ ಹಣ ಪತ್ತೆಯಾದರೆ ಅಷ್ಟೇ ಸುಲಭವಾಗಿ ನಿಮ್ಮ ಖಾತೆಗೆ ವರ್ಗಾವಣೆ ಮಾಡಬುಹುದು.
ಹಣಕಾಸು ರಾಜ್ಯ ಸಚಿವ ಪಂಕಚ್ ಚೌಧರಿ ಈ ಕುರಿತು ರಾಜ್ಯಸಬೆಗೆ ಮಾಹಿತಿ ನೀಡಿದ್ದಾರೆ. ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳಲ್ಲಿರುವ ಅನ್ ಕ್ಲೈಮ್ ಮೊತ್ತ 58,331 ಕೋಟಿ ರೂಪಾಯಿ, ಇನ್ನು ಖಾಸಗಿ ಬ್ಯಾಂಕ್‌ನಲ್ಲಿರುವ ಮೊತ್ತ 8,673 ಕೋಟಿ ರೂಪಾಯಿ. ಎರಡು ಸೆಕ್ಟರ್ ಸೇರಿ ಒಟ್ಟು ಮೊತ್ತ 67,004 ಕೋಟಿ ರೂಪಾಯಿ. ಈ ಪೈಕಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಗರಿಷ್ಠ ಅಂದರೆ 19,330 ಕೋಟಿ ರೂಪಾಯಿ ಇದ್ದರೆ, ಪಂಜಾಬ್ ನ್ಯಾಷನಲ್ ಬ್ಯಾಂಕ್‌ನಲ್ಲಿ 6,911 ಕೋಟಿ ರೂಪಾಯಿ, ಕೆನರಾ ಬ್ಯಾಂಕ್‌ನಲ್ಲಿ 6,278 ಕೋಟಿ ರೂಪಾಯಿ ಹಣ ಬಾಕಿ ಉಳಿದಿದೆ.
ಆರ್‌ಬಿಆ ಸಹಭಾಗಿತ್ವದಲ್ಲಿ ಎಲ್ಲಾ ಬ್ಯಾಂಕ್‌ಗಳು ನಿಮ್ಮ ಹಣ ನಿಮ್ಮ ಹಕ್ಕು ಎಂಬ ಆಂದೋಲನ ಮಾಡುತ್ತಿದೆ. ಈ ಮೂಲಕ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ. ಆರ್‌ಬಿಐ ಕೂಡ ಈ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಸತತ ಅಭಿಯಾನ ನಡೆಸುತ್ತಿದೆ. ಬಾಕಿ ಹಣ ಕ್ಲೈಮ್ ಮಾಡಿ ಖಾತೆಗೆ ವರ್ಗಾಯಿಸಲು ಶತ ಪ್ರಯತ್ನ ಮಾಡುತ್ತಿದೆ. ಇದರ ಪರಿಣಾಮ ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳಿಂದ 9,456 ಕೋಟಿ ರೂಪಾಯಿ ಹಾಗೂ ಖಾಸಗಿ ಬ್ಯಾಂಕ್‌ಗಳಿಂದ 841 ಕೋಟಿ ರೂಪಾಯಿ ಹಣವನ್ನು ಮಾಲೀಕರಿಗೆ ಮರಳಿ ನೀಡಲಾಗಿದೆ.
ವಿವಿಧ ಬ್ಯಾಂಕ್‌ಗಳಲ್ಲಿ ಮಾಲೀಕರು ಮರಳಿ ಪಡೆಯದೇ ಉಳಿದಿರುವ, ಸೂಕ್ತ ಮಾಲೀಕರಿಲ್ಲದೆ ಇರುವ ಹಣದ ಕುರಿತು ಬಹುತೇಕರಿಗೆ ಮಾಹಿತಿ ಇಲ್ಲ. ಹಲವರು ಫಿಕ್ಸೆಡ್ ಡೆಪಾಸಿಟ್, ಕರೆಂಟ್ ಅಕೌಂಟ್ ಸೇರಿದಂತೆ ವಿವಿಧ ರೂಪದಲ್ಲಿ ಹಲವು ದಶಕಗಳ ಹಿಂದೆ ಹಣ ಹೂಡಿಕೆ ಮಾಡಿ ಮರೆತಿರುವ ಸಾಧ್ಯತೆ ಇದೆ. ಅಥವಾ ಡೆಪಾಸಿಟ್ ಮಾಡಿದ ವ್ಯಕ್ತಿ ನಿಧನರಾಗಿರುವ ಕಾರಣ ಅವರ ಮಕ್ಕಳು, ಅರ್ಹರಿಗೆ ಇದರ ಮಾಹಿತಿ ಇಲ್ಲದೇ ಇರಬಹುದು. ಹೀಗೆ ನೀವು ಮರೆತೆ, ಗೊತ್ತಿಲ್ಲದೆ ಇರುವ ಹಣ ಬ್ಯಾಂಕ್‌ನಲ್ಲಿದೆಯಾ ಅನ್ನೋದು ಚೆಕ್ ಮಾಡಲು ಆರ್‌ಬಿಐ ಪೋರ್ಟಲ್ ನೆರವು ನೀಡಿದೆ. UDGAM ಪೋರ್ಟಲ್ ಮೂಲಕ ಸುಲಭವಾಗಿ ನಿಮ್ಮ ಅನ್ ಕ್ಲೈಮ್ ಮೊತ್ತ ಇದೆಯಾ ಅನ್ನೋದು ಚೆಕ್ ಮಾಡಲು ಸಾಧ್ಯವಿದೆ. ಸುಮಾರು 30 ಬ್ಯಾಂಕ್‌ಗಳ ಜೊತೆ ಆರ್‌ಬಿಐ ಲಿಂಕ್ ಆಗಿದ್ದು, ಈ ಬ್ಯಾಂಕ್‌ಗಳಲ್ಲಿ ನಿಮ್ಮ ಅನ್ ಕ್ಲೈಮ್ ಮೊತ್ತ ಇದ್ದರೆ ಚೆಕ್ ಮಾಡಲು ಸಾಧ್ಯವಿದೆ.
UDGAM ಮೂಲಕ ನಿಮ್ಮ ಹೆಸರು, ಮೊಬೈಲ್ ನಂಬರ್, ಹುಟ್ಟಿದ ದಿನಾಂಕ ದಾಖಲಿಸಿ ಚೆಕ್ ಮಾಡಿ. ನಿಮ್ಮ ಹೆಸರಿನಲ್ಲಿ ಯಾವುದೇ ಅನ್‌ಕ್ಲೈಮ್ ಮೊತ್ತ ಇದ್ದರೆ ಈ ಪೋರ್ಟಲ್ ತಿಳಿಸಲಿದೆ. ಕೇವಲ ಬ್ಯಾಂಕ್ ಖಾತೆಯಲ್ಲಿರುವ ಅನ್‌ಕ್ಲೈಮ್ ಮೊತ್ತ ಮಾತ್ರವಲ್ಲ, ಡಿವಿಡೆಂಟ್, ಷೇರು, ವಿಮೆ ಸೇರಿದಂತೆ ಹಲವು ಮೂಲಗಳನ್ನು ಪರಿಶೀಲಿಸಬಹುದು.
ಪರೀಶೀಲನೆ ವೇಳೆ ಹಣ ಪತ್ತೆಯಾದರೆ ಕೆವೈಸಿ ದಾಖಲೆಗಳು, ಮೃತಪಟ್ಟವರ ಹಣವಾಗಿದ್ದರೆ, ಅವರ ಮರಣ ಪ್ರಮಾಣ ಪತ್ರ, ಹಣ ನಿಮಗೆ ಸೇರಿದ್ದು ಎಂದು ಸಾಬೀತುಪಡಿಸಲು ಬೇಕಾದ ಫ್ಯಾಮಿಲಿ ಟ್ರಿ ದಾಖಲೆಗಳನ್ನು ಸಲ್ಲಿಕೆ ಮಾಡಿ ಹಣ ಕ್ಲೈಮ್ ಮಾಡಿಕೊಳ್ಳಬಹುದು.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.