
ಪ್ರಪಂಚದ ಅತ್ಯಂತ ಬಲಿಷ್ಠ ಆರ್ಥಿಕತೆಯಲ್ಲಿ ಒಂದಾಗಿರುವ ಭಾರತದ ಮೇಲೆ ತೆರಿಗೆ ಯುದ್ಧಕ್ಕಿಳಿದಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀತಿ ವಿರುದ್ಧ ಅಲ್ಲಿನ ಆರ್ಥಿಕ ತಜ್ಞರೇ ಕಳವಳ ವ್ಯಕ್ತಪಡಿಸಿದ್ದಾರೆ. ಭಾರತದ ವಿರುದ್ಧ ಅಮೆರಿಕಾದ ಈ ಆರ್ಥಿಕ ಸಮರವೂ ತನ್ನ ಕಾಲಿಗೆ ತಾನೇ ಗುಂಡು ಹೊಡೆದುಕೊಂಡಂತೆ ಎಂದು ಅಮೆರಿಕಾದ ಪ್ರಸಿದ್ಧ ಆರ್ಥಿಕ ತಜ್ಞ ರಿಚರ್ಡ್ ವೂಲ್ಫ್ ಹೇಳಿದ್ದಾರೆ. ರಷ್ಯಾ ಟುಡೇಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅಮೆರಿಕಾದ ಆರ್ಥಿಕ ತಜ್ಞ ರಿಚರ್ಡ್ ವೂಲ್ಫ್, ಬ್ರಿಕ್ಸ್ ಅನ್ನು ಪಶ್ಚಿಮಾತ್ಯ ರಾಷ್ಟ್ರಗಳಿಗೆ ಆರ್ಥಿಕ ಪರ್ಯಾಯವಾಗಲು ಒತ್ತಾಯಿಸುತ್ತಿರುವ ಭಾರತದ ವಿರುದ್ಧ ವಿಶ್ವದ ಕಠಿಣ ವ್ಯಕ್ತಿಯಂತೆ ವರ್ತಿಸುತ್ತಿರುವ ಅಮೆರಿಕದ ನಡೆಯೂ ತನ್ನ ಕಾಲಿಗೆ ತಾನೇ ಗುಂಡು ಹೊಡೆದುಕೊಂಡತೆ ಎಂದು ಬಣ್ಣಿಸಿದ್ದಾರೆ.
ಭಾರತದ ವಿರುದ್ಧ ಟ್ರಂಪ್ ತೆರಿಗೆ ನೀತಿಗೆ ಅಮೆರಿಕಾ ತಜ್ಞರಿಂದಲೇ ವಿರೋಧ:
ವಿಶ್ವಸಂಸ್ಥೆಯ ಪ್ರಕಾರ ಭಾರತ ಈಗ ಭೂಮಿಯ ಮೇಲಿನ ಅತಿದೊಡ್ಡ ಆರ್ಥಿಕವಾಗಿ ಸಧೃಡ ದೇಶವಾಗಿದೆ. ಇಂತಹ ಸಂದರ್ಭದಲ್ಲಿ ಭಾರತ ಏನು ಮಾಡಬೇಕೆಂದು ಅಮೆರಿಕ ಹೇಳುತ್ತಿರುವುದು, ಇಲ್ಲಿ 'ಇಲಿ ಆನೆಗೆ ಮುಷ್ಟಿಯಿಂದ ಹೊಡೆದಂತೆ' ಎಂದು ಅವರು ಹೇಳುವ ಮೂಲಕ ಟ್ರಂಪ್ ಅವರ ಆರ್ಥಿಕ ನೀತಿಗೆ ಪರೋಕ್ಷವಾಗಿ ವಿರೋಧ ವ್ಯಕ್ತಪಡಿಸಿದ್ದಾರೆ.
ಉಕ್ರೇನ್ ಮೇಲೆ ಯುದ್ಧ ಮಾಡುತ್ತಿರುವ ರಷ್ಯಾದಿಂದ ತೈಲವನ್ನು ಖರೀದಿಸಿದ್ದಕ್ಕಾಗಿ ಭಾರತವನ್ನು ಶಿಕ್ಷಿಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮುಂದಾಗಿದ್ದು, ಭಾರತೀಯ ಉತ್ಪನ್ನಗಳ ಮೇಲೆ ಅಮೆರಿಕದಿಂದ ಶೇ.50 ರಷ್ಟು ಸುಂಕಗಳನ್ನು ಹಾಕಲಾಗಿದೆ. ಇದು ಬುಧವಾರದಿಂದಲೇ ಜಾರಿಗೆ ಬಂದಿದೆ. ಈಗಾಗಲೇ ಅಸ್ತಿತ್ವದಲ್ಲಿರುವ ಸುಂಕವನ್ನು ದ್ವಿಗುಣಗೊಳಿಸಲಾಗಿದ್ದು, ಈ ತೆರಿಗೆ ಸಂಘರ್ಷವನ್ನು ಕೊನೆಗೊಳಿಸಬೇಕಾದರೆ ಭಾರತ ರಷ್ಯಾದಿಂದ ತೈಲ ಖರೀದಿಸುವುದನ್ನು ನಿಲ್ಲಿಸಿ ಆ ದೇಶಕ್ಕೆ ಸಂಪೂರ್ಣ ಆರ್ಥಿಕ ದಿಗ್ಬಂಧನ ಹಾಕಬೇಕು ಎಂಬುದು ಟ್ರಂಪ್ ಒತ್ತಾಯ. ಆದರೆ ಟ್ರಂಪ್ ಈ ಆಟಕ್ಕೆ ಭಾರತ ಕ್ಯಾರೇ ಅಂದಿಲ್ಲ. ಹೀಗಾಗಿ ಡೊನಾಲ್ಡ್ ಟ್ರಂಪ್ ಉರಿದು ಬಿದ್ದಿದ್ದು, ಭಾರತದ ನೆರೆಯ ರಾಷ್ಟ್ರಗಳಾದ ಪಾಕಿಸ್ತಾನ ಹಾಗೂ ಬಾಂಗ್ಲಾದೇಶದಿಂದ ಯಾವುದೇ ತೆರಿಗೆ ಇಲ್ಲದೇ ವಸ್ತುಗಳನ್ನು ರಫ್ತು ಮಾಡಿಕೊಳ್ಳುವ ನಿರ್ಧಾರಕ್ಕೆ ಬಂದಿದೆ.
ಟ್ರಂಪ್ ಆಟದಿಂದ ಬ್ರಿಕ್ಸ್ ರಾಷ್ಟ್ರಗಳು ಸಬಲವಾಗಲಿವೆ:
ಟ್ರಂಪ್ ಅವರ ಈ ನಡೆಗೆ ಅಲ್ಲಿನ ಆರ್ಥಿಕ ತಜ್ಞರಿಂದಲೇ ಅಸಮಾಧಾನ ಕೇಳಿ ಬಂದಿದೆ. ಈ ಬಗ್ಗೆ ರಷ್ಯಾ ಟುಡೇಗೆ ಮಾತನಾಡಿದ ವೋಲ್ಫ್, ಅಮೆರಿಕ ಭಾರತದ ಜೊತೆಗಿನ ಆರ್ಥಿಕ ವ್ಯಾಪಾರ ಸಂಪರ್ಕವನ್ನು ಕಡಿತಗೊಳಿಸಿದರೆ ಭಾರತ ತನ್ನ ರಫ್ತುಗಳನ್ನು ಮಾರಾಟ ಮಾಡಲು ಇತರ ದೇಶಗಳನ್ನು ಹುಡುಕಿಕೊಳ್ಳುತ್ತದೆ ಮತ್ತು ಈ ಕ್ರಮವು ಬ್ರಿಕ್ಸ್ ರಾಷ್ಟ್ರಗಳನ್ನು ಬಲಪಡಿಸುತ್ತದೆ. ರಷ್ಯಾ ತನ್ನ ಇಂಧನವನ್ನು ಮಾರಾಟ ಮಾಡಲು ಮತ್ತೊಂದು ಸ್ಥಳವನ್ನು ಕಂಡುಕೊಂಡ, ಭಾರತವು ಇನ್ನು ಮುಂದೆ ತನ್ನ ಸರಕುಗಳನ್ನು ಅಮೆರಿಕಕ್ಕೆ ಮಾರಾಟ ಮಾಡುವುದಿಲ್ಲ, ಬದಲಾಗಿ ಬ್ರಿಕ್ಸ್‌ನ ಉಳಿದ ಭಾಗಗಳಿಗೆ ಮಾರಾಟ ಮಾಡುತ್ತದೆ ಎಂದು ವೋಲ್ಫ್ ಹೇಳಿದರು.
ಬ್ರಿಕ್ಸ್ ದೇಶಗಳು ಯಾವುದವು?
ಬ್ರಿಕ್ಸ್ ಎಂಬುದು ಹತ್ತು ದೇಶಗಳನ್ನು ಒಳಗೊಂಡಿರುವ ಒಂದು ಗುಂಪಾಗಿದೆ. ಬ್ರೆಜಿಲ್, ರಷ್ಯಾ, ಭಾರತ, ಚೀನಾ, ದಕ್ಷಿಣ ಆಫ್ರಿಕಾ, ಈಜಿಪ್ಟ್, ಇಥಿಯೋಪಿಯಾ, ಇಂಡೋನೇಷ್ಯಾ, ಇರಾನ್ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ಈ ಬ್ರಿಕ್ಸ್ ಗುಂಪಿನಲ್ಲಿದೆ. ಈ ಬ್ರಿಕ್ಸ್ ದೇಶಗಳು ಪಾಶ್ಚಿಮಾತ್ಯ ರಾಷ್ಟ್ರಗಳ ಆರ್ಥಿಕ ಪ್ರಾಬಲ್ಯವನ್ನು ಎದುರಿಸುವ ಗುರಿಯನ್ನು ಹೊಂದಿವೆ ಮತ್ತು ಡಾಲರ್‌ನ ಪ್ರಾಬಲ್ಯವನ್ನು ಪ್ರಶ್ನಿಸಲು ಪರ್ಯಾಯ ಮಾರ್ಗಗಳನ್ನು ಅನ್ವೇಷಿಸುತ್ತಿವೆ. ನೀವು ಚೀನಾ, ಭಾರತ, ರಷ್ಯಾ ಮತ್ತು ಬ್ರಿಕ್ಸ್ ದೇಶಗಳನ್ನು ತೆಗೆದುಕೊಂಡರೆ, ಆ ದೇಶಗಳು ಉತ್ಪಾದಿಸುವ ವಿಶ್ವ ಉತ್ಪಾದನೆಯ ಒಟ್ಟು ಪಾಲು ಶೇ.35. ಆದರೆ ಜಿ7ಯ ಸಾಮರ್ಥ್ಯ ಸುಮಾರು ಶೇ. 28 ಕ್ಕೆ ಇಳಿಕೆಯಾಗಿದೆ ಎಂದು ವೋಲ್ಫ್ ಹೇಳಿದ್ದಾರೆ.
ಅಮೆರಿಕದ ಮಾರ್ಕ್ಸಿಯನ್ ಅರ್ಥಶಾಸ್ತ್ರಜ್ಞರಾಗಿರುವ ವೋಲ್ಫ್ ಅವರು ಭಾರತವನ್ನು ನಿರ್ಲಕ್ಷಿಸುತ್ತಾ ಬ್ರಿಕ್ಸ್ ಬಣವನ್ನು ಪರೋಕ್ಷವಾಗಿ ಪೋಷಿಸುತ್ತಿರುವ ಟ್ರಂಪ್ ಸುಂಕಗಳ ಬಗ್ಗೆ ಅಮೆರಿಕಾವನ್ನು ಎಚ್ಚರಿಸಿದ್ದಾರೆ. ನೀವು ಮಾಡುತ್ತಿರುವುದೇನೆಂದರೆ ನಿಮ್ಮ ಬಿಸಿಮನೆ ಫ್ಯಾಷನ್(hothouse fashion),ಬ್ರಿಕ್ಸ್ ಅನ್ನು ಪಶ್ಚಿಮಕ್ಕೆ ಎಂದೆಂದಿಗೂ ದೊಡ್ಡದಾದ, ಹೆಚ್ಚು ಸಮಗ್ರ ಮತ್ತು ಯಶಸ್ವಿ ಆರ್ಥಿಕ ಪರ್ಯಾಯವಾಗಿ ಅಭಿವೃದ್ಧಿಪಡಿಸುವುದು. ನಾವು ಐತಿಹಾಸಿಕ ಕ್ಷಣವನ್ನು ವೀಕ್ಷಿಸುತ್ತಿದ್ದೇವೆ ಎಂದು ಅವರು ಹೇಳಿದ್ದಾರೆ.
ಬ್ರಿಕ್ಸ್ ಗುಂಪು ಸಾಮಾನ್ಯ ಕರೆನ್ಸಿಯನ್ನು ರಚಿಸಲು ಮುಂದಾದರೆ ಎಚ್ಚರಿಕೆ ಎಂದಿದ್ದ ಟ್ರಂಪ್:
ಹಲವು ಸಂದರ್ಭಗಳಲ್ಲಿ ಬ್ರಿಕ್ಸ್ ಅನ್ನು ಸ್ವೀಕರಿಸಲು ಸಿದ್ಧನಿಲ್ಲದ ಟ್ರಂಪ್ ಅದನ್ನು ಬಹಳ ಲಘುವಾಗಿ ಸ್ವೀಕರಿಸಿದ್ದು, ಇದು ವೇಗವಾಗಿ ಕಣ್ಮರೆಯಾಗುವ ಸಣ್ಣ ಗುಂಪು ಎಂದು ಹೇಳಿದ್ದಾರೆ ಮತ್ತು ಕಳೆದ ಫೆಬ್ರವರಿಯಲ್ಲಿ ಬ್ರಿಕ್ಸ್ ಸತ್ತಿದೆ ಎಂದು ಹೇಳಿದ್ದರು. ಈ ಬ್ರಿಕ್ಸ್ ಗುಂಪು ಸಾಮಾನ್ಯ ಕರೆನ್ಸಿಯನ್ನು ರಚಿಸಲು ಮುಂದಾದರೆ ಗುಂಪಿನ ಮೇಲೆ ಶೇ.100 ಪ್ರತಿಶತ ಸುಂಕಗಳನ್ನು ವಿಧಿಸುವುದಾಗಿಯೂ ಅವರು ಬೆದರಿಕೆ ಹಾಕಿದ್ದಾರೆ ಅಲ್ಲದೇ ಅವರು ಮತ್ತೊಂದು ಕೆಟ್ಟ ರಾಷ್ಟ್ರವನ್ನು ಹುಡುಕಬಹುದು ಎಂದೆಲ್ಲಾ ಹೇಳಿಕೆ ನೀಡಿದ್ದರು.
ಸೋವಿಯತ್ ಯುಗದಿಂದಲೂ ಭಾರತವು ಅಮೆರಿಕದೊಂದಿಗೆ ದೀರ್ಘಕಾಲದ ಸಂಬಂಧವನ್ನು ಹೊಂದಿದೆ ಎಂದು ವೋಲ್ಫ್ ವಿವರಿಸಿದ್ದು, ನೀವು(ಟ್ರಂಪ್) ತುಂಬಾ ವಿಭಿನ್ನ ಎದುರಾಳಿಯೊಂದಿಗೆ ಆಟವಾಡುತ್ತಿದ್ದೀರಿ ಎಂದು ಅವರು ನೆನಪಿಸಿದರು. ಇತ್ತ ಟ್ರಂಪ್ ನಡೆಯನ್ನು ಭಾರತ ಟೀಕಿಸಿದ್ದು, ಟ್ರಂಪ್ ನಡೆಯುಅನ್ಯಾಯದ, ನ್ಯಾಯಸಮ್ಮತವಲ್ಲದ ಮತ್ತು ಅಸಮಂಜಸ ಎಂದು ಹೇಳಿದೆ.
ಒಟ್ಟಿನಲ್ಲಿ ಟ್ರಂಪ್ ಅವರು ಹುಚ್ಚು ನಡೆಗಳು, ತಾನೊಬ್ಬನೇ ಶ್ರೇಷ್ಠ,ತನ್ನ ಮಾತೇ ಎಲ್ಲರೂ ಕೇಳಬೇಕು ಎಂಬ ನೀತಿಯ ವಿರುದ್ಧ ಭಾರತ ತಿರುಗಿ ಬಿದ್ದಿದೆ. ಒಂದು ವೇಳೆ ರಿಚರ್ಡ್ ವೋಲ್ಫ್ ಅವರಂದಂತೆ ಆದರೆ ಇತ್ತ ಬ್ರಿಕ್ಸ್ ದೇಶಗಳು ಸಧೃಡವಾಗಿ ಅಮೆರಿಕಾದ ಡಾಲರ್‌ಗೆ ದೊಡ್ಡ ಹೊಡೆತ ನೀಡುವುದಂತು ಪಕ್ಕಾ. ಹೀಗೆ ಆಗಿದ್ದೆ ಆದಲ್ಲಿ ಅಮೆರಿಕಾ ಆರ್ಥಿಕ ಸಂಕಷ್ಟಕ್ಕೆ ತುತ್ತಾಗುವ ದಿನ ದೂರವಿಲ್ಲ.
ಇದನ್ನೂ ಓದಿ: ಆಟೋದಿಂದ ಇಳಿದ ನಂತರ ಜೇಬು ನೋಡಿದ್ರೆ ಖಾಲಿ ಖಾಲಿ: 30 ರೂ.ಗಾಗಿ ಬಾಲಕನಿಗೆ ಥಳಿಸಿದ ಆಟೋ ಚಾಲಕ
ಇದನ್ನೂ ಓದಿ: ಬೀಯಾಸ್ ನದಿಯ ಪ್ರವಾಹಕ್ಕೆ ಅಂಜದೇ ಅಳುಕದೇ ನಿಂತ ಹನುಮಾನ್ ದೇಗುಲದ ಅರ್ಚಕ ವಿಡಿಯೋ
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.