
ನವದೆಹಲಿ: ಭಾರತೀಯ ವಸ್ತುಗಳ ರಫ್ತಿನ ಮೇಲೆ ಈಗಾಗಲೇ ಅಮೆರಿಕ ಹೇರಿರುವ ತೆರಿಗೆಯು ತಕ್ಷಣಕ್ಕೆ ಹೇಳಿಕೊಳ್ಳುವಂಥ ಪರಿಣಾಮ ಬೀರದೇ ಇರಬಹುದು. ಆದರೆ, ಹೆಚ್ಚುವರಿ ಶೇ.25ರ ತೆರಿಗೆಯು ದೇಶದ ಅರ್ಥ ವ್ಯವಸ್ಥೆಯಲ್ಲಿ ಸವಾಲುಗಳನ್ನು ಸೃಷ್ಟಿಸಲಿದ್ದು, ಅವುಗಳಿಗೆ ಪರಿಹಾರ ಕಂಡುಕೊಳ್ಳಬೇಕಿದೆ ಎಂದು ಹಣಕಾಸು ಸಚಿವಾಲಯದ ವರದಿ ಹೇಳಿದೆ.
ಒಂದು ವೇಳೆ ಇಂಥ ಹಿನ್ನಡೆಗಳನ್ನು ನಾವು ಸರಿಯಾಗಿ ನಿಭಾಯಿಸಿದರೆ ಅವು ನಮ್ಮನ್ನು ಹೆಚ್ಚು ಬಲಿಷ್ಠ ಮತ್ತು ಸಕ್ರಿಯಗೊಳಿಸಲು ನೆರವು ನೀಡುತ್ತದೆ ಎಂದೂ ವರದಿ ತಿಳಿಸಿದೆ.
ಆರ್ಥಿಕ ವ್ಯವಹಾರಗಳ ಇಲಾಖೆಯ ಮಾಸಿಕ ಆರ್ಥಿಕ ಪರಿಶೀಲನಾ ವರದಿಯಲ್ಲಿ ಭಾರತದಿಂದ ರಫ್ತಾಗುತ್ತಿರುವ ವಸ್ತುಗಳ ಮೇಲೆ ಅಮೆರಿಕದ ಶೇ.50ರಷ್ಟು ತೆರಿಗೆಯ ಪರಿಣಾಮಗಳ ಕುರಿತ ಬೆಳೆಕು ಚೆಲ್ಲಲಾಗಿದೆ. ಜತೆಗೆ, ಅಮೆರಿಕ ಜತೆಗಿನ ತೆರಿಗೆ ಬಿಕ್ಕಟ್ಟು ಸೃಷ್ಟಿಸಿರುವ ಸವಾಲುಗಳ ನಡುವೆಯೂ ಸರ್ಕಾರದ ಸುಧಾರಣಾ ಕ್ರಮಗಳು, ಈಗಾಗಲೇ ನಡೆಯುತ್ತಿರುವ ಮುಕ್ತ ವ್ಯಾಪಾರ ಒಪ್ಪಂದಗಳು ದೇಶದ ಆರ್ಥಿಕ ಬೆಳವಣಿಗೆಗೆ ಬೆಂಬಲ ನೀಡಲಿವೆ ಎಂದು ಅಭಿಪ್ರಾಯಪಟ್ಟಿದೆ.
ಸದ್ಯೋಭವಿಷ್ಯದ ಆರ್ಥಿಕ ಹೊಡೆತವನ್ನು ಹಣಕಾಸು ಬಲ ಮತ್ತು ಸಾಮರ್ಥ್ಯ ಹೊಂದಿರುವವರು ಸಹಿಸಿಕೊಂಡರೆ ಕೆಳಹಂತದ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಈ ವ್ಯಾಪಾರ ಬಿಕ್ಕಟ್ಟಿನ ಸವಾಲುಗಳಿಂದ ಮತ್ತಷ್ಟು ಬಲಿಷ್ಠವಾಗಿ ಹೊರಹೊಮ್ಮಲು ಸಾಧ್ಯವಾಗಲಿದೆ. ಇದೀಗ ಎಲ್ಲರೂ ರಾಷ್ಟ್ರೀಯ ಹಿತಾಸಕ್ತಿಯನ್ನು ಪ್ರದರ್ಶಿಸುವ ಅಗತ್ಯವಿದೆ ಎಂದು ವರದಿಯಲ್ಲಿ ಹೇಳಲಾಗಿದೆ.
ತೆರಿಗೆಯ ಅನಿಶ್ಚಿತತೆಯಿಂದಾಗಿ ಸದ್ಯೋಭವಿಷ್ಯದಲ್ಲಿ ಆರ್ಥಿಕ ಚಟುವಟಿಕೆಗಳಲ್ಲಿ ರಿಸ್ಕ್ ಇದ್ದರೂ ಸರ್ಕಾರ ಮತ್ತು ಖಾಸಗಿ ಕ್ಷೇತ್ರಗಳು ಜತೆಯಾಗಿ ಕೆಲಸ ಮಾಡಿದರೆ ಆರ್ಥಿಕತೆ ಮೇಲಾಗುವ ಹಾನಿ ಇಳಿಸಬಹುದು. ಈ ಸಂದಿಗ್ಧ ಕಾಲಘಟ್ಟದಲ್ಲಿ ದೇಶವು ವೈವಿಧ್ಯಮಯ ವ್ಯಾಪಾರ ತಂತ್ರಗಾರಿಕೆಗೆ ಹೆಚ್ಚಿನ ಆದ್ಯತೆ ನೀಡುತ್ತಿದೆ ಎಂದು ಹೇಳಿದೆ.
ಇದೇ ವೇಳೆ ಭಾರತ ಮತ್ತು ಅಮೆರಿಕ ನಡುವೆ ನಡೆಯುತ್ತಿರುವ ತೆರಿಗೆ ಮಾತುಕತೆ ಮಹತ್ವದ್ದಾಗಿದೆ ಎಂದು ತಿಳಿಸಿರುವ ಸಚಿವಾಲಯವು, ಸದ್ಯ ಸರ್ಕಾರವು ಅಮೆರಿಕ, ಯುರೋಪಿಯನ್ ಯೂನಿಯನ್, ನ್ಯೂಜಿಲ್ಯಾಂಡ್, ಚಿಲಿ, ಪೆರು ದೇಶಗಳ ಜತೆಗೆ ಮುಕ್ತ ವ್ಯಾಪಾರ ಒಪ್ಪಂದ ಕುರಿತು ಮಾತುಕತೆ ನಡೆಸುತ್ತಿದೆ. ಇದು ಅಂತಾರಾಷ್ಟ್ರೀಯ ವ್ಯಾಪಾರದ ವ್ಯೂಹಾತ್ಮಕ ಮರುಹೊಂದಾಣಿಕೆಯ ಪ್ರಯತ್ನದ ಭಾಗವಾಗಿದೆ. ಆದರೆ ಈ ಪ್ರಯತ್ನಗಳು ತಕ್ಷಣಕ್ಕೆ ಯಾವುದೇ ಫಲಿತಾಂಶ ನೀಡದೇ ಹೋಗಬಹುದು. ಅಮೆರಿಕದ ತೆರಿಗೆ ಹೇರಿಕೆಯಿಂದಾಗಿ ಸೃಷ್ಟಿಯಾಗಿರುವ ಸವಾಲುಗಳನ್ನು ಪೂರ್ಣವಾಗಿ ಪರಿಹರಿಸದಿರಬುಹುದು ಎಂದೂ ವರದಿಯಲ್ಲಿ ಹಣಕಾಸು ಸಚಿವಾಲಯವು ಅಭಿಪ್ರಾಯಪಟ್ಟಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.