ಸಿಂಗಾಪುರಕ್ಕೂ ಮಾಡಿ ಫೋನ್‌ ಪೇ, ಪೇಟಿಎಂ: ಹೊಸ ಸೇವೆಗೆ ಪ್ರಧಾನಿ ಮೋದಿ ಚಾಲನೆ

By Kannadaprabha News  |  First Published Feb 22, 2023, 8:52 AM IST

ಡಿಜಿಟಲ್‌ ವಹಿವಾಟು ಶೀಘ್ರ ನಗದು ಮೀರಿಸಲಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಸಿಂಗಾಪುರ ಜತೆ ಯುಪಿಐ ವ್ಯವಹಾರಕ್ಕೆ ಚಾಲನೆ ನೀಡಿದ್ದು, ಭಾರತದಿಂದ ಮೊದಲ ಬಾರಿ ವಿದೇಶದೊಂದಿಗೆ ಯುಪಿಐ ವಹಿವಾಟು ನಡೆಸಲಿದೆ. 


ನವದೆಹಲಿ (ಫೆಬ್ರವರಿ 22, 2023): ‘ದೇಶದಲ್ಲಿ ಶೀಘ್ರ ಯುಪಿಐ ಮೂಲಕ ನಡೆಯುವ ಪೇಮೆಂಟ್‌ ವಹಿವಾಟು, ನಗದು ವ್ಯವಹಾರವನ್ನು ಮೀರಿಸಲಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಸಿಂಗಾಪುರದ ಪೇ ನೌ ಹಾಗೂ ಭಾರತದ ಯುಪಿಐ ನಡುವೆ ಯುಪಿಐ ಪೇಮೆಂಟ್‌ಗೆ ಸಂಬಂಧಿಸಿದಂತೆ ಒಪ್ಪಂದ ಏರ್ಪಟ್ಟಿದ್ದು, ಇದರಿಂದ ಭಾರತದಲ್ಲಿನ ಯುಪಿಐ ಆ್ಯಪ್‌ಗಳಾದ ಗೂಗಲ್‌ ಪೇ, ಫೋನ್‌ ಪೇ, ಭೀಮ್‌ ಯುಪಿಐನಂಥ ಆ್ಯಪ್‌ಗಳ ಮೂಲಕ ಸಿಂಗಾಪುರಕ್ಕೆ ಕ್ಷಣಾರ್ಧದಲ್ಲಿ ಹಣ ರವಾನಿಸಬಹುದಾಗಿದೆ ಹಾಗೂ ಅಲ್ಲಿಂದ ಹಣ ಸ್ವೀಕರಿಸಬಹುದಾಗಿದೆ. ಈ ಮೂಲಕ ಮೊದಲ ಬಾರಿ ಯುಪಿಐ ವ್ಯವಹಾರ ವಿದೇಶದೊಂದಿಗೆ ಆರಂಭವಾಗಲಿದೆ. ಈ ವಹಿವಾಟಿಗೆ ಮಂಗಳವಾರ ಮೋದಿ ಚಾಲನೆ ನೀಡಿ ಮಾತನಾಡಿದರು.

‘ಭಾರತದಲ್ಲಿ 2022ರಲ್ಲಿ 74 ಶತಕೋಟಿ ಯುಪಿಐ ವಹಿವಾಟು ನಡೆದಿದ್ದು, ಇದರ ಒಟ್ಟಾರೆ ಮೌಲ್ಯ 126 ಶತಕೋಟಿ ರೂ. .ಗಳಾಗಿದೆ. ಅನೇಕ ತಜ್ಞರು ಶೀಘ್ರದಲ್ಲೇ ನಗದು ವಹಿವಾಟನ್ನು ಯುಪಿಐ ಮೀರಿಸಲಿದೆ ಎಂದು ಅಂದಾಜಿಸಿದ್ದಾರೆ. ಈಗ ಸಿಂಗಾಪುರದೊದನೆ ಯುಪಿಐ ವ್ಯವಹಾರ ಆರಂಭವಾಗಲಿದ್ದು, ಇದೊಂದು ಮೈಲಿಗಲ್ಲು. ಇದರಿಂದ ಉಭಯ ದೇಶಗಳ ಜನರು, ಅದರಲ್ಲೂ ವಿಶೇಷವಾಗಿ ಸಿಂಗಾಪುರದಲ್ಲಿನ ಭಾರತೀಯ ಸಂಜಾತರು ನಿರಾತಂಕವಾಗಿ ಸುರಕ್ಷಿತ ವಿಧಾನ ಬಳಸಿ ಹಣದ ವ್ಯವಹಾರ ನಡೆಸಬಹುದು. ಭಾರತವು ಇದೇ ಮೊದಲ ಬಾರಿ ಇಂಥ ಪರ್ಸನ್‌ ಟು ಪರ್ಸನ್‌ (ಪಿ2ಪಿ) ಪೇಮೆಂಟ್‌ ಸೇವೆಯನ್ನು ವಿದೇಶದೊಂದಿಗೆ ಆರಂಭಿಸುತ್ತಿದ್ದು, ಆ ದೇಶ ಸಿಂಗಾಪುರವಾಗಿದೆ’ ಎಂದರು.

Tap to resize

Latest Videos

ಇದನ್ನು ಓದಿ: ಇನ್ಮುಂದೆ ಈ ದೇಶಗಳ ಪ್ರವಾಸಿಗರು ಸಹ ಭಾರತದಲ್ಲಿ ಯುಪಿಐ ಮೂಲಕ ಪೇಮೆಂಟ್‌ ಮಾಡಬಹುದು..!

ಸಿಂಗಾಪುರ ಜತೆ ಯುಪಿಐ ವ್ಯವಹಾರ ಹೇಗೆ?
ಬಳಕೆದಾರರು ತಮ್ಮ ಯುಪಿಐ ಆ್ಯಪ್‌ ಬಳಸಿಕೊಂಡು ಸಿಂಗಾಪುರದಿಂದ ಭಾರತಕ್ಕೆ ಹಾಗೂ ಭಾರತದಿಂದ ಸಿಂಗಾಪುರಕ್ಕೆ ಹಣ ವರ್ಗಾವಣೆ ಮಾಡಿಕೊಳ್ಳಬಹುದು. ಮೊಬೈಲ್‌ ನಂಬರ್‌, ಯುಪಿಐ ಐಡಿ ಅಥವಾ ವರ್ಚುವಲ್‌ ಪಾವತಿ ವಿಳಾಸ (ವಿಪಿಎ) ಬಳಸಿ ಹಣ ವರ್ಗಾಯಿಸಬಹುದು.

ಮೊದಲಿಗೆ, ಎಸ್‌ಬಿಐ, ಇಂಡಿಯನ್‌ ಓವರ್‌ಸೀಸ್‌ ಬ್ಯಾಂಕ್‌, ಇಂಡಿಯನ್‌ ಬ್ಯಾಂಕ್‌ ಮತ್ತು ಐಸಿಐಸಿಐ ಬ್ಯಾಂಕ್‌ ಗ್ರಾಹಕರು ಹಣ ಕಳಿಸಬಹುದು ಹಾಗೂ ಪಡೆಯಲೂಬಹುದು. ಎಕ್ಸಿಸ್‌ ಬ್ಯಾಂಕ್‌ ಹಾಗೂ ಡಿಬಿಎಸ್‌ ಇಂಡಿಯಾ ಖಾತೆಗಳಲ್ಲಿ ಸಿಂಗಾಪುರದಿಂದ ಹಣ ಪಡೆಯಬಹುದು. ಸಿಂಗಾಪುರದಲ್ಲಿನ ಬಳಕೆದಾರರಿಗೆ ಈ ಸೇವೆಯು ಡಿಬಿಎಸ್‌ ಸಿಂಗಾಪುರ ಹಾಗೂ ಲಿಕ್ವಿಡ್‌ ಗ್ರೂಪ್‌ ಎಂಬ ಬ್ಯಾಂಕಿಂಗ್‌ ಸಂಸ್ಥೆಗಳಲ್ಲಿ ಈ ಸೇವೆ ಲಭ್ಯವಿರುತ್ತದೆ. ಕಾಲಕ್ರಮೇಣ ಹೆಚ್ಚಿನ ಬ್ಯಾಂಕ್‌ಗಳನ್ನು ಲಿಂಕ್‌ ಮಾಡಲಾಗುತ್ತದೆ.

ಇದನ್ನೂ ಓದಿ: ಫೋನ್ ಪೇ ಬಳಕೆದಾರರಿಗೆ ಶುಭಸುದ್ದಿ; ಇನ್ಮುಂದೆ ವಿದೇಶಗಳಲ್ಲೂ ಪಾವತಿ ಸಾಧ್ಯ

ಆರಂಭದಲ್ಲಿ ಭಾರತೀಯ ಬಳಕೆದಾರರು ಒಂದು ದಿನದಲ್ಲಿ 60,000 ವರೆಗೆ (ಸಿಂಗಾಪುರ ಕರೆನ್ಸಿ ಮೌಲ್ಯ ಸುಮಾರು 1,000) ರವಾನೆ ಮಾಡಬಹುದು. ವಹಿವಾಟು ಮಾಡುವ ಸಮಯದಲ್ಲಿ, ಗ್ರಾಹಕರ ಅನುಕೂಲಕ್ಕಾಗಿ ಭಾರತೀಯ ಹಾಗೂ ಸಿಂಗಾಪುರ ಕರೆನ್ಸಿಗಳಲ್ಲೆರಡರಲ್ಲೂ ಆ್ಯಪ್‌ನಲ್ಲಿ ಲೆಕ್ಕಾಚಾರ ಸಿಗುತ್ತದೆ.

ಇದನ್ನೂ ಓದಿ: ಕೇಂದ್ರದಿಂದ ಮಹತ್ವದ ಹೆಜ್ಜೆ, ಭೀಮ್, ಯುಪಿಐ, ರುಪೇ ಡೆಬಿಟ್ ಕಾರ್ಡ್‌ ವಹಿವಾಟಿಗೆ ಪ್ರೋತ್ಸಾಹ ಧನ!

click me!