ನಿವೃತ್ತಿ ಬಳಿಕ ಅಧಿಕ ಪಿಂಚಣಿ ಪಡೆಯಲು ಅರ್ಹತೆ ಹೊಂದಿರುವ ಉದ್ಯೋಗಿಗಳಿಗೆ ಅರ್ಜಿ ಸಲ್ಲಿಕೆಗೆ ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (EPFO) ಮಾರ್ಗಸೂಚಿ ಬಿಡುಗಡೆಗೊಳಿಸಿದೆ. ಹೇಗೆ ಅರ್ಜಿ ಸಲ್ಲಿಕೆ ಮಾಡಬೇಕು ಹಾಗೂ ಯಾರು ಅರ್ಜಿ ಸಲ್ಲಿಕೆಗೆ ಅರ್ಹರು ಎಂಬ ಬಗ್ಗೆ ಮಾರ್ಗಸೂಚಿಯಲ್ಲಿ ಮಾಹಿತಿ ನೀಡಿದೆ.
ನವದೆಹಲಿ (ಫೆ.21): ವೇತನ ಪಡೆಯುವ ಪ್ರತಿ ವ್ಯಕ್ತಿಯೂ ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯಲ್ಲಿ (ಇಪಿಎಫ್ಒ) ಖಾತೆ ಹೊಂದಿರುತ್ತಾನೆ. ಹೀಗಿರುವಾಗ ಉದ್ಯೋಗಿಗಳ ಪಿಂಚಣಿ ಯೋಜನೆ (ಇಪಿಎಸ್) ಅಡಿಯಲ್ಲಿ ನಿವೃತ್ತಿ ಬಳಿಕ ಅಧಿಕ ಪಿಂಚಣಿ ಪಡೆಯಲು ಯಾರು ಅರ್ಹರಾಗಿದ್ದರೋ ಅಂಥ ಉದ್ಯೋಗಿಗಳಿಗೆ ಇಪಿಎಫ್ಒ ಫೆ.20ರಂದು ಮಾರ್ಗಸೂಚಿ ಬಿಡುಗಡೆಗೊಳಿಸಿದೆ. ಉದ್ಯೋಗಿ ಹಾಗೂ ಉದ್ಯೋಗದಾತ ಸಂಸ್ಥೆ ಜಂಟಿಯಾಗಿ ಅರ್ಜಿ ಸಲ್ಲಿಸಲು ಇಪಿಎಫ್ಒ ಅವಕಾಶ ಕಲ್ಪಿಸಿದೆ. ಸುಪ್ರೀಂ ಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ಅಧಿಕ ಪಿಂಚಣಿ ಕೋರಿ ಅರ್ಜಿ ಸಲ್ಲಿಸಲು ಇಪಿಎಫ್ ಒ ಅವಕಾಶ ನೀಡಿದೆ. ಸುಪ್ರೀಂ ಕೋರ್ಟ್ ಇತ್ತೀಚಿನ ತೀರ್ಪು 2023ರ ಮಾರ್ಚ್ 3ರ ತನಕ ಅರ್ಜಿ ಸಲ್ಲಿಕೆಗೆ ಕಾಲಾವಕಾಶ ನೀಡಿತ್ತು. ಉದ್ಯೋಗಿಗಳ ಪಿಂಚಣಿ ಯೋಜನೆಗೆ 2014ರಲ್ಲಿ ತಿದ್ದುಪಡಿ ತರಲಾಗಿದ್ದು, ಇದನ್ನು ಸುಪ್ರೀಂ ಕೋರ್ಟ್ ಕೂಡ ಎತ್ತಿ ಹಿಡಿದಿದ್ದು 2022ರ ನವೆಂಬರ್ 4ರಂದು ತೀರ್ಪು ಪ್ರಕಟಿಸಿದೆ. ಈ ತೀರ್ಪನ್ನು ಎಲ್ಲ ಕಚೇರಿಗಳು ಜಾರಿ ಮಾಡಬೇಕೆಂದು ಇಪಿಎಫ್ ಒ ಸೂಚನೆ ನೀಡಿದೆ. ಹಾಗೆಯೇ ಅಧಿಕ ಪಿಂಚಣಿ ಪಡೆಯಲು ಅರ್ಜಿ ಸಲ್ಲಿಸೋದು ಹೇಗೆ ಎಂಬ ಬಗ್ಗೆ ಕೂಡ ಮಾರ್ಗಸೂಚಿಯಲ್ಲಿ ಮಾಹಿತಿ ನೀಡಿದೆ.
2014ರ ಆಗಸ್ಟ್ 22ರಂದು ಇಪಿಎಸ್ ಪರಿಷ್ಕರಣೆ ಮಾಡಲಾಗಿದ್ದು, ಪಿಂಚಣಿ ಪಡೆಯಲು ವೇತನ ಮಿತಿಯನ್ನು ತಿಂಗಳಿಗೆ 6,500ರೂ.ನಿಂದ 15,000 ರೂ.ಗೆ ಏರಿಕೆ ಮಾಡಲಾಗಿತ್ತು. ಜೊತೆಗೆ ಉದ್ಯೋಗಿಗಳು ಹಾಗೂ ಉದ್ಯೋಗದಾತ ಸಂಸ್ಥೆಗಳು ಅವರ ವೇತನದ ಶೇ.8.33ರಷ್ಟನ್ನು ಇಪಿಎಸ್ ಗೆ ಕೊಡುಗೆಯಾಗಿ ನೀಡಲು ಅನುಮತಿ ನೀಡಲಾಗಿತ್ತು. ಸುಪ್ರೀಂ ಕೋರ್ಟ್ ಉದ್ಯೋಗಿಗಳ ಪಿಂಚಣಿ (ತಿದ್ದುಪಡಿ) ಯೋಜನೆ 2014 ಅನ್ನು ಕಳೆದ ವರ್ಷ ನವೆಂಬರ್ ನಲ್ಲಿ ಎತ್ತಿ ಹಿಡಿದಿತ್ತು ಕೂಡ.
ಪ್ಯಾನ್ ಕಾರ್ಡ್ ಕಳೆದು ಹೋಗಿದೆಯಾ? ಡೋಂಟ್ ವರಿ, ಮರು ಅರ್ಜಿ ಸಲ್ಲಿಕೆ ಮಾಡಿ
ಯಾರು ಅರ್ಜಿ ಸಲ್ಲಿಸಬಹುದು?
ಇಪಿಎಫ್ಒ ನಿನ್ನೆ (ಫೆ.21) ಬಿಡುಗಡೆಗೊಳಿಸಿರುವ ಮಾರ್ಗಸೂಚಿ ಅನ್ವಯ 5,000ರೂ. ಅಥವಾ 6,500 ರೂ. ವೇತನ ಮಿತಿ ಮೀರಿದ ಇಪಿಎಫ್ಒಗೆ ಕೊಡುಗೆ ನೀಡಿದ ಎಲ್ಲ ಉದ್ಯೋಗಿಗಳು ಹಾಗೂ ಉದ್ಯೋಗದಾತರು ಅಧಿಕ ಪಿಂಚಣಿ ಪಡೆಯಲು ಅರ್ಜಿ ಸಲ್ಲಿಸಬಹುದು. ಇನ್ನು ನಿವೃತ್ತಿಗೂ ಮುನ್ನ ಅಧಿಕ ಪಿಂಚಣಿ ಆಯ್ಕೆ ಮಾಡಿಕೊಂಡವರು ಹಾಗೂ ಉದ್ಯೋಗಿಗಳ ಭವಿಷ್ಯ ನಿಧಿ (ಇಪಿಎಫ್) ಅಡಿಯಲ್ಲಿ ಅಧಿಕ ವೇತನದ ಕೊಡುಗೆ ನೀಡಿದ ಉದ್ಯೋಗಿಗಳು ಕೂಡ ಅಧಿಕ ಪಿಂಚಣಿ ಸೌಲಭ್ಯ ಪಡೆಯಲು ಅರ್ಹರು. 2014ರ ಸೆಪ್ಟೆಂಬರ್ 1ರಂದು ಇಪಿಎಸ್ ಸದಸ್ಯರಾಗಿರುವ ಉದ್ಯೋಗಿಗಳು 1995ರ ನಿಯಮ 11(3) ಅನ್ವಯ ಹೆಚ್ಚು ಪಿಂಚಣಿ ಪಡೆಯಲು ಅರ್ಹರಾಗಿದ್ದಾರೆ ಎಂದು ಇಪಿಎಫ್ಒ ತಿಳಿಸಿದೆ. ಇವರು ತಮ್ಮ ವೇತನದ ಶೇ.8.33ರಷ್ಟನ್ನು ಪಿಂಚಣಿಗೆ ಕೊಡುಗೆಯಾಗಿ ನೀಡಬಹುದು.ಇನ್ನು 2014ರ ಸೆಪ್ಟೆಂಬರ್ 1ಕ್ಕಿಂತ ಮುನ್ನ ನಿವೃತ್ತಿ ಹೊಂದಿದ ಹಾಗೂ ಅಧಿಕ ಪಿಂಚಣಿ ಆಯ್ಕೆ ಮಾಡದ ಉದ್ಯೋಗಿಗಳು ಈ ಸೌಲಭ್ಯ ಪಡೆಯಲು ಅರ್ಹರಾಗಿಲ್ಲ.
ಮನೆ ಖರೀದಿಯಲ್ಲಿ ಪತ್ನಿ ಪಾಲುದಾರಳೇ? ಹಾಗಿದ್ರೆ ಆಸ್ತಿ ಆದಾಯ ತೆರಿಗೆಯಲ್ಲೂ ಆಕೆಗೆ ಪಾಲಿದೆ!
ಅರ್ಜಿ ಸಲ್ಲಿಕೆ ಹೇಗೆ?
ಒಂದು ವೇಳೆ ನೀವು ಅಧಿಕ ಪಿಂಚಣಿಗೆ ಅರ್ಜಿ ಸಲ್ಲಿಸಲು ಅರ್ಹತೆ ಹೊಂದಿದ್ದರೆ, ನಿಗದಿತ ಫಾರ್ಮ್ ನಲ್ಲಿ ಅರ್ಜಿ ಸಲ್ಲಿಸಬಹುದು. ಅರ್ಹ ಸದಸ್ಯರು ಸಂಬಂಧಪಟ್ಟ ಪ್ರಾದೇಶಿಕ ಇಪಿಎಫ್ ಒ ಕಚೇರಿಗೆ ಭೇಟಿ ನೀಡಿ ಅರ್ಜಿ ಸಲ್ಲಿಕೆ ಮಾಡಬೇಕು. ಜೊತೆಗೆ ಅಗತ್ಯ ದಾಖಲೆಗಳನ್ನು ಕೂಡ ಒದಗಿಸಬೇಕಿದೆ. ಹೆಚ್ಚು ಪಿಂಚಣಿ ಪಡೆಯಲು ಅರ್ಜಿ ಸಲ್ಲಿಸುವಾಗ ಆಯುಕ್ತರು ಸೂಚಿಸಿದ ವಿಧಾನದಲ್ಲೇ ಅರ್ಜಿ ಸಲ್ಲಿಕೆ ಮಾಡಬೇಕು ಎಂದು ಇಪಿಎಫ್ಒ ಹೊರಡಿಸಿರುವ ಸುತ್ತೋಲೆಯಲ್ಲಿ ತಿಳಿಸಲಾಗಿದೆ. ಇನ್ನು ಭವಿಷ್ಯ ನಿಧಿಯಿಂದ ಪಿಂಚಣಿ ನಿಧಿಗೆ ಮರು ಹೊಂದಾಣಿಕೆ ಮಾಡಲು ಪಿಂಚಣಿದಾರರು ಅರ್ಜಿಯಲ್ಲಿ ಆತ/ಆಕೆಯ ಒಪ್ಪಿಗೆ ನೀಡೋದು ಅಗತ್ಯ. ಇನ್ನು ನಿಧಿ ಠೇವಣಿಗೆ ಸಂಬಂಧಿಸಿ ಸಂಬಂಧಪಟ್ಟ ಸುತ್ತೋಲೆಗಳಲ್ಲಿ ಸೂಚಿಸಿರುವ ವಿಧಾನವನ್ನು ಬಳಸಲಾಗುತ್ತದೆ.