ITR Filing:ಸ್ವ ಉದ್ಯೋಗ ಹೊಂದಿರುವ ವ್ಯಕ್ತಿ ಕೂಡ HRA ಕ್ಲೇಮ್ ಮಾಡಬಹುದಾ?

By Suvarna News  |  First Published May 30, 2023, 4:04 PM IST

ವೇತನ ಪಡೆಯುವ ಉದ್ಯೋಗಿಗಳು ಐಟಿಆರ್ ಸಲ್ಲಿಕೆ ಸಮಯದಲ್ಲಿ ಮನೆ ಬಾಡಿಗೆ ಭತ್ಯೆಯನ್ನು ಕ್ಲೇಮ್ ಮಾಡುತ್ತಾರೆ. ಆದರೆ, ವೇತನ ಪಡೆಯದ ಸ್ವ ಉದ್ಯೋಗಿಗಳು ಅಥವಾ ಎಚ್ ಆರ್ ಎ ಸೌಲಭ್ಯ ಹೊಂದಿರದ ವೇತನ ಪಡೆಯುವ ಉದ್ಯೋಗಿಗಳು ಕೂಡ ಎಚ್ ಆರ್ ಎ ಕ್ಲೇಮ್ ಮಾಡಬಹುದಾ? ಈ ಬಗ್ಗೆ ಆದಾಯ ತೆರಿಗೆ ಕಾಯ್ದೆಯಲ್ಲಿ ಏನಿದೆ? ಇಲ್ಲಿದೆ ಮಾಹಿತಿ.


Business Desk: 2022-23ನೇ ಆರ್ಥಿಕ ಸಾಲಿನ ಆದಾಯ ತೆರಿಗೆ ರಿಟರ್ನ್ (ಐಟಿಆರ್) ಸಲ್ಲಿಕೆಗೆ ಜುಲೈ 31 ಅಂತಿಮ ಗಡುವಾಗಿದೆ. ಐಟಿಆರ್ ಅನ್ನು ಸಮಯಕ್ಕೆ ಸರಿಯಾಗಿ ಫೈಲ್ ಮಾಡೋದು ಅಗತ್ಯ. ಇಲ್ಲವಾದ್ರೆ ದಂಡ ಬೀಳುತ್ತದೆ.ಇನ್ನು ಐಟಿಆರ್ ಸಲ್ಲಿಕೆ ಮಾಡುವಾಗ ವೇತನ ಪಡೆಯುವ ತೆರಿಗೆದಾರರು ಮನೆ ಬಾಡಿಗೆ ಭತ್ಯೆ (ಎಚ್ ಆರ್ ಎ) ಕ್ಲೇಮ್ ಮಾಡುತ್ತಾರೆ. ಆದರೆ, ಇದು ನಿರ್ದಿಷ್ಟ ಷರತ್ತುಗಳಿಗೆ ಒಳಪಟ್ಟಿರುತ್ತದೆ. ಹೀಗಿರುವಾಗ ಬಾಡಿಗೆ ಮನೆಯಲ್ಲಿರುವ ವೇತನ ಪಡೆಯದ ವ್ಯಕ್ತಿಗಳು ತೆರಿಗೆ ಪ್ರಯೋಜನಗಳನ್ನು ಕ್ಲೇಮ್ ಮಾಡಬಹುದಾ? ತಜ್ಞರ ಪ್ರಕಾರ ಎಚ್ ಆರ್ ಎ ಸೌಲಭ್ಯವಿಲ್ಲದ ವೇತನ ಪಡೆಯದ ವ್ಯಕ್ತಿಗಳು ಕೂಡ ಬಾಡಿಗೆ ಪಾವತಿ ಮೇಲೆ ಸಣ್ಣ ಪ್ರಮಾಣದಲ್ಲಿ ತೆರಿಗೆ ವಿನಾಯಿತಿ ಪಡೆಯಬಹುದು. ಆದಾಯ ತೆರಿಗೆ ಕಾಯ್ದೆ ಅಧ್ಯಾಯ -VIಎ ಅಡಿಯಲ್ಲಿ ಬರುವ ಸೆಕ್ಷನ್ 80ಜಿಜಿ ಅನ್ನು ಸ್ವ ಉದ್ಯೋಗ ಹೊಂದಿರುವ ಹಾಗೂ ವೇತನ ಪಡೆಯುವ ಉದ್ಯೋಗಿಗಳಿಗೆ ತೆರಿಗೆ ವಿನಾಯಿತಿ ಕಲ್ಪಿಸುವುದಕೋಸ್ಕರ ರೂಪಿಸಲಾಗಿದೆ. ಆದರೆ, ಈ ಸೌಲಭ್ಯ ಪಡೆಯಲು ಕೆಲವು ಷರತ್ತುಗಳನ್ನು ಪೂರ್ಣಗೊಳಿಸುವುದು ಅಗತ್ಯ.

ಏನೆಲ್ಲ ಷರತ್ತುಗಳು?
*ತೆರಿಗೆದಾರ, ಆತ ಅಥವಾ ಆಕೆಯ ಅಪ್ರಾಪ್ತ ಮಗು, ಸಂಗಾತಿ ಅಥವಾ ಹಿಂದು ಅವಿಭಜಿತ ಕುಟುಂಬ (ಎಚ್ ಯುಎಫ್) ಕಚೇರಿ ಕೆಲಸಗಳನ್ನು ಅಥವಾ ಉದ್ಯಮ ಅಥವಾ ವೃತ್ತಿ ನಡೆಸಲು ಯಾವುದೇ ಸ್ವಂತ ಮನೆ ಹೊಂದಿರಬಾರದು. 
*ತೆರಿಗೆದಾರ ಬಾಡಿಗೆ ಪಾವತಿ ಮಾಹಿತಿಗಳೊಂದಿಗೆ ಅರ್ಜಿ ನಮೂನೆ 10BA ಸಲ್ಲಿಕೆ ಮಾಡಬೇಕು.

Tap to resize

Latest Videos

ITR ಫೈಲ್ ಮಾಡುವಾಗ ಯಾವುದೇ ಕಾರಣಕ್ಕೂ ಈ 5 ತಪ್ಪುಗಳನ್ನು ಮಾಡ್ಬೇಡಿ

ಆದಾಯ ತೆರಿಗೆ ಕಾಯ್ದೆ ಸೆಕ್ಷನ್ 80GG ಅಡಿಯಲ್ಲಿ ಸ್ವ ಉದ್ಯೋಗ ಹೊಂದಿರುವ ತೆರಿಗೆದಾರರು ಕಟ್ಟಡ ಮಾಲೀಕರಿಗೆ ಪಾವತಿಸಿರುವ ಬಾಡಿಗೆಗೆ ತೆರಿಗೆ ಕಡಿತ ಕ್ಲೇಮ್ ಮಾಡಬಹುದು ಎನ್ನುತ್ತಾರೆ ತೆರಿಗೆ ತಜ್ಞರು.  ಇನ್ನು ತಿಂಗಳ ವೇತನ ಪಡೆಯುವ ಆದರೆ, ಉದ್ಯೋಗದಾತ ಸಂಸ್ಥೆಯಿಂದ ಎಚ್ ಆರ್ ಎ ಸೌಲಭ್ಯ ಪಡೆಯದ ವೇತನ ಪಡೆಯುವ ತೆರಿಗೆದಾರರು ಕೂಡ ಈ ಸೆಕ್ಷನ್ ಅಡಿಯಲ್ಲಿ ತೆರಿಗೆ ಕಡಿತಕ್ಕೆ ಕ್ಲೇಮ್ ಮಾಡಬಹುದು.

ಎಷ್ಟು ತೆರಿಗೆ ಕಡಿತ ಕ್ಲೇಮ್ ಮಾಡಬಹುದು?
ಎಚ್ ಆರ್ ಎ ಸೌಲಭ್ಯ ಹೊಂದಿರದ ವೇತನ ಪಡೆಯುವ ಉದ್ಯೋಗಿಗಳು ಅಥವಾ ಸ್ವ ಉದ್ಯೋಗ ಹೊಂದಿರುವ ವ್ಯಕ್ತಿಗಳು ತಿಂಗಳಿಗೆ  5000ರೂ. ಅಥವಾ ಒಟ್ಟು ಆದಾಯದ ಶೇ.25ರಷ್ಟು ಅಥವಾ ಒಟ್ಟು ಆದಾಯದ ಹೆಚ್ಚುವರಿ ಶೇ.10ರಷ್ಟು ಬಾಡಿಗೆ ಪಾವತಿ ಮಾಡಿರೋದನ್ನು ಕ್ಲೇಮ್ ಮಾಡಬಹುದು. ಎಚ್ ಆರ್ ಎ ಕ್ಲೇಮ್ ಮಾಡುವ ವ್ಯಕ್ತಿ ಬಾಡಿಗೆ ವೆಚ್ಚವನ್ನು ಪಾವತಿಸುತ್ತಿರಬೇಕು ಹಾಗೂ ಆತನ ಬಳಿ ಯಾವುದೇ ಸ್ವಂತ ಮನೆ ಇರಬಾರದು. ಹಾಗೆಯೇ ತೆರಿಗೆದಾರ ವಾಸಿಸುವ ಸ್ಥಳದಲ್ಲಿ ಆತನ ಪತ್ನಿ, ಮಕ್ಕಳು ಅಥವಾ  ಆತನ ಅವಿಭಜಿತ ಕುಟುಂಬದ ಯಾವುದೇ ಸದಸ್ಯರು ಸ್ವಂತ ಮನೆ ಹೊಂದಿರಬಾರದು. ಇನ್ನು ತೆರಿಗೆದಾರರು ಅರ್ಜಿ 10ಬಿಎಯಲ್ಲಿ ಘೋಷಣೆಯನ್ನು ಫೈಲ್ ಮಾಡಬೇಕು. 

NRIಗಳಿಂದ ಪಡೆದ ಉಡುಗೊರೆಗಳಿಗೂ ಬೀಳುತ್ತೆ ತೆರಿಗೆ: ITRನಲ್ಲಿ ಉಲ್ಲೇಖಿಸಲು ಮರೆಯಬೇಡಿ!

ಆದಾಯ ತೆರಿಗೆ ಇಲಾಖೆ ಇ-ಫೈಲಿಂಗ್ ಪೋರ್ಟಲ್ ನಲ್ಲಿ ಕಳೆದ ಕೆಲವು ವರ್ಷಗಳಿಂದ ಸಾಕಷ್ಟು ಬದಲಾವಣೆ ಮಾಡಲಾಗಿದ್ದು, ಐಟಿಆರ್ ಸಲ್ಲಿಕೆ ಪ್ರಕ್ರಿಯೆಯನ್ನು ಸರಳಗೊಳಿಸಲಾಗಿದೆ. ಹೀಗಾಗಿ ಯಾವುದೇ ತೆರಿಗೆ ತಜ್ಞರ ಅಗತ್ಯವಿಲ್ಲದೆ ಈಗ ಐಟಿಆರ್ ಸಲ್ಲಿಕೆ ಮಾಡಬಹುದು. ಆದರೆ, ಹೀಗೆ ಐಟಿಆರ್ ಸಲ್ಲಿಕೆ ಮಾಡುವಾಗ ಯಾವುದೇ ತಪ್ಪುಗಳು ನಡೆಯದಂತೆ ಎಚ್ಚರ ವಹಿಸೋದು ಅಗತ್ಯ. ಇಲ್ಲಿಯ ತನಕ 2023-24ನೇ ಸಾಲಿನ ಮೌಲ್ಮಾಪನ ವರ್ಷಕ್ಕೆ ಒಟ್ಟು 7,55,412 ಐಟಿಆರ್ ಗಳು ಸಲ್ಲಿಕೆಯಾಗಿವೆ. 
 

click me!