
ಅಹಮದಾಬಾದ್ (ಮೇ 30, 2023): ಕಳೆದ 9 ದಿನಗಳಲ್ಲಿ ಚಲಾವಣೆಯಿಂದ ಹಿಂದೆ ಪಡೆಯಲಾದ 2000 ರೂ .ಮುಖಬೆಲೆಯ ನೋಟುಗಳನ್ನು ತಾನು ಸ್ವೀಕರಿಸಿರುವುದಾಗಿ ಭಾರತೀಯ ಸ್ಟೇಟ್ ಬ್ಯಾಂಕ್ ಹೇಳಿದೆ.
ಸೋಮವಾರ ಇಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಎಸ್‌ಬಿಐ ಅಧ್ಯಕ್ಷ ದಿನೇಶ್ ಕುಮಾರ್, ನೋಟು ಬದಲಾವಣೆಗೆ ಮತ್ತು ಜಮೆಗೆ ಅವಕಾಶ ನೀಡಿದ ಮೇ 23ರಿಂದ ಇದುವರೆಗೂ ದೇಶಾದ್ಯಂತ ನಮ್ಮ ಶಾಖೆಗಳಲ್ಲಿ 17000 ಕೋಟಿ ರೂ. ಮೌಲ್ಯದ 2000 ರೂ. ಮುಖಬೆಲೆಯ ನೋಟುಗಳನ್ನು ಸ್ವೀಕರಿಸಲಾಗಿದೆ. ಈ ಪೈಕಿ 14000 ಕೋಟಿ ರೂ. ಜಮೆಯಾಗಿದ್ದರೆ, 3000 ಕೋಟಿ ರೂ. ಮೌಲ್ಯದ ನೋಟುಗಳನ್ನು ಬದಲಾವಣೆ ಮಾಡಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಇದು ಮಾರುಕಟ್ಟೆಯಲ್ಲಿ ಇರುವ ನೋಟುಗಳ ಪೈಕಿ ಶೇ.20ರಷ್ಟು ಎಂದು ಅವರು ಹೇಳಿದ್ದಾರೆ.
ಇದನ್ನು ಓದಿ: 2000 ರೂ. ನೋಟು ಬದಲಾಯಿಸಿಕೊಳ್ಳೋಕೆ ಪೆಟ್ರೋಲ್ ಬಂಕ್‌ಗೆ ಮುಗಿಬಿದ್ದ ಜನ: ಚೇಂಜ್ ಇಲ್ಲ ಎಂದು ಹೇಳಿ ಸುಸ್ತಾದ ಸಿಬ್ಬಂದಿ
ಸೆಪ್ಟೆಂಬರ್ 30ರವರೆಗೂ ದೇಶಾದ್ಯಂತ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಬ್ಯಾಂಕ್‌ಗಳಲ್ಲಿ ನೋಟು ಜಮೆ ಅಥವಾ ಬದಲಾವಣೆಗೆ ಆರ್‌ಬಿಐ ಅವಕಾಶ ಕಲ್ಪಿಸಿದೆ.
2000 ರೂ. ಬದಲಾವಣೆಗೆ ದಾಖಲಾತಿ ಕಡ್ಡಾಯ ಕೋರಿದ್ದ ಅರ್ಜಿ ವಜಾ
ಆರ್‌ಬಿಐ ಹಿಂಪಡೆದಿರುವ 2000 ರೂ. ಮುಖಬೆಲೆಯ ನೋಟುಗಳನ್ನು ಬದಲಾವಣೆ ಮಾಡುವಾಗ ದಾಖಲಾತಿ ಮತ್ತು ಮನವಿ ಪತ್ರವನ್ನು ಪಡೆಯದಿರುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಚ್ ಸೋಮವಾರ ವಜಾ ಮಾಡಿದೆ.
ಇದನ್ನೂ ಓದಿ: ಕಪ್ಪು ಹಣ ಹೊಂದಿದವ್ರಿಗೆ ರೆಡ್ ಕಾರ್ಪೆಟ್ ಹಾಸಲಾಗಿದೆ: 2 ಸಾವಿರ ರೂ. ನೋಟು ಹಿಂಪಡೆತಕ್ಕೆ ಚಿದಂಬರಂ ಟೀಕೆ
ವಕೀಲ ಅಶ್ವಿನಿ ಕುಮಾರ್ ಉಪಾಧ್ಯಾಯ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ಮತ್ತು ನ್ಯಾಯಮೂರ್ತಿ ಸುಬ್ರಮಣಿಯಮ್ ಪ್ರಸಾದ್ ಅವರಿದ್ದ ಪೀಠ, ಸರ್ಕಾರ ಜಾರಿಗೆ ತರುವ ನೀತಿಗಳ ಮೇಲ್ಮನವಿ ಅಧಿಕಾರಿಯಾಗಿ ಕೋರ್ಟ್ ಇರಲು ಸಾಧ್ಯವಿಲ್ಲ ಎಂದು ಹೇಳಿದೆ. ಬೃಹತ್ ಪ್ರಮಾಣದಲ್ಲಿ ನೋಟುಗಳು ವರ್ಗಾವಣೆಯಾಗುತ್ತಿರುವುದರಿಂದ ಉಗ್ರರು, ಮಾದಕವಸ್ತು ಸಾಗಣೆದಾರರು, ಮಾಫಿಯಾದವರಿಗೆ ಅನುಕೂಲವಾಗುವ ಅಪಾಯವಿದೆ. ಹಾಗಾಗಿ ಕಾನೂನಿನ ಎದುರು ಎಲ್ಲರೂ ಸಮಾನರು ಎಂಬ ನಿಯಮದಡಿಯಲ್ಲಿ ನೋಟು ಬದಲಾವಣೆ ಸಮಯದಲ್ಲಿ ದಾಖಲಾತಿ ಒದಗಿಸಲು ಸೂಚಿಸಬೇಕು ಎಂದು ಅಶ್ವಿನಿ ಕುಮಾರ್ ಉಪಾಧ್ಯಾಯ ಕೋರಿದ್ದರು.
ಈ ಮೊದಲು ಸಹ ಆರ್‌ಬಿಐ ನಡೆಯನ್ನು ಕೋರ್ಟ್ ಸಮರ್ಥಿಸಿತ್ತು.
ಇದನ್ನೂ ಓದಿ: 2 ಸಾವಿರ ರೂ. ನೋಟುಗಳನ್ನೇ ಕೊಟ್ಟು 5 ಲಕ್ಷಕ್ಕೂ ಹೆಚ್ಚು ಬೆಲೆಬಾಳೋ ಚಿನ್ನದ ಆಭರಣ ಖರೀದಿಸಿದ ಗ್ರಾಹಕ!
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.