ಕೆವೈಸಿ ಪ್ರಕ್ರಿಯೆಯನ್ನುಇನ್ನಷ್ಟು ಸರಳಗೊಳಿಸಿದ ಹೊಸ ಡಿಜಿಲಾಕರ್, ಹೇಗೆ? ಇಲ್ಲಿದೆ ಮಾಹಿತಿ

By Suvarna NewsFirst Published May 30, 2023, 12:54 PM IST
Highlights

ಹಣಕಾಸು ಕ್ಷೇತ್ರಗಳಲ್ಲಿ ಇಂದು ಡಿಜಿಟಲೀಕರಣ ಭಾರೀ ಸದ್ದು ಮಾಡುತ್ತಿದೆ. ಅದರಲ್ಲೂ ಫಿನ್ ಟೆಕ್ ಸಂಸ್ಥೆಗಳು ಎಲ್ಲ ಪ್ರಕ್ರಿಯೆಗಳನ್ನು ಆನ್ ಲೈನ್ ಮೂಲಕವೇ ನಡೆಸುತ್ತಿವೆ. ಈ ನಡುವೆ ಹೊಸ ಡಿಜಿಲಾಕರ್ ಕೆವೈಸಿ  ಪ್ರಕ್ರಿಯೆಯನ್ನು ಇನ್ನಷ್ಟು ಸರಳಗೊಳಿಸಿದೆ. ಅದು ಹೇಗೆ? ಇಲ್ಲಿದೆ ಮಾಹಿತಿ. 
 

Business Desk:ಇಂದು ಎಲ್ಲ ಕ್ಷೇತ್ರಕ್ಕೂ ಡಿಜಿಟಲೀಕರಣ ಕಾಲಿಟ್ಟಿದೆ. ಬ್ಯಾಂಕಿಂಗ್, ಸರ್ಕಾರಿ ಸೇವೆಗಳು ಸೇರಿದಂತೆ ಎಲ್ಲ ಅಗತ್ಯ ಸೇವೆಗಳು ಇಂದು ಡಿಜಿಟಲೀಕರಣಗೊಡಿವೆ. ಇನ್ನು ಬ್ಯಾಂಕ್ ಸೇರಿದಂತೆ ಎಲ್ಲ ಕಡೆ ಪ್ರಮುಖ ಕೆಲಸಗಳಿಗೆ ಕೆವೈಸಿ ಅಗತ್ಯ. ಈ ಕೆವೈಸಿ ಪ್ರಕ್ರಿಯೆಗೆ ಆಧಾರ್ ಕಾರ್ಡ್, ಪ್ಯಾನ್ ಸೇರಿದಂತೆ ಅಗತ್ಯ ಗುರುತು ದೃಢೀಕರಣ ದಾಖಲೆಗಳನ್ನು ನೀಡುವುದು ಅಗತ್ಯ. ಈ ದಾಖಲೆಗಳ ಡಿಜಿಟಲೀಕರಣಕ್ಕೆ ಕೂಡ ಕೇಂದ್ರ ಸರ್ಕಾರ ಅವಕಾಶ ಕಲ್ಪಿಸಿದೆ. 2015ರ ಜುಲೈ 1ರಂದು ಕೇಂದ್ರ ಸರ್ಕಾರ ದಾಖಲೆಗಳನ್ನು ಡಿಜಿಟಲ್ ರೂಪದಲ್ಲಿ ಸುರಕ್ಷಿತವಾಗಿಟ್ಟುಕೊಳ್ಳಲು ಡಿಜಿಲಾಕರ್‌ ಸೇವೆಯನ್ನು ಪರಿಚಯಿಸಿತು. ಬ್ಯಾಂಕ್ ಲಾಕರ್ ನಲ್ಲಿ ಬೆಲೆಬಾಳುವ ವಸ್ತುಗಳು, ದುಡ್ಡು, ಬಂಗಾರ, ದಾಖಲೆ ಪತ್ರಗಳನ್ನು ಸುರಕ್ಷಿತವಾಗಿಡುವ ಮಾದರಿಯಲ್ಲೇ  ಇ-ದಾಖಲೆಪತ್ರಗಳನ್ನು ಡಿಜಿ ಲಾಕರ್‌ನಲ್ಲಿ ಸುರಕ್ಷಿತವಾಗಿ ಇಡಬಹುದು. ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿಐ) ಕೂಡ ಗ್ರಾಹಕರ ಗುರುತು ಅಥವಾ ವಿಳಾಸ ಮತ್ತಿತರ ಮಾಹಿತಿ ದೃಢೀಕರಿಸುವ ಕೆವೈಸಿ ಪ್ರಕ್ರಿಯೆಗೆ ಡಿಜಿಲಾಕರ್‌ನ ಇ-ಡಾಕ್ಯುಮೆಂಟ್‌ಗಳನ್ನು ಸ್ವೀಕರಿಸಬಹುದು ಎಂದು ಹೇಳಿದೆ. ಹೀಗಾಗಿ ಇಂದು ಬ್ಯಾಂಕ್ ಸೇರಿದಂತೆ ಹಣಕಾಸು ಸಂಸ್ಥೆಗಳು ಡಿಜಿಟಲ್ ಗುರುತು ದೃಢೀಕರಣಕ್ಕೆ ಮಾನ್ಯತೆ ನೀಡಿವೆ. ಡಿಜಿಲಾಕರ್ ನಿಂದ ಡಿಜಿಟಲ್ ಗುರುತು ದೃಢೀಕರಣ ಸುಲಭವಾಗಿದ್ದು, ಕೆವೈಸಿ ಪ್ರಕ್ರಿಯೆ ಸರಳಗೊಂಡಿದೆ. 

ಏನಿದು ಡಿಜಿಟಲ್ ಗುರುತು ದೃಢೀಕರಣ?
ಡಿಜಿಟಲ್ ಐಡಿ ಅನೇಕ ಆನ್ ಲೈನ್ ಸೇವೆಗಳ ಬಳಕೆಗೆ ಅತ್ಯಗತ್ಯವಾಗಿದೆ. ಅದರಲ್ಲೂ ಹಣಕಾಸು ಸೇವೆಗಳಿಗೆ ಅಗತ್ಯವಾಗಿದೆ. ಡಿಜಿಟಲೀಕರಣದ ಪರಿಣಾಮವಾಗಿ ಇಂದು ಡಿಜಿಟಲ್ ಗುರುತು ದೃಢೀಕರಣ ಪರಿಶೀಲನೆ ಎಲ್ಲ ಕ್ಷೇತ್ರಗಳಿಗೂ ಕಾಲಿಡುತ್ತಿದೆ. ಸೇವಾ ಪೂರೈಕೆದಾರರು ಕೂಡ ತ್ವರಿತ ಹಾಗೂ ಸುರಕ್ಷಿತ ಇ-ಕೆವೈಸಿ ಪರಿಶೀಲನೆಗೆ ಒತ್ತು ನೀಡುತ್ತಿದ್ದಾರೆ. ಹೀಗಾಗಿ ಆನ್ ಲೈನ್ ಮೂಲಕವೇ ಇ-ಕೆವೈಸಿ ಪ್ರಕ್ರಿಯೆಗಳನ್ನು ಅನೇಕ ಸಂಸ್ಥೆಗಳು ಪೂರ್ಣಗೊಳಿಸುತ್ತಿವೆ. ಅಲ್ಲದೆ, ಕಾಗದ ಆಧಾರಿತ ಗುರುತು ದೃಢೀಕರಣ ದಾಖಲೆಗಳ ನಿರ್ವಹಣೆಗಿಂತ ಡಿಜಿಟಲ್ ದಾಖಲೆಗಳ ನಿರ್ವಹಣೆ ಸುಲಭ. ಅಲ್ಲದೆ, ಅಗತ್ಯ ಬಿದ್ದಾಗ ಇವುಗಳನ್ನು ತ್ವರಿತವಾಗಿ ಪತ್ತೆ ಹಚ್ಚಬಹುದು.

ಡಿಜಿಲಾಕರ್ ದಾಖಲೆಗಳು ಹಾಗೂ ಪ್ರಮಾಣಪತ್ರಗಳ ನಿರ್ವಹಣೆ, ವಿತರಣೆ ಹಾಗೂ ದೃಢೀಕರಣಕ್ಕೆ ಸುರಕ್ಷಿತ ಕ್ಲೌಡ್ ಆಧಾರಿತ ಪ್ಲ್ಯಾಟ್ ಫಾರ್ಮ್ ಆಗಿದೆ. ಇದರಲ್ಲಿ ಎಲ್ಲ ಅಗತ್ಯ ದಾಖಲೆಗಳನ್ನು ಇರಿಸೋದ್ರಿಂದ ಕೆವೈಸಿ ಪ್ರಕ್ರಿಯೆಯನ್ನು ವೇಗವಾಗಿ ಪೂರ್ಣಗೊಳಿಸಲು ಸಾಧ್ಯವಾಗುತ್ತದೆ. ಇದು ಗುರುತು ದೃಢೀಕರಣ ಪ್ರಕ್ರಿಯೆಯನ್ನು ವೇಗಗೊಳಿಸಿರುವ ಜೊತೆಗೆ ಯಾವುದೇ ತಾಂತ್ರಿಕ ಸಮಸ್ಯೆಗಳಿಲ್ಲದೆ ಮಾಹಿತಿಗಳ ಸಂಗ್ರಹಕ್ಕೆ ನೆರವು ನೀಡಿದೆ. ದಾಖಲೆಗಳನ್ನು ಸುರಕ್ಷಿತ ಹಾಗೂ ವೇಗವಾಗಿ ಸಂಗ್ರಹಿಸಲು ಹಾಗೂ ಹಂಚಿಕೊಳ್ಳಲು ಇದು ಫಿನ್ ಟೆಕ್ ಕಂಪನಿಗಳಿಗೆ ನೆರವು ನೀಡುವ ಮೂಲಕ ಅವುಗಳ ಕಾರ್ಯಕ್ಷಮತೆಯನ್ನು ಹೆಚ್ಚಿಸಿದೆ. 

ಡಿಜಿಲಾಕರ್ ಬಳಸಿಕೊಂಡು ಕೇಂದ್ರ, ರಾಜ್ಯ ಸರ್ಕಾರಗಳು ಹಾಗೂ ಅಂಗೀಕೃತ ಸಂಸ್ಥೆಗಳಿಂದ ಪಡೆದ ಡಿಜಿಟಲ್ ಗುರುತು ದೃಢೀಕರಣ ದಾಖಲೆಗಳು ಹಾಗೂ ಪ್ರಮಾಣಪತ್ರಗಳನ್ನು ಒಂದೇ ಕಡೆ ಡಿಜಿಟಲ್ ರೂಪದಲ್ಲಿ ಸಂಗ್ರಹಿಸಿಡಬಹುದು. ಎಲ್ಲ ಅರ್ಹ ದೃಢೀಕೃತ ದಾಖಲೆಗಳು ಒಂದೇ ಕಡೆ ಸಿಗೋದ್ರಿಂದ ಕೆವೈಸಿ ಪ್ರಕ್ರಿಯೆ ತ್ವರಿತವಾಗಿ ಪೂರ್ಣಗೊಳ್ಳುತ್ತದೆ. 

ಭವಿಷ್ಯದಲ್ಲಿ ಡಿಜಿಲಾಕರ್ ಪ್ರಯೋಜನ
ಮುಂದಿನ ದಿನಗಳಲ್ಲಿ ಡಿಜಿಲಾಕರ್ ವಿಸ್ತರಣೆಯಿಂದ ಹಣಕಾಸು ಸಂಸ್ಥೆಗಳ ಕಾರ್ಯನಿರ್ವಹಣಾ ವೆಚ್ಚ ತಗ್ಗಲಿದೆ. ವೇಗವಾಗಿ ಗುರುತು ಹಾಗೂ ವಿಳಾಸ ದೃಢೀಕರಣಕ್ಕೆ ಇದು ನೆರವು ನೀಡಲಿದೆ. ಬ್ಯಾಂಕ್ ಗಳು, ಪ್ರಾಧಿಕಾರಗಳು, ನಿಯಂತ್ರಕರು ಹಾಗೂ ಇತರ ಅಂಗೀಕೃತ ಉದ್ಯಮ ಸಂಸ್ಥೆಗಳು ತ್ವರಿತ ಕೆವೈಸಿ ಪ್ರಕ್ರಿಯೆಗೆ ಡಿಜಿಲಾಕರ್ ದಾಖಲೆಗಳನ್ನು ಬಳಸಿಕೊಳ್ಳಬಹುದು. ಇನ್ನು ಡಿಜಿಲಾಕರ್ ಗ್ರಾಹಕರಿಗೆ ಕಡಿಮೆ ವೆಚ್ಚ ಹಾಗೂ ತ್ವರಿತವಾಗಿ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲು ನೆರವು ನೀಡುತ್ತದೆ. 

ಬ್ಯಾಂಕ್ ಖಾತೆ ತೆರೆಯಲು ವಿಡಿಯೋ ಕೆವೈಸಿ; ಯಾವೆಲ್ಲ ಬ್ಯಾಂಕ್ ಗಳಲ್ಲಿ ಲಭ್ಯ?

ಡಿಜಿಲಾಕರ್ ಬೆಳವಣಿಗೆ
ಇತ್ತೀಚೆಗೆ ಕೇಂದ್ರ ಬಜೆಟ್ 2023–2024 ಭಾರತದ ಫಿನ್ ಟೆಕ್ ವಲಯಕ್ಕೆ ಬೆಂಬಲ ವಿಸ್ತರಿಸಿದೆ. ವ್ಯಕ್ತಿಗಳಿಗೆ ಹಾಗೂ ಉದ್ಯಮಗಳಿಗೆ ಹಣಕಾಸು ಸೇವೆಗಳು ಸುಲಭವಾಗಿ ಸಿಗುವಂತೆ ಮಾಡಲು ಹಾಗೂ ಕೆವೈಸಿ ಪ್ರಕ್ರಿಯೆ ಸರಳೀಕರಣಕ್ಕೆ ಡಿಜಿಲಾಕರ್ ನೆರವು ನೀಡಲಿದೆ. ಡಿಜಿಟಲ್ ಇಂಡಿಯಾ ಆಂದೋಲನ ಮುಂದಿನ ದಿನಗಳಲ್ಲಿ ದೇಶದ ಡಿಜಿಟಲ್ ಆರ್ಥಿಕತೆಗೆ ಇನ್ನಷ್ಟು ಉತ್ತೇಜನ ನೀಡುವ ನಿರೀಕ್ಷೆಯಿದ್ದು, ಡಿಜಿಟಲ್ ಆರ್ಥಿಕತೆ 2018ರ 200 ಬಿಲಿಯನ್ ಡಾಲರ್ ನಿಂದ 2025ರ ವೇಳೆಗೆ ಒಂದು ಟ್ರಿಲಿಯನ್ ಡಾಲರ್ ಗೆ ಏರಿಕೆಯಾಗುವ ನಿರೀಕ್ಷೆಯಿದೆ. ಮುಂದಿನ ದಿನಗಳಲ್ಲಿ ಡಿಜಿಲಾಕರ್ ಬಳಕೆದಾರರ ಪ್ರಮಾಣ ಹೆಚ್ಚುವ ಸಾಧ್ಯತೆಯಿದೆ ಕೂಡ.

click me!