ತೆರಿಗೆದಾರರೇ ನೆನಪಿಡಿ, ಐಟಿಆರ್ ಸಲ್ಲಿಕೆ ಮಾಡೋವಾಗ ಯಾವುದೇ ಕಾರಣಕ್ಕೂ ಈ 10 ತಪ್ಪುಗಳನ್ನು ಮಾಡ್ಬೇಡಿ

By Suvarna News  |  First Published Apr 6, 2024, 3:27 PM IST

ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆ ಮಾಡುವಾಗ ತೆರಿಗೆದಾರರು ಎಚ್ಚರ ವಹಿಸೋದು ಅಗತ್ಯ. ಇಲ್ಲವಾದ್ರೆ ಐಟಿಆರ್ ತಿರಸ್ಕೃತಗೊಳ್ಳುವ ಇಲ್ಲವೇ ದಂಡ ಬೀಳುವ ಸಾಧ್ಯತೆಯಿದೆ. ಹೀಗಾಗಿ ಐಟಿಆರ್ ಸಲ್ಲಿಕೆ ಮಾಡುವಾಗ ಯಾವುದೇ ಕಾರಣಕ್ಕೂ ಈ 10 ತಪ್ಪುಗಳನ್ನು ಮಾಡ್ಬೇಡಿ. 


Business Desk: ಹಲವು ತೆರಿಗೆದಾರರಿಗೆ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆ ಮಾಡೋದು ದೊಡ್ಡ ಕೆಲಸ. ಆದಾಯ ತೆರಿಗೆ ರಿಟರ್ನ್ (ITR) ಮೂಲತಃ ಒಂದು ದಾಖಲೆಯಾಗಿದ್ದು,ಆದಾಯ ತೆರಿಗೆ ಕಾಯ್ದೆ ನಿಬಂಧನೆಗಳಿಗೆ ಅನುಗುಣವಾಗಿ ಫೈಲ್ ಮಾಡಲಾಗುತ್ತದೆ.ಇದರಲ್ಲಿ ಆ ವ್ಯಕ್ತಿಯ ಆದಾಯ,ಲಾಭ ಹಾಗೂ ನಷ್ಟಗಳ ಜೊತೆಗೆ ಇತರ ತೆರಿಗೆ ಕಡಿತಗಳ ಮಾಹಿತಿಗಳೂ ಇರುತ್ತವೆ. 2024-25ನೇ ಮೌಲ್ಯಮಾಪನ ವರ್ಷದ ಆದಾಯ ತೆರಿಗೆ ಸಲ್ಲಿಕೆಗೆ ಜುಲೈ 31 ಅಂತಿಮ ದಿನಾಂಕ. ಆದರೂ ಅಂತಿಮ ಕ್ಷಣದ ತನಕ ಕಾಯದೆ ಆದಷ್ಟು ಬೇಗ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆ ಮಾಡೋದು ಉತ್ತಮ.  ಇನ್ನು ಆದಾಯ ತೆರಿಗೆ ರಿಟರ್ನ್ ಸಲ್ಲಿಕೆ ಮಾಡುವಾಗ ಬಹುತೇಕರು ಗಡಿಬಿಡಿಯಲ್ಲಿ ಫೈಲ್ ಮಾಡಿ ಬಿಡುತ್ತಾರೆ. ಇದ್ರಿಂದ ಅಗತ್ಯ ಮಾಹಿತಿಗಳು ನಮೂದಾಗಿರೋದಿಲ್ಲ. ಇನ್ನೂ ಕೆಲವರು ಕಾಟಾಚಾರಕ್ಕೆ ಐಟಿಆರ್ ಫೈಲ್ ಮಾಡುತ್ತಾರೆ. ಆದ್ರೆ ಈ ರೀತಿ ತಪ್ಪುಗಳಿಂದ ಕೂಡಿರುವ ಅಥವಾ ಅಪೂರ್ಣವಾಗಿರುವ ಐಟಿಆರ್ ಸಲ್ಲಿಕೆಯನ್ನು ಆದಾಯ ತೆರಿಗೆ ಇಲಾಖೆ ಪರಿಗಣಿಸೋದಿಲ್ಲ. ಆದಾಯ ತೆರಿಗೆ ಇಲಾಖೆ ಇಂಥ ತೆರಿಗೆದಾರರಿಗೆ ನೋಟಿಸ್ ನೀಡುತ್ತದೆ. ಹಾಗಾಗಿ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆ ಮಾಡುವಾಗ ಈ ಕೆಳಗಿನ ತಪ್ಪುಗಳಾಗದತೆ ಎಚ್ಚರ ವಹಿಸಿ.

1.ತಪ್ಪು ವೈಯಕ್ತಿಕ ಮಾಹಿತಿ:
ಐಟಿಆರ್ ಸಲ್ಲಿಕೆ ಮಾಡುವಾಗ ಸಮರ್ಪಕವಾದ ವೈಯಕ್ತಿಕ ಮಾಹಿತಿಗಳನ್ನು ನೀಡೋದು ಅಗತ್ಯ. ಇದರಲ್ಲಿ ನಿಮ್ಮ ಪೂರ್ಣ ಹೆಸರು, ಪ್ಯಾನ್ ಸಂಖ್ಯೆ, ಇ-ಮೇಲ್ ಐಡಿ ಹಾಗೂ ಫೋನ್ ಸಂಖ್ಯೆ ನೀಡೋದು ಅಗತ್ಯ. ಇದರಲ್ಲಿ ಯಾವುದೇ ತಪ್ಪುಗಳಾದ್ರೂ ಐಟಿಆರ್ ತಿರಸ್ಕೃತಗೊಳ್ಳುವ ಸಾಧ್ಯತೆಯಿದೆ. ಹೀಗಾಗಿ ವೈಯಕ್ತಿಕ ಮಾಹಿತಿಗಳನ್ನು ಎರಡೆರಡು ಬಾರಿ ಪರಿಶೀಲಿಸೋದು ಅಗತ್ಯ. ಇದರಿಂದ ಸಲ್ಲಿಕೆ ಪ್ರಕ್ರಿಯೆ ಸುಲಭವಾಗುತ್ತದೆ.

Tap to resize

Latest Videos

ತೆರಿಗೆದಾರರೇ ಗಮನಿಸಿ, ನೀವು ಆನ್ ಲೈನ್ ಐಟಿಆರ್ ಸಲ್ಲಿಕೆ ಮಾಡ್ಬಹುದು; ಐಟಿಆರ್-1, ಐಟಿಆರ್-2, ಐಟಿಆರ್-4 ಈಗ ಲಭ್ಯ

2.ಅರ್ಜಿ 26ಎಎಸ್ ಹಾಗೂ ಎಐಎಸ್ ಸಮನ್ವಯಗೊಳಿಸದಿರೋದು:  ಇದು ಆದಾಯದ ಮಾಹಿತಿಗಳನ್ನು ವರದಿ ಮಾಡುವಲ್ಲಿ ಪಾರದರ್ಶಕತೆಯನ್ನು ಹೆಚ್ಚಿಸಲು ಸರ್ಕಾರ ವಾರ್ಷಿಕ ಮಾಹಿತಿ ಸ್ಟೇಟ್ಮೆಂಟ್ (ಎಐಎಸ್) ಪರಿಚಯಿಸಿದೆ. ತೆರಿಗೆದಾರರು ಅರ್ಜಿ ಎಐಎಸ್ ಗೂ 26ಎಎಸ್ ಅನ್ನು ತಮ್ಮ ಆದಾಯ ದಾಖಲೆಗಳ ಜೊತೆಗೆ ಸಮನ್ವಯಗೊಳಿಸಬೇಕು. ಹಾಗೆಯೇ ಅಗತ್ಯ ತಿದ್ದುಪಡಿಗಳನ್ನು ಮಾಡಬೇಕು. ಅರ್ಜಿ ನಮೂನೆ ಎಐಎಸ್ ನಲ್ಲಿ ಅಭಿಪ್ರಾಯಗಳನ್ನು ನೀಡೋದ್ರಿಂದ ಆದಾಯ ತೆರಿಗೆ ಇಲಾಖೆಯಿಂದ ತನಿಖೆಗಳನ್ನು ತಪ್ಪಿಸಬಹುದು. 

3.ಎಲ್ಲ ಆದಾಯ ಮೂಲಗಳನ್ನು ವರದಿ ಮಾಡದಿರೋದು: ಐಟಿಆರ್ ಸಲ್ಲಿಕೆ ಮಾಡುವಾಗ ಕೆಲವು ತೆರಿಗೆದಾರರು ತಮ್ಮ ಎಲ್ಲ ಆದಾಯದ ಮೂಲವನ್ನು ವರದಿ ಮಾಡೋದಿಲ್ಲ. ಇದು ತಪ್ಪು. ವೇತನ, ಬಾಡಿಗೆ ಆದಾಯ, ಬಡ್ಡಿ ಆದಾಯ, ಬಂಡವಾಳ ಗಳಿಕೆ ಹಾಗೂ ಉದ್ಯಮ ಆದಾಯ ಸೇರಿದಂತೆ ಎಲ್ಲ ಆದಾಯವನ್ನು ಒಳಗೊಂಡಿರೋದು ಅತ್ಯಗತ್ಯ. ಯಾವುದೇ ಆದಾಯದ ಮೂಲವನ್ನು ಪರಿಗಣಿಸದಿದ್ರೆ ದಂಡ ಬೀಳುವ ಜೊತೆಗೆ ಕಾನೂನು ಕ್ರಮಗಳನ್ನು ಕೂಡ ಎದುರಿಸಬೇಕಾಗಬಹುದು. ಹೀಗಾಗಿ ಎಲ್ಲ ಗಳಿಕೆಗಳನ್ನು ತಪ್ಪದೇ ವರದಿ ಮಾಡಿ.

4.ಕಡಿತ ಕ್ಲೇಮ್ ಮಾಡಲು ಮರೆಯೋದು: ಆರೋಗ್ಯ ವಿಮೆ, ಶೈಕ್ಷಣಿಕ ಸಾಲದ ಬಡ್ಡಿ ಹಾಗೂ ದಾನ ಸೇರಿದಂತೆ ಕಡಿತಗಳನ್ನು ಕ್ಲೇಮ್ ಮಾಡೋದ್ರಿಂದ ದೊಡ್ಡ ಪ್ರಮಾಣದಲ್ಲಿ ತೆರಿಗೆ ಉಳಿತಾಯ ಮಾಡಬಹುದು. ಹೀಗಾಗಿ ಈ ಎಲ್ಲ ಕಡಿಗಳನ್ನು ಕ್ಲೇಮ್ ಮಾಡಲು ಮರೆಯಬೇಡಿ.

5.ಐಟಿಆರ್ ದೃಢೀಕರಣ ನಡೆಸದಿರೋದು: ಐಟಿಆರ್ ದೃಢೀಕರಿಸದಿದ್ರೆ ಆಗ ಕೂಡ ನಿಮ್ಮ ಐಟಿಆರ್ ತಿರಸ್ಕೃತಗೊಳ್ಳುತ್ತದೆ. ಹೀಗಾಗಿ ಐಟಿಆರ್ ಸಲ್ಲಿಕೆ ಮಾಡುವ ಜೊತೆಗೆ ಅದನ್ನು ದೃಢೀಕರಿಸೋದು ಕೂಡ ಅಗತ್ಯ.

6.ಅಸಮರ್ಪಕ ಬ್ಯಾಂಕ್ ಖಾತೆ ಮಾಹಿತಿ: ನೀವು ತೆರಿಗೆ ರೀಫಂಡ್ ಪಡೆಯಲು ಅರ್ಹರಾಗಿದ್ದರೆ ಸರಿಯಾದ ಬ್ಯಾಂಕ್ ಖಾತೆ ಮಾಹಿತಿ ನೀಡೋದು ಅಗತ್ಯ. 

7.ಆಸ್ತಿ ಮಾಹಿತಿ ನೀಡದಿರೋದು: ತೆರಿಗೆದಾರರು ತಮ್ಮ ಆಸ್ತಿ ಮಾಹಿತಿಗಳನ್ನು ಸಮರ್ಪಕವಾಗಿ ನೀಡೋದು ಅಗತ್ಯ. ತಪ್ಪು ಮಾಹಿತಿಗಳನ್ನು ನೀಡೋದ್ರಿಂದ ಕೂಡ ಐಟಿಆರ್ ತಿಸ್ಕೃತಗೊಳ್ಳುವ ಸಾಧ್ಯತೆ ಇರುತ್ತದೆ.

8.ಟಿಡಿಎಸ್ ಹಾಗೂ ಟಿಸಿಎಸ್ : ಐಟಿಆರ್ ಸಲ್ಲಿಕೆ ಮಾಡುವಾಗ ಟಿಡಿಎಸ್ ಅಥವಾ ಟಿಸಿಎಸ್ ಅನ್ನು ನೀವು ಸಮರ್ಪಕವಾಗಿ ಕ್ಲೇಮ್ ಮಾಡಿದ್ದೀರಿ ಎಂಬುದನ್ನು ದೃಢಪಡಿಸಿ. ಇದರಲ್ಲಿ ಯಾವುದೇ ತಪ್ಪುಗಳು ಕಂಡುಬಂದರೆ ಅದು ಕೂಡ ಸಮಸ್ಯೆಗೆ ಕಾರಣವಾಗುತ್ತದೆ.

ಪಿಂಚಣಿ ಪಡೆಯುತ್ತಿರೋರು ಕೂಡ ಐಟಿಆರ್ ಸಲ್ಲಿಕೆ ಮಾಡ್ಬೇಕು; ಅದು ಹೇಗೆ? ಇಲ್ಲಿದೆ ಮಾಹಿತಿ

9.ಸಮಯಕ್ಕೆ ಸರಿಯಾಗಿ ಐಟಿಆರ್ ಸಲ್ಲಿಕೆ ಮಾಡದಿರೋದು: ಐಟಿಆರ್ ಅನ್ನು ಅಂತಿಮ ಗಡುವಿನೊಳಗೆ ಸಲ್ಲಿಕೆ ಮಾಡೋದು ಅಗತ್ಯ. ಇದರಿಂದ ದಂಡ ಹಾಗೂ ಬಡ್ಡಿಯನ್ನು ನಿರ್ಲಕ್ಷಿಸಬಹುದು. ಐಟಿಆರ್ ಸಲ್ಲಿಕೆಗೆ ಜುಲೈ 30 ಅಂತಿಮ ಗಡುವಾಗಿದೆ.

10. ಸಮರ್ಪಕ ದಾಖಲೆ ಇಲ್ಲದಿರೋದು: ಐಟಿಆರ್ ಸಲ್ಲಿಕೆ ಮಾಡುವಾಗ ಸಮರ್ಪಕ ದಾಖಲೆಗಳನ್ನು ನಿರ್ವಹಣೆ ಮಾಡೋದು ಅಗತ್ಯ. ಬ್ಯಾಂಕ್ ಸ್ಟೇಟ್ಮೆಂಟ್, ಸ್ವೀಕೃತಿಗಳು, ಇನ್ ವಾಯ್ಸ್ ಹಾಗೂ ಇತರ ಸಂಬಂಧಪಟ್ಟ ದಾಖಲೆಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡೋದು ಅಗತ್ಯ.

click me!