
ನವದೆಹಲಿ (ಮೇ 27): ಅಡಿಟ್ ಗೊಳಪಡದ ಖಾತೆಗಳನ್ನು ಹೊಂದಿರುವ ವ್ಯಕ್ತಿಗಳು ಹಾಗೂ ವೇತನ ಪಡೆಯೋ ಉದ್ಯೋಗಿಗಳಿಗೆ 2022-23ನೇ ಆರ್ಥಿಕ ಸಾಲಿನ ಆದಾಯ ತೆರಿಗೆ ರಿಟರ್ನ್ (ಐಟಿಆರ್) ಸಲ್ಲಿಕೆಗೆ ಜುಲೈ 31 ಅಂತಿಮ ಗಡುವಾಗಿದೆ. ಐಟಿಆರ್ ಅನ್ನು ಸಮಯಕ್ಕೆ ಸರಿಯಾಗಿ ಫೈಲ್ ಮಾಡೋದು ಅಗತ್ಯ. ಇಲ್ಲವಾದ್ರೆ ದಂಡ ಬೀಳುತ್ತದೆ. ಕೆಲವರು ಐಟಿಆರ್ ಸಲ್ಲಿಕೆಯನ್ನು ತೆರಿಗೆ ತಜ್ಞರ ಸಹಾಯ ಪಡೆದು ಮಾಡುತ್ತಾರೆ. ಆದರೆ, ಐಟಿಆರ್ ಅನ್ನು ನೀವೇ ಸಲ್ಲಿಕೆ ಮಾಡೋದು ಅದೂ ಮೊದಲ ಬಾರಿಗೆ ಕ್ಲಿಷ್ಟಕರವಾಗಿ ಕಾಣಿಸಬಹುದು. ಆದರೆ, ಆದಾಯ ತೆರಿಗೆ ಇಲಾಖೆ ಇ-ಫೈಲಿಂಗ್ ಪೋರ್ಟಲ್ ನಲ್ಲಿ ಕಳೆದ ಕೆಲವು ವರ್ಷಗಳಿಂದ ಸಾಕಷ್ಟು ಬದಲಾವಣೆ ಮಾಡಲಾಗಿದ್ದು, ಐಟಿಆರ್ ಸಲ್ಲಿಕೆ ಪ್ರಕ್ರಿಯೆಯನ್ನು ಸರಳಗೊಳಿಸಲಾಗಿದೆ. ಹೀಗಾಗಿ ಯಾವುದೇ ತೆರಿಗೆ ತಜ್ಞರ ಅಗತ್ಯವಿಲ್ಲದೆ ಈಗ ಐಟಿಆರ್ ಸಲ್ಲಿಕೆ ಮಾಡಬಹುದು. ಆದರೆ, ಹೀಗೆ ಐಟಿಆರ್ ಸಲ್ಲಿಕೆ ಮಾಡುವಾಗ ಯಾವುದೇ ತಪ್ಪುಗಳು ನಡೆಯದಂತೆ ಎಚ್ಚರ ವಹಿಸೋದು ಅಗತ್ಯ. ಇಲ್ಲಿಯ ತನಕ 2023-24ನೇ ಸಾಲಿನ ಮೌಲ್ಮಾಪನ ವರ್ಷಕ್ಕೆ ಒಟ್ಟು 7,55,412 ಐಟಿಆರ್ ಗಳು ಸಲ್ಲಿಕೆಯಾಗಿವೆ. ಇನ್ನು ಐಟಿಆರ್ ಸಲ್ಲಿಕೆ ಮಾಡುವಾಗ ಈ 5 ತಪ್ಪುಗಳು ನಡೆಯದಂತೆ ನೀವು ಎಚ್ಚರ ವಹಿಸೋದು ಅಗತ್ಯ. ಹಾಗಾದ್ರೆ ಐಟಿಆರ್ ಸಲ್ಲಿಕೆ ಸಮಯದಲ್ಲಿ ಯಾವೆಲ್ಲ ತಪ್ಪುಗಳನ್ನು ಮಾಡಬಾರದು? ಇಲ್ಲಿದೆ ಮಾಹಿತಿ.
1.ಸೂಕ್ತ ಐಟಿಆರ್ ಅರ್ಜಿ ಆಯ್ಕೆ ಮಾಡದಿರೋದು
ನೀವು ಐಟಿಆರ್ ಅನ್ನು ಆನ್ ಲೈನ್ ಅಥವಾ ಆಪ್ ಲೈನ್ ನಲ್ಲಿ ಸಲ್ಲಿಕೆ ಮಾಡುವ ಸಂದರ್ಭದಲ್ಲಿ ಸಮರ್ಪಕವಾದ ಐಟಿಆರ್ ಅರ್ಜಿ ಆಯ್ಕೆ ಮಾಡೋದು ಅಗ್ಯ. ಒಟ್ಟು ಏಳು ವಿಧದ ಐಟಿಆರ್ ಅರ್ಜಿಗಳನ್ನು ತೆರಿಗೆದಾರರು ಬಳಸುತ್ತಾರೆ. ಈ ಏಳು ವಿಧದ ಅರ್ಜಿಗಳಲ್ಲಿ ನಿಮ್ಮ ಆದಾಯದ ಮೂಲಗಳಿಗೆ ಅನುಗುಣವಾಗಿ ಸೂಕ್ತವಾದ ಅರ್ಜಿಯನ್ನು ಆಯ್ಕೆ ಮಾಡೋದು ಅಗತ್ಯ.
NRIಗಳಿಂದ ಪಡೆದ ಉಡುಗೊರೆಗಳಿಗೂ ಬೀಳುತ್ತೆ ತೆರಿಗೆ: ITRನಲ್ಲಿ ಉಲ್ಲೇಖಿಸಲು ಮರೆಯಬೇಡಿ!
2.ಎಲ್ಲ ಆದಾಯದ ಮೂಲಗಳನ್ನು ಉಲ್ಲೇಖಿಸದಿರೋದು
ಐಟಿಆರ್ ನಲ್ಲಿ ನಿಮ್ಮ ಆದಾಯದ ಎಲ್ಲ ಮೂಲಗಳು ಉಲ್ಲೇಖಿಸಲ್ಪಟ್ಟಿವೆ ಎಂಬುದನ್ನು ಖಚಿತಪಡಿಸಿಕೊಳ್ಳುವುದು ಅಗತ್ಯ. ಆದಾಯ ತೆರಿಗೆ ಮಾಹಿತಿಗಳನ್ನು ಸಮರ್ಪಕವಾಗಿ ನೀಡದಿದ್ರೆ, ಆದಾಯ ತೆರಿಗೆ ಇಲಾಖೆ ನಿಮಗೆ ನೋಟಿಸ್ ಕಳುಹಿಸುತ್ತದೆ. ತೆರಿಗೆದಾರರು ವೇತನ ಹೊರತುಪಡಿಸಿ ಬ್ಯಾಂಕ್ ಉಳಿತಾಯ ಖಾತೆ, ಸ್ಥಿರ ಠೇವಣಿ (ಎಫ್ ಡಿ), ವಿಮೆ, ಸ್ಟಾಕ್ಸ್, ಮ್ಯೂಚುವಲ್ ಫಂಡ್ಸ್ ಇತ್ಯಾದಿಗಳಿಂದ ಗಳಿಸಿದ ಬಡ್ಡಿ ಮುಂತಾದ ಮಾಹಿತಿಗಳನ್ನು ಐಟಿಆರ್ ನಲ್ಲಿ ಉಲ್ಲೇಖಿಸೋದು ಅಗತ್ಯ. ಈ ಮೂಲಗಳಿಂದ ಗಳಿಸಿದ ಆದಾಯ ತೆರಿಗೆಮುಕ್ತವಾಗಿದ್ದರೂ ಐಟಿಆರ್ ನಲ್ಲಿ ನಮೂದಿಸೋದು ಅಗತ್ಯ. ಇನ್ನು ನೀವು ಉದ್ಯೋಗ ಬದಲಾಯಿಸಿದ್ದರೆ ಎರಡೂ ಕಂಪನಿಗಳಲ್ಲಿ ಗಳಿಸಿದ ಆದಾಯದ ಮಾಹಿತಿಯನ್ನು ವರದಿ ಮಾಡೋದು ಅಗತ್ಯ. ಇನ್ನು ನಿಮ್ಮ ಮಕ್ಕಳ ಹೆಸರಿನಲ್ಲಿ ಯಾವುದೇ ಹೂಡಿಕೆ ಮಾಡಿದ್ದರೆ ಐಟಿಆರ್ ಸಲ್ಲಿಕೆ ಮಾಡುವಾಗ ಅದರ ಮಾಹಿತಿ ಕೂಡ ನೀಡುವುದು ಅಗತ್ಯ.
3.ಆಸ್ತಿಗಳ ಮಾಹಿತಿ ಬಹಿರಂಗಪಡಿಸದಿರೋದು
ಐಟಿಆರ್ ಸಲ್ಲಿಕೆ ಮಾಡುವಾಗ ವೈಯಕ್ತಿಕ ತೆರಿಗೆದಾರರು ತಮ್ಮ ಆಸ್ತಿಗಳ ಮಾಹಿತಿ ಬಹಿರಂಗಪಡಿಸೋದು ಅಗತ್ಯ. ಜಮೀನು, ಕಟ್ಟಡ ಸೇರಿದಂತೆ ಸ್ಥಿರ ಆಸ್ತಿಗಳಿಗೆ ಸಂಬಂಧಿಸಿ ಅವುಗಳ ವಿವರಣೆ, ವಿಳಾಸ ಹಾಗೂ ವೆಚ್ಚದ ಮಾಹಿತಿ ನೀಡುವುದು ಅಗತ್ಯ.
4.ಸೆಕ್ಷನ್ 80C ಅಡಿಯಲ್ಲಿ ಕಡಿತ ಕ್ಲೇಮ್ ಮಾಡುವಾಗ ತಪ್ಪು
ಉದ್ಯೋಗಿಗಳ ಭವಿಷ್ಯ ನಿಧಿಗೆ (EPF) ಉದ್ಯೋಗದಾತರ ಕೊಡುಗೆಯನ್ನು ಸೆಕ್ಷನ್ 80ಸಿ ಅಡಿಯಲ್ಲಿ ಪ್ರಯೋಜನಗಳನ್ನು ಕ್ಲೇಮ್ ಮಾಡುವಾಗ ಸೇರಿಸಬೇಕು ಎಂಬ ತಪ್ಪು ಕಲ್ಪನೆ ಅನೇಕರಲ್ಲಿದೆ. ಇದು ತಪ್ಪು. ಇನ್ನು ಗೃಹಸಾಲದ ಮರುಪಾವತಿ ಮಾಡಿದ ಪ್ರಿನ್ಸಿಪಲ್ ಮೊತ್ತ ಮಾತ್ರ ಸೆಕ್ಷನ್ 80 ಸಿ ಅಡಿಯಲ್ಲಿ ತೆರಿಗೆ ಪ್ರಯೋಜನಗಳನ್ನು ಪಡೆಯಲು ಅರ್ಹವಾಗಿದೆ. ಇತರ ಅನೇಕ ಕಡಿತಗಳನ್ನು ತ್ಪು ಶೀರ್ಷಿಕೆಗಳಡಿ ಕ್ಲೇಮ್ ಮಾಡಿದರೆ ಕೂಡ ಐಟಿಆರ್ ತಿರಸ್ಕರಿಸಲ್ಪಡುತ್ತದೆ. ಹೀಗಾಗಿ ಐಟಿಆರ್ ಅರ್ಜಿ ಸಲ್ಲಿಕೆ ಮಾಡುವ ಮುನ್ನ ಸರಿಯಾಗಿ ಪರಿಶೀಲಿಸಿ.
ಹೊಸ ತೆರಿಗೆ ವ್ಯವಸ್ಥೆ ಪ್ರಭಾವ, ಜನಪ್ರಿಯತೆ ಕಳೆದುಕೊಂಡ 5 ಉಳಿತಾಯ ಯೋಜನೆಗಳು!
5.ಟಿಡಿಎಸ್ ಮಾಹಿತಿಗಳಲ್ಲಿ ವ್ಯತ್ಯಾಸ
ಅರ್ಜಿ ನಮೂನೆ 26 AS ನಲ್ಲಿ ಆದಾಯ ತೆರಿಗೆ ಇಲಾಖೆ ಹಿಡಿದಿಟ್ಟುಕೊಂಡಿರುವ ಟಿಡಿಎಸ್ ಕ್ರೆಡಿಟ್ ಆಗಿರುವ ಮಾಹಿತಿಗಳನ್ನು ಪರಿಶೀಲಿಸೋದು ಅಗತ್ಯ. ಒಂದು ವೇಳೆ ನಿಮ್ಮ ಉದ್ಯೋಗದಾತ ಸಂಸ್ಥೆ ಕಡಿತಗೊಳಿಸಿದ ಟಿಡಿಎಸ್ ಅನ್ನು ಆದಾಯ ತೆರಿಗೆ ಇಲಾಖೆಯಲ್ಲಿ ಠೇವಣಿ ಇಡದಿದ್ದರೆ ಅಥವಾ ಪ್ಯಾನ್ ಅನ್ನು ಸಮರ್ಪಕವಾಗಿ ಉಲ್ಲೇಖಿಸಲು ವಿಫಲರಾಗಿದ್ದರೆ ಆ ಮೊತ್ತ ಅರ್ಜಿ ನಮೂನೆ 26ಎಎಸ್ ನಲ್ಲಿ ಕಾಣಿಸೋದಿಲ್ಲ. ಹೀಗಾಗಿ 26 AS ಅರ್ಜಿಯನ್ನು ಸಮರ್ಪಕವಾಗಿ ಪರಿಶೀಲಿಸಿ. ಹಾಗೆಯೇ ಯಾವುದೇ ತಪ್ಪುಗಳು ಕಂಡುಬಂದರೆ ಅದನ್ನು ಸರಿಪಡಿಸಲು ಸೂಕ್ತ ಕ್ರಮ ಕೈಗೊಳ್ಳಿ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.