ಖಾಸಗಿ ವಲಯದ ಉದ್ಯೋಗಿಗಳಿಗೆ ಶುಭ ಸುದ್ದಿ; ರಜೆ ನಗದೀಕರಣಕ್ಕೆ ತೆರಿಗೆ ವಿನಾಯಿತಿ ಮಿತಿ 25 ಲಕ್ಷ ರೂ.ಗೆ ಹೆಚ್ಚಳ

By Suvarna NewsFirst Published May 27, 2023, 1:26 PM IST
Highlights

ಖಾಸಗಿ ವಲಯದ ಉದ್ಯೋಗಿಗಳಿಗೆ ಕೇಂದ್ರ ಸರ್ಕಾರ ಶುಭ ಸುದ್ದಿ ನೀಡಿದೆ. ರಜೆ ನಗದೀಕರಣಕ್ಕೆ ತೆರಿಗೆ ವಿನಾಯಿತಿ ಪಡೆಯಲು ಇದ್ದ ಮಿತಿಯನ್ನು 3ಲಕ್ಷ ರೂ.ನಿಂದ 25ಲಕ್ಷ ರೂ.ಗೆ ಏರಿಕೆ ಮಾಡಿದೆ. ಈ ಹೊಸ ರಜೆ ನಗದೀಕರಣ ತೆರಿಗೆ ವಿನಾಯಿತಿ ಮಿತಿ ನಿಯಮ 2023ರ ಏಪ್ರಿಲ್ 1ರಿಂದ ಜಾರಿಗೆ ಬರಲಿದೆ. 

ನವದೆಹಲಿ (ಮೇ 27): ಖಾಸಗಿ ವಲಯದ ಉದ್ಯೋಗಿಗಳಿಗೆ ಶುಭ ಸುದ್ದಿ. ರಜೆ ನಗದೀಕರಣಕ್ಕೆ ತೆರಿಗೆ ವಿನಾಯಿತಿ ಮಿತಿಯನ್ನು ಹೆಚ್ಚಿಸುವ ಮೂಲಕ 2023ನೇ ಕೇಂದ್ರ ಬಜೆಟ್ ನಲ್ಲಿ ಮಾಡಿದ ಘೋಷಣೆಯನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದೆ. ರಜೆ ನಗದೀಕರಣಕ್ಕೆ ತೆರಿಗೆ ವಿನಾಯಿತಿ ಪಡೆಯಲು ಇರುವ ಮಿತಿಯನ್ನು 3ಲಕ್ಷ ರೂ. ನಿಂದ 25ಲಕ್ಷ ರೂ.ಗೆ ಏರಿಕೆ ಮಾಡಲಾಗಿದೆ. ಈ ಮೂಲಕ ತೆರಿಗೆ ವಿನಾಯಿತಿ ಮಿತಿ ಎಂಟಕ್ಕಿಂತಲೂ ಹೆಚ್ಚು ಪಟ್ಟು ಏರಿಕೆಯಾಗಿದೆ.ಇನ್ನು ಈ ಹೊಸ ರಜೆ ನಗದೀಕರಣ ತೆರಿಗೆ ವಿನಾಯಿತಿ ಮಿತಿ ನಿಯಮ 2023ರ ಏಪ್ರಿಲ್ 1ರಿಂದ ಜಾರಿಗೆ ಬರಲಿದೆ. ಈ ನಿಯಮ ಖಾಸಗಿ ಉದ್ಯೋಗಿಗಳಿಗೆ ಮಾತ್ರ ಅನ್ವಯಿಸುತ್ತದೆ. 2023ನೇ ಸಾಲಿನ ಬಜೆಟ್ ಮಂಡನೆ ಸಂದರ್ಭದಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಖಾಸಗಿ ವಲಯದಲ್ಲಿ ದುಡಿಯುತ್ತಿರುವ ಉದ್ಯೋಗಿಗಳಿಗೆ ಸಂಬಂಧಿಸಿ ಕೆಲವು ಮಹತ್ವದ ನಿರ್ಧಾರಗಳನ್ನು ಪ್ರಕಟಿಸಿದ್ದರು. ಅವುಗಳಲ್ಲಿ ರಜೆ ನಗದೀಕರಣಕ್ಕೆ ತೆರಿಗೆ ವಿನಾಯಿತಿ ಪಡೆಯಲು ಇರುವ ಮಿತಿ ಹೆಚ್ಚಳ ಕೂಡ ಸೇರಿತ್ತು. ಇದೀಗ ಈ ಸಂಬಂಧ ಮೇ 25ರಂದು ಕೇಂದ್ರ ಹಣಕಾಸು ಸಚಿವಾಲಯ ಅಧಿಸೂಚನೆ ಹೊರಡಿಸಿದೆ. ತೆರಿಗೆ ತಜ್ಞರ ಪ್ರಕಾರ ಪ್ರಸ್ತುತ ಆರ್ಥಿಕ ಪರಿಸ್ಥಿತಿಯಲ್ಲಿ ಇದು ಸಕಾರಾತ್ಮಕ ಹೆಜ್ಜೆಯಾಗಿದೆ.

ಪ್ರತಿ ಕಂಪನಿ ತನ್ನ ಉದ್ಯೋಗಿಗೆ ಗಳಿಕೆ ರಜೆ ಅಥವಾ ಪಾವತಿ ರಜೆಯನ್ನು ನೀಡಬೇಕು. ಒಂದು ವೇಳೆ ನಿವೃತ್ತಿ ಅಥವಾ ಉದ್ಯೋಗ ತೊರೆದ ಬಳಿಕವೂ ಉದ್ಯೋಗಿ ಬಳಿ ರಜೆಗಳು ಉಳಿದಿದ್ದರೆ ಇವುಗಳಿಗೆ ಕಂಪನಿ ನಗದು ಪಾವತಿಸಬೇಕು. ಇದನ್ನೇ ರಜೆ ನಗದೀಕರಣ ಎಂದು ಕರೆಯಲಾಗುತ್ತದೆ. ಸರ್ಕಾರಿ ಉದ್ಯೋಗಿಗಳು ಈಗಾಗಲೇ ರಜೆ ನಗದೀಕರಣಕ್ಕೆ 25ಲಕ್ಷ ರೂ. ತನಕ ತೆರಿಗೆ ವಿನಾಯ್ತಿ ಪಡೆದಿದ್ದಾರೆ. ಆದರೆ, ಇಲ್ಲಿಯ ತನಕ ಈ ವಿನಾಯ್ತಿ ಖಾಸಗಿ ವಲಯದ ಉದ್ಯೋಗಿಗಳಿಗೆ ಇರಲಿಲ್ಲ. 

NRIಗಳಿಂದ ಪಡೆದ ಉಡುಗೊರೆಗಳಿಗೂ ಬೀಳುತ್ತೆ ತೆರಿಗೆ: ITRನಲ್ಲಿ ಉಲ್ಲೇಖಿಸಲು ಮರೆಯಬೇಡಿ!

2002ರಲ್ಲಿ ಕೇಂದ್ರ ಸರ್ಕಾರ ರಜೆ ನಗದೀಕರಣಕ್ಕೆ ತೆರಿಗೆ ವಿನಾಯಿತಿ ಪಡೆಯುವ ಮಿತಿಯನ್ನು 3ಲಕ್ಷ ರೂ.ಗೆ ಏರಿಕೆ ಮಾಡಿತ್ತು. ಆ ಬಳಿಕ ಯಾವುದೇ ಬದಲಾವಣೆ ಮಾಡಿರಲಿಲ್ಲ. ಹೀಗಾಗಿ 2002ರ ಬಳಿಕ ಇದೇ ಮೊದಲ ಬಾರಿಗೆ ಖಾಸಗಿ ವಲಯದ ಉದ್ಯೋಗಿಗಳಿಗೆ ರಜೆ ನಗದೀಕರಣ ವಿನಾಯಿತಿ ಮಿತಿ ಹೆಚ್ಚಳ ಮಾಡಲಾಗಿದೆ. ಖಾಸಗಿ ಸಂಸ್ಥೆ ಉದ್ಯೋಗಿಗಳು ಒಂದೇ ಕಂಪನಿಯಲ್ಲಿ ಕಾರ್ಯನಿರ್ವಹಿಸೋದಿಲ್ಲ. ಅವರು ಬೇರೆ ಬೇರೆ ಸಂಸ್ಥೆಗಳಲ್ಲಿ ಉದ್ಯೋಗ ನಡೆಸುತ್ತಾರೆ. ಹೀಗಾಗಿ ಆಯಾ ಸಂಸ್ಥೆಯನ್ನು ಬಿಡುವ ಸಂದರ್ಭದಲ್ಲಿ ರಜೆಯನ್ನು ನಗದೀಕರಿಸುತ್ತಾರೆ. ಹೀಗೆ ಅವರು ವಿವಿಧ ಕಡೆ ನಗದೀಕರಿಸಿಕೊಂಡ ರಜೆಗಳ ಒಟ್ಟು ಮೊತ್ತ 30ಲಕ್ಷ ರೂ. ಮೀರುವಂತಿಲ್ಲ. ಒಂದು ವೇಳೆ 30ಲಕ್ಷ ರೂ. ಮೀರಿದರೆ ಹೆಚ್ಚುವರಿ ಮೊತ್ತಕ್ಕೆ ತೆರಿಗೆ ವಿಧಿಸಲಾಗುತ್ತದೆ. ಆದರೆ, ಇದನ್ನು ಆದಾಯ ತೆರಿಗೆ ರಿಟರ್ನ್ಸ್ ಫೈಲ್ ಮಾಡುವ ಸಂದರ್ಭದಲ್ಲಿ ಕ್ಲೈಮ್ ಮಾಡಿಕೊಳ್ಳಲು ಅವಕಾಶವಿದೆ. 

ಹೊಸ ತೆರಿಗೆ ವ್ಯವಸ್ಥೆ ಪ್ರಭಾವ, ಜನಪ್ರಿಯತೆ ಕಳೆದುಕೊಂಡ 5 ಉಳಿತಾಯ ಯೋಜನೆಗಳು!

ಇನ್ನು ಉದ್ಯೋಗಿ ತನ್ನ ಕಾರ್ಯನಿರ್ವಹಣೆ ಅವಧಿಯಲ್ಲೇ ಗಳಿಕೆ ರಜೆಯನ್ನು ನಗದೀಕರಿಸಿಕೊಂಡಿದ್ದರೆ ಆಗ ಆತ ಯಾವುದೇ ತೆರಿಗೆ ವಿನಾಯಿತಿಗೆ ಒಳಪಡೋದಿಲ್ಲ. ಈ ಮೊತ್ತ ಆದಾಯ ತೆರಿಗೆ ಕಾಯ್ದೆ ಸೆಕ್ಷನ್ 10(10AA) ಅಡಿಯಲ್ಲಿ ತೆರಿಗೆಮುಕ್ತವಾಗಿದೆ. 

ರೀಫಂಡ್ ಕ್ಲೇಮ್ ಮಾಡಲು ಐಟಿಆರ್ ಸಲ್ಲಿಕೆ ಹೇಗೆ?
*ಹೆಚ್ಚುವರಿಯಾಗಿ ಪಾವತಿಸಿರುವ ತೆರಿಗೆಯನ್ನು ಆದಾಯ ತೆರಿಗೆ ಇಲಾಖೆ ನಿಮ್ಮ ಖಾತೆಗೆ ಕ್ರೆಡಿಟ್ ಮಾಡಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ನಿಮ್ಮ ಟ್ಯಾಕ್ಸ್ ಕ್ರೆಡಿಟ್ ಸ್ಟೇಟ್ಮೆಂಟ್ (ಫಾರ್ಮ್ 26AS) ಪರಿಶೀಲಿಸಿ. 
*ನೀವು ಐಟಿಆರ್ ಸಲ್ಲಿಕೆ ಮಾಡಿದ ಬಳಿಕ ಹಾಗೂ ನಿಮ್ಮ ಟ್ಯಾಕ್ಸ್ ಕ್ರೆಡಿಟ್ ಸ್ಟೇಟ್ಮೆಂಟ್ ಪರಿಶೀಲಿಸಿದ ಬಳಿಕ ಹೆಚ್ಚುವರಿಯಾಗಿ ಪಾವತಿಸಿದ ತೆರಿಗೆಯ ರೀಫಂಡ್ ಕ್ಲೇಮ್ ಮಾಡಬಹುದು.
*ಆದಾಯ ತೆರಿಗೆ ಇಲಾಖೆ ಇ-ಪೋರ್ಟಲ್ ನಲ್ಲಿ ರೀಫಂಡ್ ಮನವಿ ಸಲ್ಲಿಕೆ ಮಾಡುವ ಮೂಲಕ ನೀವು ರೀಫಂಡ್ ಮೊತ್ತವನ್ನು ಪಡೆಯಬಹುದು.
*ಒಮ್ಮೆ ನೀವು ರೀಫಂಡ್ ಮನವಿ ಸಲ್ಲಿಕೆ ಮಾಡಿದ ಬಳಿಕ ನಿಮ್ಮ ರೀಫಂಡ್ ಸ್ಟೇಟಸ್ ಅನ್ನು ಆನ್ ಲೈನ್ ನಲ್ಲಿ ಪರಿಶೀಲಿಸಬಹುದು.
*ಒಂದು ವೇಳೆ ರೀಫಂಡ್ ಕ್ಲೇಮ್ ಮಾಡುವಾಗ ಯಾವುದೇ ತೊಂದರೆ ಎದುರಾದರೆ ತೆರಿಗೆ ಸಲಹೆಗಾರ ಅಥವಾ ಸಿಎ ಅವರಿಂದ ಸಲಹೆ ಪಡೆಯಿರಿ. 

click me!