Aadhaar card: ಆಧಾರ್ ಕಾರ್ಡ್ ಕಳೆದು ಹೋಗಿದೆಯಾ? ಮರಳಿ ಪಡೆಯಲು ಹೀಗೆ ಮಾಡಿ

By Suvarna NewsFirst Published Dec 24, 2021, 7:44 PM IST
Highlights

ಆಧಾರ್ ಕಾರ್ಡ್ ಇಲ್ಲದೆ ಇಂದು ಯಾವ ಸರ್ಕಾರಿ, ಖಾಸಗಿ ಕೆಲಸವೂ ನಡೆಯೋದಿಲ್ಲ. ಹೀಗಿರೋವಾಗ ಆಧಾರ್ ಕಾರ್ಡ್ ಕಳೆದು ಹೋದ್ರೆ ಹೇಗಾಗಬೇಡ? ಆದ್ರೆ  UIDAI ವೆಬ್ ಸೈಟ್ ಮೂಲಕ ಸುಲಭವಾಗಿ ಆಧಾರ್ ಕಾರ್ಡ್ ಮರಳಿ ಪಡೆಯಲು ಸಾಧ್ಯವಿದೆ. 

Business Desk:ಭಾರತದಲ್ಲಿ ಆಧಾರ್ ಕಾರ್ಡ್ (Aadhaar card) ಅತ್ಯಂತ ಪ್ರಮುಖವಾದ ದಾಖಲೆಗಳಲ್ಲೊಂದು. ಬ್ಯಾಂಕ್ ಖಾತೆ (bank account)ತೆರೆಯೋದ್ರಿಂದ ಹಿಡಿದು ಸರ್ಕಾರದ ವಿವಿಧ ಯೋಜನೆಗಳ ಪ್ರಯೋಜನ ಪಡೆಯೋ ತನಕ ಆಧಾರ್ ಕಾರ್ಡ್ ಅಗತ್ಯ. ಗುರುತು ದೃಢೀಕರಣದ ಅತ್ಯಂತ ಪ್ರಮುಖ ದಾಖಲೆಯಾಗಿರೋ ಆಧಾರ್ ಕಾರ್ಡ್ 12 ಅಂಕೆಗಳ ವಿಶಿಷ್ಟ ಗುರುತು ಸಂಖ್ಯೆಯನ್ನು ಹೊಂದಿರುತ್ತದೆ. ನಿಮ್ಮ ಗುರುತು ದೃಢೀಕರಣಕ್ಕೆ ಈ ಸಂಖ್ಯೆ ನೀಡಿದ್ರೆ ಸಾಕು, ಬೇರೆ ಯಾವ ದಾಖಲೆಗಳ ಅಗತ್ಯವಿರೋದಿಲ್ಲ. ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರ (UIDAI) ಭಾರತೀಯ ಪ್ರಜೆಗಳಿಗೆ ಆಧಾರ್ ಕಾರ್ಡ್ ಗಳನ್ನು ವಿತರಿಸುತ್ತದೆ. ಈ ವಿಶಿಷ್ಟ ಗುರುತು ಚೀಟಿಯನ್ನು ನೀವು ಯಾವುದೋ ಸಂದರ್ಭದಲ್ಲಿ ಕಳೆದುಕೊಂಡ್ರಿ ಎಂದು ಭಾವಿಸೋಣ. ಆಗೇನು ಮಾಡುತ್ತೀರಿ? ಆಧಾರ್ ಕಾರ್ಡ್ ಕಳೆದು ಹೋಯ್ತು ಎಂದು ತಲೆ ಮೇಲೆ ಕೈಹೊತ್ತು ಕುಳಿತುಕೊಳ್ಳೋದು ಅಥವಾ ಯಾರನ್ನು ಸಂಪರ್ಕಿಸಬೇಕೆಂದು ತಿಳಿಯದೆ ಪರದಾಡೋ ಅಗತ್ಯವಿಲ್ಲ. ನೀವು ಮನೆಯಲ್ಲೇ ಕುಳಿತು  UIDAI ವೆಬ್ ಸೈಟ್ ಮೂಲಕ ಕಳೆದುಹೋದ ಆಧಾರ್ ಕಾರ್ಡ್ ಮರಳಿ ಪಡೆಯಬಹುದು. ಇದಕ್ಕೆ ನೀವು ಯಾವುದೇ ಶುಲ್ಕವನ್ನು ಕೂಡ ಭರಿಸಬೇಕಾಗಿಲ್ಲ.

Aadhaar Card : ಮಕ್ಕಳ ಆಧಾರ್ ಕಾರ್ಡ್ ಗೆ ಪರದಾಡ್ಬೇಕಿಲ್ಲ! ಮಗು ಹುಟ್ಟುತ್ತಲೇ ಆಸ್ಪತ್ರೆಯಲ್ಲಿ ಸಿಗಲಿದೆ ನಂಬರ್

ಆಧಾರ್ ಕಾರ್ಡ್ ಮರಳಿ ಪಡೆಯೋದು ಹೇಗೆ?
ಕಳೆದು ಹೋದ ಆಧಾರ್ ಕಾರ್ಡ್ ಮರಳಿ ಪಡೆಯಲು ಈ ಕೆಳಗಿನ ಹಂತಗಳನ್ನು ಅನುಸರಿಸಿ.
ಹಂತ 1:  UIDAI ಅಧಿಕೃತ ವೆಬ್ ಸೈಟ್ uidai.gov.in ಭೇಟಿ ನೀಡಿ.
ಹಂತ 2: ಆ ಬಳಿಕ ಹೋಮ್ ಪೇಜ್ ನಲ್ಲಿ Aadhaar Services tabಗೆ ಹೋಗಿ ಡ್ರಾಪ್ ಮೆನುವಿನಿಂದ My Aadhaar ಆಯ್ಕೆ ಮಾಡಿ.
ಹಂತ 3:  ನಂತರ 'Retrieve Lost or Forgotten EID/UID'ಆಯ್ಕೆ ಮಾಡಿ.
ಹಂತ 4: ಆ ಬಳಿಕ ನೀವು ನಿಮ್ಮ ವೈಯಕ್ತಿಕ ಮಾಹಿತಿಗಳಾದ ನೋಂದಾಯಿತ ಮೊಬೈಲ್ ಸಂಖ್ಯೆ ಹಾಗೂ ಇ-ಮೇಲ್ ವಿಳಾಸ ನೀಡಬೇಕು.
ಹಂತ 5: ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ಒಟಿಪಿ (OTP) ಬರುತ್ತದೆ. ವೆಬ್ ಸೈಟ್ ನಲ್ಲಿ ಅದನ್ನು ನಮೂದಿಸಿ
ಹಂತ 6: ನಿಮ್ಮ ಮೊಬೈಲ್ ಗೆ ಈಗ UID/EID ಸಂಖ್ಯೆಯನ್ನು ಕಳುಹಿಸಲಾಗುತ್ತದೆ.
ಹಂತ 7: ಈ  UID ಸಂಖ್ಯೆ ಬಳಸಿ ನಿಮ್ಮ ಆಧಾರ್ ಕಾರ್ಡ್ ಅನ್ನು ಆನ್ ಲೈನ್ ನಲ್ಲಿ ಡೌನ್ ಲೋಡ್ ಮಾಡಬಹುದು.

Aadhaar Card : ಆಧಾರ್ ಕಾರ್ಡ್ ಹೊಂದಿರೋರು ಈ ತಪ್ಪು ಮಾಡಿ ಆಮೇಲೆ ಗೋಳಾಡಬೇಡಿ

ಆಧಾರ್ ಜೊತೆ ಮೊಬೈಲ್ ಸಂಖ್ಯೆ ಲಿಂಕ್ ಆಗಿರಬೇಕು
ನೀವು ಆಧಾರ್ ಕಾರ್ಡ್ ಕಳೆದುಕೊಂಡಿದ್ರೆ ಅದನ್ನು ಮರಳಿ ಪಡೆಯಲು ಈ ಮೇಲೆ ತಿಳಿಸಿದ ವಿಧಾನ ಅನುಸರಿಸಬೇಕೆಂದ್ರೆ ನಿಮ್ಮ ಮೊಬೈಲ್ ಸಂಖ್ಯೆ ಆಧಾರ್ ಗೆ ಲಿಂಕ್ ಆಗಿರೋದು ಕಡ್ಡಾಯ. ಒಂದು ವೇಳೆ ನಿಮ್ಮ ಮೊಬೈಲ್ ಸಂಖ್ಯೆ ಆಧಾರ್ ಗೆ ಲಿಂಕ್ ಆಗಿಲ್ಲವೆಂದ್ರೆ ತಕ್ಷಣ ಅದನ್ನು ಲಿಂಕ್ ಮಾಡಿಸಿ. ಮೊಬೈಲ್ ಸಂಖ್ಯೆಯನ್ನು ಆಧಾರ್ ಗೆ ಲಿಂಕ್ ಮಾಡಲು ನೀವು ಸಮೀಪದ ಆಧಾರ್ ಕೇಂದ್ರಕ್ಕೆ ಭೇಟಿ ನೀಡಬೇಕಾಗುತ್ತದೆ. ಈ ಪ್ರಕ್ರಿಯೆಗೆ ನೀವು ಯಾವುದೇ ದಾಖಲೆಗಳನ್ನು ತೆಗೆದುಕೊಂಡು ಹೋಗಬೇಕಾದ ಅಗತ್ಯವಿಲ್ಲ. ಈ ಪ್ರಕ್ರಿಯೆಗೆ ಆಧಾರ್ ಕೇಂದ್ರದಲ್ಲಿ 50 ರೂ. ಶುಲ್ಕ ವಿಧಿಸುತ್ತಾರೆ. UIDAI ವೆಬ್ ಸೈಟ್ ನಲ್ಲಿ ನೀವು ಆಧಾರ್ ಗೆ ಸಂಬಂಧಿಸಿ ಯಾವುದೇ ಅಪ್ಡೇಟ್ ಅಥವಾ ತಿದ್ದುಪಡಿ ಮಾಡಬೇಕಿದ್ರೂ ಆಧಾರ್ ಗೆ ನಿಮ್ಮ ಮೊಬೈಲ್ ಸಂಖ್ಯೆ ಲಿಂಕ್ ಆಗಿರೋದು ಅಗತ್ಯ. ಏಕೆಂದ್ರೆ OTP ಮೂಲಕ ಮಾತ್ರ ಈ ಬದಲಾವಣೆ ಮಾಡಲು ಸಾಧ್ಯ. OTP ಕಳುಹಿಸೋ ಕಾರಣ ಮೊಬೈಲ್ ಆಧಾರ್ ಗೆ ಲಿಂಕ್ ಆಗಿರೋದು ಅಗತ್ಯ. 

click me!