
Business Desk:ಮೊದಲ ಸಂಬಳ ಕೈಗೆ ಬಂದಾಗ ಆಗುವ ಖುಷಿಯೇ ಬೇರೆ. ಅದನ್ನು ಪದಗಳಲ್ಲಿ ವರ್ಣಿಸೋದು ಅಸಾಧ್ಯವೇ ಸರಿ. ಬಹುತೇಕರು ಮೊದಲ ವೇತನ ಸಿಕ್ಕಿದ ಖುಷಿಯಲ್ಲಿ ಅದನ್ನು ಎಲ್ಲಿ, ಹೇಗೆ ವ್ಯಯಿಸಬೇಕು ಎಂಬುದು ತಿಳಿಯದೆ ಖರ್ಚು ಮಾಡಿಬಿಡುತ್ತಾರೆ. ಆದರೆ, ಇನ್ನೂ ಕೆಲವರು ಮೊದಲ ವೇತನದಿಂದಲೇ ಉಳಿತಾಯದ ಬಗ್ಗೆ ಯೋಚಿಸುತ್ತಾರೆ. ಇಂದಿನ ಪರಿಸ್ಥಿತಿಯಲ್ಲಿ ಉಳಿತಾಯ ಮಾಡೋದು ಅನಿವಾರ್ಯ. ಭವಿಷ್ಯದ ಕುರಿತು ಯೋಚಿಸುವ ಜೊತೆಗೆ ಉಳಿತಾಯ ಕೂಡ ಅಗತ್ಯ. ಹೀಗಾಗಿ ದುಡಿದ ಹಣವನ್ನೆಲ್ಲ ಖರ್ಚು ಮಾಡುವ ಬದಲು ಅದನ್ನು ಎಲ್ಲಿ ಹೂಡಿಕೆ ಮಾಬೇಕು ಎಂಬ ಬಗ್ಗೆ ಸರಿಯಾಗಿ ಯೋಚಿಸಿ ನಿರ್ಣಯ ಕೈಗೊಳ್ಳುವುದು ಅಗತ್ಯ. ಮೊದಲ ವೇತನದಿಂದಲೇ ಹೂಡಿಕೆ ಮಾಡಲು ಪ್ರಾರಂಭಿಸಿದರೆ ಭವಿಷ್ಯದಲ್ಲಿ ಉತ್ತಮ ರಿಟರ್ನ್ಸ್ ಪಡೆಯಲು ಸಾಧ್ಯವಾಗುತ್ತದೆ. ಏಕೆಂದರೆ ಹೂಡಿಕೆ ಅವಧಿ ಹೆಚ್ಚಿದ್ದಷ್ಟು ರಿಟರ್ನ್ಸ್ ಕೂಡ ಹೆಚ್ಚಿರುತ್ತದೆ. ಹಾಗಾದ್ರೆ ವೃತ್ತಿಜೀವನವನ್ನು ಪ್ರಾರಂಭಿಸೋರು ಆರಂಭದಲ್ಲಿ ಎಲ್ಲಿ ಹೂಡಿಕೆ ಮಾಡಬೇಕು? ಏಕೆ? ಇಲ್ಲಿದೆ ಮಾಹಿತಿ.
1.ಆರೋಗ್ಯ ವಿಮೆ: ಮೊದಲ ವೇತನ ಬಂದ ತಕ್ಷಣ ಆರೋಗ್ಯ ವಿಮೆ ಖರೀದಿಸಲು ಮರೆಯಬೇಡಿ. ಕನಿಷ್ಠ 10ಲಕ್ಷ ರೂ. ಮೊತ್ತದ ಆರೋಗ್ಯ ವಿಮೆ ಖರೀದಿಸಿ. ಒಂದು ವೇಳೆ ನೀವು ಅನಾರೋಗ್ಯ ಅಥವಾ ಅಪಘಾತ ಅಥವಾ ಇನ್ಯಾವುದೋ ಕಾರಣಕ್ಕೆ ಆಸ್ಪತ್ರೆಗೆ ಸೇರಬೇಕಾದ ಅನಿವಾರ್ಯತೆ ಎದುರಾದರೆ ಅಂಥ ಸಮಯದಲ್ಲಿ ಆರೋಗ್ಯ ವಿಮೆ ನಿಮಗೆ ನೆರವು ನೀಡುತ್ತದೆ. ಒಮದು ವೇಲೆ ನಿಮ್ಮ ಬಳಿ ಆರೋಗ್ಯ ವಿಮೆ ಇಲ್ಲದಿದ್ದರೆ ಲಕ್ಷಾಂತರ ರೂ. ಆಸ್ಪತ್ರೆ ಬಿಲ್ ಪಾವತಿಸಬೇಕಾಗುತ್ತದೆ.
ಇಂದು ವಿಶ್ವ ಉಳಿತಾಯ ದಿನ; ಖರ್ಚು ತಗ್ಗಿಸಿ ಉಳಿತಾಯ ಹೆಚ್ಚಿಸಲು ಈ ಟಿಪ್ಸ್ ಫಾಲೋ ಮಾಡಿ..
2.ಮಾಸಿಕ ಎಸ್ ಐಪಿ ಆರಂಭಿಸಿ: ಒಂದು ವೇಳೆ ನಿಮಗೆ ಹೂಡಿಕೆ ಮಾಡುವ ಬಯಕೆಯಿದ್ದರೆ ಇಂಡೆಕ್ಸ್ ಫಂಡ್ ನಲ್ಲಿ ಎಸ್ ಐಪಿ ಪ್ರಾರಂಭಿಸಿ. ನಿಮ್ಮ ಆದಾಯದ ಕನಿಷ್ಠ ಶೇ.10ರಷ್ಟನ್ನು ಇದರಲ್ಲಿ ಹೂಡಿಕೆ ಮಾಡಿ. ಆದಷ್ಟು ಬೇಗ ಹೂಡಿಕೆ ಮಾಡೋದು ಉತ್ತಮ. ಏಕೆಂದರೆ ನೀವು ಬೇಗ ಹೂಡಿಕೆ ಮಾಡಲು ಪ್ರಾರಂಭಿಸಿದರೆ ಉತ್ತಮ ರಿಟರ್ನ್ಸ್ ಗಳಿಸಬಹುದು. ಹೂಡಿಕೆ ಅವಧಿ ಹೆಚ್ಚಿದಷ್ಟೂ ಅದರಿಂದ ಬರುವ ರಿಟರ್ನ್ಸ್ ಕೂಡ ದೊಡ್ಡ ಪ್ರಮಾಣದಲ್ಲಿರುತ್ತದೆ. ಉದಾಹರಣೆಗೆ 25ನೇ ವಯಸ್ಸಿನಲ್ಲಿ ನೀವು ತಿಂಗಳಿಗೆ 5 ಸಾವಿರ ರೂ. ಹೂಡಿಕೆ ಮಾಡಲು ಪ್ರಾರಂಭಿಸಿದರೆ 65ನೇ ವಯಸ್ಸಿಗೆ ಬರುವಾಗ ನಿಮ್ಮ ಬಳಿ 3 ಕೋಟಿ ರೂ. ಹಣವಿರುತ್ತದೆ. ಆದರೆ, ನೀವು 45ನೇ ವಯಸ್ಸಿನಲ್ಲಿ ಹೂಡಿಕೆ ಮಾಡಲು ಪ್ರಾರಂಭಿಸಿದರೆ 65 ವರ್ಷವಾಗುವಾಗ 3 ಕೋಟಿ ರೂ. ಗಳಿಸಲು ಪ್ರತಿ ತಿಂಗಳು 40 ಸಾವಿರ ರೂ. ಹೂಡಿಕೆ ಮಾಡಬೇಕು.
3.ಕೌಶಲ್ಯ ಹೆಚ್ಚಿಸಿಕೊಳ್ಳಲು ಹೂಡಿಕೆ ಮಾಡಿ: ಇಂದಿನ ಜಗತ್ತಿನಲ್ಲಿ ನಿಮ್ಮ ಕೌಶಲ್ಯವನ್ನು ಆಧರಿಸಿ ವೇತನ ನೀಡಲಾಗುತ್ತದೆ. ಹೀಗಾಗಿ ನೀವು ನಿಮ್ಮ ಕೌಶಲ್ಯಗಳನ್ನು ಹೆಚ್ಚಿಸಿಕೊಂಡಷ್ಟೂ ನಿಮ್ಮ ಆದಾಯದಲ್ಲಿ ಏರಿಕೆಯಾಗುತ್ತದೆ. ಹೀಗಾಗಿ ನಿಮ್ಮ ಆದಾಯದಲ್ಲಿ ಶೇ.10ರಷ್ಟನ್ನು ಹೊಸ ವಿಷಯಗಳ ಕಲಿಕೆಗೆ ಬಳಸಿಕೊಳ್ಳಿ. ಏಕೆಂದರೆ ಹೊಸ ತಂತ್ರಜ್ಞಾನ, ಮಾರುಕಟ್ಟೆಯಲ್ಲಿ ಬೇಡಿಕೆಯಲ್ಲಿರುವ ಕೋರ್ಸ್ ಗಳನ್ನು ಮಾಡುವುದು ಕೂಡ ಒಂದು ಹೂಡಿಕೆ. ಇವುಗಳಿಂದ ನಿಮ್ಮ ವೇತನದಲ್ಲಿ ದೊಡ್ಡ ಪ್ರಮಾಣದ ಏರಿಕೆಯನ್ನು ನೀವು ನಿರೀಕ್ಷಿಸಬಹುದು.
ಎನ್ ಪಿಎಸ್ ನಿಯಮ ಬದಲಾವಣೆ; ವಿತ್ ಡ್ರಾ ಪ್ರಕ್ರಿಯೆಯಲ್ಲಿ ಬ್ಯಾಂಕ್ ಖಾತೆ ಮಾಹಿತಿ ಪರಿಶೀಲನೆಗೆ ಹೊಸ ವಿಧಾನ
4.ಕ್ರೆಡಿಟ್ ಕಾರ್ಡ್ ಖರೀದಿಸಿ: ನಿಮ್ಮ ಕ್ರೆಡಿಟ್ ಸ್ಕೋರ್ ಉತ್ತಮಪಡಿಸಲು ಕ್ರೆಡಿಟ್ ಕಾರ್ಡ್ ಖರೀದಿಸಿ. ಹಾಗೆಯೇ ಕ್ರೆಡಿಟ್ ಕಾರ್ಡ್ ಬಿಲ್ ಪಾವತಿಸುವ ವಿಚಾರದಲ್ಲಿ ಕೂಡ ಎಚ್ಚರ ವಹಿಸಿ. ಸಮಯಕ್ಕೆ ಸರಿಯಾಗಿ ಕ್ರೆಡಿಟ್ ಕಾರ್ಡ್ ಬಿಲ್ ಪಾವತಿಸಲು ಮರೆಯಬೇಡಿ. ಏಕೆಂದರೆ ಸಮಯಕ್ಕೆ ಸರಿಯಾಗಿ ಕ್ರೆಡಿಟ್ ಕಾರ್ಡ್ ಬಿಲ್ ಪಾವತಿಸದಿದ್ದರೆ ಹೆಚ್ಚುವರಿ ಬಡ್ಡಿ ಜೊತೆಗೆ ನಿಮ್ಮ ಕ್ರೆಡಿಟ್ ಸ್ಕೋರ್ ಮೇಲೆ ಕೂಡ ಅದು ಪರಿಣಾಮ ಬೀರುತ್ತದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.