ಇಂಗ್ಲೆಂಡ್ ಮೂಲದ ಜನಪ್ರಿಯ ಫ್ಯಾಷನ್ ಬ್ರ್ಯಾಂಡ್ ಖರೀದಿಗೆ ಇಶಾ ಅಂಬಾನಿ ನೇತೃತ್ವದ ರಿಲಯನ್ಸ್ ರಿಟೇಲ್ ಸಜ್ಜು

By Suvarna News  |  First Published Oct 30, 2023, 12:29 PM IST

ಇಶಾ ಅಂಬಾನಿ ನೇತೃತ್ವದ ರಿಲಯನ್ಸ್ ರಿಟೇಲ್ ತನ್ನ ಉದ್ಯಮ ವಿಸ್ತರಣೆಯನ್ನು ಮುಂದುವರಿಸಿದೆ. ಅದರ ಭಾಗವಾಗಿಯೇ ಈಗ ಇಂಗ್ಲೆಂಡ್ ಮೂಲದ ಜನಪ್ರಿಯ ಫ್ಯಾಷನ್ ಬ್ರ್ಯಾಂಡ್ ಸೂಪರ್ ಡ್ರೈ ಖರೀದಿಗೆ ಮುಂದಾಗಿದೆ. 
 


Business Desk: ಇಶಾ ಅಂಬಾನಿ ರಿಲಯನ್ಸ್ ರಿಟೇಲ್ ನೇತೃತ್ವ ವಹಿಸಿದ ಬಳಿಕ ಅನೇಕ ವಿದೇಶಿ ಬ್ರ್ಯಾಂಡ್ ಗಳನ್ನು ಖರೀದಿಸುವ ಮೂಲಕ ಉದ್ಯಮವನ್ನು ಇನ್ನಷ್ಟು ವಿಸ್ತರಿಸುತ್ತಿದ್ದಾರೆ. ಮಗಳ ಈ ಕಾರ್ಯದಲ್ಲಿ ತಂದೆ ಮುಖೇಶ್ ಅಂಬಾನಿ ಕೂಡ ಸಾಥ್ ನೀಡುತ್ತಿದ್ದಾರೆ. ಸದ್ಯ ಇಶಾ ಅಂಬಾನಿ ಇಂಗ್ಲೆಂಡ್ ನ ಜನಪ್ರಿಯ ಫ್ಯಾಷನ್ ಬ್ರ್ಯಾಂಡ್ ಸೂಪರ್ ಡ್ರೈ ಜೊತೆಗೆ ಸಹಭಾಗಿತ್ವ ಹೊಂದುವ ಮೂಲಕ ಈ ಬ್ರ್ಯಾಂಡ್ ಅನ್ನು ಭಾರತಕ್ಕೆ ತರಲು ಮುಂದಾಗಿದೆ. ಪ್ರಸ್ತುತ ಸೂಪರ್ ಡ್ರೈ ಸಂಸ್ಥೆ ಆರ್ಥಿಕ ಸಂಕಷ್ಟದಲ್ಲಿದೆ. ಹೀಗಾಗಿ ತನ್ನ ನಷ್ಟವನ್ನು ತಗ್ಗಿಸಲು ಹಾಗೂ ಭಾರತದಲ್ಲಿ ತನ್ನ ಅಸ್ತಿತ್ವವನ್ನು ಭದ್ರಗೊಳಿಸಲು ಈ ಸಂಸ್ಥೆ ರಿಲಯನ್ಸ್ ರಿಟೇಲ್ ಜೊತೆಗೆ ಒಪ್ಪಂದಕ್ಕೆ ಮುಂದಾಗಿದೆ. ಈ ಒಪ್ಪಂದದ ಪ್ರಕಾರ ಸೂಪರ್ ಡ್ರೈ ಐಪಿ ಆಸ್ತಿಗಳನ್ನು ರಿಲಯನ್ಸ್ ರಿಟೇಲ್ ಖರೀದಿಸಲು ಮುಂದಾಗಿದೆ. ಈ ಸಂಬಂಧ ಸಿದ್ಧತೆಗಳು ಕೂಡ ನಡೆಯುತ್ತಿವೆ. ರಾಯ್ಟರ್ಸ್ ಸುದ್ದಿ ಸಂಸ್ಥೆ ವರದಿ ಅನ್ವಯ ಸೂಪರ್ ಡ್ರೈ ತನ್ನ ಬೌದ್ಧಿಕ ಆಸ್ತಿಗಳನ್ನು (ಐಪಿ) ಮುಖೇಶ್ ಅಂಬಾನಿ ಅವರ ಕಂಪನಿಗೆ 48.27 ಮಿಲಿಯನ್ ಅಮೆರಿಕನ್ ಡಾಲರ್ ಗೆ (401 ಕೋಟಿ ರೂ.ಗೆ) ಮಾರಾಟ ಮಾಡಲು ಯೋಜನೆ ರೂಪಿಸಿದೆ. ಇನ್ನು ಹೊಸ ಒಪ್ಪಂದದ ಅನ್ವಯ ಐಪಿ ಆಸ್ತಿಗಳಲ್ಲಿ ರಿಲಯನ್ಸ್ ರಿಟೇಲ್ ಹಾಗೂ ಸೂಪರ್ ಡ್ರೈ ಕ್ರ,ವಾಗಿ ಶೇ.76 ಹಾಗೂ ಶೇ.24ರಷ್ಟು ಪಾಲು ಹೊಂದಲಿವೆ. 

ಇನ್ನು ರಾಯ್ಟರ್ಸ್ ವರದಿ ಅನ್ವಯ ರಿಲಯನ್ಸ್ ರಿಟೇಲ್ ಭಾರತ, ಶ್ರೀಲಂಕಾ ಹಾಗೂ ಬಾಂಗ್ಲಾದೇಶದಲ್ಲಿ ಕೂಡ ಬ್ರ್ಯಾಂಡ್ ಗಳನ್ನು ಖರೀದಿಸುವ ತನ್ನ ಕಾರ್ಯಾಚರಣೆ ಮುಂದುವರಿಸಿದೆ. ಸೂಪರ್ ಡ್ರೈ ಪ್ರಸ್ತುತ ಗಂಭೀರ ಆರ್ಥಿಕ ಸಂಕಷ್ಟಗಳನ್ನು ಎದುರಿಸುತ್ತಿದೆ. ಈ ಸಂಸ್ಥೆಗೆ ಸಗಟು ಪಾಲುದಾರರಿಂದ ಕಡಿಮೆ ಪ್ರಮಾಣದಲ್ಲಿ ಬೇಡಿಕೆಗಳು ಬರುತ್ತಿವೆ. ಹೀಗಾಗಿ ಮಾರುಕಟ್ಟೆ ಕುಸಿದಿದೆ. ಇನ್ನೊಂದು ಕಡೆ ಜಾಗತಿಕ ಕಾರ್ಯನಿರ್ವಹಣೆಗೆ ಸಂಸ್ಥೆಗೆ ಹಣದ ಅಡಚಣೆ ಎದುರಾಗಿದೆ. 

Tap to resize

Latest Videos

90,000 ಕೋಟಿ ರೂ ಹೆಚ್ಚಿಸಲು ಧೋನಿಯನ್ನು ಆಯ್ಕೆ ಮಾಡಿದ ಅಂಬಾನಿಯ ಜಿಯೋಮಾರ್ಟ್!

ಇಂಗ್ಲೆಂಡ್ ಮೂಲದ ಸೂಪರ್ ಡ್ರೈ ಭಾರತದಾದ್ಯಂತ ಒಂದು ಡಜನ್ ಗಿಂತಲೂ ಅಧಿಕ ಮಳಿಗೆಗಳನ್ನು ಹೊಂದಿದೆ. ಅಲ್ಲದೆ, ಈ ಸಂಸ್ಥೆ ಆನ್ ಲೈನ್ ಮಾರಾಟ ಕೂಡ ಹೊಂದಿದೆ. ಜಪಾನ್ ಮೂಲದ ಕ್ಯಾಶುಯಲ್ ಹಾಗೂ ಲಾಂಜ್ ವೇರ್ ಕಂಪನಿ ಯುನಿಕ್ಲೂ ಜೊತೆಗೆ ಸ್ಪರ್ಧೆ ನಡೆಸುತ್ತಿದೆ. 
ಮುಖೇಶ್ ಅಂಬಾನಿಯವರು ಇಶಾ ಅಂಬಾನಿ ಅವರನ್ನು ಆಗಸ್ಟ್ 2022 ರಲ್ಲಿ ರಿಲಯನ್ಸ್ ರೀಟೇಲ್‌ನ ಹೊಸ ನಾಯಕಿ ಎಂದು ಹೆಸರಿಸಿದ್ದರು. ಆ ಸಮಯದಲ್ಲಿ, ಸಂಸ್ಥೆಯು 2 ಲಕ್ಷ ಕೋಟಿ ರೂ. ವಹಿವಾಟು ಸಾಧಿಸಲು ಸಾಧ್ಯವಾಗಿತ್ತು. ಜಿಮ್ಮಿ ಚೂ, ಜಾರ್ಜಿಯೊ ಅರ್ಮಾನಿ, ಹ್ಯೂಗೋ ಬಾಸ್, ವರ್ಸೇಸ್, ಮೈಕೆಲ್ ಕಾರ್ಸ್, ಬ್ರೂಕ್ಸ್ ಬ್ರದರ್ಸ್, ಅರ್ಮಾನಿ ಎಕ್ಸ್‌ಚೇಂಜ್, ಅಡಿದಾಸ್ ಬರ್ಬೆರಿ ಮತ್ತು ಇತರ ಅನೇಕ ಜಾಗತಿಕ ಬ್ರ್ಯಾಂಡ್‌ಗಳನ್ನು ಮುಖೇಶ್ ಅಂಬಾನಿ ಹಾಗೂ ಇಶಾ ಭಾರತಕ್ಕೆ ತಂದಿದ್ದಾರೆ. 

ಖ್ಯಾತ ನಟಿಯ ಕಂಪನಿ ಸ್ವಾಧೀನಪಡಿಸಿಕೊಂಡ ಅಂಬಾನಿ ಪುತ್ರಿ: ಈ ನಟಿಗೆ ಪರಿಸರದ ಮೇಲೂ ಎಷ್ಟು ಕಾಳಜಿ ನೋಡಿ..

ಇಶಾ ರಿಲಯನ್ಸ್ ರಿಟೇಲ್ ಸಾರಥ್ಯ ವಹಿಸಿದ ಬಳಿಕ ಸಂಸ್ಥೆ ಗಮನಾರ್ಹ ಬೆಳವಣಿಗೆ ದಾಖಲಿಸಿದೆ ಕೂಡ. ರಿಲಯನ್ಸ್ ಗ್ರೂಪ್ ನ ಇತರ ಸಂಸ್ಥೆಗಳಿಗಿಂತ ರಿಲಯನ್ಸ್ ರಿಟೇಲ್ ಹೆಚ್ಚಿನ ಮೌಲ್ಯ ಹೊಂದಿದೆ ಎಂದು ಹೇಳಲಾಗಿದೆ. ಇತ್ತೀಚೆಗಷ್ಟೇ ರಿಲಯನ್ಸ್‌ ರೀಟೇಲ್‌ ಕಂಪನಿ ಬಾಲಿವುಡ್‌ ಖ್ಯಾತ ನಟಿ ಆಲಿಯಾ ಭಟ್‌ ಒಡೆತನದ  ಕಂಪನಿಯನ್ನು ಸ್ವಾಧೀನಪಡಿಸಿಕೊಂಡಿದೆ. ಆಲಿಯಾ ಭಟ್ ಒಡೆತನದ ಎಡ್-ಎ-ಮಮ್ಮಾದಲ್ಲಿ 51% ಪಾಲನ್ನು ಸ್ವಾಧೀನಪಡಿಸಿಕೊಂಡಿದೆ. ಇಶಾ ರಿಲಯನ್ಸ್ ರಿಟೇಲ್ ಚುಕ್ಕಾಣಿ ಹಿಡಿದ ಬಳಿಕ  ಸಂಸ್ಥೆ ಆಫ್‌ಲೈನ್ ಸ್ಟೋರ್‌, ಜಿಯೋಮಾರ್ಟ್ ಮತ್ತು ಹೊಸ ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳಲ್ಲಿ ಹೆಚ್ಚು ಹೂಡಿಕೆ ಮಾಡಿದೆ.


 

click me!