
ಭಾರತದಲ್ಲಿ ಪ್ರತಿಯೊಂದಕ್ಕೂ ಟ್ಯಾಕ್ಸ್ ಕಟ್ಟಬೇಕು. ಹೊಸ ಭೂಮಿ ತಗೊಂಡರೆ ರಿಜಿಸ್ಟೇಷನ್ ಟ್ಯಾಕ್ಸ್, ವಾಹನ ತಗೊಂಡರೆ ರೋಡ್ ಟ್ಯಾಕ್ಸ್ ಚಿನ್ನ ತಗೊಂಡರೆ ಜಿಎಸ್‌ಟಿ ಹೀಗೆ ರೈತ ಬೆಳೆಯುವ ಉತ್ಪನ್ನಗಳನ್ನು ಹೊರತು ಪಡಿಸಿ ಎಲ್ಲದಕ್ಕೂ ಟ್ಯಾಕ್ಸ್ ಕಟ್ಟಲೇಬೇಕು. ರೋಡ್ ಟ್ಯಾಕ್ಸ್ ಕಟ್ಟಿದ ನಂತರವೂ ಟೋಲ್ ಟ್ಯಾಕ್ಸ್ ಅಂತ ಪ್ರತ್ಯೇಕವಾಗಿ ಹಣ ಕಟ್ಟಬೇಕು ಸರ್ಕಾರದ ಈ ಟ್ಯಾಕ್ಸ್‌ನಿಂದಾಗಿ ಜನಸಾಮಾನ್ಯರು ಸಂಕಷ್ಟಕ್ಕೀಡಾಗಿದ್ದಾರೆ ಎಂದು ಜನರು ಮಾತನಾಡುವುದನ್ನು ಆಕ್ರೋಶ ಹೊರ ಹಾಕುವುದನ್ನು ನೀವು ನೋಡಿರಬಹುದು. ಹೀಗಿರುವಾಗ ವ್ಯಕ್ತಿಯೊಬ್ಬರು ಭಾರತ ಹಾಗೂ ದುಬೈ ನಡುವೆ ಜನರು ಕಟ್ಟಬೇಕಾದ ಟ್ಯಾಕ್ಸ್ ನಡುವೆ ಎಂಥಾ ವ್ಯತ್ಯಾಸವಿದೆ ಎಂಬುದನ್ನು ವಿವರಿಸಿದ್ದು, ಅವರು ಮಾಡಿದ ಪೋಸ್ಟ್ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅನೇಕರು ಭಾರತದ ಜೊತೆ ಹೋಲಿಕೆ ಮಾಡಿ ದುಬೈಯನ್ನು ಕೊಂಡಾಡಿದ್ದಾರೆ.
ದುಬೈನಲ್ಲಿನ ಜೀವನವನ್ನು ಅವರು ಭಾರತದ ಜೀವನದ ಜೊತೆ ಹೋಲಿಕೆ ಮಾಡಿದ್ದಾರೆ. ಇದು ಆನ್‌ಲೈನ್‌ನಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಜೊತೆಗೆ ಅನೇಕರು ವಿದೇಶದಲ್ಲಿ ಸೆಟ್ಲ್ ಆಗುವುದಕ್ಕೆ ಏಕೆ ಬಯಸುತ್ತಾರೆ ಎಂಬುದನ್ನು ಅವರು ವಿವರಿಸಿದ್ದಾರೆ. ಬ್ಲೈಂಡ್ ಎಂಬ ಸೋಶಿಯಲ್ ಮೀಡಿಯಾದಿಂದ ಈ ಪೋಸ್ಟ್ ಮಾಡಲಾಗಿದ್ದು, ದುಬೈನಲ್ಲಿ ಆದಾಯ ತೆರಿಗೆ ಎಂಬುದೇ ಇಲ್ಲ, ಒಂದು ವೇಳೆ ನೀವು ಕೆಲಸ ಕಳೆದುಕೊಂಡರೆ ಅರ್ಧದಷ್ಟು ಸಂಬಳವನ್ನು ಸರ್ಕಾರವೇ ನೀಡುತ್ತದೆ. ಹಾಗೆಯೇ ಅನಾರೋಗ್ಯಕ್ಕೆ ಪಡೆಯುವ ಅನಾರೋಗ್ಯ ರಜೆಯ (sick leave)ಇದೆ. ಜೊತೆಗೆ ಇಲ್ಲಿನ ಮೂಲಭೂತ ಸೌಕರ್ಯಗಳು ಕೆಲಸ ಮಾಡುತ್ತವೆ ಸಾರ್ವಜನಿಕ ಸಾರಿಗೆ ಸ್ವಚ್ಛ ಹಾಗೂ ಸುರಕ್ಷಿತವಾಗಿದೆ ಎಂದು ಅವರು ಪೋಸ್ಟ್‌ನಲ್ಲಿ ಹೇಳಿದ್ದಾರೆ.
ಅದೇ ಸಮಯಕ್ಕೆ ನಾವು ಭಾರತದಲ್ಲಿ ನಾವು ಯುರೋಪಿಯನ್ ಮಟ್ಟದ ತೆರಿಗೆಗಳನ್ನು ಪಾವತಿಸುತ್ತೇವೆ ಅದಕ್ಕೆ ಪ್ರತಿಯಾಗಿ ಕಾರುಗಳನ್ನು ಧ್ವಂಸ ಮಾಡುವ ರಸ್ತೆ ಗುಂಡಿಗಳು ನಮಗೆ ಸಿಗುತ್ತವೆ.'ಸ್ಟಾರ್ಟ್ಅಪ್ ಸಂಸ್ಕೃತಿ'ಯಿಂದಾಗಿ ವಾರಾಂತ್ಯದಲ್ಲಿಯೂ ಕೆಲಸ ಮಾಡುವುದು, ಕೆಲಸ ಬಿಟ್ಟ ನಂತರ ತಿಂಗಳುಗಳ ಕಾಲ ಪಿಎಫ್ ಪಡೆಯಲು ಒದ್ದಾಡುವುದು, ವಿಶ್ವಾಸಾರ್ಹವಲ್ಲದ ಸಾರ್ವಜನಿಕ ಸಾರಿಗೆ ಮತ್ತು ನೀವು ನಿಮ್ಮ ಕೆಲಸವನ್ನು ಕಳೆದುಕೊಂಡರೆ ಅಕ್ಷರಶಃ ನಿಮಗೆ ಯಾವ ಸುರಕ್ಷತೆಯೂ ಇರುವುದಿಲ್ಲ ಎಂದು ಅವರು ಹೇಳಿದ್ದಾರೆ.
ಎಲ್ಲದಕ್ಕೂ ಟ್ಯಾಕ್ಸ್ ಕಟ್ಟಿದರು ಜನರಿಗೆ ಏನೂ ಸಿಗುತ್ತಿಲ್ಲ.!
ನಾವು ದುಬೈ ಮಟ್ಟದ ಐಷಾರಾಮವನ್ನು ಕೇಳುತ್ತಿಲ್ಲ, ನಾವು ಕಟ್ಟು ಟ್ಯಾಕ್ಸ್‌ಗೆ ಕನಿಷ್ಟ ಮೂಲಭೂತ ಗೌರವವನ್ನು ಕೇಳುತ್ತಿದ್ದೇವೆ. ನಮ್ಮ ಆದಾಯದ ಶೇಕಡಾ 30ರಷ್ಟು ತೆರಿಗೆಯ ಜೊತೆ ಪ್ರತಿಯೊಂದಕ್ಕೂ ಜಿಎಸ್‌ಟಿ ಕಟ್ಟಿದ್ದ ನಂತರವೂ ನಮ್ಮ ಜನರಿಗೆ ಏನು ಸಿಗುವುದಿಲ್ಲ. ಪ್ರತಿಸಲ ನನ್ನ ವೇತನದ ದಾಖಲೆ(payslip)ನೋಡಿದಾಗ ನನಗೆ ಸರ್ಕಾರದಿಂದ ಸೇವೆಗಳು ಅಥವಾ ಸುರಕ್ಷತಾ ಜಾಲಗಳ ವಿಷಯದಲ್ಲಿ ಏನು ಸಿಗುತ್ತಿದೆ ಎಂದು ಹೋಲಿಸಿದಾಗಲೆಲ್ಲಾ ನಾನು ವಂಚನೆಗೊಳಗಾಗುತ್ತಿದ್ದೇನೆ ಎಂದು ನನಗೆ ಅನಿಸುತ್ತದೆ. ಕಳಪೆ ರಸ್ತೆಗಳು, ಅನಿಶ್ಚಿತ ಆರೋಗ್ಯ ರಕ್ಷಣೆ ಮತ್ತು ನಿರುದ್ಯೋಗಿಯನ್ನು ಆರ್ಥಿಕ ಬೆಂಬಲ ನೀಡುವ ಯಾವ ವ್ಯವಸ್ಥೆಯೂ ನಮ್ಮಲಿಲ್ಲ. ಹಾಗಾದರೆ ನಾವು ತೆರಿಗೆ ಪಾವತಿಸುವುದು ಯಾವ ಕಾರಣಕ್ಕೆ. ಇಷ್ಟು ತಿಳಿದ ಮೇಲೂ ಇಲ್ಲಿರುವ ಯಾರಾದರೂ ಇನ್ನೂ ಭಾರತದಲ್ಲಿ ದೀರ್ಘಕಾಲ ಉಳಿಯುವುದು ಯೋಗ್ಯವಾಗಿದೆ ಎಂದು ನಿಜವಾಗಿಯೂ ನಂಬುತ್ತಾರೆಯೇ ಅಥವಾ ವಿದೇಶಕ್ಕೆ ಸ್ಥಳಾಂತರಗೊಳ್ಳುವುದು ಕಷ್ಟ ಎಂಬ ಕಾರಣದಿಂದ ನಾವೆಲ್ಲರೂ ಸಿಲುಕಿಕೊಂಡಿದ್ದೇವೆಯೇ? ಏಕೆಂದರೆ ಈ ವ್ಯವಸ್ಥೆಯನ್ನು ಸಮರ್ಥಿಸಿಕೊಳ್ಳಲು ನನಗೆ ಕಾರಣಗಳಿಲ್ಲ ಎಂದು ಅವರು ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: ಖಾಸಗಿ ಬಸ್ ಅಡಿಗೆ ಬೀಳುತ್ತಿದ್ದ ಬಾಲಕಿ ಪವಾಡದಂತೆ ಪಾರು: ಎದೆ ಝಲ್ ಎನಿಸುವ ವೀಡಿಯೋ
ಈ ಪೋಸ್ಟ್‌ಗೆ ಸೋಶಿಯಲ್ ಮೀಡಿಯಾದಲ್ಲಿ ಜನ ಹಲವು ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ, ನಾವು ಶೇಕಡಾ 30 ತೆರಿಗೆ ಪಾವತಿಸಿದ ನಂತರವೂ ನಾವು ನಮ್ಮ ಹಕ್ಕುಗಳನ್ನು ಪಡೆಯಬೇಕಾದರೆ ಎಲ್ಲಾ ಕಡೆ ಲಂಚ ನೀಡಬೇಕು. ಪ್ರತಿಯೊಬ್ಬರು ಭಾರತವನ್ನು ಪ್ರೀತಿಸುತ್ತಾರೆ, ಆದರೆ ಭಾರತವನ್ನು ತೊರೆಯುವುದ ಅತ್ಯಂತ ಸ್ಮಾರ್ಟ್ ಆದ ನಿರ್ಧಾರ ಹಾಗೂ ನಾನು ಅದಕ್ಕೆ ಆದ್ಯತೆ ನೀಡುತ್ತೇನೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ವಿದೇಶಕ್ಕೆ ಹೋಗುವ ಆಯ್ಕೆಗಳಿದ್ದರೆ ಭಾರತ ತೊರೆಯುವುದೇ ಒಳಿತು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಈ ದೇಶ ಕೇವಲ ರಾಜಕಾರಣಿಗಳಿಗೆ ಅಧಿಕಾರಶಾಹಿಗಳಿಗೆ, ಸರ್ಕಾರಿ ಅಧಿಕಾರಿಗಳಿಗೆ ಮಾತ್ರ ಯೋಗ್ಯವಾಗಿದೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ: ವಯಸ್ಕ ನಟನೊಂದಿಗೆ ಇಂಟಿಮೇಟ್ ಸೀನ್‌ನಲ್ಲಿ 16ರ ಬಾಲೆಯ ನಟನೆ: ಟಿವಿ ಶೋ ವಿರುದ್ಧ ಜನರ ತೀವ್ರ ಆಕ್ರೋಶ
ಅಲ್ಲಿ ಸಾರ್ವಜನಿಕ ಸಾರಿಗೆ ಸ್ವಚ್ಛವಾಗಿದೆ ಏಕೆಂದರೆ ಅಲ್ಲಿ ಜನ ಕಸ ಎಸೆಯುವುದಿಲ್ಲ, ಆದರೆ ಇಂಡಿಯಾದಲ್ಲಿ ಜನರಿಗೆ ಸಾರ್ವಜನಿಕ ಸ್ಥಳದಲ್ಲಿ ಹೇಗೆ ವರ್ತಿಸಬೇಕು ಎಂಬುದೇ ಬಹುತೇಕ ಜನರಿಗೆ ಗೊತ್ತಿಲ್ಲ, ಆದರೆ ಅವರ ನಿರೀಕ್ಷೇ ಸರ್ಕಾರದ ಮೇಲೆ ಮತ್ತೊಂದು ಹಂತದಲ್ಲಿ ಇರುತ್ತದೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.